ಅಲ್ಲೊಂದು ಮಾಮೂಲಿ ಪ್ರೇಮಕತೆ ಇದ್ದರೆ ಇದೂ ಮಾಮೂಲಿ ಸಿನಿಮಾ ಆಗುತ್ತಿತ್ತು. ಆದರೆ ಅಲ್ಲಿ ಕ್ರಾಂತಿ ಇದೆ. ನಾನಿ ಮತ್ತು ಸಾಯಿ ಪಲ್ಲವಿ ಅಭಿನಯದ ‘ಶ್ಯಾಮ್ ಸಿಂಗಾ ರಾಯ್’ ತೆಲುಗು ಸಿನಿಮಾ ‘ನೆಟ್‌ಫ್ಲಿಕ್ಸ್’ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕಪ್ಪು ಬಿಳುಪು ಚಿತ್ರಗಳ ಕಾಲದಿಂದಲೂ ಪುನರ್ಜನ್ಮದ ಸಿನಿಮಾಗಳನ್ನು ನೋಡುತ್ತಲೇ ಬಂದಿದ್ದೇವೆ. ಅದೇ ವಿಷಯ ಎತ್ತಿಕೊಂಡರೂ ‘ಶ್ಯಾಮ್ ಸಿಂಗಾ ರಾಯ್’ ಎಂಬ ವಿಶಿಷ್ಟವಾದ, ರೋಚಕವಾದ ಕಥನವೊಂದನ್ನು ಹೆಣೆದು ನಮ್ಮ ಮುಂದಿಟ್ಟಿದ್ದಾರೆ ನಿರ್ದೇಶಕ ರಾಹುಲ ಸಾಂಕೃತಾಯನ. ಸಿನಿಮಾದ ಕತೆ, ನಿರೂಪಣೆ, ನಾನಿ, ಸಾಯಿಪಲ್ಲವಿ, ಕೀರ್ತಿ, ಸಿನಿಮಾದ ಸಂಗೀತ, ರೆಟ್ರೋ ಬಿಂಬಗಳು, ಬಂಗಾಳಿ ಸಂಸ್ಕೃತಿ, ನದೀತೀರದ, ನಡುರಾಥ್ರಿಯ ದೃಶ್ಯಗಳ ಮೊಗೆಮೊಗೆದು ಕೊಡುವ ಮೋಹಕತೆ. ಮತ್ತೆ ಮತ್ತೆ ಕಾಡುವ ಮಾತುಗಳು… ಶಾಮ್ ಸಿಂಗಾ ರಾಯ್ ಸಿನಿಮಾ ಎಲ್ಲದರ ಒಟ್ಟು ಪ್ಯಾಕೇಜ್! ಪೈಸಾ ವಸೂಲ್ ಅನಿಸುವಂತಾ ಕಣ್ಮನ ತಣಿಸುವ ಚಿತ್ರ.
ಕಿರುಚಿತ್ರವೊಂದರ ಮೂಲಕ ತನ್ನನ್ನು ಸಾಬೀತುಪಡಿಸಿಕೊಂಡು, ದೊಡ್ಡ ಸಿನಿಮಾ ಮಾಡಬೇಕೆಂಬ ಕನಸುಗಣ್ಣಿನ ನಿರ್ದೇಶಕ ವಾಸು. ಅವನು ಅಂದುಕೊಂಡಂತೆಯೇ ಎಲ್ಲಾ ಆಗುತ್ತದೆ. ಅವನ ಸಿನಿಮಾ ಹಿಟ್ ಆಗುತ್ತದೆ. ಆದರೆ ಈ ಸಿನಿಮಾ ಕತೆ ಪೂರಾ ಕದ್ದದ್ದು. ಅದಾಗಲೇ ಬೆಂಗಾಲಿ ಭಾಷೆಯಲ್ಲಿ ಶ್ಯಾಮ್ ಸಿಂಗಾ ರಾಯ್ ಬರೆದ ಕತೆಗಳಿವು ಅಂತ ಕೇಸು ಜಡಿಯಲಾಗುತ್ತದೆ. ಬೆಂಗಾಲಿ ಓದಲಿಕ್ಕೇ ಬರಲ್ಲ ತನಗೆ ಅಂತ ಅವನು ವಾದಿಸಿದರೆ, ನಿನಗೆ ಹೆಸರೂ ಬದಲಾಯಿಸುವಷ್ಟು ಬುದ್ಧಿ ಇಲ್ವಾ? ಅದನ್ನು ಕಾಪಿ ಮಾಡಿದೀಯಲ್ಲ ಅಂತ ಅವನದೇ ಲಾಯರ್ ಬೈಯುತ್ತಾಳೆ. ಶಾರ್ಟ್ ಫಿಲ್ಮ್ ಹೀರೋಯಿನ್ ಆಗಲು ಬಂದು ಅವನ ಪ್ರೇಮಿಯಾದ ಹುಡುಗಿ ಸೈಕಾಲಜಿ ಓದುವವಳು. ಅವಳು ತನ್ನ ಗುರುವಿನ ಮೂಲಕ ವಾಸುವನ್ನು ಪರೀಕ್ಷೆಗೊಳಪಡಿಸಿದಾಗ ಹೊರಬರುತ್ತಾನೆ ಶಾಮ್ ಸಿಂಗಾ ರಾಯ್!
ಅಲ್ಲೊಂದು ಮಾಮೂಲಿ ಪ್ರೇಮಕತೆ ಇದ್ದರೆ ಇದೂ ಮಾಮೂಲಿ ಸಿನಿಮಾ ಆಗುತ್ತಿತ್ತು. ಆದರೆ ಅಲ್ಲಿ ಕ್ರಾಂತಿ ಇದೆ. ಅಸಮಾನತೆ, ದೇವದಾಸಿಯರ ಕುರಿತ ಕರಾಳ ಚಿತ್ರಗಳಿವೆ. ಆ ದೃಶ್ಯಗಳ ಕಟ್ಟುವಿಕೆಯಲ್ಲಿ ನಿರ್ದೇಶಕರು, ಕಲಾನಿರ್ದೇಶಕರು, ವಾಸುವಾಗಿದ್ದ ನಾನಿ ಪೂರಾ ಬೇರೆಯೇ ಆಗಿ ಹೊಮ್ಮುವ ಪರಿ, ದೇವತೆಯೇ ಪ್ರತ್ಯಕ್ಷವಾದಂತೆ ಕಾಣುವ ಸಾಯಿಪಲ್ಲವಿ ಎಲ್ಲರದ್ದೂ ಸಮತೂಕದ ಕೊಡುಗೆ ಇದೆ. ದೇವಾಲಯದ ನೃತ್ಯದ ದೃಶ್ಯಗಳು ಕಣ್ಣಿಗೆ ನಿಜದ ಹಬ್ಬ. ಮಧ್ಯರಾತ್ರಿಯ ಸಮುದ್ರ ತೀರದ ಅವರಿಬ್ಬರ ಭೇಟಿಗಳು, ಮಾತುಗಳು ಗಂಧರ್ವಲೋಕವೆಂದರೆ ಅದೇ ಏನೋ, ಗಂಧರ್ವರೆಂದರೆ ಅವರೇ ಏನೋ ಅನ್ನುವಂತಿದೆ. ಸಾಯಿಪಲ್ಲವಿ ಮತ್ತು ನಾನಿ ಅಪ್ಪಟ ಬೆಂಗಾಲಿಗಳಂತೆಯೇ ಕಾಣುತ್ತಾರೆ.
ಹೇಳೀಕೇಳೀ ಇವನೊಬ್ಬ ಕತೆಗಾರ. ಸಿನಿಮಾ ನಿರ್ದೇಶಕ, ಕಳ್ತನಕ್ಕೆ ಪೂರ್ವಜನ್ಮದ ಕತೆ ಹೇಳಿಬಿಟ್ಟ ಅನ್ನುವ ಲಾಯರ್ ಮುಂದೆ ಕೋರ್ಟಿನಲ್ಲಿ ಯಾವ ಸಾಕ್ಷಿ ಇಟ್ಟು ತನ್ನನ್ನು ಸಾಬೀತುಪಡಿಸಿಕೊಳ್ಳುತ್ತಾನೆ ವಾಸು? ಅವನು ಬಿಟ್ಟುಹೋದ ಹೆಂಡತಿ ಆಮೇಲೇನಾದಳು? ಹಳೆಯ ನೆನಪಿನಿಂದ ಅದೇ ಜಾಗಕ್ಕೆ ಹೋದಾಗ ಅಲ್ಲಿ ಕಂಡದ್ದೇನು? ಎಲ್ಲವೂ ಸಿನಿಮಾದ ರೋಚಕ ತಿರುವುಗಳೇ. ಶ್ಯಾಮ್ ಪಾತ್ರ, ಕತೆ ಅದೆಷ್ಟು ನೈಜವಾಗಿ ಬಂದಿದೆ ಅಂದರೆ ಅಂತವನೊಬ್ಬ ನಿಜಕ್ಕೂ ಇದ್ದನೇ ಅಂತ ಸಿನಿಮಾ ನೋಡಿದ ಎಷ್ಟೋ ಜನ ಗೂಗಲ್ಲಿನಲ್ಲಿ ಹುಡುಕಿದ್ದಾರೆ. ಇದು ಸಿನಿಮಾದ ನಿಜವಾದ ಯಶಸ್ಸು!