‘ಮಫ್ತಿ’ಯಲ್ಲಿ ಮೇಕಿಂಗ್‌ನಿಂದ ಗಮನ ಸೆಳೆದಿದ್ದ ನರ್ತನ್‌ ‘ಭೈರತಿ ರಣಗಲ್‌’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದು ‘ಮಫ್ತಿ’ ಪ್ರೀಕ್ವೆಲ್‌. ಗೀತಾ ಶಿವರಾಜಕುಮಾರ್‌ ನಿರ್ಮಾಣದ ಚಿತ್ರದ ಮುಹೂರ್ತ ನೆರವೇರಿದ್ದು, ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ. ‘KGF’ ಸರಣಿ ಸಿನಿಮಾಗಳ ತಂತ್ರಜ್ಞರಾದ ಸಂಗೀತ ಸಂಯೋಜಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್‌ ಈ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ.

‘ಮಫ್ತಿ ಚಿತ್ರದ ಭೈರತಿ ರಣಗಲ್ ನನಗೆ ತುಂಬಾ ಇಷ್ಟವಾದ ಪಾತ್ರ. ಮಫ್ತಿ ಸಿನಿಮಾ ಬಂದು ಆರು ವರ್ಷಗಳಾಗಿದೆ. ಈಗಲೂ ನಾನು ಹಾಗೇ ಇದ್ದೀನಿ! ಹಾಗಾಗಿ ಈ ಪಾತ್ರ ಮಾಡಲು ಅನುಕೂಲವಾಗಿದೆ. ಪ್ರೀಕ್ವೆಲ್ ಆಗಿರುವುದರಿಂದ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ನರ್ತನ್ ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ’ ಎಂದರು ಶಿವರಾಜಕುಮಾರ್‌. ‘ವೇದ’ ಚಿತ್ರದ ನಂತರ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಎರಡನೆಯ ಚಿತ್ರವಿದು. ಇಂದು ಬೆಂಗಳೂರು ಗವಿಪುರದ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ‘ಭೈರತಿ ರಣಗಲ್ ಚಿತ್ರವನ್ನು ನಮ್ಮ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಬೇಕೆಂದು ಮೊದಲೇ ನಿರ್ಧಾರವಾಗಿತ್ತು. ಈಗ ಚಿತ್ರ ಆರಂಭವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎನ್ನುವುದು ಗೀತಾ ಶಿವರಾಜಕುಮಾರ್‌ ಮಾತು.

‘ಮಫ್ತಿ’ಯಲ್ಲಿ ಭೈರತಿ ರಣಗಲ್‌ ಪಾತ್ರ ಸೃಷ್ಟಿಸಿದ ನಿರ್ದೇಶಕ ನರ್ತನ್‌ ಪ್ರೀಕ್ವೆಲ್‌ನಲ್ಲಿ ಏನು ಹೇಳುತ್ತಿದ್ದಾರೆ? ‘ ಭೈರತಿ ರಣಗಲ್ ಪಾತ್ರ ಎಲ್ಲರ ಮನದಲ್ಲಿದೆ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರದ ಕತೆ ಮಾಡಿದ್ದೇವೆ. ಇದು ‘ಮಫ್ತಿ’ ಚಿತ್ರದ ಪ್ರೀಕ್ವೆಲ್. ‘ಮಫ್ತಿ’ಯಲ್ಲಿ ಮಧ್ಯಾಂತರದ ನಂತರ ಈ ಪಾತ್ರ ಬರುತ್ತದೆ. ಇಲ್ಲಿ ಭೈರತಿ ರಣಗಲ್ ಆಗಿದ್ದು ಹೇಗೆ ಎಂದು ತಿಳಿಯುತ್ತದೆ’ ಎನ್ನುತ್ತಾರೆ ನರ್ತನ್‌. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಛಾಯಾಗ್ರಹಣ, ಶಿವಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಶಿವರಾಜಕುಮಾರ್‌ ಪುತ್ರಿ ನಿವೇದಿತಾ, ಚಿತ್ರನಿರ್ಮಾಪಕ ಕೆ ಪಿ ಶ್ರೀಕಾಂತ್‌, ಛಾಯಾಗ್ರಾಹಕ ನವೀನ್‌ ಕುಮಾರ್‌, ಕಲಾನಿರ್ದೇಶಕ ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

Previous articleಶಾಹೀದ್‌ ಕಪೂರ್‌ ‘Bloody Daddy’ ಟ್ರೈಲರ್‌ | ಜೂನ್‌ 9ರಿಂದ JioCinemaದಲ್ಲಿ ಸಿನಿಮಾ
Next articleಚಿತ್ರೋತ್ಸವಗಳಲ್ಲಿ ಹೆಸರು ಮಾಡಿದ ‘ಪಿಂಕಿ ಎಲ್ಲಿ?’ ಜೂನ್‌ 2ರಂದು ತೆರೆಗೆ

LEAVE A REPLY

Connect with

Please enter your comment!
Please enter your name here