ಹಲವು ವಿಭಾಗಗಳಲ್ಲಿ ಉತ್ತಮವೆನಿಸುವ ‘ಜಲ್ಸಾ’ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಂ ಆಗುತ್ತಿದೆ. ಆ್ಯಕ್ಸಿಡೆಂಟ್ ಹಿನ್ನೆಯ ಕತೆಯಲ್ಲಿ ಮೇಲ್ವರ್ಗ-ಕೆಳವರ್ಗದ ಸಂಘರ್ಷ ಇರಬಹುದು ಎಂದುಕೊಂಡರೆ ನಿಮ್ಮ ಊಹೆ ತಪ್ಪಾದೀತು. ಈ ಸಿನಿಮಾದಲ್ಲಿರುವುದು ಪಾತ್ರಗಳ ಒಳಗಿನ ಸಂಘರ್ಷ. ಪ್ರಮುಖ ಪಾತ್ರಗಳ ಒಳಬೇಗುದಿಯಷ್ಟೇ ಅಲ್ಲ, ಪೋಷಕ ಪಾತ್ರಗಳ ಒಳಗೂ ಹರಿಯುವ ಗುಪ್ತಗಾಮಿನಿಯಿದೆ. ಒಂದಷ್ಟು ಭಾವ ಕಲಕುವಿಕೆಗೆ ನೀವು ತಯಾರಿದ್ದರೆ ಈಗಲೇ ನೋಡಿ.

ಪಂಜಾಬಿ‌ ನೃತ್ಯ, ಒಂದು ಪ್ರೇಮಕತೆ, ಒಂದು ವಿರಹಗೀತೆ, ಒಂದಷ್ಟು ಧಾಮ್-ಧೂಮ್-ಧಮಾಲ್ ಎಂಬಲ್ಲಿಗೇ ಬಾಲಿವುಡ್ ಎಂದು ಕರೆಯಲ್ಪಡುವ ಹಿಂದಿ ಚಿತ್ರರಂಗ ಸೀಮಿತವಾಗಿದ್ದ ಕಾಲವಿತ್ತು. ತೊಂಭತ್ತರ ದಶಕದ ಡಿ ಕಂಪನಿ ಹೂಡಿಕೆ ಪ್ರಭಾವಳಿ ಹಿಂದಿ ಸಿನಿಮಾಗಳನ್ನು ಅಷ್ಟಕ್ಕೇ ಸೀಮಿತಗೊಳಿಸಿತ್ತು ಎಂಬುದು ಇತಿಹಾಸ ತಿಳಿಸುವ ಸತ್ಯ. ಆದರೆ ಈಗ ಕಾಲ ಮತ್ತೆ ಬದಲಾಗಿದೆ. ಕಥಾ ವಸ್ತು ಕೇಂದ್ರಿತವಾಗಿ, ಪಾತ್ರಗಳ ಜಾಡು ಹಿಡಿದು ಸಾಗುವ ಸಿನಿಮಾಗಳು ಮುಂಬೈ ಸಿನಿ ನಗರಿ ನಿರ್ಮಾಣ ಮಾಡುತ್ತಿದೆ. ವಿದ್ಯಾ ಬಾಲನ್ ಹಾಗೂ ಶೆಫಾಲಿ ಶಾ ಅಭಿನಯದ ‘ಜಲ್ಸಾ’ ಇದಕ್ಕೆ ಹೊಸ ಉದಾಹರಣೆ.

ಇಲ್ಲಿನ ಕಥಾ ಹಂದರ ಮೇಲ್ನೋಟಕ್ಕೆ ಯಾವುದೇ ಜಟಿಲತೆಯಿಲ್ಲದೆ ಸರಳ ಹಾಗೂ ನೇರವಾಗಿರುವಂತೆ ಕಾಣುತ್ತದೆ. ಆದರೆ‌ ಒಂದು ಹಂತದ ನಂತರ ಮಗ್ಗುಲು ಬದಲಿಸುವ‌ ಕತೆಗೆ ಪ್ರೇಕ್ಷಕನನ್ನು ಸಿನಿಮಾದ ಒಳಕ್ಕೆ ಎಳೆದುಕೊಳ್ಳುವ ಗುಣವಿದೆ. ‘ಜಲ್ಸಾ’ ಮೂಲತಃ ಇಷ್ಟವಾಗುವುದು ಅದರ ಕತೆಯ ದೃಷ್ಟಿಯಿಂದ ಅಲ್ಲ. ಕತೆಯಲ್ಲಿ ಬರುವ ಪಾತ್ರಗಳನ್ನು ಕಟ್ಟಿರುವ ರೀತಿಯಿಂದ. ಹಾಗೆಂದು ಒಂದು ಪಾತ್ರದಲ್ಲಿ ಒಳ್ಳೆತನ, ಮತ್ತೊಂದರಲ್ಲಿ ಕೆಡುಕು ತುಂಬಿ ಒಬ್ಬರ ಮೇಲೆ ಪ್ರೀತಿ,‌ ಮತ್ತೊಂದು ಪಾತ್ರದ ಮೇಲೆ ದ್ವೇಷ ಮೂಡಿಸುವ ಉದ್ದೇಶ ನಿರ್ದೇಶಕ ಸುರೇಶ್ ತ್ರಿವೇಣಿಗೆ ಇಲ್ಲ. ಒಳಿತು-ಕೆಡುಕೆಂಬುದು ಎಲ್ಲಾ ಪಾತ್ರಗಳಲ್ಲೂ ಸಮ್ಮಿಳಿತ.

ಮಾಯಾ ಮೆನನ್ ಉನ್ನತ ಮಟ್ಟದ ಮಾಧ್ಯಮರಂಗದಲ್ಲಿ ಪ್ರಮುಖ ಸ್ಥಾನದಲ್ಲಿರುವ ಪತ್ರಕರ್ತೆ. ಅಂಗವಿಕಲ ಮಗುವಿನ ತಾಯಿಯಾಗಿ, ವಿಚ್ಚೇದಿತ ಮಹಿಳೆಯಾಗಿ, ಒಂದೆಡೆ ಮೌಲ್ಯಗಳ ಬಗ್ಗೆ ಮಾತನಾಡಬೇಕಾದ ಅಗತ್ಯ, ಮತ್ತೊಂದೆಡೆ ತನ್ನ ಮೌಲ್ಯಗಳನ್ನೇ ಮೀರಿ ಜೀವಿಸಬೇಕಾದ ಅನಿವಾರ್ಯತೆಯಲ್ಲಿರುವ ಆ ಪಾತ್ರದ ಆಂತರ್ಯ ಭಾರಿ ಕ್ಲಿಷ್ಟಕರ. ಮತ್ತೊಂದು ಬದಿಯಲ್ಲಿರುವ ಪ್ರಮುಖ ಪಾತ್ರ ರುಕ್ಸಾನಾ, ಅವಳು ಮಾಯಾ ಮನೆಯಲ್ಲಿ ಅಡುಗೆಯಾಕೆ. ತನ್ನ ಕಚೇರಿಯ ಏರುಹೊತ್ತಿನ ಕಾರ್ಯ ಮುಗಿಸಿ ಬರುವಾಗ ದಾರಿಯಲ್ಲಿ ಕಾರಿಗೊಬ್ಬ ತರುಣಿ ಅಡ್ಡ ಬರುತ್ತಾಳೆ, ಅಪಘಾತವಾಗುತ್ತದೆ. ಆ ಕ್ಷಣಕ್ಕೆ ಭಯಭೀತಳಾಗುವ ಮಾಯಾ ಹಿಂದು ಮುಂದು ನೋಡದೆ ಮನೆಗೆ ಬರುತ್ತಾಳೆ. ಆದರೆ ಹಾಗೆ ತಾನು ದಾರಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಬಿಟ್ಟು ಬಂದವಳು ರುಕ್ಸಾನಾಳ ಮಗಳು ಎಂದು ಗೊತ್ತಾಗುವಷ್ಟರಲ್ಲಿ ಬೆಳಗಾಗಿರುತ್ತದೆ. ಹೀಗೆ ತೆರೆದುಕೊಳ್ಳುವ ಕತೆಯಲ್ಲಿ ಮೇಲ್ವರ್ಗ-ಕೆಳವರ್ಗದ ಸಂಘರ್ಷ ಇರಬಹುದು ಎಂದುಕೊಂಡರೆ ನಿಮ್ಮ ಊಹೆ ತಪ್ಪಾದೀತು. ಈ ಸಿನಿಮಾದಲ್ಲಿರುವುದು ಪಾತ್ರಗಳ ಒಳಗಿನ ಸಂಘರ್ಷ. ಪ್ರಮುಖ ಪಾತ್ರಗಳ ಒಳಬೇಗುದಿಯಷ್ಟೇ ಅಲ್ಲ, ಪೋಷಕ ಪಾತ್ರಗಳ ಒಳಗೂ ಹರಿಯುವ ಗುಪ್ತಗಾಮಿನಿಯಿದೆ.

ಹೆಚ್ಚಿನ ಕಡೆಗಳಲ್ಲಿ ಸಹಜವೆನಿಸುವ ಸಂಭಾಷಣೆಯ ಒಳಗಿನ ತೀಕ್ಷ್ಣತೆ ಮನಸ್ಸಿಗೆ ಹತ್ತಿರವಾಗುತ್ತದೆ. ಮಾಯಾಳ ಸುದ್ದಿ ಆನ್‌ಲೈನ್ ಜಗದಲ್ಲಿ‌ ಗುಲ್ಲೆಬ್ಬಿಸಿದಾಗ ಆಕೆಯ ಮುಗ್ದ ಚಾಲಕ “ನನಗೂ ಪತ್ರಕರ್ತನಾಗಬೇಕು ಎಂಬ ಆಸೆಯಿತ್ತು. ಆದರೆ ನಾನು ತುಂಬಾ ಪ್ರಾಮಾಣಿಕ. ಹಾಗಾಗಿ ಪತ್ರಕರ್ತನಾಗೋಕೆ ಸಾಧ್ಯವಿಲ್ಲ ಅಂದುಕೊಂಡೆ” ಎನ್ನುವಾಗ “ಸುದ್ದಿಯನ್ನು ಪ್ರಸಾರ ಮಾಡುವುದರಲ್ಲಿ ಮಾತ್ರವಲ್ಲ, ಅದುಮಿಡುವುದರಲ್ಲೂ ಲಾಭವಿದೆ” ಎಂದು ಮಾಧ್ಯಮದ ಒಡೆಯ ಹೇಳುವಾಗ ಉದ್ದೇಶಪೂರ್ವಕವಾಗಿ ತುರುಕಿದ ಸಂಭಾಷಣೆ‌ ಅನಿಸದಂತೆ ದೃಶ್ಯ ಹೆಣೆದಿರುವುದು ಚಿತ್ರಕತೆಯ ಹೆಚ್ಚುಗಾರಿಕೆ. ದೃಶ್ಯ ಸಂಯೋಜನೆಯಲ್ಲಿ ನಿರ್ದೇಶಕನ ಸೂಕ್ಷ್ಮತೆ ಎದ್ದು ಕಾಣುತ್ತದೆ. ರುಕ್ಸಾನಾಳ ಮಗಳು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದಾಗ ನೋಡಲು ಹೋಗುವ‌ ಮಾಯಾಳ ಮನಸ್ಸಲ್ಲಿರುವ ಆತಂಕ, ದ್ವಂದ್ವ ಹಾಗೂ ಭಯಕ್ಕೆ ಸಂಕೇತವಾಗಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಬಳಸಿರುವುದು ಉತ್ತಮ ಕಲೆಗಾರಿಯ ಲಕ್ಷಣ.

ನಮ್ಮ ನಿತ್ಯ‌ಜೀವನದಲ್ಲಿ ಹಾಸುಹೊಕ್ಕಾಗಿರುವ ತಂತ್ರಜ್ಞಾನವೂ ಕತೆಯಲ್ಲಿ ಪ್ರಮುಖ ಅಂಶಗಳಲ್ಲಿ ಒಂದು. ಸಾರ್ವಜನಿಕ ಸ್ಥಳಗಳಲ್ಲಿ ಇರುವ ಸಿಸಿ ಕ್ಯಾಮರಾಗಳು ಪೊಲೀಸರಿಗೆ ವರವೂ ಹೌದು, ಶಾಪವೂ ಹೌದು. ಹಾಗೆಯೇ ಮನೆಗಳ ಒಳಗೂ ಪ್ರವೇಶ ಪಡೆದಿರುವ ಕ್ಯಾಮರಾಗಳು ಯಾವ ರೀತಿ ಬದುಕನ್ನು ಸುಗಮಗೊಳಿಸಿದೆ ಎಂಬ ವಿಚಾರಗಳು ಮೂಲ ಕತೆಯ ಜತೆಜತೆಗೇ ಸಾಗುವುದನ್ನಿಲ್ಲಿ ನೋಡಲು ಚಂದ. ಇನ್ನೊಂದೆಡೆ ರೀಲ್ಸ್, ಯೂಟ್ಯೂಬ್ ಚಾನಲ್, ಫಾಲೋವರ್ಸ್ ಇತ್ಯಾದಿಗಳೆಲ್ಲ ಬದುಕಿನ ಅಂಗವೇ‌ ಆಗಿರುವ ವಿಚಾರವನ್ನೂ ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಿದಂತೆ ಅನಿಸುವುದಿಲ್ಲ. ಎಲ್ಲವೂ ಕತೆಯ ಜತೆಗೆ ಎಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ‌ ಎಂದರೆ ಹಲವು ಕಡೆಗಳಲ್ಲಿ ಅವುಗಳ ಕಡೆಗೆ ಗಮನವೇ ಹೋಗುವುದಿಲ್ಲ. ಉತ್ತಮ ಸಿನಿಮಾಗಳು ಯಾವತ್ತೂ ಹೀಗೇ‌ ಇರಬೇಕು. ಒಂದಷ್ಟು ಸೂಕ್ಷ್ಮಗಳು ಅಂತರ್ಗತವಾಗಿರಬೇಕೇ ವಿನಃ ಕಣ್ಣಿಗೆ ರಾಚಬಾರದು, ಕತೆಯನ್ನು ಮರೆಮಾಚಬಾರದು.

ಕ್ರೈಂ ಹಾಗೂ ತನಿಖೆಯ ಕಥಾವಸ್ತುವಿರುವಾಗ ಹಾಡುಗಳಿಗೆ ಅವಕಾಶ ಕಡಿಮೆ. ಆದರೆ‌ ‘ಜಲ್ಸಾ’ ಸಿನಿಮಾವನ್ನು ಕ್ರೈಂ ಮತ್ತು ತನಿಖೆಯ ವರ್ಗಕ್ಕೆ ಸೇರಿಸಿದರೆ ಅದು ಈ ಸಿನಿಮಾ ನಿರ್ಮಾತೃಗಳ ಕ್ರಿಯಾಶೀಲತೆಗೆ‌ ಅಪಚಾರ ಎಸಗಿದಂತೆ. ಚಿತ್ರದಲ್ಲಿ ಪೊಲೀಸ್‌ ಕಡೆಯಿಂದ ಮತ್ತು‌ ಮಾಧ್ಯಮ ರಂಗದ ಕಡೆಯಿಂದ ತನಿಖೆ ನಡೆಸುವ ವಿಚಾರವಿದೆ. ಆದರೆ ಅವೆರಡೂ ಪ್ರೇಕ್ಷಕನಿಗೆ ತನಿಖೆಯ ಥ್ರಿಲ್ ತೋರಿಸುವ ಉದ್ದೇಶದಿಂದಲ್ಲ. ತನಿಖೆಗಿಳಿಯಲು ಆಯಾ ಪಾತ್ರಗಳಿಗೆ ಅವರವರದ್ದೇ ಆದ ಅನಿವಾರ್ಯತೆಯಿದೆ. ಆ ತನಿಖೆಗಳಲ್ಲಿ ಪ್ರತಿಯೊಬ್ಬರ ಅಂತರಾಳದ ತೊಳಲಾಟ ಇರುವ ಕಾರಣ ಇದನ್ನೊಂದು ಮಾನವೀಯ ನೆಲೆಯ ಸಿನಿಮಾ ಎನ್ನಬಹುದು.

ತೆರೆಯ ಮೇಲೆ ಬರುವ ಅಷ್ಟೂ ಪಾತ್ರಗಳು ಸಿನಿಮಾ ಮುಗಿದ ಮೇಲೆಯೂ ನೆನಪಿನಲ್ಲಿ ಉಳಿಯುತ್ತವೆ. ವಿದ್ಯಾ ಬಾಲನ್ ಹಾಗೂ ಶೇಫಾಲಿ ಶಾ ಅಭಿನಯ ಮಾತ್ರವಲ್ಲ, ಆಗಷ್ಟೇ ರಂಗಕ್ಕೆ ಕಾಲಿಡುತ್ತಿರುವ ಪರ್ತಕರ್ತೆ ರೋಹಿಣಿ ಜಾರ್ಜ್ ಪಾತ್ರದಲ್ಲಿರುವ ವಿಧಾತ್ರಿ ಬಂಡಿ ಅತಿ ಕಡಿಮೆ ಸಂಭಾಷಣೆಯಲ್ಲೂ ತನ್ನ ಮುಖಭಾವ, ಹಾವಭಾವಗಳ ಕಾರಣ ವಾಸ್ತವ ಜೀವನದಲ್ಲೂ ಕಲಿಕೆಯ ಹಂತದಲ್ಲಿರುವ ಪತ್ರಕರ್ತೆ‌ಯೆಂದು ನಂಬಿಸಿಬಿಡುತ್ತಾಳೆ. ಮುಂಬೈ ಎಂಬ ಮಾಯಾನಗರಿಯ ಪೊಲೀಸರ ಅಸಹಾಯಕತೆ – ಅನಿವಾರ್ಯತೆಗಳು ಮೋರೆ ಹಾಗೂ ಪ್ರದೀಪ್ ಎಂಬ ಎರಡು ಪಾತ್ರಗಳ ಒಳಸುಳಿ. ಇವೆಲ್ಲವುಗಳ ಜತೆಗೆ ಸಿನಿಮಾಕ್ಕೊಂದು ವೇಗ ನೀಡಿರುವುದು ಛಾಯಾಗ್ರಹಣ ಹಾಗೂ ಸಂಕಲನ. ಹೀಗೆ ಹಲವು ವಿಭಾಗಗಳಲ್ಲಿ ಉತ್ತಮವೆನಿಸುವ ‘ಜಲ್ಸಾ’ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಂ ಆಗುತ್ತಿದೆ. ಒಂದಷ್ಟು ಭಾವ ಕಲಕುವಿಕೆಗೆ ನೀವು ತಯಾರಿದ್ದರೆ ಈಗಲೇ ನೋಡಿ.

LEAVE A REPLY

Connect with

Please enter your comment!
Please enter your name here