ದಿ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಇಂದು ಬಿಡುಗಡೆ ಮಾಡಿರುವ 276 ಸಿನಿಮಾಗಳ ನಾಮನಿರ್ದೇಶನದ ಪಟ್ಟಿಯಲ್ಲಿ ‘ಜೈ ಭೀಮ್’, ‘ಮರಕ್ಕಾರ್’ ಚಿತ್ರಗಳಿವೆ. ಮೊನ್ನೆಯಷ್ಟೇ ಆಸ್ಕರ್ ಯೂಟ್ಯೂಬ್‌ನಲ್ಲಿ ‘ಜೈಭೀಮ್’ ಸಿನಿಮಾದ ವೀಡಿಯೋ ತುಣುಕುಗಳು ಪ್ರಸಾರವಾಗಿದ್ದವು.
ಮೊನ್ನೆ ‘ಜೈ ಭೀಮ್’ ಸಿನಿಮಾದ ವೀಡಿಯೋ ತುಣುಕುಗಳು ಆಸ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಿದ್ದವು. ಚಿತ್ರದ ಆಶಯ ಕುರಿತಂತೆ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಮಾತುಗಳೊಂದಿಗೆ ರೂಪುಗೊಂಡಿದ್ದ ವೀಡಿಯೋ ಇದು. ಚಿತ್ರಕ್ಕೆ ಸಂದ ಅರ್ಹ ಗೌರವವಿದು ಎಂದೇ ಹಲವರು ಮೆಚ್ಚಿ ತಲೆದೂಗಿದ್ದರು. ಪ್ರಸ್ತುತ 94ನೇ ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು ನಡೆಯುತ್ತಿದ್ದು, ಇಂದು ‘ದಿ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್’ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 276 ಚಿತ್ರಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಜನಮನ್ನಣೆ ಪಡೆದ ‘ಜೈ ಭೀಮ್’ ತಮಿಳು ಮತ್ತು ‘ಮರಕ್ಕಾರ್’ ಮಲಯಾಳಂ ಸಿನಿಮಾಗಳಿವೆ. ‘ಜೈ ಭೀಮ್’ ಚಿತ್ರನಿರ್ಮಾಣ ಸಂಸ್ಥೆ ಹಾಗೂ ಚಿತ್ರದ ಹಲವರು ಈ ಖುಷಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಫೆಬ್ರವರಿ 8ಕ್ಕೆ ಆಸ್ಕರ್ ಪ್ರಶಸ್ತಿ ಪಡೆಯುವ ಅಂತಿಮ ಪಟ್ಟಿ ಹೊರಬೀಳಲಿದೆ.
ತೊಂಬತ್ತರ ದಶಕದ ನೈಜ ಘಟನೆಯೊಂದರ ಪ್ರೇರಣೆಯಿಂದ ತಯಾರಾದ ಸಿನಿಮಾ. ಬುಡಕಟ್ಟು ಜನರ ಸಾಮಾಜಿಕ ಹಕ್ಕುಗಳಿಗಾಗಿ ವಕೀಲನೊಬ್ಬ ದಿಟ್ಟತನದಿಂದ ಹೋರಾಟ ನಡೆಸಿದ ವಸ್ತು ಸಿನಿಮಾದ ಕತೆ. ವಕೀಲನ ಪಾತ್ರವನ್ನು ಸೂರ್ಯ ನಿರ್ವಹಿಸಿದ್ದರು. ತಮಿಳು ನಾಡು ಮುಖ್ಯಮಂತ್ರಿ ಸ್ಟಾಲಿನ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಚಿತ್ರ ಮೆಚ್ಚಿ ತಲೆದೂಗಿದ್ದರು. ರಜಿಷಾ ವಿಜಯನ್, ಪ್ರಕಾಶ್ ರೈ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನೇರವಾಗಿ ಅಮೇಜಾನ್ ಪ್ರೈಮ್‌ನಲ್ಲಿ ಮೂಲ ತಮಿಳು ಭಾಷೆ ಜೊತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮ್ ಆಗಿತ್ತು. ಭಾರತ ಸೇರಿದಂತೆ ಜಾಗತಿಕವಾಗಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.