ಹೈದರಾಬಾದ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ‘ತ್ರಿಶೂಲಂ’ ಸಿನಿಮಾಗೆ ಅಲ್ಲಿನ ಸಿನಿ ಒಕ್ಕೂಟದಿಂದ ಅಡಚಣೆಯಾಗಿದೆ. ಇದರಿಂದಾಗಿ ತಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ನಿರ್ಮಾಪಕರು ಕನಕಪುರ ಶ್ರೀನಿವಾಸ್‌ ಅವರು ಒಕ್ಕೂಟಕ್ಕೆ ದೂರು ನೀಡಿದ್ದಾರೆ.

ರವಿಚಂದ್ರನ್ ಮತ್ತು ಉಪೇಂದ್ರ ನಟನೆಯ ‘ತ್ರಿಶೂಲಂ’ ಚಿತ್ರಕ್ಕೆ ನಿನ್ನೆ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆದಿತ್ತು. ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ಸಾಹಸ ದೃಶ್ಯಗಳನ್ನು ಚಿತ್ರಿಸಲಾಗುತ್ತಿತ್ತು. ಇನ್ನೂರೈವತ್ತಕ್ಕೂ ಹೆಚ್ಚು ಸಹಕಲಾವಿದರು ಪಾಲ್ಗೊಳ್ಳಬೇಕಿದ್ದ ದೃಶ್ಯ ಅದು. ಎಲ್ಲಾ ಸಿದ್ಧತೆಗಳು ನಡೆದಿದ್ದಾಗ ತಾಂತ್ರಿಕ ಪರಿಕರಗಳನ್ನು ಹೊತ್ತಿದ್ದ ಯೂನಿಟ್‌ ಸೆಟ್‌ಗೆ ಬಂದಿಲ್ಲ. ತಮಗೆ ಬರಬೇಕಾಗಿರುವ ಬಾಕಿ ಹಣ ಪಾವತಿಸಿದರೆ ಯೂನಿಟ್‌ ಕಳುಹಿಸುವುದಾಗಿ ಹೈದರಾಬಾದ್‌ ಫಿಲ್ಮ್ ಫೆಡರೇಷನ್‌ ಹೇಳಿದೆ. ದಿನದ ಚಿತ್ರೀಕರಣ ನಡೆಯದ ಕಾರಣ ಇದರಿಂದಾಗಿ ತಮಗೆ ಸುಮಾರು 20 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಚಿತ್ರದ ನಿರ್ಮಾಪಕ ಕನಕಪುರ ಹೇಳಿದ್ದಾರೆ.

“ಅಡ್ವಾನ್ಸ್ ಹಣವನ್ನು ಪಾವತಿಸಿ ಯೂನಿಟ್‌ ಕಳುಹಿಸುವಂತೆ ಕೋರಲಾಗಿತ್ತು. ಚಿತ್ರೀಕರಣ ಮುಗಿದ ನಂತರ ಇನ್ನುಳಿದ ಬಾಕಿ ಹಣವನ್ನು ಪಾವತಿಸುವ ಮಾತಾಗಿತ್ತು. ಇವರು ಯೂನಿಟ್ ಕಳುಹಿಸಿದೆ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದಾರೆ” ಎನ್ನುವ ಶ್ರೀನಿವಾಶ್‌ ಈ ಬಗ್ಗೆ ಫಿಲ್ಮ್‌ ಫೆಡರೇಷನ್‌ಗೆ ಪತ್ರದ ಮುಖೇನ ದೂರು ಹೇಳಿಕೊಂಡಿದ್ದಾರೆ. ಓಂಪ್ರಕಾಶ್ ನಿರ್ದೇಶನದ ‘ತ್ರಿಶೂಲಂ’ ಅದ್ಧೂರಿ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ಬಹುಭಾಷೆಗಳಲ್ಲಿ ತೆರೆಗೆ ತರುವ ಯೋಜನೆ ನಿರ್ಮಾಪಕರದ್ದು. ಸಾನ್ವಿ ಶ್ರೀವಾತ್ಸವ್‌, ನಿಮಿಕಾ ರತ್ನಾಕರ್‌, ರಂಗಾಯಣ ರಘು, ಸಾಧು ಕೋಕಿಲ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಮತ್ತಿತರರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here