‘KGF’, ‘ಕಾಂತಾರ’ ನಂತರ ಕನ್ನಡ ಚಿತ್ರಗಳು PAN ಇಂಡಿಯಾದಲ್ಲಿ ಸದ್ದು ಮಾಡಿಲ್ಲ. 2024ರಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಎಂದು ಬಿಂಬಿಸಿಕೊಂಡ ‘ಮಾರ್ಟಿನ್’ ನಿರಾಸೆ ಮೂಡಿಸಿತು. ಈಗ ವರ್ಷದ ಕೊನೆಯಲ್ಲಿ ತೆರೆಕಂಡಿರುವ ಸುದೀಪ್‌ರ ‘ಮ್ಯಾಕ್ಸ್’ ನಿಧಾನವಾಗಿ ದಕ್ಷಿಣದ ಇತರೆ ರಾಜ್ಯಗಳು ಹಾಗೂ ಉತ್ತರ ಭಾರತವನ್ನೂ ತಲುಪುತ್ತಿದೆ. 2025ರಲ್ಲಿ ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಹಾದಿಯಲ್ಲಿ ಉತ್ತಮ ಬೆಳೆ ತೆಗೆಯುವ ಭರವಸೆ ಗೋಚರಿಸುತ್ತಿದೆ.
‘KGF’ ಸಿನಿಮಾದ ದೊಡ್ಡ ಯಶಸ್ಸಿನಿಂದ ದೇಶದ ಇತರೆ ಭಾಗಗಳ ಸಿನಿಪ್ರಿಯರು ಸ್ಯಾಂಡಲ್‌ವುಡ್‌ನತ್ತ ತಿರುಗಿದ್ದರು. ರಿಷಬ್ ಶೆಟ್ಟಿ ಅವರ ‘ಕಾಂತಾರ’ ಮತ್ತೊಮ್ಮೆ ಇದಕ್ಕೆ ಮೇಲ್ಪಂಕ್ತಿಯಾಯ್ತು. ಇದೇ ಹುಮ್ಮಸ್ಸಿನಲ್ಲಿ ಸೆಟ್ಟೇರಿದ ‘ಮಾರ್ಟಿನ್’, 2024ರಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಸದ್ದು ಮಾಡುತ್ತದೆ ಎಂದೇ ಭಾವಿಸಲಾಗಿತ್ತು. ಎ ಪಿ ಅರ್ಜುನ್ ನಿರ್ದೇಶನ, ಧ್ರುವ ಸರ್ಜಾ ನಟನೆಯ ಸಿನಿಮಾಗೆ ಆರಂಭದಿಂದಲೇ ಇಂಥದ್ದೊಂದು ಹಣೆಪಟ್ಟಿಯೂ ಇತ್ತು. ಆದರೆ ಈ ಸಿನಿಮಾ ನಿರೀಕ್ಷೆ ಹುಸಿ ಮಾಡಿತು. ಶ್ರೀಮುರಳಿ ನಟನೆಯ ‘ಬಘೀರ’ ಮತ್ತು ಈಗ ಸುದೀಪ್‌ರ ‘ಮ್ಯಾಕ್ಸ್’ ತಕ್ಕಮಟ್ಟಿಗೆ ಹೆಸರು ಮಾಡುತ್ತಿದೆ. ‘ಕೆಜಿಎಫ್’ ಸರಣಿ ಸಿನಿಮಾಗಳು ಹಾಗೂ ‘ಕಾಂತಾರ’ ಮೂಲಕ ಹೊಂಬಾಳೆ ಫಿಲಂಸ್‌ನವರು ಪ್ಯಾನ್ ಇಂಡಿಯಾ ದಾರಿಗಳನ್ನು ಕಂಡುಕೊಂಡಿದ್ದರು. ಹಾಗಾಗಿ ‘ಬಘೀರ’ ಚಿತ್ರವನ್ನು ಕನ್ನಡದ ಗಡಿ ದಾಟಿಸುವುದು ಅವರಿಗೆ ಸುಲಭವಾಯ್ತು.
ವರ್ಷದ ಕೊನೆಗೆ ತೆರೆಗೆ ಬಂದ ಸುದೀಪ್‌ರ ‘ಮ್ಯಾಕ್ಸ್’, ಪ್ಯಾನ್ ಇಂಡಿಯಾ ಎಂದು ತಯಾರಾದ ಚಿತ್ರವೇನೂ ಅಲ್ಲ. ಮೇಕಿಂಗ್‌ನಿಂದಾಗಿ ಗೆದ್ದ ಸಿನಿಮಾ ನಿಧಾನವಾಗಿ ತೆಲುಗು ಮತ್ತು ತಮಿಳು ನಾಡಿನಲ್ಲಿ ಸುದ್ದಿಯಾಗುತ್ತಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಸಿನಿಮಾ ಉತ್ತರ ಭಾರತಕ್ಕೂ ಹೋಗುತ್ತಿದೆ. ‘ಪುಷ್ಪ 2’ ಇಷ್ಟಪಟ್ಟು ನೋಡಿದ ಉತ್ತರ ಭಾರತೀಯರು ಆಕ್ಷನ್ – ಥ್ರಿಲ್ಲರ್ ‘ಮ್ಯಾಕ್ಸ್’ಗೆ ಮಣಿ ಹಾಕುವ ಸಾಧ್ಯತೆಗಳಿವೆ. ಇನ್ನು ಉಪೇಂದ್ರರ ‘UI’ಗೆ ದಕ್ಷಿಣದ ಇತರೆಡೆ ಹಾಗೂ ಹಿಂದಿ ಬೆಲ್ಟ್‌ನಲ್ಲಿ ಬೆಂಬಲ ಸಿಗಲಿಲ್ಲ. ಶಿವರಾಜಕುಮಾರ್ ನಟನೆ – ನಿರ್ಮಾಣದ ‘ಭೈರತಿ ರಣಗಲ್’ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಂಡಿತು. ‘ಜೈಲರ್’ ಸಿನಿಮಾದಲ್ಲಿ ಶಿವರಾಜಕುಮಾರ್ ಅವರನ್ನು ಇಷ್ಟಪಟ್ಟ ತಮಿಳು ಸಿನಿಪ್ರಿಯರು ‘ಭೈರತಿ ರಣಗಲ್’ನಲ್ಲೂ ಶಿವಣ್ಣರನ್ನು ಮೆಚ್ಚಿಕೊಂಡರು. ತೆಲುಗು ನಾಡಿನ ಕೆಲವೆಡೆ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಈ ಚಿತ್ರಕ್ಕೆ ಇನ್ನಷ್ಟು ಪ್ರೊಮೋಷನ್ ಸಿಕ್ಕಿದ್ದಿದ್ದರೆ ಸಿನಿಮಾ ಉತ್ತರ ಭಾರತದಲ್ಲೂ ಹೆಸರು ಮಾಡುತ್ತಿತ್ತೇನೋ ಎಂದು ಗಾಂಧಿನಗರದಲ್ಲಿ ಮಾತನಾಡಿಕೊಂಡದ್ದು ಹೌದು.
2025ರಲ್ಲಿ ಸ್ಯಾಂಡಲ್‌ವುಡ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಭರ್ಜರಿಯಾಗಿ ಸದ್ದು ಮಾಡುವ ನಿರೀಕ್ಷೆಗಳಿವೆ. ಯಶ್ ಅಭಿನಯದ ‘ಟಾಕ್ಸಿಕ್’ ಹಿಂದಿ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಚಿತ್ರಣಗೊಳ್ಳುತ್ತಿದೆ ಎನ್ನಲಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವನ್ನು ದಕ್ಷಿಣದವವರು ಮಾತ್ರವಲ್ಲದೆ ಬಾಲಿವುಡ್‌ನವರೂ ಗಂಭೀರವಾಗಿ ಪರಿಗಣಿಸಿದ್ದಾರೆ. ‘ಕಾಂತಾರ’ ಯಶಸ್ಸಿನ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಜಾಗರೂಕತೆಯಿಂದ ಪ್ರೀಕ್ವೆಲ್ ಚಿತ್ರಿಸುತ್ತಿದ್ದಾರೆ. ಇದು ಕನ್ನಡದಿಂದ ಮತ್ತೊಂದು ದೊಡ್ಡ ಚಿತ್ರವಾಗಲಿದೆ. ಪ್ರೇಮ್ ನಿರ್ದೇಶನ, ಧ್ರುವ ಸರ್ಜಾ ನಟನೆಯ ‘KD’ ಪ್ಯಾನ್ ಇಂಡಿಯಾ ಹಣೆಪಟ್ಟಿಯೊಂದಿಗೆ ತಯಾರಾಗುತ್ತಿದೆ. ಚಿತ್ರ ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್‌ನವರೂ ಚಿತ್ರದ ಮೂಲಕ ಪ್ಯಾನ್ ಇಂಡಿಯಾಗೆ ಎಂಟ್ರಿ ಪಡೆಯುವ ಉಮೇದಿನಲ್ಲಿದ್ದಾರೆ. ‘ಮಾರ್ಟಿನ್’ ಚಿತ್ರದಂತೆ ಇದು ನಿರೀಕ್ಷೆ ಹುಸಿಗೊಳಿಸದಿರಲಿ ಎನ್ನುವುದು ಧ್ರುವ ಸರ್ಜಾ ಅಭಿಮಾನಿಗಳ ಆಶಯ. ಕೊಲೆ ಆರೋಪದಲ್ಲಿದ್ದ ದರ್ಶನ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹಾಗಾಗಿ 2025ರಲ್ಲಿ ಅವರ ‘ಡೆವಿಲ್’ ತೆರೆಕಾಣಲಿದೆ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ ‘ರಿಚರ್ಡ್ ಆಂಟೋನಿ’, ಧನಂಜಯ್ ನಟನೆಯ ‘ಉತ್ತರ ಕಾಂಡ’ ಪ್ಯಾನ್ ಇಂಡಿಯಾ ಹಾದಿಯಲ್ಲಿ ಸದ್ದು ಮಾಡಬಹುದಾದ ಕನ್ನಡದ ಇತರೆ ಸಿನಿಮಾಗಳು.