ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‌ ಅಭಿನಯದ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ಡಬ್ಬಿಂಗ್‌ ಕೆಲಸ ಶುರುವಾಗಿದೆ. ಈಗಾಗಲೇ 3 ಹಂತಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ನಾಲ್ಕನೇ ಹಂತದ ಶೂಟಿಂಗ್‌ ತಯಾರಿಯಲ್ಲಿದೆ.

‘ಸಂಜು ವೆಡ್ಸ್‌ ಗೀತಾ’ ಮ್ಯೂಸಿಕಲ್‌ ಹಿಟ್‌ ಸಿನಿಮಾ. ಕಥೆ ಹಾಗೂ ಹಾಡುಗಳಿಂದಲೇ ಮನೆ ಮಾತಾಗಿದ್ದ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು ನಾಗಶೇಖರ್. ಕನ್ನಡ ಚಿತ್ರರಂಗಕ್ಕೆ ಅದ್ಭುತ ಲವ್‌ ಸ್ಟೋರಿಗಳನ್ನು ಕೊಟ್ಟ ನಿರ್ದೇಶಕ ನಾಗಶೇಖರ್ ಈಗ ಅದೇ ಹೆಸರಿನಲ್ಲಿ ಮತ್ತೊಂದು ಪ್ರೇಮಕಥೆಯನ್ನು ಹೇಳ ಹೊರಟಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಈ ಸಿನಿಮಾದಲ್ಲಿ ರಮ್ಯ ಬದಲು ರಚಿತಾರಾಮ್ ನಾಯಕಿಯಾಗಿದ್ದಾರೆ. ಸದ್ಯ ಈ ಸಿನಿಮಾದ 3 ಹಂತಗಳ ಚಿತ್ರೀಕರಣ ಹಾಗೂ ಎಡಿಟಿಂಗ್ ಮುಗಿದಿದೆಯಂತೆ. ಯುಗಾದಿ ಹಬ್ಬದ ಶುಭದಿನದಂದು ಸಾಧು ಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಕಾರ್ಯ ಆರಂಭವಾಗಿದೆ.

ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗಶೇಖರ್‌, ‘ಬೆಂಗಳೂರಿನಲ್ಲಿ ಮೊದಲಹಂತದ ಶೂಟಿಂಗ್ ಮುಗಿಸಿ, ನಂತರ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 15 ದಿನ ಹನ್ನೊಂದು ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದೆವು. ಈಗಾಗಲೇ ಮೂರನೇ ಹಂತ ಮುಗಿಸಿದ್ದು, ಈ ಶುಕ್ರವಾರದಿಂದ ನಾಲ್ಕನೇ ಹಂತದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದೇವೆ. ಶಿಡ್ಲಘಟ್ಟ ರೇಷ್ಮೆಗೆ ದೊಡ್ಡ ಮಾರ್ಕೆಟ್ ಇದೆ. ನಮ್ಮ ರೇಷ್ಮೆ ನೂಲಿಗೆ ಒಳ್ಳೆಯ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಈ ಚಿತ್ರದಲ್ಲಿದೆ. ನಮ್ಮ ಚಿತ್ರದಲ್ಲಿ ಹಾಡುಗಳೇ ಹೈಲೈಟ್. ಹಾಡು ಕೇಳಿದವರೆಲ್ಲ‌ ಮೆಚ್ಚಿಕೊಂಡಿದ್ದಾರೆ. ಚಿತ್ರ ಶುರುವಾದಾಗಲೇ ಆನಂದ್ ಆಡಿಯೋದವರು ರೈಟ್ಸ್ ತಗೊಂಡಿದ್ದಾರೆ. ಒಂದು ಹಾಡು ಬಳಸಿಕೊಂಡಿರುವ ಬಗ್ಗೆ ಲಹರಿ ಜೊತೆ ಮಾತುಕತೆ ನಡೆಯುತ್ತಿದೆ. ನಮ್ಮ ಸಿನಿಮಾಗೆ ಕಾಂಟ್ರಿವರ್ಸಿ ಪ್ರಚಾರ ಬೇಕಿಲ್ಲ. ಕಿಟ್ಟಿ, ರಚ್ಚು ಪರ್ಫಾರ್ಮನ್ಸ್ ತುಂಬಾ ಚೆನ್ನಾಗಿ ಬಂದಿದೆ. ಜೂನ್ ವೇಳೆಗೆ ಬರಲೇಬೇಕು ಎಂಬ ಹಠದಿಂದ ಕೆಲಸ ಮಾಡುತ್ತಿದ್ದೇವೆ. ಮೇ ಅಂತ್ಯಕ್ಕೆ ಮೊದಲ ಕಾಪಿ ಬರುತ್ತದೆ’ ಎಂದು ವಿವರಿಸಿದ್ದಾರೆ.

‘ಚಿತ್ರದಲ್ಲಿ ಡೈಲಾಗ್ಸ್‌ಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಸ್ವಲ್ಪ ಮುಂಚೆಯೇ ಡಬ್ಬಿಂಗ್ ಶುರು ಮಾಡುತ್ತಿದ್ದೇವೆ. ಚಿತ್ರದಲ್ಲಿ ತುಂಬಾ ಮೆಲೋಡಿಯಸ್ ಹಾಡುಗಳಿವೆ. ಇದು ಮತ್ತೊಂದು ಅದ್ಭುತ ಪ್ರೇಮಕಾವ್ಯವಾಗಲಿದೆ’ ಎಂದಿದ್ದಾರೆ ಶ್ರೀನಗರ ಕಿಟ್ಟಿ. ’40 ದಿನ ಶೂಟಿಂಗ್ ಮಾಡಿದ್ದೇವೆ. ಎಲ್ಲೂ ಸಹ ತೊಂದರೆಯಾಗದೆ, ಸರಾಗವಾಗಿ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ. ಹಾಸನದಲ್ಲಿ ಆಡಿಯೋ ರಿಲೀಸ್ ಮಾಡುವ ಪ್ಲಾನ್ ಇದೆ’ ನಿರ್ಮಾಪಕ ಛಲವಾದಿ ಕುಮಾರ್‌ ಖುಷಿ ಹಂಚಿಕೊಂಡರು.

ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌ ಶ್ರೀಧರ ವಿ ಸಂಭ್ರಮ್‌ ಐದು ಸುಂದರ ಟ್ಯೂನ್ ಕಂಪೋಸ್‌ ಮಾಡಿದ್ದಾರೆ. ಸೋನು ನಿಗಮ್‌, ಶ್ರೇಯಾ ಘೋಷಾಲ್, ಮಂಗ್ಲಿ ಹಾಡುಗಳಿಗೆ ದನಿಯಾಗಿದ್ದಾರೆ. ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here