‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಸಿನಿಮಾಗಳ ಮೂಲಕ ನಿರ್ದೇಶಕ ಡಿ.ಸತ್ಯಪ್ರಕಾಶ್ ಗಮನ ಸೆಳೆದಿದ್ದರು. ಇದೀಗ ಅವರ ಮೂರನೇ ಸಿನಿಮಾ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿದ್ಧವಾಗಿದ್ದು, ನೇರವಾಗಿ ಓಟಿಟಿಯಲ್ಲಿ ವೀಕ್ಷಕರಿಗೆ ಸಿಗಲಿದೆ.
ಕನ್ನಡದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಮ್ಯಾನ್ ಆಫ್ ದಿ ಮ್ಯಾಚ್’ ನೇರವಾಗಿ ಓಟಿಟಿಯಲ್ಲಿ ತೆರೆಕಾಣಲಿದೆ. ಈ ತಿಂಗಳ ಕೊನೆಯಲ್ಲಿ ಇಲ್ಲವೇ ನವೆಂಬರ್‌ನಲ್ಲಿ ಅಮೇಝಾನ್ ಫ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ನಿರ್ದೇಶಕ ಡಿ.ಸತ್ಯಪ್ರಕಾಶ್ ಈ ಹಿಂದೆ ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಚಿತ್ರಗಳಲ್ಲಿ ಕಂಟೆಂಟ್ ಮತ್ತು ನಿರೂಪಣೆಯಿಂದ ಗಮನ ಸೆಳೆದಿದ್ದರು. ಹಾಗಾಗಿ ಸಹಜವಾಗಿಯೇ ಅವರ ‘ಮ್ಯಾನ್ ಆಫ್ ದಿ ಮ್ಯಾಚ್’ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆಯಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಮಯೂರ ಪಿಕ್ಚರ್ಸ್ ಮತ್ತು ಸತ್ಯ ಪಿಕ್ಚರ್ಸ್ ನಿರ್ಮಿಸಿರುವ ಚಿತ್ರವಿದು.
“ಕೋವಿಡ್‌ನಿಂದಾಗಿ ಸಿನಿಮಾದ ಚಿತ್ರೀಕರಣ ಸುದೀರ್ಘ ಕಾಲಾವಧಿ ತೆಗೆದುಕೊಂಡಿತು. ಈಗ ನೂರಾರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಥಿಯೇಟರ್ ಲಭ್ಯತೆ ಕಷ್ಟ. ಜೊತೆಗೆ ಜನರು ಹೇಗೆ ಸ್ವೀಕರಿಸುತ್ತಾರೋ ಎನ್ನುವ ಭಯವೂ ಇದೆ. ಹಾಗಾಗಿ ಚಿತ್ರವನ್ನು ಓಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡಲು ಯೋಚಿಸಿದ್ದೇವೆ. ಸ್ಟ್ರೀಮ್ ಆಗುವ ದಿನಾಂಕವನ್ನು ಅವರೇ ನಿಗಧಿಮಾಡಲಿದ್ದಾರೆ” ಎನ್ನುತ್ತಾರೆ ನಿರ್ದೇಶಕ ಸತ್ಯಪ್ರಕಾಶ್. ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗಲಿದೆ. ‘ರಾಮಾ ರಾಮಾ ರೇ’ ನಂತರ ಈ ಚಿತ್ರದಲ್ಲಿ ನಟರಾಜ್ ಅವರು ತಮ್ಮ ಗೆಳೆಯ ಸತ್ಯಪ್ರಕಾಶ್ ಅವರೊಂದಿಗೆ ಮತ್ತೆ ಜೊತೆಯಾಗಿದ್ದಾರೆ. “ಇಲ್ಲಿ ಮನುಷ್ಯ ಸಂಬಂಧಗಳ ಕುರಿತಾದ ಕತೆ. ಸದ್ಯ ಈಗಿನ ಸೋಷಿಯಲ್ ಲೈಫ್‌ನಲ್ಲಿ ಯಾವುದೂ ಖಾಸಗಿಯಾಗಿ ಉಳಿದಿಲ್ಲ. ಈ ಎಳೆಯೊಂದಿಗೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ನಾನು ಸಿನಿಮಾ ಡೈರೆಕ್ಟರ್ ಪಾತ್ರ ಮಾಡಿದ್ದೇನೆ” ಎನ್ನುತ್ತಾರೆ ಚಿತ್ರದ ಪ್ರಮುಖ ಪಾತ್ರಧಾರಿ ನಟರಾಜ್.
ಧರ್ಮಣ್ಣ, ರಂಗಭೂಮಿ ಕಲಾವಿದರಾದ ಅಥರ್ವ ಮತ್ತು ಬೃಂದಾ ವಿಕ್ರಂ, ಮಯೂರಿ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಲ್ಲದೆ ಸುಮಾರು ಐವತ್ತಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಬಹುಪಾಲು ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ನಿರ್ದೇಶಕ ಯೋಗರಾಜ್ ಭಟ್ ಮತ್ತು ಚಿತ್ರಸಾಹಿತಿ ವಿ.ಮನೋಹರ್ ಒಂದೊಂದು ಗೀತೆ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.