ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಐಪಿಎಲ್ ಪಂದ್ಯಾವಳಿಯಲ್ಲಿ ಬ್ಯುಸಿಯಾಗಿದ್ದಾರೆ. ತಮಗಿನ್ನೂ ರೆಸ್ಟ್ ಬೇಕು ಎನ್ನುತ್ತಿರುವ ನಟ ಜೂನ್ನಿಂದ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸುವುದಾಗಿ ಹೇಳುತ್ತಾರೆ. ಸುಜಯ್ ಘೋಷ್ ನಿರ್ದೇಶನದಲ್ಲಿ ಅವರು ನಟಿಸಲಿರುವ ‘ದಿ ಕಿಂಗ್’ ಹಿಂದಿ ಸಿನಿಮಾ ಜೂನ್ನಲ್ಲಿ ಆರಂಭವಾಗಲಿದೆ.
ಕಳೆದ ವರ್ಷ ಶಾರುಖ್ ಖಾನ್ ಅಭಿನಯದ ಪಠಾಣ್, ಜವಾನ್ ಮತ್ತು ಡಂಕಿ ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸದ್ದು ಮಾಡಿದ್ದವು. ಈ ಮೂರೂ ಸಿನಿಮಾಗಳ ಯಶಸ್ಸಿನ ನಂತರ ಸಹಜವಾಗಿಯೇ ಅವರ ಅಭಿಮಾನಿಗಳು ಶಾರುಖ್ ನೂತನ ಸಿನಿಮಾ ಬಗ್ಗೆ ಆಲೋಚಿಸುತ್ತಿದ್ದರು. ಶಾರುಖ್ ತಮ್ಮ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ಸ್ ಕೊಟ್ಟಿದ್ದಾರೆ. ‘ಸಾಲಾಗಿ ನಟಿಸಿದ ಮೂರು ಸಿನಿಮಾಗಳಿಂದಾಗಿ ದೈಹಿಕವಾಗಿ ಬಳಲಿದ್ದೇನೆ. ಸದ್ಯಕ್ಕೆ ಐಪಿಎಲ್ ಪಂದ್ಯಾವಳಿ ಎಂಜಾಯ್ ಮಾಡ್ತಿದ್ದೇನೆ. ಜೂನ್ನಲ್ಲಿ ನನ್ನ ಹೊಸ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಅಲ್ಲಿಯವರೆಗೆ ನಾನು ಫ್ರೀ..!’ ಎಂದಿದ್ದಾರೆ ಶಾರುಖ್. ಮೊನ್ನೆ Star Sportsಗೆ ನೀಡಿರುವ ವೀಡಿಯೋ ಸಂದರ್ಶನದಲ್ಲಿ ಅವರು ತಮ್ಮ ಹೊಸ ಸಿನಿಮಾ ಕುರಿತು ಮಾತನಾಡಿದ್ದಾರೆ.
ಸುಜಯ್ ಘೋಷ್ ನಿರ್ದೇಶನದ ‘ದಿ ಕಿಂಗ್’ ಚಿತ್ರದಲ್ಲಿ ಶಾರುಖ್ ಜೊತೆ ಅವರ ಪುತ್ರಿ ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ. ಈ ದುಬಾರಿ ಬಜೆಟ್ನ ಸಿನಿಮಾ ಶಾರುಖ್ ನಿರ್ಮಾಣ ಸಂಸ್ಥೆಯಿಂದಲೇ ತಯಾರಾಗುವ ಸೂಚನೆಗಳಿವೆ. ‘ಮುಂದಿನ ದಿನಗಳಲ್ಲಿ ನಾನು ನನ್ನ ವಯಸ್ಸಿಗೆ ಹೊಂದುವಂತಹ ಪಾತ್ರಗಳಲ್ಲೇ ನಟಿಸಬೇಕೆಂದು ಅಪೇಕ್ಷಿಸಿದ್ದೇನೆ. ಜನರು ಕೂಡ ಇಂತಹ ಪಾತ್ರಗಳಲ್ಲಿ ನನ್ನನ್ನು ಒಪ್ಪುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದಿದ್ದಾರೆ ಶಾರುಖ್. ಅವರ ಈ ಮಾತುಗಳ ಹಿನ್ನೆಲೆಯಲ್ಲಿ ಗ್ರಹಿಸುವುದಾದರೆ, ‘ದಿ ಕಿಂಗ್’ ಚಿತ್ರದಲ್ಲಿ ಶಾರುಖ್ ಮತ್ತು ಸುಹಾನಾ ತಂದೆ – ಮಗಳಾಗಿಯೇ ಕಾಣಿಸಿಕೊಳ್ಳುವ ಸಂಭವವಿದೆ.