ಇತಿಹಾಸವನ್ನು ವ್ಯಕ್ತಿಯ ಮೂಲಕ ನೋಡದೆ ವ್ಯಕ್ತಿ ಮತ್ತು ಘಟನೆಗಳ ಕೊಲಾಜ್ ಮೂಲಕ ಗ್ರಹಿಸಿ ನಿರ್ದೇಶಕ ಶೂಜಿತ್ ನಮಗೆ ದೊಡ್ಡ ಉಪಕಾರ ಮಾಡಿದ್ದಾನೆ. ವ್ಯಕ್ತಿಯನ್ನು iconicಗೊಳಿಸುವ, ದೇಶಪ್ರೇಮ ಭಾವುಕವಾಗುವ ದೃಶ್ಯಗಳಲ್ಲಿ ‘ಬ್ರೆಕ್ಟೇರಿಯನ್’ ತಂತ್ರ ಹೆಣೆದ ಶೂಜಿತ್ ಆ ಮೂಲಕ ಇಡೀ ಸಿನಿಮಾವನ್ನು ಎಲ್ಲರೂ ಒಂದಾಗಿ ಬಾಳುವ ದಡಕ್ಕೆ ತಂದಿದ್ದಾನೆ – ‘ಸರ್ದಾರ್ ಉದಾಮ್’ ಸಿನಿಮಾ ಕುರಿತ ಲೇಖಕ ಶ್ರೀಪಾದ್ ಭಟ್ ಅವರ ಬರಹ.
(ಬರಹ: ಶ್ರೀಪಾದ್ ಭಟ್)
‘ಮದ್ರಾಸ್ ಕೆಫೆ’ಯಲ್ಲಿ ಸೋತಿದ್ದ ನಿರ್ದೇಶಕ ಶೂಜಿತ್ ಸರ್ಕಾರ್ ‘ಸರ್ದಾರ್ ಉದಮ್’ನಲ್ಲಿ ಗೆದ್ದಿದ್ದಾನೆ. ‘ವಿಕಿ ಡೋನರ್’, ‘ಪಿಕು’ನಂತಹ ಪಕ್ಕಾ ಮಧ್ಯಮವರ್ಗದ, ನಗರ ಪ್ರಜ್ಞೆಯ ಸಿನಿಮಾಗಳಲ್ಲಿ ತೇಲುತ್ತಿದ್ದ ಶೂಜಿತ್ ಇಂತಹ ರಾಜಕೀಯ ಸಿನಿಮಾ ಮಾಡುತ್ತಾನೆ ಎನ್ನುವ ನಿರೀಕ್ಷೆ ಇರಲಿಲ್ಲ. ಮತ್ತು ‘ಉರಿ’ ಸಿನಿಮಾದ ಮೂಲಕ ಎಲ್ಲೋ ಒಂದೆಡೆ ಬಲಪಂಥೀಯನಂತೆ ವರ್ತಿಸುತ್ತಿದ್ದ ನಟ ವಿಕಿ ಕೌಶಲ್ ಇದರ ಪ್ರೊಟಗಾನಿಸ್ಟ್ ಆಗಿರುವುದೂ ಸಹ ನನಗೆ ಈ ಸಿನಿಮಾ ಅಂತಹ ಉತ್ಸಾಹ ಮೂಡಿಸಿರಲಿಲ್ಲ. ಆದರೆ ‘ಉದಮ್’ ಸಿನಿಮಾ ಚೆನ್ನಾಗಿದೆ.
ಚಿತ್ರಕತೆ ಬರೆದ ರಿತೇಶ್ ಶಾ ಮತ್ತು ಶುಬೇಂದು ಭಟ್ಟಾಚಾರ್ಯ ಈ ಸಿನಿಮಾದ ಗೆಲುವಿನ ಮುಖ್ಯ ರೂವಾರಿಗಳು. ಚಾರಿತ್ರಿಕ ಸಿನಿಮಾಗಳಿಗೆ ಒಂದು ಫಾರ್ಮ್, ನಿರಂತರ ಹರಿವು, ಕತೆಯ ಲಹರಿ ಮತ್ತು ಬಿಗಿಯಾದ ಬಂಧವನ್ನು ಕಟ್ಟಿಕೊಡಲು non – linear ಚಿತ್ರಕತೆ ಅಗತ್ಯ. ‘ಉದಮ್’ ನ ಆ non – linear ಚಿತ್ರಕತೆ ಇಡೀ ಸಿನಿಮಾವನ್ನು ಎಲ್ಲಿಯೂ ಜಾಳು ಜಾಳಾಗದಂತೆ ಪಾರು ಮಾಡಿದೆ. ಮತ್ತು ಈ ಸಿನಿಮಾದ ಬಹುಮುಖ್ಯ ಘಟ್ಟ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದೃಶ್ಯಕ್ಕಾಗಿ ಪ್ರೇಕ್ಷಕ ಕಾತರಿಸುತ್ತಿದ್ದಾಗ ಅದನ್ನು ಕ್ಲೈಮ್ಯಾಕ್ಸ್‌ನಲ್ಲಿ ತಂದು ದೀರ್ಘವಾದ ಶಾಟ್‌ನ ಮೂಲಕ ಭಾವುಕತೆಯನ್ನು (ಚಾರಿತ್ರಿಕ ಸಿನಿಮಾಗಳಿಗೆ ಇದರಿಂದ ಮುಕ್ತಿಯಿಲ್ಲ) ತುಂಬಿರುವುದು ಸಹ ಚಿತ್ರಕತೆಯ ಯಶಸ್ಸು.
ಎರಡೂವರೆ ಗಂಟೆ ಗಾಢವಾದ ವಿಷಾದ ಮತ್ತು ನಿರ್ವಾತವನ್ನು ಮೀರುವ ತುಡಿತವನ್ನು ಉಂಟುಮಾಡುವ ಹಿನ್ನೆಲೆ ಸಂಗೀತ ಇಲ್ಲಿನ ಮುಖ್ಯ ಅಂಶ ಮತ್ತು ಬೆನ್ನೆಲುಬು. ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು, ಕ್ರಾಂತಿಕಾರಿಗಳನ್ನು ಮನುಷ್ಯರಂತೆ ನಿರೂಪಿಸದೆ ಅತ್ಯುನ್ನತ ಹೀರೋ ಎನ್ನುವ ವೈಭವೀಕರಣದ ಮೂಲಕ ಒಂದು ಬಲಪಂಥೀಯ ಸಂಕೇತವನ್ನು ನಿರ್ಮಿಸಿ ಬಿಡುವ ಅಪಾಯದಿಂದ ‘ಉದಮ್’ ಸಿನಿಮಾ ಪಾರಾಗಿದೆ. ಇದು ಶೂಜಿತ್‌ನ ಗೆಲುವು ಮತ್ತು ಆ ಮೂಲಕ ಪ್ರಜಾಪ್ರಬುತ್ವದ ಗೆಲುವು. ತೋಳ್ಬಲದ ದೇಶಪ್ರೇಮದ ಮೂಲಕ ಹೀರೋನನ್ನು ವಿಜೃಂಬಿಸಿ ಮಧ್ಯಮವರ್ಗದ ಆ ದ್ವೇಷದ ತೃಶೆಯನ್ನು ಹಿಂಗಿಸುವ ನಿರೂಪಣೆಯನ್ನು ಶೂಜಿತ್ ತಿರಸ್ಕರಿಸಿ ಉದಮ್ ಎನ್ನುವ ವ್ಯಕ್ತಿ ಮತ್ತು ಆ ಕಾಲಘಟ್ಟದ ಯಥಾವತ್ತಾದ ನಿರ್ಲಿಪ್ತ ನಿರೂಪಣೆ ಈ ಸಿನಿಮಾವು ಮತ್ತೊಂದು ಎದೆತಟ್ಚಿಕೊಳ್ಳುವ ಹುಸಿ ದೇಶಪ್ರೇಮಿಗಳ ಸಿನಿಮಾವಾಗುವುದರಿಂದ ಬಚಾವ್ ಮಾಡಿದೆ. ಇಂದಿನ ಫ್ಯಾಸಿಸಂ ಸಂದರ್ಭದಲ್ಲಿ ಜನಪರ ಸಿನಿಮಾದ ನಿಜ ಮಾದರಿಯನ್ನು ತೋರಿಸಿಕೊಟ್ಟಿದೆ.
ಕ್ರಾಂತಿಕಾರಿ ಮತ್ತು ಅವನ /ಅವಳ ಸಿದ್ದಾಂತ, ಅವರ ಸಂಗಾತಿಗಳು, ಅವರ ಖಾಸಗಿ ಬದುಕು ಎಲ್ಲವನ್ನೂ ಒಂದು ಸ್ಥಿತಪ್ರಜ್ಞತೆಯಲ್ಲಿ ನಿರೂಪಿತವಾಗಿದೆ. ಭಾವುಕತೆಯೂ ಹುಸಿಯಾಗದಂತೆ ಮತ್ತು ಮುಖ್ಯವಾಗಿ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ತಾತ್ವಿಕತೆಗೆ ಬದ್ದರಾಗಿ non – linear ಚಿತ್ರಕತೆ ಬರೆದ ಶಾ ಮತ್ತು ಶುಬೇಂದು ಇಬ್ಬರಿಗೆ ಶರಣು. They done the job. ಮತ್ತು ಮುಖ್ಯವಾಗಿ ಇತಿಹಾಸದ ಗ್ರಹಿಕೆ, ನಿರ್ವಹಣೆ ಎರಡೂ ಹಳಿ ತಪ್ಪದಿರುವುದು ಈ ಸಿನಿಮಾದ ಶಕ್ತಿ. ರೇಮಂಡ್ ವಿಲಿಯಮ್ ‘ವಿಚಾರಗಳಿಗೆ ಇತಿಹಾಸವಿದೆ ಎನ್ನುವುದು ಅಷ್ಟು ಸತ್ಯವಲ್ಲ. ಸಮಾಜಗಳಿಗೆ ಇತಿಹಾಸವಿದೆ. ಆಗ ವಿರುದ್ಧವಾಗಿರುವ ವಿಚಾರಗಳು ಕೊನೆಗೆ ಒಂದೇ ಸಾಮಾಜಿಕ ಪ್ರಕ್ರಿಯೆಯ ಬಾಗವಾಗುತ್ತವೆ’ ಎಂದು ಹೇಳುತ್ತಾನೆ. ‘ಉದಮ್’ ಸಿನಿಮಾದ ವಿಷಯದಲ್ಲಿಯೂ ಇದು ನಿಜವಾಗಿದೆ ಮತ್ತು ಇದು ಸಮಾಧಾನಕರ ಅಂಶ.
ಕ್ರಾಂತಿ ಎಂಬುದು ಅಂಹಿಸೆಯೂ ಅಥವಾ ಹಿಂಸೆಯೋ? ವೈರುದ್ಯಗಳಿವೆ. ಆದರೆ ಆ ವಿಚಾರಗಳು ಎಂದಿಗೂ ಇತಿಹಾಸವಲ್ಲ. ಭಗತ್ ಸಿಂಗ್, ಉದಮ್, ಗಾಂಧಿ, ನೆಹರೂ ಮುಂತಾದವರ ಆ ಸ್ವಾತಂತ್ರ್ಯ ಹೋರಾಟದ ಎಲ್ಲಾ ಪ್ರಕ್ರಿಯೆಗಳು ಮಾತ್ರ ಇತಿಹಾಸ. ಅವರ ವಿಚಾರಗಳಲ್ಲ. ಆದರೆ ಬಲಪಂಥೀಯ ಮತಾಂದರು ವಿಚಾರಗಳನ್ನು ಇತಿಹಾಸ ಎಂದು ಬಿಂಬಿಸುವ ಆ ವಿನಾಶಕಾರಿ ಧೋರಣೆಯನ್ನು ತಬ್ಬಿಕೊಂಡಿದ್ದ ಬಾಲಿವುಡ್ ಸಿನಿಮಾಗಳಿಗಿಂತ ಸಂಪೂರ್ಣವಾಗಿ ಬಿನ್ನವಾಗಿ ನಿಲ್ಲುವ ‘ಸರ್ದಾರ್ ಉದಮ್’ ಈ ಕಾರಣಕ್ಕಾಗಿ ಮಹತ್ವದ ಸಿನಿಮಾ. ಇತಿಹಾಸವನ್ನು ವ್ಯಕ್ತಿಯ ಮೂಲಕ ನೋಡದೆ ವ್ಯಕ್ತಿ ಮತ್ತು ಘಟನೆಗಳ ಕೊಲಾಜ್ ಮೂಲಕ ಗ್ರಹಿಸಿ ಶೂಜಿತ್ ನಮಗೆ ದೊಡ್ಡ ಉಪಕಾರ ಮಾಡಿದ್ದಾನೆ.
ವ್ಯಕ್ತಿಯನ್ನು iconicಗೊಳಿಸುವ, ದೇಶಪ್ರೇಮ ಭಾವುಕವಾಗುವ ದೃಶ್ಯಗಳಲ್ಲಿ ‘ಬ್ರೆಕ್ಟೇರಿಯನ್’ ತಂತ್ರ ಹೆಣೆದ ಶೂಜಿತ್ ಆ ಮೂಲಕ ಇಡೀ ಸಿನಿಮಾವನ್ನು ಎಲ್ಲರೂ ಒಂದಾಗಿ ಬಾಳುವ ದಡಕ್ಕೆ ತಂದಿದ್ದಾನೆ. ಇದೂ ಸಹ ಮುಖ್ಯ. ಉದಾಹರಣೆಗೆ ಸ್ವಾತಂತ್ರ್ಯ ಬಂದ ನಂತರ ನೀನು ಏನು ಮಾಡುತ್ತೀ ಎಂದು ಪ್ರಶ್ನಿಸಿದಾಗ ಭಗತ್ ಸಿಂಗ್ ‘ನಾನು ಮೊದಲು ಚಾರ್ಲಿ ಚಾಪ್ಲಿನ್ ಸಿನಿಮಾ ನೋಡತೀನಿ, ವೈನ್ ಕುಡೀತೀನಿ, ಉಣತೀನಿ, ಮಲಗತೀನಿ’ ಅಂತಾನೆ. ಇದು ಬ್ರೆಕ್ಟೇರಿಯನ್ ತಂತ್ರ. ಒಬ್ಬ ಕ್ರಾಂತಿಕಾರಿ ನಮ್ಮಂತಿದ್ದಾನಲ್ಲ ಎನ್ನುವುದೇ ನಮಗೆ ಹೃದಯಂಗಮವಾಗಿ ತಟ್ಟುತ್ತದೆ. ಈ ಸಿನಿಮಾದಲ್ಲಿ ಇಂತಹ ಹಲವು ಬ್ರೆಕ್ಟೇರಿಯನ್ ದೃಶ್ಯಗಳಿವೆ. ಇತಿಹಾಸವನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸುವಾಗ ಅದರ ಸಂಕೀರ್ಣತೆ, ವೈರುದ್ಯಗಳು, ಮತ್ತು ಸಾಂದರ್ಭಿಕ ಸನ್ನಿವೇಶಗಳನ್ನು ವಸ್ತುನಿಷ್ಠವಾಗಿ ನಿರೂಪಿಸಿರುವ ಶೂಜಿತ್ ಅನೇಕ ಮಿತಿಗಳ ನಡುವೆಯೂ ಗೆದ್ದಿದ್ದಾನೆ. ಮತ್ತು ಬಲಪಂಥೀಯರಿಗೆ ಎದೆ ತಟ್ಟಿಕೊಳ್ಳುವ ಅಥವಾ ದಾಳಿ ಮಾಡುವ ಎರಡೂ ಅವಕಾಶಗಳನ್ನು ಕೊಟ್ಟಿಲ್ಲ. ಇದೇನು ಕಡಿಮೆ ಸಾದನೆಯಲ್ಲ. ಭಾರತವೆಂದರೇನು? ಭಾರತೀಯರೆಂದರೆ ಯಾರು ಎನ್ನುವ ಸಂಕೀರ್ಣತೆ ಎಲ್ಲಿಯೂ ಇತಿಹಾಸವಾಗದಂತೆ ಎಚ್ಚರ ವಹಿಸಿರುವ ಶೂಜಿತ್ ನಿಜಕ್ಕೂ ಅತ್ಯಂತ ಮಹತ್ವದ ಸಿನಿಮಾ ಕೊಟ್ಟಿದ್ದಾನೆ. ಅವನಿಗೆ ಥ್ಯಾಂಕ್ಸ್.
(‘ಸರ್ದಾರ್ ಉದಾಮ್’ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.)