ಇದೊಂದು ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಇರುವ ಸೈ-ಫೈ ಥ್ರಿಲ್ಲರ್ ಕತೆ. ಯುವ ನಿರ್ದೇಶಕರೊಬ್ಬರು ತಮ್ಮ ಮೊದಲ ಸಿನಿಮಾದಲ್ಲೇ ವಿಭಿನ್ನ ಕಥೆಯೊಂದನ್ನು ಹೇಳಲು ಪ್ರಯತ್ನಿಸಿದರೆ ಅದೇ ಅವರ ಧೈರ್ಯಕ್ಕೆ, ಪ್ರಯತ್ನಕ್ಕೆ ಸಿಗುವ ಮೊದಲ ಗೆಲುವು. ಇಲ್ಲೂ ಅಷ್ಟೇ, ನಿರ್ದೇಶಕರಾಗಿ ಶ್ರೀನಿಧಿ ಬೆಂಗಳೂರು ಅವರು ವಿಭಿನ್ನ ಕಥೆಯೊಂದನ್ನು ತಮ್ಮ ಮೊದಲ ಸಿನಿಮಾಗೆ ಆಯ್ದುಕೊಂಡು ಗೆದ್ದಿದ್ದಾರೆ.

ಸಿನಿಮಾದ ನಿರ್ದೇಶಕ ಅದ್ಯಾವುದೇ ಹಿನ್ನೆಲೆಯಿಂದ ಬಂದವನಾಗಿರಲಿ. ಆತ ಕಥೆ ಬರೆಯುವಾಗ ಅವನಿಗೆ ಗೊತ್ತಿಲ್ಲದಂತೆಯೇ ಅದರ ಹಿನ್ನೆಲೆಯಲ್ಲಿ ಅವನ ಕಥೆಯೊಳಗೆ ಅವೆಲ್ಲ ಬಂದುಬಿಡುತ್ತವೆ. ಜೊತೆಗೆ ಅವು ವಾಸ್ತವಕ್ಕೆ ಹತ್ತಿರವಾಗಿರುವುದರಿಂದ, ನಿರ್ದೇಶಕನೇ ತನ್ನ ಜೀವನದೊಳಗೆ ಅವುಗಳನ್ನೆಲ್ಲ ಅನುಭವಿಸಿರುವುದರಿಂದ ಉಳಿದವುಗಳಿಗಿಂತ ಹೆಚ್ಚು ನೈಜವಾಗಿ ಬಿಂಬಿಸಲ್ಪಡುತ್ತವೆ. ಅದಕ್ಕೊಂದು ಉತ್ತಮ ಉದಾಹರಣೆ ‘ಬ್ಲಿಂಕ್’. ಈ ಸಿನಿಮಾವನ್ನು ನೋಡುವಾಗಲೇ ಹೇಳಬಹುದು. ಇದರ ನಿರ್ದೇಶಕ ಶ್ರೀನಿಧಿ ಬೆಂಗಳೂರು ರಂಗಭೂಮಿ ಹಿನ್ನೆಲೆಯಿಂದ ಬಂದವರು ಎಂದು. ಸಿನಿಮಾದೊಳಗೊಂದು ನಾಟಕ, ರಂಗತಾಲೀಮು, ನಾಟಕದ ಕತೆಗೆ ಸಿನಿಮಾ ಕತೆಯ ಲಿಂಕು… ಅದೇ ‘ಬ್ಲಿಂಕು’!

ಯುವ ನಿರ್ದೇಶಕರೊಬ್ಬರು ತಮ್ಮ ಮೊದಲ ಸಿನಿಮಾದಲ್ಲೇ ವಿಭಿನ್ನ ಕಥೆಯೊಂದನ್ನು ಹೇಳಲು ಪ್ರಯತ್ನಿಸಿದರೆ ಅದೇ ಅವರ ಧೈರ್ಯಕ್ಕೆ, ಪ್ರಯತ್ನಕ್ಕೆ ಸಿಗುವ ಮೊದಲ ಗೆಲುವು ಅಂತ. ಇಲ್ಲೂ ಅಷ್ಟೇ, ನಿರ್ದೇಶಕರಾಗಿ ಶ್ರೀನಿಧಿ ಬೆಂಗಳೂರು ಅವರು ವಿಭಿನ್ನ ಕಥೆಯೊಂದನ್ನು ತಮ್ಮ ಮೊದಲ ಸಿನಿಮಾಗೆ ಆಯ್ದುಕೊಂಡು ಗೆದ್ದಿದ್ದಾರೆ. ಏಕೆಂದರೆ ಇದೊಂದು ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಇರುವ ಸೈ-ಫೈ ಥ್ರಿಲ್ಲರ್ ಕಥೆ. ಟೈಮ್ ಟ್ರಾವೆಲ್ ಬಗ್ಗೆ ಹೇಳಬೇಕೆಂದರೆ ಕತೆ ಆಸಕ್ತಿದಾಯಕವಾಗಿರಬೇಕು, ಟೈಮ್ ಟ್ರಾವೆಲ್ ಅನ್ನು ನಿರೂಪಿಸಲು ಬೇಕಾದ ಸಿಜಿಐ, ಸಂಕಲನದ ಮಾದರಿ, ಸೂಕ್ತ ಸಂಗೀತ ಎಲ್ಲದರ ಬಗ್ಗೆ ಗೊತ್ತಿರಬೇಕು. ಇಲ್ಲದೆ ಹೋದರೆ ಸಿನಿಮಾ ಹಾಸ್ಯಾಸ್ಪದವಾಗಿ ಕಾಣಬಹುದು. ಆದರೆ ಇಲ್ಲಿ ಹಾಗಾಗಿಲ್ಲ. ಚಿತ್ರಕಥೆಯನ್ನು ಅಚ್ಚುಕಟ್ಟಾಗಿ ಹೆಣೆಯಲು ಹಾಕಿರುವ ಶ್ರಮ ಎದ್ದು ಕಾಣುತ್ತದೆ.

ಐಟಿ ಹಿನ್ನೆಲೆಯ ಚಿತ್ರದ ನಿರ್ಮಾಪಕ ರವಿಚಂದ್ರನ್ ಅವರು ಮೊದಲ ಸಿನಿಮಾವನ್ನೇ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಇರುವ ಬಜೆಟ್ಟಿನಲ್ಲೇ ಈ ಥರದ ಕಥೆಯನ್ನು ಹೇಳಲು ಅವರ ನಿರ್ದೇಶಕರು ಮಾಡಿರುವ ಪ್ರಯತ್ನವನ್ನು ಶ್ಲಾಘಿಸಬೇಕು. ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ, ಮಂದಾರ, ವಜ್ರಧೀರ್ ಜೈನ್, ಭರತ್ ತುಮಕೂರು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಜೆ ಆಚಾರ್ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ ನೀಡಿದ್ದಾರೆ. ಸಂಕಲನ ಸಂಜೀವ್ ಜಾಗೀರ್‌ದಾರ್ ಅವರದು. ಚಿತ್ರದಲ್ಲಿ ಬರುವ ಪಿ ಲಂಕೇಶ್ ಧ್ವನಿ, ಈಡಿಪಸ್ ನಾಟಕ, ಜನಪದ ಗೀತೆಗಳು, ಮಂತ್ರ ಮಾಂಗಲ್ಯ ಹೀಗೆ ಅನೇಕ ವಿಷಯಗಳನ್ನು ಸಾಂದರ್ಭಿಕವಾಗಿಯೇ ಪ್ರಸ್ತುತಪಡಿಸಿರುವುದು ಅಭಿನಂದನಾರ್ಹ.

ಮೊದಲರ್ಧ ಪ್ರಶ್ನೆಗಳನ್ನು ಹುಟ್ಟಿಹಾಕಿದರೂ ಬೇಗನೇ ಮುಗಿದು ಹೋದಂತೆ ಭಾಸವಾಗುತ್ತದೆ. ದ್ವಿತಿಯಾರ್ಧದಲ್ಲಿ ಕಥೆಯ ಗೋಜಲನ್ನು ಬಿಡಿಸುವ ಮಧ್ಯದಲ್ಲೂ ಇನ್ನೇನಾದರೂ ಇರಬಹುದಿತ್ತು. ಅಂದರೆ ಈ ಟೈಮ್ ಲೂಪ್ ಕಥೆಯನ್ನು ಹೇಳುವಾಗಲೂ ಇನ್ನಷ್ಟು ಮನರಂಜನಾತ್ಮಕವಾಗಿ ಕಟ್ಟಿಕೊಡಬಹುದಿತ್ತು ಅನ್ನಿಸಿತು. ಸಂಗೀತ, ಕತೆಗೆ ತಕ್ಕಂತಿದೆ. ಆದರೆ ಮಧ್ಯೆ ಮಧ್ಯೆ ಪ್ರೇಕ್ಷಕ ಸುಧಾರಿಸಿಕೊಳ್ಳಲು ಅನುಕೂಲವಾಗುವಂತೆ ಅಲ್ಲಲ್ಲಿ loudness ಕಡಿಮೆ ಮಾಡಿಕೊಳ್ಳಬಹುದಿತ್ತು. ಏಕೆಂದರೆ ಒಮ್ಮೆ ಶುರುವಾಗುವ ಆ ಬಗೆಯ ಟ್ರೀಟ್‍ಮೆಂಟ್ ಎಲ್ಲೂ ಬಿಡುವು ಕೊಡುತ್ತಿದೆ ಅನ್ನಿಸುವುದೇ ಇಲ್ಲ. ಕತೆಯನ್ನು ಇನ್ನಷ್ಟು ಮನರಂಜನಾತ್ಮಕವನ್ನಾಗಿಸುವುದಕ್ಕೂ ಇದಕ್ಕೂ ಒಂದಕ್ಕೊಂದು ಲಿಂಕ್ ಇದೆ. ಅದಾಗಿದ್ದರೆ ಇದು ಇನ್ನೂ ಅದ್ಭುತ ಅನ್ನಿಸಿಕೊಳ್ಳುತ್ತಿತ್ತು. ಮತ್ತು ಮತ್ತೆ ನೋಡಿಸಿಕೊಳ್ಳುವ ಸಿನಿಮಾ ಅನ್ನಿಸುತ್ತಿತ್ತು ಕೂಡ. ಇದೇ ಕಾರಣಕ್ಕೆ ಕಳೆದ ವರ್ಷ ತಮಿಳಿನಲ್ಲಿ ಬಿಡುಗಡೆಗೊಂಡ ‘ಮಾನಾಡು’ ಸಿನಿಮಾ ಕೂಡ ನೆನಪಿಗೆ ಬರುತ್ತಿತ್ತು. ಕನ್ನಡದ ಮಟ್ಟಿಗೆ ಇದು ನಿಜಕ್ಕೂ ಹೊಸಬರಿಂದ ಮಾಡಲ್ಪಟ್ಟ, ವಿಭಿನ್ನ Genreನ, ವಿಭಿನ್ನ ಪ್ರಯತ್ನ.

LEAVE A REPLY

Connect with

Please enter your comment!
Please enter your name here