ಸಿನಿಮಾ ವಿತರಕ ಮತ್ತು ನಿರ್ಮಾಪಕ ಅಲ್ಲು ಅರವಿಂದ್‌ ಆರಂಭಿಸಿದ aha ತೆಲುಗು OTT ಯಶಸ್ವಿಯಾಗಿ ಎರಡು ವರ್ಷ ಪೂರೈಸುವ ಹಾದಿಯಲ್ಲಿದೆ. ಈ ಮಧ್ಯೆ ಮೊನ್ನೆ aha ತಮಿಳು ಓಟಿಟಿಗೆ ಚಾಲನೆ ಸಿಕ್ಕಿದ್ದು, ತಮಿಳು ಮನರಂಜನಾ ಉದ್ಯಮದಲ್ಲಿ ಸಂಚಲನ ಸೃಷ್ಟಿಯಾಗಿದೆ. aha ಓಟಿಟಿಯ ಮೊದಲ ತಮಿಳು ಸರಣಿ ‘ಇರೈ’ ಫೆಬ್ರವರಿ 18ರಿಂದ ಸ್ಟ್ರೀಮ್‌ ಆಗಲಿದೆ.

ದಕ್ಷಿಣ ಭಾರತದ ಯಶಸ್ವೀ OTT ಪ್ಲಾಟ್‌ಫಾರ್ಮ್‌ aha ಇದೀಗ ತಮಿಳು ಭಾಷೆಗೂ ಅಡಿಯಿಟ್ಟಿದೆ. ಮೊನ್ನೆ ಶುಕ್ರವಾರ aha ತಮಿಳು ಓಟಿಟಿ app ಲಾಂಚ್‌ ಆಗಿದ್ದು, ತಮಿಳು ಸಿನಿಮಾ ಮತ್ತು ಮನರಂಜನಾ ಉದ್ಯಮದಲ್ಲಿ ಸದ್ದು ಮಾಡುತ್ತಿದೆ. ಚಿತ್ರನಿರ್ಮಾಪಕ ಮತ್ತು ವಿತರಕ ಅಲ್ಲು ಅರವಿಂದ್‌ 2020, ಮಾರ್ಚ್‌ 25ರಂದು aha ತೆಲುಗು ಓಟಿಟಿ ಆರಂಭಿಸಿದ್ದರು. Geetha Arts ಮತ್ತು My Home Group ಜಾಯಿಂಟ್‌ ವೆಂಚರ್‌ನಲ್ಲಿ Arha Media and Broadcasting Private Limited ನಡಿ aha ಓಟಿಟಿ ಕಾರ್ಯನಿರ್ವಹಿಸುತ್ತಿದೆ. ತೆಲುಗು ಒರಿಜಿನಲ್‌ ಶೋಗಳು ಮತ್ತು ಸಿನಿಮಾಗಳು ಇಲ್ಲಿ ಸ್ಟ್ರೀಮ್‌ ಆಗುತ್ತಿವೆ. 2022ರ ಪೊಂಗಲ್‌ನಲ್ಲಿ aha ತಮಿಳು ಓಟಿಟಿ ಆರಂಭಿಸುವ ಬಗ್ಗೆ ಸಂಸ್ಥೆ ಸೂಚನೆ ನೀಡಿತ್ತು. ಇದೀಗ aha ತಮಿಳು ಓಟಿಟಿ App ಲಾಂಚ್‌ ಆಗಿದೆ.

ಮೊನ್ನೆ ಚೆನ್ನೈನಲ್ಲಿ ನಡೆದ aha ತಮಿಳು ಓಟಿಟಿ App ಲಾಂಚ್‌ ಸಮಾರಂಭದಲ್ಲಿ ತಮಿಳು ಸಿನಿಮಾ, ಕಿರುತೆರೆ ಸೇರಿದಂತೆ ವಿವಿಧ ಕ್ಷೇತ್ರಗಳ ದಿಗ್ಗಜರು ಪಾಲ್ಗೊಂಡು aha ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ aha ತಮಿಳು ಓಟಿಟಿ ಕುರಿತು ಮಾತನಾಡಿದ ಅಲ್ಲು ಅರವಿಂದ್‌, “ವರ್ಷಗಳ ಹಿಂದೆ ನನ್ನ ಮಗ ಅಲ್ಲು ಅರ್ಜುನ್‌ ಜೊತೆ ಕುಳಿತು ನೆಟ್‌ಫ್ಲಿಕ್ಸ್‌ ಶೋಗಳನ್ನು ವೀಕ್ಷಿಸುತ್ತಿದ್ದೆ. ಎಲ್ಲಾ ವಯೋಮಾನದ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅವರು ಕಂಟೆಂಟ್‌ ತಯಾರಿಸುವುದು ನನಗೆ ಆಕರ್ಷಕವಾಗಿ ಕಂಡಿತು. ನಮ್ಮ ಪ್ರಾದೇಶಿಕ ಭಾಷೆಯಲ್ಲೇಕೆ ಈ ಕಾನ್ಸೆಪ್ಟ್‌ ಅಳವಡಿಸಿಕೊಳ್ಳಬಾರದು ಎನ್ನುವ ಆಲೋಚನೆ ಮೂಡಿತು. ಅಲ್ಲದೆ ದೊಡ್ಡ ಪರದೆಯ ಮೇಲೆ ತೋರಿಸಲು ಸಾಧ್ಯವಾಗದ ಹಲವು ಕಾರ್ಯಕ್ರಮಗಳನ್ನು ಇಲ್ಲಿ ತಯಾರಿಸಬಹುದ. ಈ ಆಲೋಚನೆಗಳ ಹಿನ್ನೆಲೆಯಲ್ಲಿ ಶುರುವಾಗಿದ್ದು aha. ತೆಲುಗು ಓಟಿಟಿ ಎರಡು ವರ್ಷಗಳನ್ನು ಪೂರೈಸುವ ಹಾದಿಯಲ್ಲಿದೆ. ಇದೀಗ aha ತಮಿಳು ಶುರುವಾಗಿದೆ. ಇಲ್ಲಿಯೂ ನಮ್ಮ ಪ್ರಯತ್ನ, ಪ್ರಯೋಗಗಳಿಗೆ ಬೆಂಬಲ ಸಿಗಲಿದೆ ಎನ್ನುವ ವಿಶ್ವಾಸವಿದೆ” ಎಂದ ಅವರು ತಮ್ಮ ಕನಸು ನನಸಾಗಲು ಶ್ರಮಿಸಿದ aha ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.

ನಟ ಜಯಂ ರವಿ ಮತ್ತು ಯುವ ಸಂಗೀತ ಸಂಯೋಜಕ ಅನಿರುದ್ಧ aha ತಮಿಳು ಲೋಗೊ ರಿವೀಲ್‌ ಮಾಡಿದರು. ಅತಿ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಗಳಿಸಿದ ಯುವ ಸಂಗೀತ ಸಂಯೋಜಕ ಅನಿರುದ್ಧ ಅವರು aha ತಮಿಳು ಓಟಿಟಿ ಶೋವೊಂದಕ್ಕೆ ಕೆಲಸ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವುದಾಗಿ ಅವರು ಹೇಳಿದರು. ನಿರ್ದೇಶಕರಾದ ಕೆ.ಎಸ್‌.ರವಿಕುಮಾರ್‌, ಪಾ.ರಂಜಿತ್‌, ಕೆ.ಭಾಗ್ಯರಾಜ್‌, ಶಿವಾ, ಸುಂದರ್‌ ಸಿ. ಹಾಗೂ ಕಲಾವಿದರಾದ ಶರತ್‌ ಕುಮಾರ್‌, ಖುಷ್ಬೂ, ಕೆವಿನ್‌, ಮಣಿಕಂಠನ್‌, ಅಶೋಕ್‌ ಸೆಲ್ವನ್‌, ಎಸ್‌.ಜೆ.ಸೂರ್ಯ ಸೇರಿದಂತೆ ಸಿನಿಮಾರಂಗದ ಪ್ರಮುಖರು aha ತಮಿಳು ಓಟಿಟಿ ಕುರಿತಂತೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅಲ್ಲು ಅರವಿಂದ್‌ ಅವರಿಗೆ ಶುಭ ಹಾರೈಸಿದರು.

ನಿರ್ದೇಶಕ ಪಾ.ರಂಜಿತ್‌, “ತಮಿಳು ಮನರಂಜನಾ ಮಾಧ್ಯಮದಲ್ಲಿ ಇದು ಸ್ಮರಣೀಯ ಗಳಿಗೆ. aha ತಮಿಳು ಓಟಿಟಿ ನಮ್ಮಂತಹ ಬರಹಗಾರರು ಹಾಗೂ ತಂತ್ರಜ್ಞರ ಬೆಳವಣಿಗೆಗೆ ಇಂಬು ನೀಡಲಿದೆ. ಚಿಕ್ಕ ಬಜೆಟ್‌ ಸಿನಿಮಾಗಳಿಗೆ ಈ ಪ್ಲಾಟ್‌ಫಾರ್ಮ್‌ ವರದಾನವಾಗಲಿದೆ” ಎಂದರೆ, ಹಿರಿಯ ಚಿತ್ರನಿರ್ದೇಶಕ ಕೆ.ಭಾಗ್ಯರಾಜ್‌, “ಚಿತ್ರನಿರ್ಮಾಪಕ, ವಿತರಕರಾಗಿ ಅಲ್ಲು ಅರವಿಂದ್‌ ದೊಡ್ಡ ಯಶಸ್ಸು ಕಂಡಿದ್ದಾರೆ. ಅವರಿಗೆ ಜನರ ನಾಡಿಮಿಡಿತದ ಸ್ಪಷ್ಟ ಅರಿವಿದೆ. aha OTT ಮೂಲಕ ಅವರು ಮನರಂಜನಾ ಉದ್ಯಮದ ಹೊಸ ಸಾಧ್ಯತೆಗಳನ್ನು ಮನಗಂಡರು. ಈಗ ತಮಿಳು ಓಟಿಟಿ ಮೂಲಕ ಇಲ್ಲಿನ ಉದ್ಯಮ ಮತ್ತು ಜನರಿಗೂ ಹತ್ತಿರವಾಗಲಿದ್ದಾರೆ” ಎಂದರು. ತಮಿಳಿನಲ್ಲಿ ಕಾರ್ಯಾಚರಣೆ ಆರಂಭಿಸಿರುವ aha ಮೊದಲ ಒರಿಜಿನಲ್‌ ಶೋ ಘೋಷಿಸಿದೆ. ರಾಜೇಶ್‌ ಎಂ. ಸೆಲ್ವ ನಿರ್ದೇಶನದಲ್ಲಿ ಶರತ್‌ಕುಮಾರ್‌ ಕಾಣಿಸಿಕೊಳ್ಳುತ್ತಿರುವ ‘ಇರೈ’ ಸರಣಿ ಫೆಬ್ರವರಿ 18ರಿಂದ ಸ್ಟ್ರೀಮ್‌ ಆಗಲಿದೆ.

2020ರ ಮಾರ್ಚ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದ aha ತೆಲುಗು ಓಟಿಟಿಗೆ ನಿರೀಕ್ಷೆಯಂತೆಯೇ ದೊಡ್ಡ ಸ್ಪರ್ಧೆ ಇತ್ತು. ನೆಟ್‌ಫ್ಲಿಕ್ಸ್‌, ಅಮೇಜಾನ್‌ ಪ್ರೈಮ್‌ನಂತಹ ಸ್ಟ್ರೀಮಿಂಗ್‌ ದೈತ್ಯರೊಂದಿಗೆ ಸ್ಪರ್ಧೆ ಎದುರಿಸುವ ಸವಾಲುಗಳಿದ್ದವು. aha ತನ್ನ ಪ್ರಾದೇಶಿಕತೆಯ ಫ್ಲೇವರ್‌, ಒರಿಜಿನಿಲ್‌ ಕಂಟೆಂಟ್‌ನೊಂದಿಗೆ ನಿಧಾನವಾಗಿ ನೆಲೆ ಕಂಡುಕೊಳ್ಳುತ್ತಾ ಬಂದಿತು. ‘ಕೊತ್ತ ಪೋರಾದು’, ‘Masti’s’, ‘ಶಿತಪ್ಪೆನ್ಸ್‌’, ‘Locked’, ‘ಗೀತಾ ಸುಬ್ರಮಣ್ಯಂ’ ಮುಂತಾದ ಫಿಕ್ಷನ್‌ ಶೋಗಳು, ಸಮಂತಾ ನಿರೂಪಣೆಯ ‘Sam Jam’, ರಾಣಾ ದುಗ್ಗುಬಾಟಿ ನಿರೂಪಣೆಯ ‘No.1 Yaari’ , ಬಾಲಕೃಷ್ಣರ ‘Unstoppable with NBK’ ಮತ್ತಿತರೆ ನಾನ್‌ ಫಿಕ್ಷನ್‌ ಶೋಗಳ ಮೂಲಕ ಜನರನ್ನು ಆಕರ್ಷಿಸಿತು. ಕೋವಿಡ್‌ ಲಾಕ್‌ಡೌನ್‌ನಿಂದ ಥಿಯೇಟರ್‌ನಲ್ಲಿ ಬಿಡುಗಡೆ ಕಾಣಲು ಸಾಧ್ಯವಾಗದ ‘ಕಲರ್‌ ಪೋಟೊ’, ‘ಬಾನುಮತಿ & ರಾಮಕೃಷ್ಣ’, ‘ಥ್ಯಾಂಕ್ ಯೂ’, ‘ಬದ್ರರ್‌’ ಮುಂತಾದ ಸಿನಿಮಾಗಳು aha ದಲ್ಲಿ ನೇರವಾಗಿ ಸ್ಟ್ರೀಮ್‌ ಆದವು.

“ಸಾಮಾನ್ಯವಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಾಗಿ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕಂಟೆಟ್‌ ರೂಪಿಸುತ್ತಾರೆ. ಇದಕ್ಕೆ ಹೊರತಾಗಿ ನಾವು ಫ್ಯಾಮಿಲಿಯ ಎಲ್ಲರೂ ಒಟ್ಟಿಗೆ ಕುಳಿತು ನೋಡುವಂತಹ ಕಂಟೆಂಟ್‌ ಪ್ಲಾನ್‌ ಮಾಡಿದೆವು. ಹಾಗಾಗಿ ಡ್ರಾಮಾ, ರೊಮ್ಯಾನ್ಸ್‌, ಥ್ರಿಲ್ಲರ್‌ ಎಲ್ಲವೂ ಮಿಳಿತವಾದ ಶೋಗಳು ಜನರಿಗೆ ಇಷ್ಟವಾದವು” ಎಂದು aha CEO ಅಜಿತ್‌ ಠಾಕೂರ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತಮಿಳು ಓಟಿಟಿ ಲಾಂಚ್‌ ಮಾಡಿದ ಬೆನ್ನಲ್ಲೇ aha ತನ್ನ ಸಬ್‌ಸ್ಕ್ರಿಪ್ಶನ್‌ ದರವನ್ನು ಕಡಿತಗೊಳಿಸುವ ಯೋಜನೆ ಹಾಕಿಕೊಂಡಿದೆ. ಈ ಆಕರ್ಷಣೆಯೊಂದಿಗೆ ದೊಡ್ಡ ಸಂಖ್ಯೆಯ ಚಂದಾದಾರರನ್ನು ಹೊಂದುವುದು ಪ್ಲಾಟ್‌ಫಾರ್ಮ್‌ನ ಗುರಿ.

LEAVE A REPLY

Connect with

Please enter your comment!
Please enter your name here