ಪ್ರತಿ ವರ್ಷ ಈದ್‌ ಮಿಲಾದ್‌ಗೆ ಸಲ್ಮಾನ್‌ ಖಾನ್‌ ಅಭಿಮಾನಿಗಳಿಗೆ ಹೊಸ ಸಿನಿಮಾವನ್ನು ಉಡುಗೊರೆಯಾಗಿ ಕೊಡುತ್ತಿದ್ದರು. ಆದರೆ ಈ ಸಲ ತಮ್ಮ ಹೊಸ ಸಿನಿಮಾ ಪ್ರಕಟಿಸಿದ್ದಾರೆ. ಜೊತೆಗೆ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ.

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಈದ್‌ ಮಿಲಾದ್‌ ಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹಬ್ಬದ ದಿನ ನೆಚ್ಚಿನ ನಟ ತಮ್ಮ ಸಿನಿಮಾ ಕುರಿತಾಗಿ ಏನಾದರೂ ಅಪ್ಡೇಡ್‌ ಕೊಟ್ಟೇ ಕೊಡುತ್ತಾರೆ ಅಂತ ಕಾಯುತ್ತಿದ್ದವರ ಮುಖದಲ್ಲಿ ಮಂದಹಾಸ ಮೂಡಿದೆ. ಸಲ್ಮಾನ್‌ ತಮ್ಮ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದ್ದಾರೆ. ಮುಂದಿನ ವರ್ಷ ಈದ್‌ ಮಿಲಾದ್‌ನಂದೇ ಥಿಯೇಟರ್‌ಗೆ ಸಲ್ಮಾನ್‌ ಲಗ್ಗೆ ಇಡುವ ಸೂಚನೆ ಕೊಟ್ಟಿದ್ದಾರೆ.

ಸಲ್ಮಾನ್‌ ಅಭಿನಯಿಸಲಿರುವ ಹೊಸ ಸಿನಿಮಾ ಕುರಿತಾಗಿ ಈ ಹಿಂದೆ ಸಾಕಷ್ಟು ಸುದ್ದಿ ಹರಿದಾಡುತ್ತಲೇ ಇತ್ತು. ಅದರಲ್ಲೂ ಸ್ನೇಹಿತ ಸಾಜಿದ್‌ ನಾಡಿಯಾದ್‌ವಾಲಾ ಅವರ ಜೊತೆಗೆ ಹೊಸ ಸಿನಿಮಾ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿತ್ತು. ಈಗ ಈ ಸಿನಿಮಾ ಕುರಿತಾದ ದೊಡ್ಡ ಅಪ್ಡೇಡ್‌ ರಿವೀಲ್‌ ಆಗಿದೆ. ಸಲ್ಮಾನ್‌ ಖಾನ್‌ ತಮ್ಮ ಮುಂದಿನ ಸಿನಿಮಾದ ಟೈಟಲ್‌ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾಗೆ ‘ಸಿಕಂದರ್‌’ ಎಂದು ಶೀರ್ಷಿಕೆ ನೀಡಲಾಗಿದೆ. ಸಾಜಿದ್‌ ನಾಡಿಯಾದ್‌ವಾಲಾ ನಿರ್ಮಿಸುತ್ತಿರುವ ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮುರುಗದಾಸ್‌ ಡೈರೆಕ್ಟ್‌ ಮಾಡಲಿದ್ದಾರೆ. ‘ಸಿಕಂದರ್‌’ 2025ರ ಈದ್‌ ಮಿಲಾದ್‌ ಹಬ್ಬದಂದೇ ರಿಲೀಸ್‌ ಆಗಲಿದೆ.

ಸಾಜಿದ್‌ ನಾಡಿಯಾದ್‌ ವಾಲಾ ಹಾಗೂ ಸಲ್ಮಾನ್‌ ಖಾನ್‌ ಜೊತೆಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ‘ಜುಡ್ವ’, ‘ಮುಜ್‌ಸೆ ಶಾದಿ ಕರೋಗಿ’, ‘ಕಿಕ್‌’ ಸೇರಿದಂತೆ ಸಾಕಷ್ಟು ಹಿಟ್‌ ಸಿನಿಮಾಗಳನ್ನು ಕೊಟ್ಟಿದೆ ಈ ಜೋಡಿ. ಹೀಗಾಗಿಯೇ ‘ಸಿಕಂದರ್‌’ ಚಿತ್ರದ ಬಗ್ಗೆ ಈ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇನ್ನು, ದಕ್ಷಿಣ ಭಾರತದಲ್ಲಿ ಹಿಟ್‌ ಚಿತ್ರಗಳನ್ನ ಕೊಟ್ಟಿರುವ ನಿರ್ದೇಶಕ ಮುರುಗದಾಸ್‌ ಅವರಿಗೆ ಬಾಲಿವುಡ್‌ ಹೊಸದೇನಲ್ಲ. ಈ ಹಿಂದೆ ಆಮೀರ್‌ ಖಾನ್‌ ನಟಿಸಿರುವ ‘ಗಜಿನಿ’ ಹಾಗೂ ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಅಕೀರಾ’ ಆಕ್ಷನ್‌ ಥ್ರಿಲ್ಲರ್‌ ಚಿತ್ರವನ್ನೂ ಎ ಆರ್‌ ಮುರುಗದಾಸ್‌ ಅವರೇ ನಿರ್ದೇಶನ ಮಾಡಿದ್ದಾರೆ.

ಥಿಯೇಟರ್‌ಗೆ ಬಂದ ಸಲ್ಮಾನ್‌ ಖಾನ್‌ ಅಭಿನಯದ ಕೊನೆಯ ಸಿನಿಮಾ ‘ಟೈಗರ್‌ 3’. ಕತ್ರಿನಾ ಕೈಫ್‌ ನಾಯಕಿಯಾಗಿ ನಟಿಸಿದ್ದ ಈ ಚಿತ್ರವನ್ನ ಯಶ್‌ ರಾಜ್‌ ಫಿಲಂಸ್‌ ನಿರ್ಮಾಣ ಮಾಡಿತ್ತು. ಸಾಧಾರಣ ಹಿಟ್‌ ಆಗಿದ್ದ ಈ ಸಿನಿಮಾದ ನಂತರ ಸಲ್ಮಾನ್‌ ಸಿನಿಮಾಗಳ ಆಯ್ಕೆಯಲ್ಲಿ ಕೊಂಚ ಎಚ್ಚರಿಕೆ ವಹಿಸಿದ್ದರು. ಹೀಗಾಗಿ ಈ ವರ್ಷ ಹಬ್ಬಕ್ಕೆ ಅವರ ಯಾವುದೇ ಸಿನಿಮಾ ರಿಲೀಸ್‌ ಆಗಲಿಲ್ಲ. ಬದಲಾಗಿ ಮುಂದಿನ ವರ್ಷ ಹಬ್ಬಕ್ಕೆ ಈಗಲೇ ಬುಕ್‌ ಮಾಡಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here