ಅಜಯ್ ದೇವಗನ್, ಆರ್ ಮಾಧವನ್ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ ‘ಶೈತಾನ್’ ಹಿಂದಿ ಸಿನಿಮಾ ಈ ವರ್ಷದ ಹಿಟ್ ಚಿತ್ರಗಳಲ್ಲೊಂದು. ಬಾಕ್ಸಾಫೀಸ್ನಲ್ಲಿ ಕೋಟಿ ಕೋಟಿ ಗಳಿಕೆ ಕಂಡ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ.
ಅಜಯ್ ದೇವಗನ್ ಮತ್ತು ಆರ್ ಮಾಧವನ್ ಕಾಂಬಿನೇಷನ್ನಲ್ಲಿ ‘ಶೈತಾನ್’ ಅನ್ನೋ ಹಾರರ್ ಸಿನಿಮಾವೊಂದು ರಿಲೀಸ್ಗೆ ಸಜ್ಜಾಗುತ್ತಿದೆ ಅನ್ನೋ ಮಾತು ಕೇಳಿ ಬಂದಾಗ ಯಾರೂ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಈ ಸಿನಿಮಾ ಟ್ರೇಲರ್ ಬಿಡುಗಡೆಯಾದಾಗ ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ದೊಡ್ಡ ಮಟ್ಟಕ್ಕೇರಿಸಿತ್ತು. ಟ್ರೇಲರ್ ನೋಡಿದ ಮಂದಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಅಂತ ಕಾತರದಿಂದ ಕಾಯೋಕೆ ಶುರು ಮಾಡಿದ್ದರು. ಕಳೆದ ಮಾರ್ಚ್ 8ರಂದು ಬೆಳ್ಳಿತೆರೆ ಮೇಲೆ ಆಟ ಶುರು ಮಾಡಿದ್ದ ಶೈತಾನ್ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಗಳಿಕೆ ಕಂಡಿತ್ತು. ಇದೊಂದು ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಆಗಿದೆ. ಪ್ರೇಕ್ಷಕನ ಎದೆಯಲ್ಲಿ ನಡುಕ ಹುಟ್ಟಿಸುವ ಈ ಸಿನಿಮಾ ಈಗ ಓಟಿಟಿಗೆ ಕಾಲಿಟ್ಟಿದೆ.
ಅಜಯ್ ದೇವಗನ್, ಆರ್ ಮಾಧವನ್ ಮತ್ತು ಜ್ಯೋತಿಕಾ ಅಭಿನಯದ ‘ಶೈತಾನ್’ ಸಿನಿಮಾ ಇಂದಿನಿಂದ (ಮೇ 4) ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್, ಮಗಳನ್ನು ಕಾಪಾಡಿಕೊಳ್ಳುವ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ದೃಶ್ಯಂ’ ಸರಣಿ ಸಿನಿಮಾಗಳಲ್ಲೂ ಮಗಳನ್ನು ರಕ್ಷಿಸಿಕೊಳ್ಳುವ ಅಪ್ಪನಾಗಿ ಪ್ರೇಕ್ಷಕನ ಮನ ಗೆದ್ದಿದ್ದರು. ಇನ್ನು, ಕಾಲಿವುಡ್ ನಟಿ ಜ್ಯೋತಿಕ 25 ವರ್ಷಗಳ ಬಳಿಕ ಮತ್ತೆ ಬಿ-ಟೌನ್ಗೆ ಮರಳಿದ್ದಾರೆ. ಈ ಹಿಂದೆ 1998ರಲ್ಲಿ ತೆರೆಕಂಡಿದ್ದ ಪ್ರಿಯದರ್ಶನ್ ನಿರ್ದೇಶನದಲ್ಲಿ ಅಕ್ಷಯ್ ಖನ್ನಾ ಅಭಿನಯದ ‘ಡೋಲಿ ಸಜಾಕೆ ರಖ್ನಾ’ ಸಿನಿಮಾದಲ್ಲಿ ಕೊನೆಯದಾಗಿ ಜ್ಯೋತಿಕ ಕಾಣಿಸಿಕೊಂಡಿದ್ದರು. ಇದು ಜ್ಯೋತಿಕಾ ಅವರ ಪಾಲಿಗೆ 100 ಕೋಟಿ ರೂ. ಕ್ಲಬ್ ಸೇರಿದ ಮೊದಲ ಹಿಂದಿ ಸಿನಿಮಾ ಆಗಿತ್ತು.
ದೇವಗನ್ ಫಿಲ್ಮ್ಸ್, ಜಿಯೋ ಸ್ಟುಡಿಯೋ ಹಾಗೂ ಪನೋರಮಾ ಸ್ಟುಡಿಯೋ ನಿರ್ಮಾಣ ಮಾಡಿರುವ ಹಿಂದಿ ಸಿನಿಮಾ ಇದಾಗಿದೆ. ಈ ‘ಶೈತಾನ್’ ಗುಜರಾತಿ ಚಿತ್ರದ ‘ವಶ್’ ಶೀರ್ಷಿಕೆಯ ರಿಮೇಕ್ ಆಗಿದೆ. ‘ಶೈತಾನ್’ ಮಾಟ ಮಂತ್ರ-ವಶೀಕರಣದ ಸುತ್ತ ಸುತ್ತುವ ಕಥೆಯಾಗಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್, ಮಾಂತ್ರಿಕ ಮಾಧವನ್ನಿಂದ ತಮ್ಮ ಮಗಳನ್ನು ಕಾಪಾಡಿಕೊಳ್ಳುವ ತಂದೆಯಾಗಿ ಅಭಿನಯಿಸಿದ್ದಾರೆ. ಜಾನಕಿ ಬೋದಿವಾಲ ಮಗಳ ಪಾತ್ರದಲ್ಲಿ ಮಿಂಚಿದ್ದು, ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.










