ತಮ್ಮ ಅವಶ್ಯಕತೆ, ಅನಿವಾರ್ಯತೆಗೊಂದು ಹೆಸರಿಟ್ಟು ಸಂಬಂಧದಲ್ಲಿ ತೊಡಗಿಸಿಕೊಳ್ಳುವುದು, ನಂತರ ಅದರಿಂದ ಹೊರಬರಲು ಹೆಣಗಾಡುವ ಇಂದಿನ ಯುವ ಪೀಳಿಗೆಯ ಜೀವನ ಶೈಲಿಗೆ ಕನ್ನಡಿ ಹಿಡಿಯುತ್ತದೆ ಈ ತಮಿಳು ಸಿನಿಮಾ. ‘ಬ್ಯಾಚುಲರ್‌’ ಸೋನಿ ಲೈವ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಹರೆಯದ ಸಹಜ ಆಕರ್ಷಣೆ, ಮಾನಸಿಕ ತುಮುಲಗಳ ತೀವ್ರತೆ ಹೆಚ್ಚಾಗಿ ಆಗಬಹುದಾದ ಘಟನೆಗಳ ಸುತ್ತ ಸುತ್ತುವ ಸಿನಿಮಾ. ಪ್ರೀತಿ, ಕಾಮ, ಭಾವನಾತ್ಮಕ ಬಂಧ, ಲಿವ್‌ಇನ್‌ ರಿಲೇಶನ್‌ ಶಿಪ್‌ ಕುರಿತು ಸಿನಿಮಾ ಮಾತನಾಡುತ್ತದೆ. ದ್ವಿತಿಯಾರ್ಧದ ಭಾಗ ಮನರಂಜಿಸಲೆಂದೇ ಕತೆಯಿಂದ ಹೊರಗುಳಿದರೂ ಮತ್ತೆ ಮೂಲ ಕತೆಗೆ ಬಂದು ಕೊನೆಗೊಳ್ಳುವ ವಿಧಾನ ಇಷ್ಟವಾಗುತ್ತದೆ. ಸಣ್ಣ ರಾಜಿಯಲ್ಲಿ ಮುಗಿಯಬಹುದಾದ ವಿಷಯವನ್ನು ಎರಡೂವರೆ ಗಂಟೆಗಳಷ್ಟು ಉದ್ದಕ್ಕೆ ಹೇಳುವ ಅವಶ್ಯಕತೆ ಇರಲಿಲ್ಲ ಎಂದು ಪ್ರೇಕ್ಷಕರಿಗೆ ಅನಿಸುವುದು ಹೌದು. ಕೊನೆಯಲ್ಲಿ ಕಥೆಗಾರ ತಾನು ಹೇಳಲು ಹೊರಟ ಕತೆಯ ಗಟ್ಟಿತನವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಂತ್ಯಗೊಳಿಸಿರುವುದನ್ನು ನೋಡಿ ಪರಿಪೂರ್ಣ ಅನಿಸಬಹುದು. ನಿಜ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತಿರುವ, ತಮ್ಮ ಅವಶ್ಯಕತೆ ಅನಿವಾರ್ಯತೆಗೊಂದು ಹೆಸರಿಟ್ಟು ಸಂಬಂಧದಲ್ಲಿ ತೊಡಗಿಸಿಕೊಳ್ಳುವುದು ಮತ್ತು ನಂತರ ಅದರಿಂದ ಹೊರಬರಲು ಹೆಣಗಾಡುವ ಸಂದರ್ಭಗಳನ್ನು ಉತ್ತಮವಾಗಿ ಅಳವಡಿಸಲಾಗಿದೆ.

ಕಥಾನಾಯಕ ಡಾರ್ಲಿಂಗ್ ತನ್ನ ಲೈಫ್‌ಸ್ಟೈಲ್‌ ಮತ್ತು ವರ್ತನೆಯ ಕುರಿತು ಇತರರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಲೆಕ್ಕಿಸದ ಕೊಯಮತ್ತೂರಿನ ಯುವಕ. ಇದೀಗ ತಾನೆ ಬೆಂಗಳೂರಿಗೆ ಬಂದು ಅಷ್ಟೇನೂ ಪ್ರತಿಭಾವಂತನಲ್ಲದಿದ್ದರೂ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಜೀವನದ ಮೇಲೆ ಅಷ್ಟೇನೂ ಕಾಳಜಿಯಿಲ್ಲದೆ ಜಾಲಿಯಾಗಿ ಜೀವಿಸುತ್ತಾ ಹೆಣ್ಣಿನ ಸಾಂಗತ್ಯಕ್ಕೆ ಹಾತೊರೆಯುವವ. ಮೊದಲಿಗೆ ತನ್ನೆಲ್ಲ ಶೋಕಿಗಳೊಂದಿಗೆ ಸ್ನೇಹಿತರ ಜೊತೆಗೂಡಿ ಬ್ಯಾಚುಲರ್‌ ರೂಮ್‌ನಲ್ಲಿರುತ್ತಾನೆ. ರೂಮ್‌ಮೇಟ್ಸ್‌ ಇವನೆಲ್ಲಾ ಚಟುವಟಿಕೆಗಳನ್ನು ಅವನ ಅಣ್ಣನಿಗೆ ತಿಳಿಸುತ್ತಾರೆ. ಈತನಿಗೂ ಅಲ್ಲಿನ ನಿರ್ಬಂಧಗಳಿಂದ ಮುಕ್ತನಾಗಬೇಕಿರುತ್ತದೆ. ತನ್ನ ಗೆಳೆತಿಯೊಂದಿಗಿರುವ ಸ್ನೇಹಿತನನ್ನ ಪೀಡಿಸಿ, ಪಟ್ಟು ಹಿಡಿದು ಅವರ ಪ್ಲಾಟ್‌ ಸೇರುತ್ತಾನೆ. ನಂತರದಲ್ಲಿ ಕಥಾನಾಯಕಿ ಸುಬ್ಬು ಪರಿಚಯವಾಗುತ್ತದೆ. ಆಕೆಯ ಸೌಂದರ್ಯಕ್ಕೆ ಸೋಲುವ ಡಾರ್ಲಿಂಗ್ ಅವಳನ್ನು ಹಿಂಬಾಲಿಸಲು ಪ್ರಾರಂಭಿಸುತ್ತಾನೆ.

ಅವಳು ಇವನಿಗಿಂತ ಪ್ರಬುದ್ಧಳು ಎನ್ನುವಂತೆ ಬಿಂಬಿತವಾಗುತ್ತದೆ. ಆಕೆಗೆ ಪ್ರೀತಿ, ಪ್ರೇಮ ಇತ್ಯಾದಿಗಳಲ್ಲಿ ಆಸಕ್ತಿ ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತ ಕತೆ ಸಾಗುತ್ತದೆ. ನಂತರ ಪ್ಲಾಟ್‌ನಲ್ಲಿ ಅವರಿಬ್ಬರೇ ಉಳಿಯುವಂತಹ ಸಂದರ್ಭ ಎದುರಾಗುತ್ತದೆ. ಇಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಸ್ನೇಹ ಪ್ರೀತಿಯಾಗಿ ಇಬ್ಬರೂ ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿ ಮುಂದುವರೆಯುತ್ತಾರೆ. ಈ ಸಂಬಂಧದಲ್ಲಿ ಆಕೆ ಗರ್ಭಿಣಿಯಾಗುತ್ತಾಳೆ. ಅಲ್ಲಿಯವರೆಗೆ ರೊಮ್ಯಾಂಟಿಕ್‌ ಅಗಿದ್ದ ಕತೆಯ ದಿಕ್ಕು ಬದಲಾಗುತ್ತದೆ. ಆಕೆ ಮಗುವನ್ನು ಉಳಿಸಿಕೊಳ್ಳಲು ಬಯಸುತ್ತಾಳೆ. ಗರ್ಭಪಾತ ಮಾಡಿಸಿಕೊಳ್ಳುವಂತೆ ಇವನು ಒತ್ತಾಯಿಸುತ್ತಾನೆ. ಆಕೆ ಸುತಾರಾಂ ಒಪ್ಪಳು. ಮೊದಲು ಯಾರಿಗೂ ತಲೆಕೆಡಿಸಿಕೊಳ್ಳದ ಡಾರ್ಲಿಂಗ್‌ ಈಗ ಚಿಂತಿಸಲು ಶುರು ಮಾಡುತ್ತಾನೆ. ಗರ್ಭಪಾತಕ್ಕೆ ಒತ್ತಾಯಿಸುವ ಆತನ ಮಾತುಗಳಿಂದ ಆಕೆ ಕೋಪಗೊಳ್ಳುತ್ತಾಳೆ. ವಿಷಯ ಕೋರ್ಟ್‌ ಮೆಟ್ಟಿಲೇರಿ ಹಲವು ರೂಪ ಪಡೆಯುತ್ತದೆ. ಅದೇನೂ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಇದು ಕೊಂಚ ನಾಟಕೀಯ ಎನಿಸಿದರೂ ನೋಡಿಸಿಕೊಳ್ಳುವ ಗುಣದಿಂದ ಆಪ್ತವಾಗುತ್ತದೆ.

ಚಿತ್ರ ತಾಂತ್ರಿಕವಾಗಿ ಉತ್ತಮವಾಗಿದೆ. ಛಾಯಗ್ರಹಣ ಮತ್ತು ಸಂಕಲನದಲ್ಲಿ ಫಾಸ್ಟ್‌ ಫಾರ್ವಾರ್ಡ್‌ ಎಡಿಟಿಂಗ್‌ ಎಫೆಕ್ಟ್‌ ರೀತಿ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಹಿನ್ನೆಲೆ ಸಂಗೀತ ಅತ್ಯುತ್ತಮವಾಗಿದೆ. ಪಾತ್ರವರ್ಗದಲ್ಲಿ ಭಗವತಿ ಪೆರುಮಾಳ್‌, ಮುನಿಶ್‌ ಕಾಂತ್ ಮುಂತಾದವರಿದ್ದು, ವಿಶೇಷ ಪಾತ್ರವೊಂದನ್ನು ನಿರ್ದೇಶಕ ಮಿಸ್ಕಿನ್‌ ನಿರ್ವಹಿಸಿದ್ದಾರೆ. ಸುಬ್ಬು ಪಾತ್ರದಲ್ಲಿ ದಿವ್ಯಭಾರತಿ, ಡಾರ್ಲಿಂಗ್‌ ಆಗಿ ಜೀವಿ ಪ್ರಕಾಶ್‌ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಿಶೇಷವಾಗಿ ನಟಿ ದಿವ್ಯಭಾರತಿ ತಮ್ಮ ಕುಡಿನೋಟ, ಸ್ಕ್ರೀನ್‌ಪ್ರಸೆನ್ಸ್‌ನಿಂದ ಮನಸ್ಸಿನಲ್ಲುಳಿಯುತ್ತಾರೆ.

ಚಿತ್ರದ ಕೆಲವು ಪ್ರಮುಖ ದೃಶ್ಯಗಳ ಸಂಭಾಷಣೆಗಳು ಇಷ್ಟವಾಗುತ್ತವೆ. ಕತೆಗೆ ಪೂರಕವಾದ, ಪ್ರಭಾವಶಾಲಿಯಾದ ಸಂಭಾಷಣೆಗಳಿಂದಾಗಿ ಸಿನಿಮಾ ಎಂಗೇಜಿಂಗ್‌ ಆಗಿದೆ. ಇಲ್ಲಿ ಕಥಾನಾಯಕ ‘ಅರ್ಜುನ್‌ರೆಡ್ಡಿ’ ತೆಲುಗು ಸಿನಿಮಾ ನೆನಪಿಸಿದರೆ, ಕತೆಯು ಕನ್ನಡದ ‘ನಡುವೆ ಅಂತರವಿರಲಿ’ ಚಿತ್ರವನ್ನು ನೆನಪಿಸುತ್ತದೆ. ಚಿತ್ರದ ಮೊದಲಾರ್ಧದ ಚಿತ್ರಕಥೆ ಮಲಯಾಳಂನ ಯಶಸ್ವೀ ಸಿನಿಮಾ ‘ಬೆಂಗಳೂರು ಡೇಸ್‌’ ನೆನಪಿಸುತ್ತದೆ. ಕ್ಲೈಮ್ಯಾಕ್ಸ್‌ ಮಲಯಾಳಂನ ‘ಇಶ್ಕ್’ ಚಿತ್ರವನ್ನು ನೆನಪಿಸಬಹುದು. ಆದರೆ ಯಾವುದೂ ಯಾವುದನ್ನೂ ಹೋಲುವುದಿಲ್ಲ, ನೆನಪಿಸುತ್ತದಷ್ಟೆ. ಇಲ್ಲಿ ಪ್ರಸ್ತಾಪಿಸಿರುವ ಯಾವುದೇ ಸಿನಿಮಾ ನಿಮಗೆ ಇಷ್ಟವಾಗಿದ್ದಲ್ಲಿ ಈ ಸಿನಿಮಾ ನಿಮಗೆ ಖಂಡಿತ ಇಷ್ಟವಾಗಬಹುದು. ‘ಬ್ಯಾಚುಲರ್‌’ ತಮಿಳು ಸಿನಿಮಾ ಸೋನಿ ಲೈವ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here