ಎಂದಿನಿಂತೆ ಈ ಬಾರಿಯೂ ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಹಣ ಮಾಡಿದ ಚಿತ್ರಗಳು ಬೆರಳೆಕಿಯಷ್ಟು. ‘ಕಾಂತಾರ’ ಪ್ಯಾನ್‌ ಇಂಡಿಯಾ ವಿಭಾಗದಲ್ಲಿ ಹೆಸರು ಮಾಡಿದರೆ, ‘ಸು ಫ್ರಂ ಸೋ’ ಕಂಟೆಂಟ್‌ ಚಿತ್ರವೊಂದರ ಸಾಮರ್ಥ್ಯವನ್ನು ಸಾಬೀತು ಮಾಡಿತು.

‘KGF’ ಸರಣಿ ಸಿನಿಮಾಗಳು ಮತ್ತು ‘ಕಾಂತಾರ’ ಸಿನಿಮಾಗಳಿಂದಾಗಿ ಕನ್ನಡ ಚಿತ್ರರಂಗದತ್ತ ಎಲ್ಲರೂ ನೋಡುವಂತಾಗಿತ್ತು. ಸಹಜವಾಗಿಯೇ 2025ರಲ್ಲಿ ಸ್ಯಾಂಡಲ್‌ವುಡ್‌ನಿಂದ ಭಾರಿ ನಿರೀಕ್ಷೆಗಳಿದ್ದವರು. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ ಚಾಪ್ಟರ್‌ 1’ ಈ ನಿರೀಕ್ಷೆ ಸರಿಗಟ್ಟಿತು. ಆದರೆ ಸ್ಯಾಂಡಲ್‌ವುಡ್‌ ಒಟ್ಟಾರೆ ಬಾಕ್ಸ್‌ ಆಫೀಸ್‌ ವಹಿವಾಟಿನ ದೃಷ್ಟಿಯಿಂದ ಹೇಳುವುದಾದರೆ ಆಶಾದಾಯಕ ವಾತಾವರಣವೇನೂ ನಿರ್ಮಾಣವಾಗಲಿಲ್ಲ. ಚಿತ್ರಮಂದಿರಗಳನ್ನು ತುಂಬಿಸುವಂತಹ ಹೆಚ್ಚು ಸಿನಿಮಾಗಳು ಬರಲಿಲ್ಲ. ‘ಸು ಫ್ರಂ ಸೋ’ ಈ ಕೊರತೆಯನ್ನು ಕೊಂಚ ನೀಗಿಸಿದರೆ, ‘ಮಾದೇವ’, ‘ಎಕ್ಕ’, ‘ಬ್ರ್ಯಾಟ್‌’, ‘ಯುದ್ಧಕಾಂಡ’, ‘ಡೆವಿಲ್‌’ ಸೇರಿದಂತೆ ಮತ್ತೆ ಕೆಲವಷ್ಟೇ ಸಿನಿಮಾಗಳು ಥಿಯೇಟರ್‌ಗೆ ಜನರನ್ನು ಕರೆತಂದವು. ಇದೀಗ ವರ್ಷಾಂತ್ಯಕ್ಕೆ ತೆರೆಗೆ ಸಿದ್ಧವಾಗಿರುವ ‘ಮಾರ್ಕ್‌’ ಮತ್ತು ’45’ ಮುಂದಿನ ವರ್ಷಕ್ಕೆ ಶುಭಸೂಚನೆ ನೀಡಲಿವೆಯೇ ಎಂದು ನೋಡಬೇಕಿದೆ.

2025ರ ಹೈಲೈಟ್‌ ಎಂದರೆ ‘ಕಾಂತಾರ ಚಾಪ್ಟರ್‌ 1’. ‘ಕಾಂತಾರ’ ಪ್ರೀಕ್ವೆಲ್‌ ಕತೆಯೊಂದಿಗೆ ಥಿಯೇಟರ್‌ಗೆ ಬಂದ ಸಿನಿಮಾ ಅದ್ಧೂರಿತನ ಮತ್ತು ಮೇಕಿಂಗ್‌ನಿಂದಾಗಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗೆಲುವು ಸಾಧಿಸಿತು. ಈ ಸಿನಿಮಾ 800 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದ ಅಂದಾಜಿದೆ. ಇದರೊಂದಿಗೆ ಇದು ‘ಕೆಜಿಎಫ್ 2’ ನಂತರದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರವಾಗಿ ಹೊರಹೊಮ್ಮಿತು. ಇನ್ನೊಂದು ಗಮನಾರ್ಹ ಯಶಸ್ವಿ ಚಿತ್ರ ‘ಸು ಫ್ರಮ್‌ ಸೋ’. ಆರು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ ನೂರು ಕೋಟಿ ಕ್ಲಬ್‌ಗೆ ಸೇರ್ಪಡೆಗೊಂಡಿತು. ಈ ಗೆಲುವು ಕಂಟೆಂಟ್‌ ಸಿನಿಮಾ ಮಾಡುವವರಿಗೆ ಬಲ ತುಂಬಿದ್ದು ಹೌದು.

ಕೆಲವು ಭಿನ್ನ ಜಾನರ್‌ನ ಚಿತ್ರಗಳು ಆಗಾಗ ಸದ್ದು ಮಾಡಿದವು. ಅಶ್ವಿನ್‌ ಕುಮಾರ್‌ ನಿರ್ದೇಶನದ ‘ಮಹಾವತಾರ್‌ ನರಸಿಂಹ’ 300 ಕೋಟಿ ರೂಪಾಯಿ ವಹಿವಾಟು ನಡೆಸಿತು. ಯುವ ರಾಜಕುಮಾರ್‌ ನಟನೆಯ ‘ಎಕ್ಕ’ ಸಿನಿಮಾ ದೊಡ್ಡ ಯಶಸ್ಸು ಕಾಣದಿದ್ದರೂ ಪ್ರೇಕ್ಷಕರನ್ನು ಸೆಳೆಯಿತು. ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡ ದರ್ಶನ್‌ರ ‘ಡೆವಿಲ್‌’ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತಂದಿತು. ಇನ್ನು ವರ್ಷಾಂತ್ಯದಲ್ಲಿ ತೆರೆಗೆ ಬರುತ್ತಿರುವ ‘ಮಾರ್ಕ್‌’ ಮತ್ತು ’45’ ಸಿನಿಮಾಗಳು ಥಿಯೇಟರ್‌ಳಲ್ಲಿ ಪ್ರೇಕ್ಷಕರ ಕೊರತೆಯನ್ನು ನೀಗುವ ಭರವಸೆ ಮೂಡಿಸಿವೆ.

ಗುಣಮಟ್ಟ ಮತ್ತು ಪ್ರಯೋಗದ ದೃಷ್ಟಿಯಿಂದ 2025ರಲ್ಲಿ ಹತ್ತಾರು ಹೆಸರಿಸುವಂತಹ ಸಿನಿಮಾಗಳು ತೆರೆಗೆ ಬಂದವು. ದುರದೃಷ್ಟವಾಶ್‌ ಈ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುವಲ್ಲಿ ವಿಫಲವಾದವು. ಮಿಥ್ಯ, ಅಜ್ಞಾತವಾಸಿ, ಫೈರ್‌ಫ್ಲೈ, ವೀರ ಚಂದ್ರಹಾಸ, ನೋಡಿದವರು ಏನಂತಾರೆ, ಹೆಬ್ಬುಲಿ ಕಟ್‌, ದೂರ ತೀರ ಯಾನ, ಏಳು ಮಲೈ, ಅರಸಯ್ಯನ ಪ್ರೇಮಪ್ರಸಂಗ, ಗತವೈಭವ… ಸೇರಿದಂತೆ ಮತ್ತೆ ಕೆಲವು ಚಿತ್ರಗಳು ವಿಮರ್ಶಕರಿಂದ ಮೆಚ್ಚುಗೆ ಪಡೆದರೂ ಹಣ ಮಾಡುವಲ್ಲಿ ಹಿಂದುಳಿದವು. ಮುಂದಿನ ವರ್ಷದಲ್ಲಿ KD, ಬಿಲ್ಲಾ ರಂಗಾ ಭಾಷಾ, ಕರಾವಳಿ, ಯುವರ್ಸ್‌ ಸಿನ್ಸಿಯರ್ಲೀ ರಾಮ್‌, ಟಾಕ್ಸಿಕ್‌… ಹೀಗೆ ಬಹುನಿರೀಕ್ಷೆಯ ಸಿನಿಮಾಗಳಿವೆ. ಇವುಗಳ ಜೊತೆಗೆ ಎಂದಿನಂತೆ ಉತ್ಸಾಹಿ ಯುವ ಚಿತ್ರನಿರ್ದೇಶಕರು ಕಂಟೆಂಟ್‌ ಚಿತ್ರಗಳನ್ನು ರೂಪಿಸುತ್ತಿದ್ದಾರೆ. ಈ ಸಿನಿಮಾಗಳು ಮುಂದಿನ ದಿನಗಳ ಭರವಸೆಗೆ ದಿಕ್ಸೂಚಿಯಾಗಲಿವೆ.

LEAVE A REPLY

Connect with

Please enter your comment!
Please enter your name here