‘ಕಾಪುರುಷ್’ ಬೆಂಗಾಲಿ ಚಿತ್ರದಲ್ಲಿ ನಿರ್ದೇಶಕ ಸತ್ಯಜಿತ್ ರೇ ಕಡಿಮೆ ದೃಶ್ಯಗಳನ್ನು ಬಳಸಿಕೊಂಡು, ಚಲನಚಿತ್ರದ ಭಾಷೆಯನ್ನು ಸಂಪೂರ್ಣವಾಗಿ ಕೈವಶಮಾಡಿಕೊಂಡು ದೃಶ್ಯಗಳನ್ನು ಕಟ್ಟುತ್ತಾರೆ. ಅತ್ಯಂತ ಜಾಣ್ಮೆಯಿಂದ ಮತ್ತು ಆ ಜಾಣ್ಮೆ ಕಾಣದಷ್ಟು ಸುಲಲಿತವಾಗಿ ರೇ ದೃಶ್ಯಗಳನ್ನು ಕಟ್ಟುತ್ತಾ ಹೋಗುತ್ತಾರೆ. ‘ಕಾಪುರುಷ್’ (1965) MUBIಯಲ್ಲಿ ಸ್ಟ್ರೀಮ್ ಆಗುತ್ತಿದೆ.
ಒಂದಾನೊಂದು ಕಾಲವಿತ್ತು. ಆಗ ಮನೋರಂಜನೆಗಾಗಿ ನಮ್ಮ ಪಾಲಿಗಿದ್ದ ಚಾನೆಲ್ ಎಂದರೆ ದೂರದರ್ಶನ ಮಾತ್ರ. ಭಾನುವಾರ ಮುಂಜಾನೆಯ ‘ರಂಗೋಲಿ’, ಗುರುವಾರದ ಕನ್ನಡ ‘ಚಿತ್ರಮಂಜರಿ’, ಬುಧವಾರ, ಶುಕ್ರವಾರಗಳ ‘ಚಿತ್ರಹಾರ್’ ಜೊತೆಜೊತೆಯಲ್ಲಿ ನಾವು ಕಾಯುತ್ತಿದ್ದ ಇನ್ನೊಂದು ಕಾರ್ಯಕ್ರಮ ಭಾನುವಾರ ಮಧ್ಯಾಹ್ನದ ಚಲನಚಿತ್ರಗಳು. ಭಾರತದ ವಿವಿಧ ಭಾಷೆಗಳಿಗೆ ಸೇರಿದ ಅತ್ಯುತ್ತಮ ಎನ್ನಬಹುದಾದ ಚಿತ್ರಗಳು ಪ್ರಸಾರವಾಗುತ್ತಿದ್ದವು. ಅವೆಲ್ಲಾ ಕ್ಲಾಸಿಕ್ ಚಿತ್ರಗಳು ಎನ್ನುವುದು ಆಗ ನಮಗೆ ಗೊತ್ತಾಗುತ್ತಿರಲಿಲ್ಲವಾದರೂ ಅವುಗಳಲ್ಲಿನ ಏನೋ ಒಂದು ನಮ್ಮನ್ನು ಆವರಿಸಿಕೊಳ್ಳುತ್ತಿತ್ತು. ಈಗ ಹಲವಾರು ಆಯ್ಕೆಗಳ ನಡುವೆ ಆಗ ನೋಡಿದ ಚಿತ್ರಗಳು ಕೆಲವೊಮ್ಮೆ ಇದ್ದಕ್ಕಿದ್ದಂತೆ ಎದುರಾಗಿ, ಕೆಲವೊಮ್ಮೆ ನಾವೇ ಹುಡುಕಾಡಿದಾಗ ಇಣುಕಿನೋಡಿ ಅಚ್ಚರಿ ಮತ್ತು ಸಂಭ್ರಮವನ್ನೀಯುತ್ತವೆ.
ಕಳೆದ ವರ್ಷ ಅಂದರೆ 2021 ಸತ್ಯಜಿತ್ ರೇ ಅವರ ಜನ್ಮ ಶತಮಾನೋತ್ಸವ. ಆಗ ಟಿಪ್ಪಣಿ ಮಾಡಿಕೊಳ್ಳುತ್ತಾ ಅವರ ಹಲವಾರು ಚಿತ್ರಗಳನ್ನು ಮತ್ತೆ ನೋಡಿದೆ, ಕೆಲವನ್ನು ಮತ್ತೆಮತ್ತೆ ನೋಡಿದೆ. ಹಾಗೆ ನೋಡಿದ ಒಂದು ಚಿತ್ರ 1965ರಲ್ಲಿ ಬಿಡುಗಡೆಯಾದ ’ಕಾಪುರುಷ್’. ರೇ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಧಾನವಾಗಿ ಮೂರು ಪಾತ್ರಗಳು ಮಾತ್ರ ಇದ್ದು, ಸುಮಾರು 1 ಗಂಟೆ 10 ನಿಮಿಷಗಳಲ್ಲಿ, ಒಂದು ರಾತ್ರಿಯಿಂದ ಮತ್ತೊಂದು ರಾತ್ರಿಯೊಳಗೆ ನಡೆಯುವ ಚಿತ್ರ ಇದು. ಸುಮಿತ್ರೋ ಚಟರ್ಜಿ, ಮಾಧಬಿ ಮುಖರ್ಜಿ ಮತ್ತು ಹರಧಾನ್ ಬ್ಯಾನರ್ಜಿ ಈ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಡಿಮೆ ದೃಶ್ಯಗಳನ್ನು ಬಳಸಿಕೊಂಡು, ಚಲನಚಿತ್ರದ ಭಾಷೆಯನ್ನು ಸಂಪೂರ್ಣವಾಗಿ ಕೈವಶಮಾಡಿಕೊಂಡು ರೇ ಇಲ್ಲಿ ದೃಶ್ಯಗಳನ್ನು ಕಟ್ಟುತ್ತಾರೆ. ಸಣ್ಣ ಕೋಣೆಯ ಉಸಿರುಕಟ್ಟಿಸುವ ಇಕ್ಕಟ್ಟೇ ಒಂದು ರೂಪಕವಾದಂತೆ ಅಮಿತೋ ಮತ್ತು ಕರುಣಾರ ನಡುವೆ ನಡೆಯುವ ಆ ನಿರ್ಧಾರಕ ಘಳಿಗೆಯ ತೊಯ್ದಾಟ ಇರಬಹುದು, ಅಥವಾ ಪಕ್ಕದ ಕೋಣೆಯಲ್ಲಿ ಗಂಡ ಮಲಗಿದ್ದಾಗ ಅಮಿತೋ ಮತ್ತು ಕರುಣಾರ ನಡುವೆ ನಡೆಯುವ ಮಾತುಕತೆಯ ಸಂದರ್ಭ ಇರಬಹುದು. ಅತ್ಯಂತ ಜಾಣ್ಮೆಯಿಂದ ಮತ್ತು ಆ ಜಾಣ್ಮೆ ಕಾಣದಷ್ಟು ಸುಲಲಿತವಾಗಿ ರೇ ದೃಶ್ಯಗಳನ್ನು ಕಟ್ಟುತ್ತಾ ಹೋಗುತ್ತಾರೆ.
ಚಿತ್ರ ಶುರುವಾಗುವುದು ಒಂದು ಮೆಕ್ಯಾನಿಕ್ ಶಾಪ್ನ ಇಕ್ಕಟ್ಟು ದೃಶ್ಯದಿಂದ. ಅಮಿತೋ ಪಯಣಿಸುತ್ತಿದ್ದ ಟ್ಯಾಕ್ಸಿ ಕೆಟ್ಟು ನಿಂತಿದೆ. ಆ ರಾತ್ರಿಗೆ ರಿಪೇರಿಯಾಗುವ ಹಾಗಿಲ್ಲ. ಆತನಿಗೆ ಹಶಿಮಾರೋ ಎನ್ನುವ ಊರಿಗೆ ಹೋಗಬೇಕಿದೆ. ಟ್ರೇನು ಹಿಡಿಯಬೇಕೆಂದರೂ ಮರುದಿನ ಸಂಜೆಯವರೆಗೂ ಕಾಯಬೇಕು. ಏನು ಮಾಡುವುದು ಎಂದು ತಲೆಕೆಡಿಸಿಕೊಳ್ಳುತ್ತಿದ್ದಾಗ ಏನೋ ಕೆಲಸಕ್ಕೆ ಅಲ್ಲಿಗೆ ಬಂದಿದ್ದ ಟೀ ತೋಟದ ಮಾಲಿಕ ಗುಪ್ತಾ ಆತನನ್ನು ಮನೆಗೆ ಕರೆಯುತ್ತಾರೆ. ದಾರಿಯಲ್ಲೇ ಅಮಿತೋ ಒಬ್ಬ ಚಿತ್ರಕಥಾ ಬರಹಗಾರ ಎನ್ನುವುದು ಗೊತ್ತಾಗುತ್ತದೆ. ಗುಪ್ತ ಜೋರು ದನಿಯ, ಜೋರು ನಗುವಿನ ಮನುಷ್ಯ. ಪಕ್ಕಾ ಇಂಗ್ಲಿಷ್ ರೀತಿನೀತಿಗಳು. ಆತನ ಮನೆಯೊಳಕ್ಕೆ ಹೆಜ್ಜೆಯಿಡುವ ಅಮಿತೋಗೆ ಆತನ ಪತ್ನಿಯನ್ನು ಕಂಡು ಆಘಾತವಾಗುತ್ತದೆ, ಅವಳಿಗೂ ಕಸಿವಿಸಿಯಾಗುತ್ತದೆ. ಇವರಿಬ್ಬರೂ ಮೊದಲು ಪ್ರೇಮಿಗಳಾಗಿದ್ದವರು. ಇಲ್ಲಿಯವರೆಗೂ ಸರಿ, ಈ ವಸ್ತುವನ್ನಿಟ್ಟುಕೊಂಡ, ಈ ಸಂದರ್ಭವನ್ನು ಬಳಸಿಕೊಂಡ ಹಲವು ಚಿತ್ರಗಳು ಬಂದುಹೋಗಿವೆ. ಒಂದೋ ಗಂಡ ಕೆಟ್ಟವನಿರುತ್ತಾನೆ, ಹೆಂಡತಿ ಮೌನವಾಗಿ ನವೆಯುತ್ತಿರುತ್ತಾಳೆ, ಅಥವಾ ಪ್ರೇಮಿ ಕೆಟ್ಟವನಾಗಿದ್ದು ಅವಳನ್ನು ಬ್ಲಾಕ್ ಮೇಲ್ ಮಾಡುತ್ತಾನೆ, ಅಥವಾ ಗಂಡ ತ್ಯಾಗ ಮಾಡಿ ಹೆಂಡತಿಯನ್ನು ಪ್ರೇಮಿಯ ಜೊತೆಗೆ ಕಳುಹಿಸಿಕೊಡುತ್ತಾನೆ. ಈ ಎಲ್ಲಾ ಸಂದರ್ಭದಲ್ಲೂ ಹೆಣ್ಣಿನ ಪಾತ್ರ ದುರ್ಬಲವಾಗಿಯೇ ಚಿತ್ರಿತವಾಗಿರುತ್ತದೆ. ಆದರೆ ಇಲ್ಲಿ ರೇ ಭಿನ್ನವಾಗಿ ನಿಲ್ಲುತ್ತಾರೆ.
ಇಬ್ಬರೇ ಇರುವ ಸಂದರ್ಭ ದೊರಕಿದ ತಕ್ಷಣ ಅಮಿತೋ ಕರುಣಾಳನ್ನು ಮಾತನಾಡಿಸಲು ಪ್ರಯತ್ನಿಸುತ್ತಾನೆ, ಏನೋ ಹೇಳಲು ಹೋಗುತ್ತಾನೆ. ಆದರೆ ಕರುಣಾ ಆ ಕಡೆಗೆ ಗಮನವನ್ನೇ ಹರಿಸದಂತೆ ವ್ಯವಹರಿಸುತ್ತಾಳೆ. ’ಅಯ್ಯೋ ಗೊತ್ತಿದ್ದರೆ ನಾನು ಬರುತ್ತಲೇ ಇರಲಿಲ್ಲ’ ಎಂದು ತನ್ನ ಬರುವಿಕೆ ಅವಳನ್ನು ಕಲಕುತ್ತದೇನೋ ಎನ್ನುವಂತೆ ಅವನು ಹೇಳಿದ ಮಾತಿಗೆ, ‘ಯಾಕೆ, ನೀನು ಬಂದರೆ ಏನಾಯಿತು?’ ಎಂದು ಹೇಳಿ ಆತನ ಹೆಮ್ಮೆಯ ಬಲೂನಿಗೆ ನಿಜದ ಸೂಜಿಮೊನೆ ತಾಕಿಸುತ್ತಾಳೆ. ಇದರ ನಡುವೆಯೇ ಸಂಜೆ ಕಳೆಯುತ್ತದೆ, ರಾತ್ರಿಯ ಊಟವೂ ಆಗುತ್ತದೆ. ಅಮಿತೋ ಕೋಣೆಗೆ ಹಿಂದಿರುಗಿ ಹಾಸಿಗೆಯ ಮೇಲೆ ಬೀಳುತ್ತಾನೆ. ಮೊದಲ ಫ್ಲಾಶ್ ಬ್ಯಾಕ್ ಆಗ ಬರುತ್ತದೆ.
ಇದೇ ಅಮಿತೋ ತನ್ನ ಹಾಸ್ಟೆಲಿನ ಕೋಣೆಯಲ್ಲಿರುತ್ತಾನೆ. ಅದು ಮೂರು ಮೂಲೆಯ ಕೋಣೆ, ಅದನ್ನು ರೇ ಏಕೆ ಮೂರು ಮೂಲೆಯಾಗಿಸುತ್ತಾರೆ? ಸುರಿಯುವ ಮಳೆಯಲ್ಲಿ ಅಲ್ಲಿಗೆ ಬಂದ ಕರುಣಾ ಅವರಿಬ್ಬರನ್ನು ಬೇರೆ ಮಾಡಲೆಂದೇ ಅವಳ ಸೋದರಮಾವ ಬೇರೆ ಊರಿಗೆ ವರ್ಗ ಮಾಡಿಸಿಕೊಂಡಿರುವುದಾಗಿಯೂ, ಅವರ ಆಸರೆಯಲ್ಲಿ ಇರುವ ಅವಳು ಹೋಗಲೇಬೇಕಾಗಿರುವುದಾಗಿಯೂ ಹೇಳಿದಾಗ, ಅಮಿತೋ ಮತ್ತೆ ಮತ್ತೆ ಕೇಳುತ್ತಾನೆ, ’ಹಾಗಾದರೆ ಹೊರಟುಬಿಡುವೆಯಾ ನೀನು??’ – ಅವನು ಕಂಗಾಲಾಗಿದ್ದಾನೆ. ಆದರೆ ಕರುಣಾ ಗಟ್ಟಿ ಮನೋಭಾವದ ಹೆಣ್ಣು. ’ಇಲ್ಲ ನಾನು ಹೋಗುವುದಿಲ್ಲ, ನಿನ್ನೊಂದಿಗೆ ಬಂದುಬಿಡುತ್ತೇನೆ. ನಾನು ಒಂದು ಕೆಲಸ ಹಿಡಿಯುತ್ತೇನೆ, ನೀನೂ ಒಂದು ಕೆಲಸ ಹಿಡಿ. ಹೇಗೋಬದುಕು ಸಾಗಿಸಬಹುದು’ ಎನ್ನುತ್ತಾಳೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲ್ವರ್ಗದಿಂದ ಬಂದ ಕರುಣಾಳಿಗೆ ಆ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯ. ಆದರೆ ಬಡತನದಲ್ಲಿರುವ, ಕಷ್ಟಪಟ್ಟು ಓದುತ್ತಿರುವ ಅಮಿತೋಗೆ ನಿಂತನಿಲುವಿನಲ್ಲಿ ಹಾಗೆ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ರೇ ಕರೆದಂತೆ ನಾನು ಆತನನ್ನು ಕಾಪುರುಷ್ – ಹೇಡಿ ಎಂದು ಕರೆಯಲಾರೆ. ಏಕೆಂದರೆ ಎಷ್ಟೋ ‘ಇಲ್ಲ’ಗಳ ನಡುವೆ ಆತ್ಮವಿಶ್ವಾಸ ಸಲೀಸಲ್ಲ. ಆತ ಹಿಂಜರೆಯುತ್ತಾನೆ. ಆದರೆ ಕರುಣಾ ಎಷ್ಟು ಗಟ್ಟಿ ವ್ಯಕ್ತಿತ್ವದ ಹೆಣ್ಣು ಎಂದರೆ, ಅವಳ ಕಣ್ಣುತಪ್ಪಿಸಿ ಅವನು ಆ ಮೂರುಮೂಲೆಯ ಕೋಣೆಯ ಮೂಲೆಗೆ ತಿರುಗಿದಾಗ ಅವಳು ಅಳುವುದಿಲ್ಲ, ಅವನನ್ನು ಬೇಡುವುದಿಲ್ಲ, ಶಪಿಸುವುದಿಲ್ಲ. ಮುಚ್ಚಿದ್ದ ಬಾಗಿಲನ್ನು ತೆರೆದುಕೊಂಡು ಮಳೆಸುರಿಯುವ ರಸ್ತೆಗೆ ಹೋಗಿಬಿಡುತ್ತಾಳೆ. ಆನಂತರ ಈಗ ಅವರಿಬ್ಬರೂ ಸಂಧಿಸಿದ್ದಾರೆ.
ನಿದ್ದೆ ಬಾರದ ಅವನು ಹಜಾರದಲ್ಲಿ ಓಡಾಡುತ್ತಿರುತ್ತಾನೆ, ಅವನ ಕಾಲಿಗೆ ಏನೋ ತಾಕಿ ಸದ್ದಾಗಿ ಕರುಣಾ ಕೋಣೆಯಿಂದ ಬರುತ್ತಾಳೆ. ಈಗ ಅಮಿತೋ ಅವಳೊಡನೆ ಮಾತನಾಡಬೇಕು, ಆದರೆ ಗಂಡ ಪಕ್ಕದ ಕೋಣೆಯಲ್ಲಿ ಮಲಗಿದ್ದಾನೆ. ಈ ಸಂದರ್ಭವನ್ನು ರೇ ಶಬ್ಧದ ಸಹಾಯದೊಂದಿಗೆ ನಿರ್ವಹಿಸುತ್ತಾರೆ. ಕೋಣೆಯೊಳಗಿನಿಂದ ಗಂಡನ ಜೋರು ಗೊರಕೆಯ ಸದ್ದು ಕೇಳುತ್ತಿರುತ್ತದೆ. ಆ ಸದ್ದಿನ ನಡುವೆ ಇವರ ಮಾತು. ಅವನದ್ದು ಒಂದೇ ಪ್ರಶ್ನೆ, ‘ನಿಜಕ್ಕೂ ನೀನು ಸುಖವಾಗಿರುವೆಯಾ?’, ’ನಿಜಕ್ಕೂ ನೀನು ಸುಖವಾಗಿರುವೆಯಾ?’. ಆಕೆ ‘ಇಲ್ಲ’ ಎನ್ನಲಿ ಎಂದು ಅವನ ಇಡೀ ಅಸ್ತಿತ್ವ ತವಕಿಸುತ್ತಿರುತ್ತದೆ. ಆದರೆ ಆಕೆ ಆ ಮಾತು ಹೇಳುವುದೇ ಇಲ್ಲ. ತನ್ನ ಘನತೆಯನ್ನು ಬಿಟ್ಟುಕೊಡುವುದೇ ಇಲ್ಲ. ನಡುವಲ್ಲಿ ಗಂಡನ ಗೊರಕೆಯ ಸದ್ದು ಮುರಿಯುತ್ತದೆ, ಅಮಿತೋ ಸ್ವಲ್ಪ ಗಟ್ಟಿ ದನಿಯಲ್ಲಿ ‘ನಿದ್ದೆ ಬರುತ್ತಿಲ್ಲಾ, ನಿದ್ದೆ ಮಾತ್ರೆ ಇದೆಯಾ?’ ಎಂದು ಕೇಳುತ್ತಾನೆ. ರೇ ವಿವರಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಮಾತ್ರೆ ತಂದುಕೊಟ್ಟ ಕರುಣಾ, ‘ಎರಡೇ ಮಾತ್ರೆ ತೆಗೆದುಕೊಳ್ಳಿ’ ಎನ್ನುತ್ತಾಳೆ, ಅವಳೇನೋ ಕಾಳಜಿಯಿಂದ ಹೇಳುತ್ತಿದ್ದಾಳೆ ಎನ್ನುವಂತೆ ಆತ, ‘ಜಾಸ್ತಿ ತೆಗೆದುಕೊಂಡರೆ?’ ಎಂದು ತುಂಟತನದಿಂದ ಕೇಳುತ್ತಾನೆ. ಅವನನ್ನು ಒಮ್ಮೆ ನೋಡಿದ ಕರುಣಾ ‘ನೀನು ಹಾಗೆಲ್ಲಾ ತೆಗೆದುಕೊಳ್ಳುವವನಲ್ಲ ಬಿಡು’ ಎಂದು ಮತ್ತೊಮ್ಮೆ ಅವನನ್ನು ಮಾತಿನಲ್ಲೇ ನಿವಾಳಿಸುತ್ತಾಳೆ.
ಮರುದಿನ ಬೆಳಗಾಗುತ್ತದೆ. ಅವರಿಬ್ಬರ ನಡುವೆ ಅದೇ ಕಸಿವಿಸಿಯ ಕ್ಷಣಗಳು. ಅವನ ಕಾರ್ ಇನ್ನೂ ರಿಪೇರಿ ಆಗಿಲ್ಲ. ಸಂಜೆ ಟ್ರೇನಿಗೆ ಬಿಡುತ್ತೇನೆ, ಎಂದು ಗಂಡ ಪಿಕ್ನಿಕ್ ಹೊರಡಿಸುತ್ತಾನೆ. ಜೀಪ್ನ ಹಿಂದೆ ಸೀಟಿನಲ್ಲಿ ಇವನು, ಮುಂದೆ ಸೀಟಿನಲ್ಲಿ ಕರುಣಾ ಮತ್ತು ಗುಪ್ತಾ. ಒಂದು ಕಡೆ ರಸ್ತೆಗೆ ಕಲ್ಲು ಅಡ್ಡ ಬಂದು ಕರುಣಾ ಗಂಡನ ಭುಜವನ್ನು ಆಧಾರಕ್ಕಾಗಿ ಹಿಡಿದುಕೊಳ್ಳುತ್ತಾಳೆ. ಅಮಿತೋ ಒಂದೊಮ್ಮೆ ಬೇಡಿ ಅವಳ ಕೈಹಿಡಿದುಕೊಂಡಿರುತ್ತಾನೆ. ಈಗ ಗಂಡ ಅಧಿಕಾರದಿಂದ ಆ ಕೈಯನ್ನು ಧರಿಸಿದ್ದಾನೆ. ಇವನಿಗೆ ಅದನ್ನು ಸಹಿಸಲಾಗುವುದಿಲ್ಲ. ಅವನ ಗಂಡಿನ ಅಹಂ ಮತ್ತು ಅವಳು ತನ್ನವಳು ಎನ್ನುವ ಪೊಸೆಸಿವ್ನೆಸ್ಗೆ ಆದ ಆಘಾತ ಅದು. ಪಿಕ್ನಿಕ್ನಲ್ಲಿ ಸಮಯ ಸಾಧಿಸಿ ಅವಳಿಗೊಂದು ಚೀಟಿ ತಲುಪಿಸುತ್ತಾನೆ. ಸಂಜೆ ಟ್ರೇನ್ಗೆ ತನ್ನೊಂದಿಗೆ ಬಂದುಬಿಡು, ಈಸಲ ನಾನು ನಿನಗೆ ನಿರಾಸೆ ಮಾಡುವುದಿಲ್ಲ ಎಂದು ಕೇಳಿಕೊಳ್ಳುತ್ತಾನೆ.
ಅಕಸ್ಮಾತ್ ಅವಳು ತಾನು ಮದುವೆಯಲ್ಲಿ ಕಷ್ಟದಲ್ಲಿದ್ದೇನೆ ಎಂದಿದ್ದರೆ, ನಿನ್ನ ಜೊತೆಗೆ ಬಂದುಬಿಡುತ್ತೇನೆ ಎಂದಿದ್ದರೆ ಆಗಲೂ ಅವನು ಹೀಗೆಯೇ ಪ್ರತಿಕ್ರಿಯಿಸುತ್ತಿದ್ದನೆ? ಬಹುಶಃ ಇಲ್ಲ. ಏಕೆಂದರೆ ಅವನು ಇವಳನ್ನು ಹುಡುಕಿ ಬಂದಿರುವುದಿಲ್ಲ, ಆಕ್ಸಿಡೆಂಟಲ್ ಆಗಿ ಸಂಧಿಸಿರುತ್ತಾನೆ ಅಷ್ಟೆ. ರೈಲು ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿರುತ್ತಾನೆ. ಅವಳು ಬರುತ್ತಾಳೆಯೆ? ಹೌದು, ಅವಳು ಬರುತ್ತಾಳೆ. ಆದರೆ ಅವನೊಂದಿಗೆ ಹೋಗಲಲ್ಲ. ಅವನ ಬಳಿಯೇ ಉಳಿದಿರುವ ತನ್ನ ನಿದ್ರೆ ಮಾತ್ರೆಗಳ ಬಾಟಲಿ ವಾಪಸ್ಸು ಪಡೆಯಲು. ಅದಿಲ್ಲದೆ ತನಗೆ ನಿದ್ದೆ ಬರುವುದಿಲ್ಲ ಎನ್ನುತ್ತಾಳೆ. ಅದೊಂದು ಮಾತಿನಲ್ಲಿ ಅವಳು ಚಿತ್ರಕ್ಕೆ ಅದೆಷ್ಟೋ ಪದರಗಳನ್ನು ಸೇರಿಸಿಬಿಡುತ್ತಾಳೆ.
ಈ ಚಿತ್ರದ ವಿಶೇಷತೆ ಎಂದರೆ, ಗಂಡನ ಪಾತ್ರ ಸಹ ಇಲ್ಲಿ ಆನುಷಂಗಿಕ ಅಲ್ಲ. ಜನಗಳೇ ಇಲ್ಲದ ಟೀತೋಟಗಳ ನಡುವೆ, ಸ್ನೇಹಿತರೇ ಇಲ್ಲದೆ ಪರಿತಪಿಸುವ ಅವನು ಅದನ್ನು ಮರೆಯಲೆಂದೇ ವಿಸ್ಕಿ ಕುಡಿಯುತ್ತಾನೆ. ಆ ಏಕಾಕಿತನದ ಕಾರಣದಿಂದಲೇ ಹೆಚ್ಚು ಮಾತನಾಡುತ್ತಾನೆ, ಹೆಚ್ಚು ನಗುತ್ತಾನೆ. ಸಂತೋಷವಾಗಿದ್ದೇನೆ ಎಂದು ತನ್ನನ್ನು ತಾನು ನಂಬಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆ ಪಾತ್ರಕ್ಕೂ ಒಂದು ಹಿನ್ನೆಲೆ ಇದೆ. ಅದನ್ನು ಹರಧಾನ್ ಬ್ಯಾನರ್ಜಿ ತುಂಬಾ ಚೆನ್ನಾಗಿ ಕಟ್ಟಿಕೊಡುತ್ತಾರೆ. ಇನ್ನು ಸೌಮಿತ್ರೋ.. ಪ್ರೇಮಿಯಾಗಿದ್ದಾಗ ಅವರನ್ನು ಇಷ್ಟ ಪಡದೆ ಇರಲಾಗುವುದಿಲ್ಲ, ನಿರ್ಧಾರ ತೆಗೆದುಕೊಳ್ಳಲಾಗದಾಗ, ಅಯ್ಯೋ ಇವಳನ್ನು ಕಳೆದುಕೊಂಡೆನಲ್ಲಾ ಎಂದು ಪರಿತಪಿಸುವಾಗ ಆತನ ಬಗ್ಗೆ ಅನುಕಂಪ ಮೂಡದೆ ಇರುವುದಿಲ್ಲ. ಆದರೆ ಇಡೀ ಚಿತ್ರದ ಹೈಲೈಟ್ ಎಂದರೆ ಕರುಣಾ ಪಾತ್ರ ವಹಿಸಿರುವ ಮಾಧಬಿ. ಅವರ ನೋಟದಲ್ಲಿ ಸಂಕೋಚ, ನಾಚಿಕೆ, ಪೇಚು, ತಿರಸ್ಕಾರ, ಅಪಮಾನ, ನೋವು ಎಲ್ಲವೂ ಭಾವಕ್ಕೆ ಹೆಸರಿಟ್ಟಂತೆ ಹೊಮ್ಮುತ್ತದೆ.
ಆದರೆ ಈ ಚಿತ್ರದ ಬಗ್ಗೆ ಬರೆಯುವಾಗ ’ಆಷಾಡದ ಒಂದು ದಿನ..’ ನಾಟಕದ ಮಲ್ಲಿಕೆ ಹೇಗೆ ಬಂದಳು ಎಂದು ಪ್ರಶ್ನೆ ಮೂಡಬಹುದು. ಈ ಚಿತ್ರ 1965ರಲ್ಲಿ ಬಿಡುಗಡೆಯಾದರೆ, ಸುಮಾರು 1958ರ ಸುಮಾರಿಗೆ ಮೋಹನ್ ರಾಕೇಶರು ’ಆಷಾಡದ ಒಂದು ದಿನ’ ಬರೆದಿದ್ದಾರೆ. ಎರಡಕ್ಕೂ ಒಂದು ಸಾಮಾನ್ಯ ಎಳೆ ಇದೆ. ಸಿನಿಮಾದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಕಡೆ ಅಮಿತೋ ಹಿಂಜರಿದರೆ, ನಾಟಕದಲ್ಲಿ ಕಾಳಿದಾಸ ಸಹ ನಿರ್ಧಾರ ತೆಗೆದುಕೊಳ್ಳದೆ ರಾಜಧಾನಿಗೆ ಹೊರಟುಬಿಡುತ್ತಾನೆ. ಅಮಿತೋ ಮತ್ತು ಕಾಳಿದಾಸ ಇಬ್ಬರೂ ತಮ್ಮನ್ನು ಪ್ರೀತಿಸಿದ ಹೆಣ್ಣುಗಳನ್ನು ಮತ್ತೆ ಸಂಧಿಸುತ್ತಾರೆ. ಮಲ್ಲಿಕೆ ಕೈಕೊಡವಿಕೊಂಡು ಹೋದವನನ್ನು ಮರೆಯಲಾಗದೆ, ಕೈಹಿಡಿದವನನ್ನು ಪ್ರೀತಿಸಲಾರದೆ ಪ್ರೇಮ ಮತ್ತು ಬದುಕಿನಲ್ಲಿ ಸೋತ ಹೆಣ್ಣಾಗಿ ಉಳಿದರೆ, ಕರುಣಾ ಪ್ರೀತಿಸಬಲ್ಲ, ಆದರೆ ಪ್ರೀತಿ ಕೈತಪ್ಪಿದಾಗ ಕುಸಿಯದೆ ತನ್ನ ಬದುಕು ಕಟ್ಟಿಕೊಂಡ, ತನ್ನ ಘನತೆ ಉಳಿಸಿಕೊಂಡ ಹೆಣ್ಣಾಗಿ ಕಂಡುಬರುತ್ತಾಳೆ. ರೇ ಅವರು ಕಟ್ಟುವ ಎಲ್ಲಾ ಮಹಿಳಾ ಪಾತ್ರಗಳ ಹಾಗೆ ಆಕೆ ಗಟ್ಟಿಕಾಳು. ಆದರೆ ಹಾಗೆ ಕುಸಿದು ಪುಡಿಯಾಗಲಿಲ್ಲ ಎನ್ನುವ ಕಾರಣಕ್ಕೆ ಕರುಣಾಳ ಪ್ರೀತಿ ಕಡಿಮೆಯದಾಗಿ ಬಿಡುತ್ತದೆಯೆ? ’ಸರಸ್ವತಿ ಚಂದ್ರ’ ಚಿತ್ರದಲ್ಲಿ ಒಂದು ಹಾಡಿದೆ..
’Chhod de saari duniya kisi ke liye
Ye munaasib nahin aadmi ke liye’
ಎ ಮುನಾಸಿಬ್ ನಹಿ, ಔರತ್ ಕೆ ಲಿಯೆ ಭೀ.