69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾದಾಗಿನಿಂದ ಬಿರುಸಿನ ಚರ್ಚೆ ಶುರುವಾಗಿದೆ. ಪ್ರಶಸ್ತಿಗೆ ಅರ್ಹವಾಗಿದ್ದ ‘ಜೈ ಭೀಮ್‌’, ‘ಕರ್ಣನ್‌’, ‘ಸರ್ಪಟ್ಟ ಪರಂಬರೈ’ ಚಿತ್ರಗಳನ್ನು ಕಡೆಗಣಿಸಲಾಗಿದೆ ಎಂದು ತಮಿಳು ಚಿತ್ರರಂಗದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಪಟ್ಟಿಯಲಿರುವ ‘ಪುಷ್ಪ’, ‘ದಿ ಕಾಶ್ಮೀರ್‌ ಫೈಲ್ಸ್‌’, ‘ಮಿಮಿ’ ಸಿನಿಮಾಗಳಿಗೆ ಆಕ್ಷೇಪ ವ್ಯಕ್ತವಾಗಿದೆ.

ಮೊನ್ನೆ ಸಂಜೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆ ಆದಾಗಿನಿಂದ ವಿವಾದಗಳೂ ಶುರುವಾಗಿವೆ. ತಮಿಳು ಸಿನಿಮಾ ಪ್ರೇಕ್ಷಕರು ಪ್ರಶಸ್ತಿಗೆ ಪರಿಗಣಿಸಬೇಕಿದ್ದ ‘ಜೈ ಭೀಮ್‌’, ‘ಕರ್ಣನ್‌’, ‘ಸರ್ಪಟ್ಟ ಪರಂಬರೈ’ ಚಿತ್ರಗಳನ್ನು ಕಡೆಗಣಿಸಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ Hashtags ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿನ ನೆಗೆಟೀವ್‌ ಶೇಡ್‌, ರಕ್ತ – ಕೊಲೆಪಾತ ನಡೆಸುವ ಅಲ್ಲು ಅರ್ಜುನ್‌ ಪಾತ್ರವನ್ನು ರಾಷ್ಟ್ರಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತೂ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಇನ್ನು ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾಗೆ ರಾಷ್ಟ್ರೀಯ ಭಾವೈಕ್ಯತೆ ನೀಡಿರುವ ಬಗ್ಗೆ ಸಿನಿಮಾರಂಗದ ವಲಯದಲ್ಲೇ ಅಕ್ಷೇಪ ವ್ಯಕ್ತವಾಗಿದೆ. ಅತ್ಯುತ್ತಮ ಪೋಷಕ ನಟ (ಪಂಕಜ್‌ ತ್ರಿಪಾಠಿ) ವಿಭಾಗದಲ್ಲಿ ರಿಮೇಕ್‌ ಸಿನಿಮಾ ‘ಮಿಮಿ’ ಪರಿಗಣಿಸಿರುವ ಬಗ್ಗೆಯೂ ಪ್ರಶ್ನೆಗಳು ಕೇಳಿಬರುತ್ತಿವೆ.

2021ನೇ ಸಾಲಿನ ಪ್ರಶಸ್ತಿ (69ನೇ ಚಲನಚಿತ್ರ ಪ್ರಶಸ್ತಿ) ಪಟ್ಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳೇ ಹೆಚ್ಚು ಇವೆ. ಈ ನಿಟ್ಟಿನಲ್ಲಿ ಇಲ್ಲಿನ ಸಿನಿಮಾಗಳನ್ನು ಎಲ್ಲೆಡೆ ತಲುಪಿಸುವಲ್ಲಿ streaming platformಗಳು ಬಹುಮುಖ್ಯ ಪಾತ್ರ ವಹಿಸಿವೆ. ಆದರೂ ತಮಳು ಸಿನಿಮಾ ‘ಕರ್ಣನ್‌’, ಮಲಯಾಳಂನ ‘ಜೋಜಿ’ ಮತ್ತು ‘ಮಲಿಕ್‌’ ಚಿತ್ರಗಳನ್ನು ಪ್ರಶಸ್ತಿಗಳಿಗೆ ಪರಿಗಣಿಸಬೇಕಿತ್ತು ಎಂದು ಸಿನಿಪ್ರಿಯರು ಹೇಳುತ್ತಿದ್ದಾರೆ. ‘ನಾಯಟ್ಟು’ ಮಲಯಾಳಂ ಸಿನಿಮಾಗೆ ಅತ್ಯುತ್ತಮ Original screenplay ಪ್ರಶಸ್ತಿ ಸಿಕ್ಕಿದ್ದರೂ ಚಿತ್ರದಲ್ಲಿ ನಟಿಸಿದ್ದ ಕುಂಚಕೊ ಬೊಬಾನ್‌, ಜೋಜು ಜಾರ್ಜ್‌, ನಿಮಿಷಾ ಸಜಯನ್‌ ಅವರಿಗೆ ಗೌರವ ಸಿಕ್ಕಿಲ್ಲ, ನಿಮಷಾ ಸಜಯನ್‌ ಅವರ ಎಲ್ಲರಿಗೂ ಮೆಚ್ಚುಗೆಯಾದ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’ ಸಿನಿಮಾಗೂ ಮನ್ನಣೆ ಸಿಕ್ಕಿಲ್ಲ ಎನ್ನುವುದು ಮಲಯಾಳಂ ಸಿನಿಮಾ ಪ್ರೇಮಿಗಳ ಕೂಗು.

ವಿವಾದಿತ ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾಗೆ ರಾಷ್ಟ್ರೀಯ ಭಾವೈಕ್ಯತೆ ವಿಭಾಗದಲ್ಲಿ ಪ್ರಶಸ್ತಿ ನೀಡಿರುವುದು ಚರ್ಚೆಗೀಡಾಗಿದೆ. ಸಿನಿಮಾರಂಗದ ಪ್ರಮುಖರು ಸೇರಿದಂತೆ ಸಾಮಾನ್ಯ ಸಿನಿಮಾ ಪ್ರೇಕ್ಷಕರು ಕೂಡ ಈ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ಛಾಯಾಗ್ರಾಹಕ ಪಿ ಸಿ ಶ್ರೀರಾಂ ರಾಷ್ಟ್ರಪ್ರಶಸ್ತಿ ಪಡೆದ ಎಲ್ಲರನ್ನೂ ಅಭಿನಂದಿಸುತ್ತಲೇ, ‘ದಶಕದ ಕೆಟ್ಟ ಸಿನಿಮಾ ದಿ ಕಾಶ್ಮೀರ್‌ ಫೈಲ್ಸ್‌’ ಎಂದು ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ ಪಡೆದ ಚಿತ್ರವನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ‘ಜೈಭೀಮ್‌’ ಸಿನಿಮಾವನ್ನು ಪರಿಗಣಿಸದ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

ರಾಜ್ಯಪ್ರಶಸ್ತಿ ಪುರಸ್ಕೃತ ಕನ್ನಡ ರಂಗಭೂಮಿ ಮತ್ತು ಸಿನಿಮಾ ನಟಿ ಅಕ್ಷತಾ ಪಾಂಡವಪುರ ಅವರು, ಅತ್ಯುತ್ತಮ ನಟ ಆಯ್ಕೆಯನ್ನು ಬಲವಾಗಿ ಖಂಡಿಸುತ್ತಾರೆ. ‘ಪುಷ್ಪ ಸಿನಿಮಾದ ನಾಯಕ ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾನೆ? ಕೊಲೆ, ರಕ್ತಪಾತ ನಡೆಸುವ, ಕಾಡನ್ನು ಕಡಿದು ಸಂಭ್ರಮಿಸುವ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಕೊಡುವುದು ಎಷ್ಟು ಸರಿ? ಆಯ್ಕೆ ಸಮಿತಿಯ ಮಾನದಂಡಗಳೇನು? ಆಯ್ಕೆಯಲ್ಲಿ ನೈತಿಕ ಮಾದರಿ ಅನುಸರಿಸದಿದ್ದರೆ ಇದೇ ಸರಿ ಆದಂತಾಗುತ್ತದೆ’ ಎನ್ನುವ ಅವರು ಇತ್ತೀಚೆಗೆ ಜನಪ್ರಿಯ ಸಿನಿಮಾಗಳ ಪಾತ್ರಗಳನ್ನೇ ರಾಷ್ಟ್ರಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ‘ಪುಷ್ಪ, ದಿ ಕಾಶ್ಮೀರ್‌ ಫೈಲ್ಸ್‌’ನಂಥಹ ಸಿನಿಮಾಗಳನ್ನು ಆಯ್ಕೆ ಮಾಡುವುದು, ‘ಜೈಭೀಮ್‌ನಂತಹ ಚಿತ್ರವನ್ನು ಗಣನೆಗೆ ತೆಗೆದುಕೊಳ್ಳದಿರುವುದು… ಇವೆಲ್ಲಾ ಆಯ್ಕೆ ಸಮಿತಿಯವರ ಮನೋಭಾವವನ್ನು ರಿಫ್ಲೆಕ್ಟ್‌ ಮಾಡುತ್ತದೆ’ ಎನ್ನುವುದು ಹಿರಿಯ ಸಿನಿಮಾ ವಿಶ್ಲೇಷಕ, ಲೇಖಕ ಡಾ ಕೆ ಪುಟ್ಟಸ್ವಾಮಿ ಅವರ ಅಭಿಪ್ರಾಯ. ‘ಯಾರನ್ನೋ ಮೆಚ್ಚಿಸಲು ಪ್ರಶಸ್ತಿಗಳನ್ನು ಆಯ್ಕೆ ಮಾಡಿದಂತಾಗುತ್ತದೆ. ಪುಷ್ಪದಂತಹ ಸಿನಿಮಾ ಯಾವ ಮಾದರಿ? ಇಂಥದ್ದೊಂದು ಪಾತ್ರಕ್ಕೆ ಮನ್ನಣೆ ಸಿಕ್ಕಿದರೆ ಯುವಜನತೆಗೆ ಯಾವ ರೀತಿ ಸಂದೇಶ ಹೋಗುತ್ತದೆ? ಇದು ಖಂಡಿತಾ ಉತ್ತಮ ಮಾದರಿಯಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

LEAVE A REPLY

Connect with

Please enter your comment!
Please enter your name here