ನಟ ಕಿಚ್ಚ ಸುದೀಪ್ ತಮ್ಮ ಸಹೋದ್ಯೋಗಿ, ಸ್ನೇಹಿತ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ಣ ಟ್ವೀಟ್ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸುದೀಪ್ ಇಂಗ್ಲೀಷ್ ಟ್ವೀಟ್ನ ಪೂರ್ಣ ಕನ್ನಡಾನುವಾದ ಇಲ್ಲಿದೆ.
ನಟ ಪುನೀತ್ ರಾಜಕುಮಾರ್ ಕುರಿತು ಕಿಚ್ಚ ಸುದೀಪ್ ಟ್ವಿಟರ್ನಲ್ಲಿ ಹೀಗೆ ಬರೆಯುತ್ತಾರೆ..
“ಇದು ಬಾಲ್ಯದಿಂದ ಸಾಗಿ ಬಂದ ಜರ್ನೀ.
ಶಿವಮೊಗ್ಗದ ನಮ್ಮ ಮನೆಯಲ್ಲಿ ಭೇಟಿ ಮಾಡಿದಾಗ ಪುನೀತ್ ಅದಾಗಲೇ ಸ್ಟಾರ್ ಆಗಿದ್ದರು. ಅವರು ತಮ್ಮ ‘ಭಾಗ್ಯವಂತ’ ಸಿನಿಮಾದ ಯಶಸ್ಸಿನ ರಾಜ್ಯಪ್ರವಾಸದಲ್ಲಿದ್ದರು. ನಮ್ಮ ತಂದೆ ಚಿತ್ರರಂಗಕ್ಕೆ ಹತ್ತಿರದವರು. ಹಾಗಾಗಿ ಥಿಯೇಟರ್ ವಿಸಿಟ್ ಮುಗಿದ ನಂತರ ಪುನೀತ್ ಮತ್ತು ಚಿತ್ರತಂಡದ ಇತರರನ್ನು ಊಟಕ್ಕೆ ಮನೆಗೆ ಆಹ್ವಾನಿಸಿದ್ದರು. ಅದು ನನ್ನ ಮತ್ತು ಪುನೀತ್ರ ಮೊದಲ ಭೇಟಿ. ಒಂದೇ ವಯಸ್ಸಿನ ಹುಡುಗರು ಎನ್ನುವ ಕಾರಣಕ್ಕೆ ಬೇಗ ಹೊಂದಿಕೊಂಡೆವು. ಪುನೀತ್ಗೆ ಊಟಕ್ಕಿಂತ ನನ್ನಲ್ಲಿದ್ದ ವಿಧವಿಧದ ಗೊಂಬೆಗಳ ಕುರಿತೇ ಹೆಚ್ಚು ಆಸಕ್ತಿ ಇದ್ದಂತಿತ್ತು. ನಾವಿಬ್ಬರೂ ಆಟದಲ್ಲಿ ಬ್ಯುಸಿಯಾಗಿದ್ದರೆ, ಮಹಿಳೆಯೊಬ್ಬರು ಪುನೀತ್ ಹಿಂದೆ ಹಿಂದೆ ಸುತ್ತುತ್ತಾ ಅವರಿಗೆ ತುತ್ತಿಡುತ್ತಿದ್ದರು. ಆ ದೃಶ್ಯ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ನನ್ನ ನೆರೆಹೊರೆಯವರು ತಮ್ಮ ಮಕ್ಕಳೊಂದಿಗೆ ನಮ್ಮ ಮನೆ ಸುತ್ತುವರೆದಿದ್ದರು. ಏಕೆಂದರೆ ಈ ಹುಡುಗ ಎಲ್ಲರಂತೆ ಯಾರೋ ಒಬ್ಬನಲ್ಲ. ಅದು ಪುನೀತ್. ಲೆಜೆಂಡರಿ ನಟ ಡಾ.ರಾಜಕುಮಾರ್ ಅವರ ಸ್ಟಾರ್ ಕಿಡ್!
ನಂತರದ ದಿನಗಳಲ್ಲಿ ನಾವು ಕೆಲವೊಮ್ಮೆ ಭೇಟಿಯಾಗಿದ್ದಿದೆ. ಮುಂದೆ ಸಿನಿಮಾ ಕ್ಷೇತ್ರದಲ್ಲಿ ಸಹೋದ್ಯೋಗಿಗಳಾದೆವು. ಅವರು ನನಗೆ ಸ್ನೇಹಿತರಷ್ಟೇ ಅಲ್ಲ, ಒಬ್ಬ ದೈತ್ಯ ಸ್ಪರ್ಧಿಯೂ ಆಗಿದ್ದರು. ಅದ್ಭುತ ನಟ, ಡ್ಯಾನ್ಸರ್, ಫೈಟರ್ ಮತ್ತು ಸಹೃದಯ ವ್ಯಕ್ತಿ. ನಾನು ಈ ಸ್ಪರ್ಧೆಯನ್ನು ಎಂಜಾಯ್ ಮಾಡಿದೆ. ಇದರಿಂದಾಗಿ ನನಗೆ ಉತ್ತಮ ಸಿನಿಮಾಗಳನ್ನು ಮಾಡಲು ಸಾಧ್ಯವಾಯ್ತು. ಸಮಕಾಲೀನ ಸಂದರ್ಭದಲ್ಲಿ ಅಂತಹ ಒಬ್ಬ ಅತ್ಯುತ್ತಮ ನಟನೊಂದಿಗೆ ಕೆಲಸ ಮಾಡಲು ಸಾಧ್ಯವಾಗಿದ್ದು ಹೆಮ್ಮೆಯ ಸಂಗತಿ ಎಂದು ನಾನು ಭಾವಿಸುತ್ತೇನೆ.
ಇಂದು, ಈ ಕ್ಷಣ ಕನ್ನಡ ಚಿತ್ರರಂಗ ಅಪೂರ್ಣವೆನಿಸುತ್ತಿದೆ. ಕಾರ್ಮೋಡ ಕವಿದಿದೆ. ವಿಧಿ ತುಂಬಾ ಕೆಟ್ಟದಾಗಿ ನಡೆಸಿಕೊಂಡಿತು. ನಿನ್ನೆಯ ದಿನ ಪ್ರಕೃತಿ ಕೂಡ ದುಃಖಿಸಿತು. ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ನಾನು ಅವರನ್ನು ನೋಡಲು ತೆರಳಿದೆ. ಉಸಿರು ಭಾರವಾಯ್ತು. ಅಲ್ಲಿಯವರೆಗೂ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸಂದರ್ಭ ಎದುರಾಗಿತ್ತು. ಚಿರನಿದ್ರೆಯಲ್ಲಿ ಅವರನ್ನು ನೋಡುತ್ತಿದ್ದರೆ ಎದೆಯ ಮೇಲೆ ಭಾರ ಬಿದ್ದಂತಾಯ್ತು. ಏಕೆ, ಹೇಗೆ?? ಮನಸ್ಸಿನ ತುಂಬಾ ಪ್ರಶ್ನೆಗಳು.
ಮೊದಲ ಬಾರಿ ನನಗೆ ಸಹಜವಾಗಿ ಉಸಿರಾಡಲು ಸಾಧ್ಯವಾಗದ ಸ್ಥಿತಿ. ನನ್ನ ಸಹೋದ್ಯೋಗಿ, ಸ್ನೇಹಿತ ಹೇಗೆ ಇರಬಾರದಿತ್ತೋ ಆ ಸ್ಥಿತಿಯಲ್ಲಿದ್ದರು. ತುಂಬಾ ಹೊತ್ತು ಅವರನ್ನು ನೋಡಲು ಸಾಧ್ಯವಾಗಲಿಲ್ಲ. ಆ ಕ್ಷಣಗಳು ನನ್ನನ್ನು ಈಗಲೂ ಕಾಡುತ್ತಿವೆ.
ಅಂತಹ ಸಂದರ್ಭದಲ್ಲಿ ಶಿವಣ್ಣನನ್ನು ಮಾತನಾಡಿಸುವುದು ಇನ್ನೂ ಸಂಕಟವಾಯ್ತು. ಅವರು ಹೇಳಿದರು. “ಅವನು ನನಗಿಂತ 13 ವರ್ಷ ಚಿಕ್ಕವನು. ಅವನನ್ನು ಇದೇ ತೋಳುಗಳಲ್ಲಿ ಎತ್ತಿ ಆಡಿಸಿದ್ದೇನೆ. ಇಲ್ಲಿಯವರೆಗೆ ಅವನನ್ನು ಸಾಕಷ್ಟು ನೋಡಿದ್ದೇನೆ. ವಿಧಿ ಇನ್ನು ಇದನ್ನೆಲ್ಲಾ ನೋಡಬೇಕೆಂದು ಬಯಸಿತು” – ಶಿವಣ್ಣನ ಈ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ಪ್ರತಿಧ್ವನಿಸುತ್ತಿವೆ.
ಎಲ್ಲರಿಗೂ ಶಾಕ್ ಆಗಿದೆ, ಎಲ್ಲರೂ ದುಃಖದಲ್ಲಿದ್ದಾರೆ. ಈ ಸತ್ಯವನ್ನು ಅರಗಿಸಿಕೊಳ್ಳಲು ಎಲ್ಲರಿಗೂ ಒಂದಷ್ಟು ಸಮಯ ಬೇಕು. ಅದಾಗ್ಯೂ ಒಂದು ನಿರ್ವಾತ ಉಳಿದೇ ಇರುತ್ತದೆ. ಆ ಜಾಗವನ್ನು ಪ್ರೀತಿಯ ‘ಅಪ್ಪು’ ಅವರಿಂದಲ್ಲದೆ ಮತ್ತಾರಿಂದಲೂ ತುಂಬಲು ಸಾಧ್ಯವಿಲ್ಲ.
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸ್ನೇಹಿತ
REST IN POWER