ನಂದಕಿಶೋರ್ ನಿರ್ದೇಶನದಲ್ಲಿ ಶ್ರೇಯಸ್ ನಟನೆಯ ‘ರಾಣ’ ಸಿನಿಮಾದ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಶಿವು ಭೇರ್ಗಿ ರಚನೆ, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆಯ ಹಾಡಿಗೆ ‘ಕಿರಿಕ್ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗಡೆ ಹೆಜ್ಜೆ ಹಾಕಿದ್ದಾರೆ.
‘ರಾಣ’ ಸಿನಿಮಾದಲ್ಲಿ ಶ್ರೇಯಸ್ ಮತ್ತು ಸಂಯುಕ್ತಾ ಹೆಗಡೆ ಅವರು ಹೆಜ್ಜೆ ಹಾಕಿರುವ ‘ಮಳ್ಳಿ ಮಳ್ಳಿ’ ಸ್ಪೆಷಲ್ ಸಾಂಗ್ ಬಿಡುಗಡೆಯಾಗಿದೆ. ಹಾಡು ಬಿಡುಗಡೆ ಮಾಡಿ ಹಾರೈಸಿದ ನಟ ದುನಿಯಾ ವಿಜಯ್, “ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಕೆ.ಮಂಜು ಅವರು ಮಗನ ಮೇಲಿಟ್ಟರುವ ಪ್ರೀತಿ. ಈ ಹಾಡನ್ನು ನೋಡಿದರೆ ಶ್ರೇಯಸ್ಸ್ ಪಟ್ಟಿರುವ ಶ್ರಮ ತಿಳಿಯುತ್ತದೆ. ಸಂಯಕ್ತ ಅವರ ನಟನೆಯೂ ಚೆನ್ನಾಗಿದೆ. ಸಿನಿಮಾ ಕೂಡ ಚೆನ್ನಾಗಿ ಬಂದಿರುತ್ತದೆ ಎಂಬ ಭರವಸೆಯಿದೆ. ಚಿತ್ರ ಯಶಸ್ಸು ಕಾಣಲಿ” ಎಂದರು. ಶಿವು ಭೇರ್ಗಿ ಬರೆದಿರುವ ಈ ಸ್ಪೆಷಲ್ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದಾರೆ. ಕಲಾನಿರ್ದೇಶಕ ಶಿವು ಹಾಕಿದ್ದ ಸೆಟ್‌ನಲ್ಲಿ ಹಾಡನ್ನು ಚಿತ್ರಿಸಲಾಗಿದೆ.
ನಟ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿ ಮಾತು ಶುರುಮಾಡಿದ ಹೀರೋ ಶ್ರೇಯಸ್, “ಸಂಯುಕ್ತ ಹೆಗಡೆ ಒಳ್ಳೆಯ ನೃತ್ಯಗಾರ್ತಿ. ಅವರೊಡನೆ ನೃತ್ಯ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಹೆಚ್ಚು ಅಭ್ಯಾಸ ಮಾಡಿದ್ದೆ. ಈ ನಿಟ್ಟಿನಲ್ಲಿ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅವರ ಸಹಾಯಕರ ಸಹಕಾರ ಮರೆಯಲು ಸಾಧ್ಯವಿಲ್ಲ. ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ವಲ್ಪ ಮಾತ್ರ ಬಾಕಿಯಿದೆ” ಎಂದು ಸಿನಿಮಾ ಕುರಿತಂತೆ ಮಾಹಿತಿ ನೀಡಿದರು. “ನೀವೆಲ್ಲರೂ ಹಾಡು ಚೆನ್ನಾಗಿದೆ ಎಂದು ಹೇಳಿದ್ದು ನನಗೆ ಸಂತಸ ತಂದಿದೆ. ನನಗೆ ಚಿಕ್ಕ ವಯಸ್ಸಿನಿಂದಲೂ ನೃತ್ಯದಲ್ಲಿ ಆಸಕ್ತಿ. ಈ ಹಾಡಿನಲ್ಲಿ ನೃತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ” ಎಂದ ನಟಿ ಸಂಯುಕ್ತಾ ಹೆಗಡೆ ಅವಕಾಶ ಕಲ್ಪಿಸಿದ ನಿರ್ದೇಶಕ ನಂದಕಿಶೋರ್ ಅವರಿಗೆ ಧನ್ಯವಾದ ಅರ್ಪಿಸಿದರು. ಪುರುಷೋತ್ತಮ್ ಗುಜ್ಜಾಲ್ ನಿರ್ಮಾಣದ ಚಿತ್ರಕ್ಕೆ ಶೇಖರ್ ಚಂದ್ರ ಶೇಖರ್ ಚಂದ್ರ ಛಾಯಾಗ್ರಹಣ, ಚಂದನ್ ಶೆಟ್ಟಿ ಸಂಗೀತವದೆ. ರಜನಿ ಭಾರದ್ವಾಜ್ ಚಿತ್ರದ ನಾಯಕನಟಿ.