ಚಿತ್ರಕಥೆಯಲ್ಲಿ ಎಲ್ಲೂ ಕ್ಲ್ಯೂ ಬಿಡದೇ ನಿರ್ದೇಶಕರು ನಮ್ಮ ದಿಕ್ಕು ತಪ್ಪಿಸುತ್ತಾರೆ. ಕಡೆಯಲ್ಲಿ ಮಾತ್ರ ಅಚ್ಚರಿ! ಸಸ್ಪೆನ್ಸ್ ಥ್ರಿಲ್ಲರ್‌ಗಳು ಯಾವಾಗಲೂ ಚೆನ್ನಾಗಿರುತ್ತವೆ. ಆದರೆ ಅದಕ್ಕೆ ಕೊಟ್ಟಿರುವ ದೇಸೀ ಆವರಣ ಮತ್ತು ಕೊಲೆಯ ಕಾರಣ ಸಿನಿಮಾವನ್ನು ಭಿನ್ನವಾಗಿಸುತ್ತದೆ. ‘ಸೂಕ್ಷ್ಮದರ್ಶಿನಿ’ ಅನ್ನೋ ಹೆಸರೂ ಚೆನ್ನಾಗಿದೆ. DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ ಈ ಮಲಯಾಳಂ ಸಿನಿಮಾ.

ಕೆಲವು ಸಲ ದೊಡ್ಡ ದೊಡ್ಡ ಡಿಗ್ರಿಗಳು, ಬ್ರೇನ್‌ಗಳು ಪೋಲಿಸ್ ಆಫಿಸರ್‌ಗಳು ಮಾಡಲಾಗದ ಕೆಲಸವನ್ನು ಕಾಮನ್ ಜನರ ಕಾಮನ್ ಸೆನ್ಸು ಮಾಡಿಬಿಡುತ್ತದೆ. ನಿತ್ಯ ನಾವು ಬದುಕುವ ವಾತಾವರಣದಲ್ಲೇ, ನಾವು ಗಮನಿಸುವ ಸಂಗತಿಗಳಲ್ಲೇ ಏನೋ ಲಾಜಿಕ್ ಮಿಸ್ ಆಗ್ತಿದೆಯಲ್ಲಾ ಅನಿಸಿದಾಗ ಅದನ್ನು ಗಮನಿಸದೇ, ಗಮನಿಸಿದರೂ ಹೆಚ್ಚು ತಲೆಕೆಡಿಸಿಕೊಂಡು ಅದರ ಹಿಂದೆ ಬೀಳದೆಯೇ ಮತ್ತೆ ನಮ್ಮ ನಿತ್ಯದ ಗಡಿಬಿಡಿಯಲ್ಲಿ ಮುಳುಗುತ್ತೇವೆ.

‘ಸೂಕ್ಷ್ಮದರ್ಶಿನಿ’ ಸಿನಿಮಾದಲ್ಲಿ ಏನೋ ಮಿಸ್ಸು ಹೊಡೀತಿದೆಯಲ್ಲಾ ಅಂತ ಗಮನಿಸೋದು ಒಬ್ಬ ಗೃಹಿಣಿ. ಅದೂ ತನ್ನ ಅಡುಗೆಮನೆ ಕಿಟಕಿಯ ಮೂಲಕ. ಕಿಟಕಿಯಿಂದ ಕಾಣುವ ಪಕ್ಕದ ಮನೆಗೆ ಹೊಸ ಕುಟುಂಬ ಬರುತ್ತದೆ. ತಾಯಿ, ಮಗ. ಮ್ಯಾನುಯಲ್‌ಗೆ (ಬೇಸಿಲ್‌ ಜೋಸೆಫ್‌) ಅಲ್ಜೈಮರ್ ಎಂಬ ಮರೆವಿನ ರೋಗ ಎಂದು ಅವನು ಹೇಳಿರುತ್ತಾನೆ. ಆದರೆ ಪಕ್ಕದ ಮನೆ ಪ್ರಿಯಾಗೆ ಅರೆ, ಟ್ಯಾಂಕಿನಲ್ಲಿ ನೀರು ಬೀಳುವಾಗ ಆಫ್ ಮಾಡುವ, ಕುಕ್ಕರ್ ಸೀಟಿ ನಾಲ್ಕಕ್ಕೆ ಆಫ್ ಮಾಡು, ಚಪ್ಪಲಿ ಮನೆಯ ಹೊರಗೆ ಬಿಟ್ಟು ಹೋಗಬೇಕೆಂಬುದನ್ನು ಮರೆಯದ ಅವರಿಗೆ ಹೇಗೆ ಅಲ್ಜೈಮರ್ ಇರಲು ಸಾಧ್ಯ ಅನಿಸುತ್ತದೆ. ಅದನ್ನು ಅಕ್ಕಪಕ್ಕದ ತನ್ನ ಗೆಳತಿಯರೊಂದಿಗೆ ಹಂಚಿಕೊಳ್ಳುತ್ತಾಳೆ.

ಅಷ್ಟರಲ್ಲಿ ಅಮ್ಮ ಕಾಣೆಯಾಗುತ್ತಾರೆ. ಮರೆವಿನ ಕಾರಣಕ್ಕೆ ಆಗಾಗ ಎಲ್ಲೋ ಹೋಗುತ್ತಾರೆ. ಈಗ ಗೆಳತಿಯರು ಪ್ರಿಯಾ ಅನುಮಾನವನ್ನೇ ಅನುಮಾನಿಸುತ್ತಾರೆ. ಆದರೆ ಪ್ರಿಯಾ? ಗೂಗಲ್ ಹುಡುಕುತ್ತಾಳೆ. ಖಂಡಿತಾ ಅವರಿಗೆ ಮರೆವಿನ ರೋಗ ಇಲ್ಲ ಅಂತ ಖಾತ್ರಿ ಅವಳಿಗೆ. ಆದರೆ ಸಾಬೀತುಪಡಿಸೋದು ಹೇಗೆ? ಇಷ್ಟಕ್ಕೂ ಮಗನೇ ಯಾಕೆ ಮರೆವಿನ ನಾಟಕ ಆಡಬೇಕು? ಅಷ್ಟರಲ್ಲಿ ಮತ್ತೆ ಅಮ್ಮ‌ ಕಾಣೆಯಾಗುತ್ತಾರೆ. ಆದರೆ ಪ್ರಿಯಾಗೆ ಅವರು ಮನೆಯಲ್ಲೆ ಇದ್ದಾರೆ ಎಂಬ ಅನುಮಾನ. ಅದನ್ನು ಕಂಡುಹಿಡಿಯಲು ಅವಳು ಮಾಡೋ ಸಾಹಸ.

ಅಮ್ಮ ಏನಾದರು ಅನ್ನುವಾಗ ಅವರನ್ನು ಎಲ್ಲಿಂದಲೋ ಮತ್ತೆ ಕರೆತರಲಾಗುತ್ತದೆ. ಮ್ಯಾನುವಲ್ ಅಕ್ಕ ಕೂಡ ನ್ಯೂಝಿಲೆಂಡ್‌ನಿಂದ ಬರುತ್ತಾಳೆ. ಅಕ್ಕ, ತಮ್ಮ ಇಬ್ಬರೂ ಆಸ್ತಿ ಮಾರಾಟದ ಕುರಿತು ಮಾತನಾಡುತ್ತಾರೆ. ಮ್ಯಾನುವಲ್ ಜೊತೆ ಅವನ ಇಬ್ಬರು ಸಂಬಂಧಿಕರೂ ಇರುತ್ತಾರೆ ಯಾವಾಗಲೂ. ಬಹುಶಃ ಆಸ್ತಿ ವಿಚಾರವಾಗಿ ಏನೋ ಮಸಲತ್ತು ನಡೆದಿರಬಹುದು ಅನಿಸುತ್ತೆ. ಈ ಮ್ಯಾನುವಲ್ ಮಾನಸಿಕ ಅಸ್ವಸ್ಥನಾ ಅನಿಸುತ್ತೆ. ಯಾಕೆ ತಾಯಿಯನ್ನೇ ಹೀಗೆ ಆಡಿಸ್ತಿದಾನೆ ಅನ್ಸುತ್ತೆ. ಆದರೆ ಅವನ ಹೆಜ್ಜೆಗಳನ್ನು ಬಿಡದೇ ಹಿಂಬಾಲಿಸೋ ಲಾಜಿಕ್ ಅಪ್ಲೈ ಮಾಡ್ತಾ ಹೋಗೋ ಪ್ರಿಯಾಗೆ ಕೊನೆಗೂ ನಿಜ ಗೊತ್ತಾಗುತ್ತೆ. ನಮಗೂ ಗೊತ್ತಾಗುತ್ತದೆ.

ಚಿತ್ರಕಥೆಯಲ್ಲಿ ಎಲ್ಲೂ ಕ್ಲ್ಯೂ ಬಿಡದೇ ನಮ್ಮ ದಿಕ್ಕು ತಪ್ಪಿಸುತ್ತಾರೆ. ಕಡೆಯಲ್ಲಿ ಮಾತ್ರ ಅಚ್ಚರಿ! ಸಸ್ಪೆನ್ಸ್ ಥ್ರಿಲ್ಲರ್‌ಗಳು ಯಾವಾಗಲೂ ಚೆನ್ನಾಗಿರುತ್ತವೆ. ಆದರೆ ಅದಕ್ಕೆ ಕೊಟ್ಟಿರುವ ದೇಸೀ ಆವರಣ ಮತ್ತು ಕೊಲೆಯ ಕಾರಣ ಸಿನಿಮಾವನ್ನು ಭಿನ್ನವಾಗಿಸುತ್ತದೆ. ನಸ್ರಿಯಾ ನಸೀಮ್, ಬೇಸಿಲ್ ಜೋಸೆಫ್ ನಟನೆ ಪಾತ್ರಗಳಿಗೆ ಜೀವ ತುಂಬಿದೆ. ತಾಯಿಯ ಪಾತ್ರ ಅಮಾಯಕತೆ ಮತ್ತು ದರ್ಪಗಳನ್ನು ಒಟ್ಟಿಗೇ ಇಟ್ಟುಕೊಂಡಿದೆ. ನೋಡಿಸಿಕೊಂಡು ಹೋಗುತ್ತದೆ.
‘ಸೂಕ್ಷ್ಮದರ್ಶಿನಿ’ ಅನ್ನೋ ಹೆಸರೂ ಚೆನ್ನಾಗಿದೆ. DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ ಈ ಮಲಯಾಳಂ ಸಿನಿಮಾ.

LEAVE A REPLY

Connect with

Please enter your comment!
Please enter your name here