ನಟ ಶಿವರಾಜಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುಧಾರಾಣಿ ನಟಿಸಿರುವ ಸುದ್ದಿ ಹೊರಬಿದ್ದಿದೆ. ಸುಧಾರಾಣಿ ಅವರ ಪಾತ್ರದ ಚಿತ್ರೀಕರಣ, ಡಬ್ಬಿಂಗ್ ಸಹ ಪೂರ್ಣಗೊಂಡಿದೆ. ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.
ವಂಶಿ ನಟಿಸಿ – ನಿರ್ದೇಶಿಸುತ್ತಿರುವ ‘ಫೈರ್ ಫ್ಲೈ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿ ಸುಧಾರಾಣಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅವರು ನಾಯಕನಟನ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸುಧಾರಾಣಿ ಅವರ ಪಾತ್ರದ ಚಿತ್ರೀಕರಣ, ಡಬ್ಬಿಂಗ್ ಸಹ ಪೂರ್ಣಗೊಂಡಿದೆ. ಇದೀಗ ಚಿತ್ರತಂಡ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಸುಧಾರಾಣಿ, ‘ಅಪ್ಪಾಜಿಯವರ ಮನೆಯಿಂದ ಯಾರು ಏನೇ ಮಾಡಿದರೂ ಅದು ನನ್ನ ತವರು ಮನೆ. ನಿವಿ ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದಂತ ಮಗು. ಇವತ್ತು ಅವಳು ಒಂದು ನಿರ್ಮಾಣ ಸಂಸ್ಥೆ ಶುರು ಮಾಡುತ್ತಿದ್ದಾಳೆ, ಅವಳು ನಿರ್ಮಾಪಕಿಯಾಗಿದ್ದಾಳೆ. ನನಗೆ ತುಂಬಾ ಖುಷಿ ಇದೆ. ಕಥೆಯಿಂದ ಹಿಡಿದು ಪ್ರೊಡಕ್ಷನ್‌ವರೆಗೂ ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ನಿರ್ದೇಶಕರು ಸಂಬಂಧಗಳ ಬಗ್ಗೆ ಫೋಕಸ್ ಮಾಡಿದ್ದಾರೆ. ಇಡೀ ಕುಟುಂಬ ಕುಳಿತು ನೋಡುವಂಥ ಚಿತ್ರ ಮಾಡಿದ್ದಾರೆ’ ಎಂದಿದ್ದಾರೆ.
ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ತಾರಾಬಳಗದ ಮೂಲಕವೂ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ನಟಿ, ನಿರೂಪಕಿ ಶೀತಲ್ ಶೆಟ್ಟಿ, ಹಿರಿಯ ಕಲಾವಿದ ಮೂಗು ಸುರೇಶ್ ಅವರನ್ನು ಚಿತ್ರತಂಡ ಪರಿಚಯಿಸಿತ್ತು. ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ.