ಸೂರ್ಯ ನಟಿಸಿ, ನಿರ್ಮಿಸಿರುವ ‘ಜೈ ಭೀಮ್’ ತಮಿಳು ಟ್ರೈಲರ್ ಬಿಡುಗಡೆಯಾಗಿದೆ. ತೊಂಬತ್ತರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗಿರುವ ಚಿತ್ರವಿದು. ಬುಡಕಟ್ಟು ಮಹಿಳೆಯೊಬ್ಬಳ ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಹೊರಾಟ ಕಥಾವಸ್ತು.
‘ಕೂಟಾಥಿಲ್ ಒರುಥನ್’ ಸಿನಿಮಾ ಖ್ಯಾತಿಯ ಚಿತ್ರನಿರ್ದೇಶಕ ಟಿ.ಜೆ.ಜ್ಞಾನವೇಲ್ ನಿರ್ದೇಶಿಸಿರುವ ‘ಜೈಭೀಮ್’ ಟ್ರೈಲರ್ ಬಿಡುಗಡೆಯಾಗಿದೆ. ಕೋರ್ಟ್ ಆವರಣದಲ್ಲಿ ಲಾಯರ್ ಚಂದ್ರು (ನಟ ಸೂರ್ಯ) ಹೋರಾಟ ನಡೆಸುವ ಸನ್ನಿವೇಶದೊಂದಿಗೆ ಟ್ರೈಲರ್ ಓಪನ್ ಆಗುತ್ತದೆ. ದೊಡ್ಡ ವಕೀಲರೇ ಕೈಚೆಲ್ಲಿದ ಕೇಸ್‌ವೊಂದನ್ನು ಕೈಗೆತ್ತಿಕೊಳ್ಳುವ ಚಂದ್ರು ಅಪ್ಪಟ ಹೋರಾಟಗಾರನಂತೆ ನ್ಯಾಯಕ್ಕಾಗಿ ಮಾತನಾಡುತ್ತಾನೆ. ಬುಡಕಟ್ಟು ಜನರ ಸಾಮಾಜಿಕ ನ್ಯಾಯ ಮತ್ತು ಉಳ್ಳವರ ಪ್ರತಿಷ್ಠೆಯಾಗಿ ಕೇಸು ದಾಖಲಾಗುತ್ತದೆ. ಟ್ರೈಲರ್ ನೋಡಿದ ಹಲವರು ಹೇಳಲೇಬೇಕಾಗಿದ್ದ ಕತೆಯೊಂದನ್ನು ನಿರ್ದೇಶಕರು ತೆರೆಗೆ ಅಳವಡಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ತೊಂಬತ್ತರ ದಶಕದ ಕತೆಗೆ ಪೂರಕವಾಗಿ ನಿರ್ದೇಶಕರು ದೃಶ್ಯಗಳನ್ನು ಕಟ್ಟಿದ್ದಾರೆ. ಪೊಲೀಸ್ ದಬ್ಬಾಳಿಕೆ ಕೆಲವೆಡೆ ಅತಿ ಎನಿಸುವುದು ಹೌದು. ಈ ದೃಶ್ಯಗಳು ವೆಟ್ರಿಮಾರನ್ ನಿರ್ದೇಶನದ ‘ವಿಸಾರಣೈ’ ತಮಿಳು ಚಿತ್ರವನ್ನು ನೆನಪು ಮಾಡುತ್ತವೆ. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಜೀಷಾ ವಿಜಯನ್, ಪ್ರಕಾಶ್ ರಾಜ್ ಇದ್ದಾರೆ. ಅಮೇಜಾನ್ ಪ್ರೈಮ್ ಜೊತೆಗಿನ ಒಪ್ಪಂದದ ಅನ್ವಯ ಸೂರ್ಯ ನಿರ್ಮಾಣದ ‘ರಾಮನ್ ಆಂಡಾಲಂ ರಾವಣನ್ ಆಂಡಾಲಂ’ ಮೊದಲ ಚಿತ್ರವಾಗಿ, ಎರಡನೇ ಚಿತ್ರ ‘ಉಡನ್‌ಪಿರಪ್ಪೆ’ ಅಕ್ಟೋಬರ್ 14ರಂದು ಸ್ಟ್ರೀಮ್ ಆಗಿದ್ದವು. ನವೆಂಬರ್ 2ರಂದು ‘ಜೈಭೀಮ್’ ಬರಲಿದ್ದು, ಡಿಸೆಂಬರ್‌ನಲ್ಲಿ ‘ಓಹ್ ಮೈ ಡಾಗ್!’ ಡಿಸೆಂಬರ್‌ನಲ್ಲಿ ಸ್ಟ್ರೀಮ್ ಆಗಲಿದೆ.