ಶ್ಯಾಮ್‌ ಬೆನಗಲ್ ನಿರ್ದೇಶನದ ‘ಅಂಕುರ್‌’ (1974) ಹಿಂದಿ ಸಿನಿಮಾ ತೆರೆಕಂಡು ಇದೀಗ 50 ವರ್ಷಗಳಾಗಿವೆ. ಈ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ, ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗಳಿಸಿದ ನಟಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಶಬಾನಾ ಆಜ್ಮಿಯ ಚಿತ್ರಜೀವನಕ್ಕೂ ಈಗ 5 ದಶಕದ ಸಂಭ್ರಮ. ನಿರಂತರವಾಗಿ ನಟಿಸುತ್ತಾ, ಹೊಸ ರೀತಿಯ ಆಸಕ್ತಿಕರ ಪಾತ್ರಗಳನ್ನು ಗಳಿಸುತ್ತಾ, ಬೆಳೆಯುತ್ತಾ, ಎಂದಿಗಿಂತ ಹೆಚ್ಚು ಪ್ರಸ್ತುತವಾಗುತ್ತಾ ಸಾಗಿರುವ ನಟಿಯಾಗಿ ಕಾಣಿಸುತ್ತಾರೆ ಶಬಾನಾ.

ಚಿತ್ರರಂಗದಲ್ಲಿ ಜನಪ್ರಿಯತೆ ಮತ್ತು ಬೇಡಿಕೆ ಎಲ್ಲವೂ ತೀರಾ ಅಲ್ಪಾಯುಷಿ. ಖ್ಯಾತಿಯ ಉತ್ತುಂಗದಲ್ಲಿದ್ದು, ಚಿತ್ರರಂಗವನ್ನು ಆಳಿದ, ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ ಸೂಪರ್‌ಸ್ಟಾರ್‌ಗಳ ವೃತ್ತಿಜೀವನವೂ ಕೂಡ ಯಾವುದೋ ಒಂದು ತಿರುವಲ್ಲಿ ಕೆಳಮುಖವಾಗಿ ಸಾಗಲು ಆರಂಭಿಸಿ, ಅವರು ಪ್ರಸ್ತುತತೆ ಕಳೆದುಕೊಳ್ಳಲು ಹೆಚ್ಚು ಕಾಲ ತೆಗೆದುಕೊಳ್ಳುವುದಿಲ್ಲ ಎಂಬುದಕ್ಕೆ ಉದಾಹರಣೆಗಳೇನೂ ಕಡಿಮೆ ಇಲ್ಲ. ಅದರಲ್ಲೂ ನಟಿಯರಂತೂ ಇನ್ನೂ ಬೇಗ ತೆರೆಯ ಮರೆಗೆ ಸರಿದು ಬಿಡುವುದು ತೀರಾ ಸಾಮಾನ್ಯ. ಹೀಗಿರುವಾಗ, 50 ವರ್ಷಗಳ ಕಾಲ ನಿರಂತರವಾಗಿ ನಟಿಸುತ್ತಾ, ಹೊಸ ರೀತಿಯ ಆಸಕ್ತಿಕರ ಪಾತ್ರಗಳನ್ನು ಗಳಿಸುತ್ತಾ, ಬೆಳೆಯುತ್ತಾ, ಎಂದಿಗಿಂತ ಹೆಚ್ಚು ಪ್ರಸ್ತುತವಾಗುತ್ತಾ ಸಾಗಿರುವ ನಟಿಯೆಂದರೆ ಶಬಾನಾ ಆಜ್ಮಿ. ಶ್ಯಾಮ್‌ ಬೆನಗಲ್ ನಿರ್ದೇಶನದ ‘ಅಂಕುರ್‌’ ತೆರೆಕಂಡು ಇದೀಗ 50 ವರ್ಷಗಳಾಗಿವೆ. ಅಂದರೆ, ಆ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ, ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗಳಿಸಿದ ನಟಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಶಬಾನಾ ಆಜ್ಮಿಯ ಚಿತ್ರಜೀವನಕ್ಕೂ ಈಗ 5 ದಶಕದ ಸಂಭ್ರಮ.

ಅದುವರೆಗೂ ಸಾಕ್ಷ್ಯ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದ್ದ ಶ್ಯಾಮ್‌ ಬೆನಗಲ್, ‘ಅಂಕುರ್’ ಚಿತ್ರ ಆರಂಭಿಸಿದಾಗ ಶಬಾನಾ ಆಗಷ್ಟೇ ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್‌ನಿಂದ ಹೊರ ಬಂದಿದ್ದರು. ಆದರೆ, ಆಗಲೇ ಎರಡು ಸಿನಿಮಾಗಳಲ್ಲಿ ನಟನೆ ಆರಂಭಿಸಿದ್ದರು. ಬಹುತೇಕ ಹೊಸಬರೇ ಇದ್ದ ‘ಅಂಕುರ್‌’ ಚಿತ್ರ ಆ ಉಳಿದೆರಡು ಸಿನಿಮಾಗಳಿಗಿಂತ ಭಿನ್ನವಾಗಿ, ಭಾರತೀಯ ಚಿತ್ರರಂಗದಲ್ಲಿ ಆರಂಭವಾಗಿದ್ದ ಹೊಸ ಅಲೆಯ ಚಿತ್ರಗಳ ಪರಂಪರೆಯನ್ನು ಮುಂದುವರಿಸುವ ಪ್ರಯತ್ನದಲ್ಲಿತ್ತು. ಅದೃಷ್ಟವತಾಷ್‌ ‘ಅಂಕುರ್’ ಮೊದಲು ಬಿಡುಗಡೆಯಾದ್ದರಿಂದ ಶಬಾನಾ ಅವರ ಚೊಚ್ಚಲ ಚಿತ್ರವೆನಿಸಿಕೊಂಡಿತು ಮತ್ತು ಪ್ರಾಯಶಃ ಅದೇ ಶಬಾನಾ ಅವರ ಮುಂದಿನ ಚಿತ್ರಜೀವನದ ಹಾದಿಯನ್ನು ನಿರ್ಧರಿಸಿತು. ಸಂಕೀರ್ಣ ಕತೆಯೊಂದರಲ್ಲಿನ ಸಂಕೀರ್ಣ ಪಾತ್ರ ‘ಲಕ್ಷ್ಮಿ’ಯಾಗಿ ಮಿಂಚಿದ ಶಬಾನಾ ನಂತರದಲ್ಲಿ ಹೊಸ ಅಲೆಯ ಚಿತ್ರಗಳ ನಿರ್ದೇಶಕರ ಕಣ್ಮಣಿಯಾದರು. ಜೊತೆಗೆ, ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲೂ ಪಾತ್ರ ಮಾಡುತ್ತಾ ಹಲವಾರು ಬ್ಲಾಕ್‌ಬಸ್ಟರ್‌ ಚಿತ್ರಗಳಲ್ಲಿ ಕಾಣಿಸಿಕೊಂಡರು.

ಭಾರತೀಯ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ, ಗೌರವದ ಸ್ಥಾನ ಗಳಿಸಿದ್ದ ಸಾಹಿತಿ ಕೈಫಿ ಆಜ್ಮಿ ಮತ್ತು ರಂಗ ನಟಿ ಶೌಕತ್‌ ಆಜ್ಮಿಯವರ ಮಗಳಾಗಿ, ಅವರಿಬ್ಬರ ನೆರಳಿಂದ ಹೊರಬಂದು ತಮ್ಮದೇ ವ್ಯಕ್ತಿತ್ವವನ್ನು, ತಮ್ಮ ಬಲದಿಂದಲೇ ರೂಪಿಸಿಕೊಳ್ಳುವುದು ಶಬಾನಾಗೆ ಸುಲಭದ ಮಾತಾಗಿರಲಿಲ್ಲ. ತಂದೆ ಕೈಫಿ ಆಜ್ಮಿ ಅಪ್ಪಟ ಕಮ್ಯುನಿಸ್ಟ್‌ ವಾದಿಯಾದ ಕಾರಣ, ತಮ್ಮ ಬಾಲ್ಯವನ್ನು ಕಮ್ಯುನಿಸ್ಟ್ ಸಮುದಾಯದಲ್ಲಿ ಕಳೆದ ಶಬಾನಾ, ಬುದ್ದಿಜೀವಿಗಳು, ಸಾಹಿತಿಗಳು ಮತ್ತು ಕಲಾವಿದರೇ ತುಂಬಿದ್ದ ಪ್ರಗತಿಪರ, ವೈಚಾರಿಕ ವಾತಾವರಣದಲ್ಲಿ ಬೆಳೆದರು. ತಾಯಿಯಂತೆ ರಂಗಭೂಮಿಯ ಕಡೆಗೆ ಒಲವು ಬೆಳೆಸಿಕೊಂಡರು. ತಮ್ಮ ಕಾಲೇಜು ದಿನಗಳಲ್ಲೇ ತಂಡ ಕಟ್ಟಿ ನಾಟಕ ಆಡಿದರು. ನಟ, ತಮ್ಮ ಸಹಪಾಠಿ ಫಾರೂಕ್‌ ಶೇಕ್‌ ಜೊತೆಗೂಡಿ ನಾಟಕಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡರು. ನಂತರದಲ್ಲಿ ಫಿಲ್ಮ್ ಇನ್‌ಸ್ಟಿಟ್ಯೂಟ್‌ ಸೇರಿದ ಶಬಾನಾ ಅವರ ಮುಂದಿನ ಸಹಜ ಹೆಜ್ಜೆ ಸಿನಿಮಾರಂಗದ ಕಡೆಗೆ ಇತ್ತು ಎಂಬುದು ನಿಜವಾದರೂ, ‘ಅಂಕುರ್’ ಅವರಿಗೆ ಸುಲಭದ ಸಿನಿಮಾವಾಗಿರಲಿಲ್ಲ.

ಅದುವರೆಗೆ, ಯಾವುದೇ ಹಳ್ಳಿಯನ್ನು ಸರಿಯಾಗಿ ನೋಡಿಯೂ ಇಲ್ಲದ ಮುಂಬೈ ತರುಣಿ ಶಬಾನಾ ಅವರಿಗೆ, ಹಳ್ಳಿಯ, ಶೋಷಿತ ಹೆಣ್ಣಿನ ಪಾತ್ರವನ್ನು ನಿರ್ವಹಿಸುವುದು ಸವಾಲೇ ಆಗಿತ್ತು. ಅವರೇ ನೆನಪಿಸಿಕೊಳ್ಳುವಂತೆ ಪಾತ್ರಕ್ಕೆ ತಯಾರಿಯಾಗಿ ಶ್ಯಾಮ್ ಬೆನಗಲ್ ಸೆಟ್‌ನಲ್ಲೂ, ಶಬಾನಾ ಅವರನ್ನು ನೆಲದ ಮೇಲೆಯೇ ಕೂರಿಸುತ್ತಿದ್ದರಂತೆ. ಸೇಂಟ್‌ ಕ್ಸೇವಿಯರ್ಸ್‌ ಕಾಲೇಜಿನ ಹುಡುಗಿ, ಮೊದಲ ಸಿನಿಮಾದಲ್ಲೇ ಆಂಧ್ರ ಸೀಮೆಯ ಹಳ್ಳಿಯೊಂದರ ದಲಿತ ಹೆಣ್ಣಾಗಿ ನಟಿಸುವುದು ಮತ್ತು ಅದಕ್ಕಾಗಿ ಪ್ರಶಸ್ತಿ ಪಡೆಯುವುದರ ಹಿಂದೆ ಅವರ ಪ್ರತಿಭೆಯ ಜೊತೆ ಶ್ರಮವೂ ಇತ್ತು. ನಂತರದಲ್ಲಿ, ನಿಶಾಂತ್, ಸ್ಪರ್ಶ್‌, ಕಂದಾರ್, ಅರ್ಥ್, ಮಂಡಿ, ಮಾಸೂಮ್, ಶತ್‌ರಂಜ್‌ ಕಿ ಕಿಲಾಡಿ, ಪಾರ್, ಗಾಡ್‌ಮದರ್ ಹೀಗೆ ಸಾಲು ಸಾಲು ಮರೆಯಲಾಗದ ಸಿನಿಮಾಗಳನ್ನು ನೀಡಿದರು. ಐದು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಕಲಾವಿದೆ ಎನ್ನುವ ದಾಖಲೆ ಅವರ ಹೆಸರಿನಲ್ಲಿದೆ. ಸತ್ಯಜಿತ್‌ ರೇ, ಮೃಣಾಲ್‌ ಸೇನ್‌, ಶ್ಯಾಮ್‌ ಬೆನಗಲ್, ಅಪರ್ಣಾ ಸೇನ್, ದೀಪಾ ಮೆಹ್ತಾ ಸೇರಿದಂತೆ ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಶಬಾನಾ ಅವರದ್ದು. ಎಂ ಎಸ್‌ ಸತ್ಯು ಅವರ ನಿರ್ದೇಶನದಲ್ಲಿ ‘ಕನ್ನೇಶ್ವರ ರಾಮ’ ಚಿತ್ರದ ಮೂಲಕ ಕನ್ನಡದ ನಟಿಯೂ ಆದರು.

ಪಾತ್ರ ಎಷ್ಟೇ ಸಣ್ಣದಾಗಿದ್ದರೂ ನಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನದಲ್ಲಿ ಉಳಿಯುವ ಅವರ ಸಾಮರ್ಥ್ಯ ಅವರ ಇಷ್ಟು ಸುದೀರ್ಘ ಚಿತ್ರಜೀವನದ ಹಿಂದಿರುವ ಇನ್ನೊಂದು ಗುಟ್ಟು. ಕೆಲ ತಿಂಗಳ ಹಿಂದೆ ಬಿಡುಗಡೆಗೊಂಡು, ಬಾಕ್ಸ್‌ ಆಫೀಸ್‌ ಸೂರೆಗೊಂಡ ಪಕ್ಕಾ ವಾಣಿಜ್ಯ ಚಿತ್ರ ‘ರಾಕಿ ಔರ್ ರಾನೀ ಕಿ ಪ್ರೇಮ್ ಕಹಾನಿ’ಯಲ್ಲೂ ನಾಯಕ ನಾಯಕಿಯರಿಗಿಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದು, ಶಬಾನಾ ಮತ್ತು ಧರ್ಮೇಂದ್ರ ನಡುವಿನ ಲಿಪ್‌ಲಾಕ್‌ ದೃಶ್ಯ. ಪಾತ್ರದ ಆಯ್ಕೆಯ ನಿಟ್ಟಿನಲ್ಲಿ ಅವರು ತೆಗೆದುಕೊಂಡ ಇಂತಹ ಹಲವು ಬೋಲ್ಡ್ ಎನಿಸುವ ನಿರ್ಧಾರಗಳು ಶಬಾನಾ ಅವರನ್ನು, ಅವರು ತಮ್ಮ ಕಾಲಕ್ಕಿಂತ ಮುಂದಿರುವಂತೆ ಮಾಡಿದವು. ‘ಫೈರ್‌’ ಚಿತ್ರದಲ್ಲಿ 90ರ ದಶಕದಲ್ಲೇ ಸಲಿಂಗ ಪ್ರೇಮಿಯ ಪಾತ್ರ ಮಾಡಿದ್ದು, ‘ವಾಟರ್‌’ ಚಿತ್ರಕ್ಕಾಗಿ ತಮ್ಮ ತಲೆ ಬೋಳಿಸಿಕೊಂಡಿದ್ದು ಇಂತಹ ದಿಟ್ಟ ನಿರ್ಧಾರಗಳೆಲ್ಲ ಶಬಾನಾ ಅವರನ್ನು ಅವರ ಕಾಲದ ಇತರ ನಟಿಯರಿಗಿಂತ ಭಿನ್ನವಾಗಿಸುತ್ತದೆ ಎಂಬುದು ಸುಳ್ಳಲ್ಲ.

ಐವತ್ತು ವರ್ಷಗಳ ನಂತರವೂ ಶಬಾನಾ ಅಷ್ಟೇ ಪ್ರಸಿದ್ಧರಾಗಿ, ಪ್ರಸ್ತುತವಾಗಿ ಉಳಿದಿರುವುದಕ್ಕೆ ಅವರ ನಟನೆ ಮತ್ತು ಸಿನಿಮಾಗಳು ಮಾತ್ರ ಕಾರಣ ಎಂದರೆ ಸುಳ್ಳಾಗುತ್ತದೆ. ಶಬಾನಾ ಅವರ ಸಾಮಾಜಿಕ ಕಳಕಳಿ ಅವರ ಚಿತ್ರಗಳಿಗೆ ಸೀಮಿತವಲ್ಲ. ತಮ್ಮ ಸಶಕ್ತ ಚಿತ್ರಗಳ, ಪಾತ್ರಗಳ ಹೊರತಾಗಿಯೂ ಸಾಮಾಜಿಕ ಬದಲಾವಣೆ ಬಯಸುವ, ಅದಕ್ಕಾಗಿ ಶ್ರಮಿಸುವ ಕೆಲವೇ ಕಲಾವಿದರಲ್ಲಿ ಶಬಾನಾ ಒಬ್ಬರು. ಸಾಮಾಜಿಕ, ರಾಜಕೀಯ ಮತ್ತು ಸೈದ್ಧಾಂತಿಕ ಸ್ಪಷ್ಟತೆಯನ್ನು ಹೊಂದಿರುವ ಶಬಾನಾ, ಯಾವುದೇ ಪ್ರಮುಖ ವಿಷಯದ ಬಗ್ಗೆ ಮಾತನಾಡಲು ಎಂದೂ ಹಿಂಜರಿದವರಲ್ಲ. ಬೀದಿಗೆ ಇಳಿದು ಹೋರಾಡಲು ಹೆದರಿದವರಲ್ಲ. 80ರ ದಶಕದಲ್ಲಿ ಕೋಮು ಸೌಹಾರ್ದತೆಗಾಗಿ ಅವರು ನಡೆಸಿದ ಕಾಲ್ನಡಿಗೆ ಜಾಥಾದಿಂದ ಹಿಡಿದು, ಮೊನ್ನೆ ಮೊನ್ನೆಯ ಹೇಮಾ ಕಮಿಟಿ ವರದಿಯವರೆಗೂ ಪ್ರತಿಯೊಂದು ಪ್ರಮುಖ ಮತ್ತು ಅಗತ್ಯ ವಿಷಯಗಳ ಬಗ್ಗೆಯೂ ಶಬಾನಾ ಯಾವುದೇ ಭಯವಿಲ್ಲದೆ ಧ್ವನಿ ಎತ್ತಬಲ್ಲರು. ಆಳುವ ಸರ್ಕಾರಗಳ ಜನವಿರೋಧಿ ನೀತಿಗಳನ್ನು ನಿರ್ಭಿಡೆಯಿಂದ ಪ್ರಶ್ನಿಸುತ್ತಲೇ ಬಂದಿರುವ ಶಬಾನಾ, ತಮ್ಮ ವೃತ್ತಿ ಜೀವನಕ್ಕೆ ತೊಡಕಾಗಬಹುದು ಎಂಬ ಭಯದಿಂದ ಯಾವುದೇ ನಿಲುವು ತೆಗೆದುಕೊಳ್ಳಲು ಹೆದರುವ ಕಲಾವಿದರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

80ರ ದಶಕ ಭಾರತೀಯ ಚಿತ್ರರಂಗದ ಸುವರ್ಣ ಕಾಲ. ಒಂದೆಡೆ ವಾಣಿಜ್ಯ ಚಿತ್ರಗಳು ದುಡ್ಡು ಕೊಳ್ಳೆ ಹೊಡೆಯುತ್ತಿದ್ದರೆ, ಮತ್ತೊಂದೆಡೆ ಕಲಾತ್ಮಕ ಚಿತ್ರಗಳ ಸುಗ್ಗಿ. ಇಂತಹ ಕಾಲದಲ್ಲಿ ತೆರೆಯ ಮೇಲೆ ಬಂದ ಅತ್ಯಂತ ಪ್ರತಿಭಾನ್ವಿತ ಕಲಾವಿದರ ಸಂಖ್ಯೆ ದೊಡ್ಡದು. ಈಗ ಹಲವರು ಪ್ರಪಂಚದಿಂದಲೇ ಮರೆಯಾಗಿದ್ದಾರೆ, ಇನ್ನೂ ಹಲವರನ್ನು ಚಿತ್ರರಂಗವೇ ಮರೆತಿದೆ. ಈ ಪೈಕಿ ಅತೀ ಹೆಚ್ಚು ಸಕ್ರಿಯವಾಗಿ ಉಳಿದಿರುವ ಕಲಾವಿದರೆಂದರೆ ಶಬಾನಾ ಆಜ್ಮಿ ಮತ್ತು ನಾಸಿರುದ್ಧೀನ್ ಶಾ. ತಮ್ಮ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತಲೇ ಇರುವ ಶಬಾನಾ, ಇದೀಗ ಭಾರತೀಯ ಚಿತ್ರರಂಗವನ್ನೂ ದಾಟಿ, ಹಾಲಿವುಡ್‌ ಅಂಗಳ ಪ್ರವೇಶಿಸಿದ್ದಾರೆ. ಸ್ಟೀವನ್ ಸ್ಪೀಲ್‌ಬರ್ಗ್‌ನಿರ್ಮಾಣದ ಮಿಲಿಟರಿ ಸೈ-ಫೈ ಸೀರಿಸ್‌, ‘ಹ್ಯಾಲೋ’ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಅವರ ಪ್ರಯೋಗಶೀಲತೆ, ಅದಮ್ಯ ಉತ್ಸಾಹಕ್ಕೆ ಮಾತ್ರವಲ್ಲ, ಶಬಾನಾರ ಚಿತ್ರ ಜೀವನ ಇನ್ನೂ ಹಲವು ಆಸಕ್ತಿಕರ ತಿರುವುಗಳೊಂದಿಗೆ, ಹಿಂದೆಂದಿಗಿಂತಲೂ ವೇಗವಾಗಿ ಮುಂದುವರಿಯುತ್ತಲೇ ಇದೆ ಎಂಬುದಕ್ಕೆ ಸಾಕ್ಷಿ.

LEAVE A REPLY

Connect with

Please enter your comment!
Please enter your name here