ನಟ ಸುದೀಪ್‌ ಅಕ್ಕನ ಮಗ ಸಂಚಿತ್‌ ಸಂಜೀವ್‌ ನಟಿಸಿ, ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾಗೆ ‘ಜಿಮ್ಮಿ’ ಎಂದು ನಾಮಕರಣವಾಗಿದೆ. ಇದು ಅಂಡರ್‌ವರ್ಲ್ಡ್‌ ಕತೆ ಎಂದಷ್ಟೇ ಅವರು ಸದ್ಯಕ್ಕೆ ಹೇಳಿದ್ದು, ಮುಂದಿನ ದಿನಗಳಲ್ಲಿ ಇತರೆ ಮಾಹಿತಿ ನೀಡಲಿದ್ದಾರೆ. ಪೋಸ್ಟರ್‌ನಲ್ಲಿ ಸಂಚಿತ್‌ ಹೆಸರಿನ ಹಿಂದೆ ‘ಕಿಚ್ಚ Jr’ ಎಂದಿರುವುದು ವಿಶೇಷ.

‘ಸಿನಿಮಾ ಮಾಡುವಾಗ ಸುದೀಪ್‌ ಬೆನ್ನಿಗಿದ್ದಾರೆ ಎಂದು ಯಾವತ್ತೂ ಅಂದುಕೊಳ್ಳೋದು ಬೇಡ. ಶ್ರದ್ಧೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಪ್ರತಿಫಲ ಸಿಗುತ್ತೆ. ಕನ್ನಡ ಚಿತ್ರರಂಗ ಕಟ್ಟಿ ಬೆಳೆಸಿದ ಕಲಾವಿದರು ಹಾಗೂ ತಂತ್ರಜ್ಞರ ನೆನಪು ಸದಾ ಜೊತೆಗಿರಲಿ. ಕನ್ನಡಿಗರು ನನಗೆ ತೋರಿಸಿದ ಪ್ರೀತಿ, ವಿಶ್ವಾಸವನ್ನು ನಿನಗೂ ತೋರಿಸುತ್ತಾರೆ’ ಎಂದು ನಟ ಸುದೀಪ್‌ ಅವರು ಅಳಿಯ ಸಂಚಿತ್‌ಗೆ ಕಿವಿಮಾತು ಹೇಳಿದರು. ನಿನ್ನೆ ನಡೆದ ಸಂಚಿತ್‌ ಸಂಜೀವ್‌ ಸಿನಿಮಾದ ಟೈಟಲ್‌ ಲಾಂಚ್‌ ಮತ್ತು ಕ್ಯಾರಕ್ಟರ್‌ ಇಂಟ್ರಡಕ್ಷನ್‌ ವೀಡಿಯೋ ರಿವೀಲ್‌ ಇವೆಂಟ್‌ನಲ್ಲಿ ತಮ್ಮ ಕುಟುಂಬದ ಹುಡುಗನನ್ನು ಅವರು ಎಲ್ಲರಿಗೂ ಪರಿಚಯಿಸಿದರು. ಸುದೀಪ್‌ ತಂದೆ – ತಾಯಿ ಚಿತ್ರದ ಶಿರ್ಷಿಕೆ ಲಾಂಚ್‌ ಮಾಡಿ ಮೊಮ್ಮಗನಿಗೆ ಶುಭ ಹಾರೈಸಿದರು. ಹಿರಿಯ ನಟರಾದ ಶಿವರಾಜಕುಮಾರ್‌ ಮತ್ತು ರವಿಚಂದ್ರನ್‌ ಅವರು ವೇದಿಕೆಯಲ್ಲಿ ಸಂಜೀವ್‌ಗೆ ಜೊತೆಯಾದರು.

ನಟಿಸುವ ಮೊದಲ ಚಿತ್ರವನ್ನು ತಾನೇ ನಿರ್ದೇಶಿಸುವ ಪರಿಪಾಠ ಕಡಿಮೆ ಎಂದೇ ಹೇಳಬಹುದು. ಸಂಚಿತ್‌ ಇಂಥದ್ದೊಂದು ಸವಾಲಿಗೆ ಸಿದ್ಧರಾಗಿದ್ದಾರೆ. ನ್ಯೂಯಾರ್ಕ್‌ ಅಕಾಡೆಮಿಯಲ್ಲಿ ಕಲಿತು ಬಂದಿರುವ ಅವರು ಮಾವ ಸುದೀಪ್‌ ಅವರ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿನ ಅನುಭವದೊಂದಿಗೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಸುದೀಪ್‌ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್‌ ಸಂಸ್ಥೆ, ಲಹರಿ ಮತ್ತು ಕೆ ಪಿ ಶ್ರೀಕಾಂತ್‌ ಈ ಚಿತ್ರದ ನಿರ್ಮಾಪಕರು. ಸುದೀಪ್‌ ಪತ್ನಿ ಪ್ರಿಯಾ ಅವರು ಸುಪ್ರಿಯಾನ್ವಿ ಪ್ರೊಡಕ್ಷನ್ಸ್‌ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ. ನಿನ್ನೆಯ ಇವೆಂಟ್‌ನಲ್ಲಿ ಚಿತ್ರನಿರ್ಮಾಪಕರಾದ ಮುನಿರತ್ನ, ನಿರ್ದೇಶಕ ಆರ್‌ ಚಂದ್ರು ಸೇರಿದಂತೆ ಹಲವರು ಹಾಜರಿದ್ದು ಯುವ ನಟ, ನಿರ್ದೇಶಕ ಸಂಚಿತ್‌ಗೆ ಶುಭ ಹಾರೈಸಿದರು. ಕ್ಯಾರಕ್ಟರ್‌ ಇಂಟ್ರಡಕ್ಷನ್‌ ವೀಡಿಯೋಗೆ ಸುದೀಪ್‌ ಪುತ್ರಿ ಸಾನ್ವಿ ಹಾಡಿದ್ದು, ಅವರಿಗೆ ಅತಿಥಿಗಳಿಂದ ಮೆಚ್ಚುಗೆ ವ್ಯಕ್ತವಾಯ್ತು. ‘ಜಿಮ್ಮಿ’ಗೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸುತ್ತಿದ್ದು ಇನ್ನುಳಿದ ತಂತ್ರಜ್ಞರ ಪರಿಚಯ ಸದ್ಯದಲ್ಲೇ ಸಿಗಲಿದೆ. ನಿನ್ನೆಯ ಇವೆಂಟ್‌ ಯಶಸ್ಸಿಗೆ ನಟ ಸುದೀಪ್‌ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Connect with

Please enter your comment!
Please enter your name here