ಯೋಗಿ ಹೀರೋ ಆಗಿ ನಟಿಸಿರುವ ‘ಕಿರಿಕ್ ಶಂಕರ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಎಂ.ಎನ್‌.ಕುಮಾರ್‌ ನಿರ್ಮಾಣದಲ್ಲಿ ಅನಂತರಾಜು ಸಿನಿಮಾ ನಿರ್ದೇಶಿಸಿದ್ದಾರೆ. ರಂಗಭೂಮಿ ಪ್ರತಿಭೆ ಅದ್ವಿಕ ಚಿತ್ರದ ನಾಯಕನಟಿ.

“ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದೆ. ಕೊರೋನಾ ಕಾರ್ಮೋಡ ಕಳೆದು ಸಂಭ್ರಮದ ವಾತಾವರಣ ಮರಳಿ ಬಂದಿದೆ. ಇದೇ ಏಪ್ರಿಲ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ” ಎಂದರು ನಿರ್ಮಾಪಕ ಎಂ.ಎನ್.ಕುಮಾರ್. ಸಾಕಷ್ಟು ಯಶಸ್ವೀ ಸಿನಿಮಾಗಳನ್ನು ನಿರ್ಮಿಸಿರುವ ಕುಮಾರ್‌ ‘ಕಿರಿಕ್‌ ಶಂಕರ್‌’ ಚಿತ್ರದೊಂದಿಗೆ ಮರಳಿದ್ದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ಯೋಗಿ, “ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಪ್ರತಿಯೊಂದು ಸಿನಿಮಾದಲ್ಲೂ ಕಲಿಯುವುದು ಇರತ್ತೆ. ಈ ಚಿತ್ರದಲ್ಲೂ ಸಾಕಷ್ಟು ಕಲಿತಿದ್ದೇನೆ” ಎಂದು ಅವಕಾಶ ನೀಡಿದ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ ಅರ್ಪಿಸಿದರು. ರಂಗಭೂಮಿ ಪ್ರತಿಭೆ ಅದ್ವಿಕ ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. “ನಾನು ರಂಗಭೂಮಿ ಕಲಾವಿದೆ. ನಿರ್ದೇಶಕ ಗಿರಿರಾಜ್ ನನ್ನ ಗುರುಗಳು. ಅವರ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರವಾಗಿದ್ದು, ಪಾತ್ರ ತುಂಬಾ ಚೆನ್ನಾಗಿದೆ” ಎಂದರು ಅದ್ವಿಕ.

ನಿರ್ದೇಶಕ ಅನಂತರಾಜು ಅವರು ಚಿತ್ರದ ಬಗ್ಗೆ ಮಾತನಾಡಿ, “ಇದೊಂದು ನಗರದ ಹೊರವಲಯದಲ್ಲಿ ನಡೆಯುವ ಕಥೆ. ನಾಯಕನಿಗೆ ಇಬ್ಬರು ತಂಗಿಯರು. ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲೇರಿದ್ದರೂ, ಯಾವುದಕ್ಕೂ ತಲೆ ಕೆಡಸಿಕೊಳ್ಳದಾತ. ಆತನ ಜೀವನದಲ್ಲಿ ಯುವತಿಯೊಬ್ಬಳ ಪ್ರವೇಶವಾಗುತ್ತಿದ್ದಂತೆ ಏನೆಲ್ಲಾ ಆಗುತ್ತದೆ ಎಂಬುದೇ ಕಥಾಸಾರಾಂಶ. ಕತೆ ಎಲ್ಲರಿಗೂ ಹಿಡಿಸಿದರೆ ಆ ಕ್ರೆಡಿಟ್ ಯೋಗೀಶ್ ಹುಣಸೂರು ಅವರಿಗೆ ಹೋಗಬೇಕು. ಅವರೇ ಈ ಚಿತ್ರದ ಕಥೆಗಾರರು. ತಾಂತ್ರಿಕವರ್ಗದವರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ” ಎಂದರು. ನಿರ್ದೇಶಕ ಗಿರಿರಾಜ್‌ ಅತಿಥಿಯಾಗಿ ಆಗಮಿಸಿ ಶುಭಕೋರಿದರು. ವೀರ ಸಮರ್ಥ ಸಂಗೀತ, ಯೋಗೀಶ್‌ ಹುಣಸೂರು ಕತೆ, ಚಿತ್ರಕಥೆ, ಸಂಭಾಷಣೆ, ಕಿನ್ನಾಳ್ ರಾಜ್ ಗೀತರಚನೆ ಚಿತ್ರಕ್ಕಿದೆ.

Previous articleಕಾಲ್ಗಡಗದ ಕಣ್ಗಾವಲಿನಲ್ಲಿ ಒಬ್ಬಳು ಹದಿಹರೆಯದ ಹುಡುಗಿ
Next articleಸೈಬರ್‌ ಕ್ರೈಂ ಕಥಾನಕ ‘ಟಕ್ಕರ್‌’; ಮೇ ತಿಂಗಳಲ್ಲಿ ಥಿಯೇಟರ್‌ಗೆ ಸಿನಿಮಾ

LEAVE A REPLY

Connect with

Please enter your comment!
Please enter your name here