ಅಭಿಷೇಕ್‌ ಬಸಂತ್‌ ನಿರ್ದೇಶನದ ‘ಕ್ರೀಂ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರಕ್ಕೆ ಲೇಖಕ ಅಗ್ನಿ ಶ್ರೀಧರ್‌ ಸಂಭಾಷಣೆ ರಚಿಸಿದ್ದಾರೆ. ಸಂಯುಕ್ತ ಹೆಗಡೆ ಮುಖ್ಯಪಾತ್ರದಲ್ಲಿ ನಟಿಸಿರುವ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

ಸಂಯುಕ್ತ ಹೆಗಡೆ ಅಭಿನಯಿಸಿರುವ ‘ಕ್ರೀಂ’ ಚಿತ್ರದ ವಿಶ್ಯುಯೆಲ್‌ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಚಿತ್ರಕ್ಕೆ ಸಂಭಾಷಣೆ ಬರೆದಿರುವ ಲೇಖಕ ಅಗ್ನಿ ಶ್ರೀಧರ್ ಟ್ರೇಲರ್‌ ಬಿಡುಗಡೆ ಮಾಡಿದ್ದು, ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಅಗ್ನಿ ಶ್ರೀಧರ್ ಚಿತ್ರದ ಬಗ್ಗೆ ಮಾತನಾಡಿ, ‘ಎಲ್ಲಾ ಊರುಗಳಲ್ಲಿ, ರಾಜ್ಯಗಳಲ್ಲಿ, ಭಾಷೆಗಳಲ್ಲಿ ಕಾಣದ ಗರ್ಭ ಅಂತ ಇರುತ್ತದೆ. ಅಲ್ಲಿ ಏನೆಲ್ಲಾ ನಡೆಯುತ್ತದೆ. ಬೆಂಗಳೂರಿನಲ್ಲೇ ನನಗೆ ಗೊತ್ತಿರುವ ಸಂಗತಿಯಿಟ್ಟುಕೊಂಡು ಹತ್ತಾರು ವರ್ಷಗಳಿಂದ ಯೋಚನೆ ಮಾಡುತ್ತಿದ್ದೆ. ಈ ಚಿತ್ರ ಮಾಡುವುದಕ್ಕೆ ನಿಜವಾಗಿಯೂ ತುಂಬಾ ಧೈರ್ಯ ಬೇಕು.‌ ಆ ಧೈರ್ಯವನ್ನು ದೇವೇಂದ್ರ ಮಾಡಿದ್ದಾರೆ. ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಬಲಿಯಾಗುತ್ತಿದ್ದಾರೆ? ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಕೂಡ ಈ ಚಿತ್ರದಲ್ಲಿದೆ. ಇನ್ನೂ ಸಂಯುಕ್ತ ಹೆಗಡೆ ಈ ಚಿತ್ರಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಈ ಚಿತ್ರದ ಮೂಲಕ ಅವರು ಇನ್ನೂ ಎತ್ತರಕ್ಕೆ ಹೋಗುತ್ತಾರೆ’ ಎಂದರು.

‘ಚಿತ್ರತಂಡದ ಸಹಕಾರದಿಂದ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ.‌ ಇಂದು ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ನಿಮ್ಮ ಮುಂದೆ ಚಿತ್ರ ಬರಲಿದೆ’‌ ಎಂದರು ಅಭಿಷೇಕ್ ಬಸಂತ್. ‘ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ಈ ಚಿತ್ರದಲ್ಲಿ ಆಕ್ಷನ್ ಕೂಡ ಮಾಡಿದ್ದೇನೆ. ಕಾಲು ಕೂಡ ಮುರಿದಿತ್ತು. ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಸೊಗಸಾಗಿದೆ’ ಎನ್ನುವುದು ಸಂಯುಕ್ತ ಹೆಗಡೆ ಮಾತು. ನಿರ್ಮಾಪಕ ಡಿ ಕೆ ದೇವೇಂದ್ರ, ‘ನಾನು ಮೊದಲು ಉತ್ತಮ ಕಥೆ ನೀಡಿರುವ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು ಇಡೀ ತಂಡದ ಚಿತ್ರ ಚೆನ್ನಾಗಿ ಮೂಡಿಬರಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ’ ಎಂದು ತಿಳಿಸಿದರು. ಚಿತ್ರಕ್ಕೆ ರೋಹಿತ್ ಸಂಗೀತ ಸಂಯೋಜನೆ, ಶಿವಕುಮಾರ್ ಕಲಾ ನಿರ್ದೇಶಕವಿದೆ. ಅಚ್ಯುತ್ ಕುಮಾರ್, ಅರುಣ್ ಸಾಗರ್, ರೋಷನ್‌, ಇಫ್ರಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರಾದ ಕೆ. ಮಂಜು, ಸಂಜಯ್ ಗೌಡ, ನವರಸನ್, ಶ್ರೇಯಸ್ ಮೀಡಿಯಾ ಶ್ರೀನಿವಾಸ್ ಹಾಗೂ ನಿರ್ದೇಶಕ ಜಡೇಶ್ ಕೆ ಹಂಪಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

LEAVE A REPLY

Connect with

Please enter your comment!
Please enter your name here