‘ಜೊತೆಜೊತೆಯಲಿ’ ಸೀರಿಯಲ್‌ ದೊಡ್ಡ ಯಶಸ್ಸಿನ ನಂತರ ನಟ ಅನಿರುದ್ಧ ಜಟ್ಕರ್‌ ‘ಸೂರ್ಯವಂಶ’ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಹರಿ ಸಂತು ನಿರ್ದೇಶನದ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಸುರಭಿ, ಸುಂದರ್‌ ರಾಜ್‌, ವಿಕ್ರಂ ಉದಯಕುಮಾರ್‌ ಇದ್ದಾರೆ. ಮಾರ್ಚ್‌ 11ರಿಂದ ಉದಯ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ.

ವಿಷ್ಣುವರ್ಧನ್ ಅಭಿನಯದ ‘ಸೂರ್ಯವಂಶ’ ದೊಡ್ಡ ಯಶಸ್ಸು ಕಂಡಿದ್ದ ಸಿನಿಮಾ. ಇದೀಗ ಅದೇ ಶೀರ್ಷಿಕೆಯಡಿ ಧಾರವಾಹಿಯೊಂದು ಉದಯ ವಾಹಿನಿಯಲ್ಲಿ ಮೂಡಿಬರಲಿದೆ. ತನ್ವಿ ಕ್ರಿಯೇಶನ್ಸ್ ಅಡಿ ಎಲ್ ಪದ್ಮನಾಭ ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಹರಿಸಂತು ಪ್ರಧಾನ ನಿರ್ದೇಶಕರಾಗಿದ್ದು, ಪ್ರಕಾಶ್ ಮುಚ್ಚಳಗುಡ್ಡ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ. ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ‘ಸೂರ್ಯವಂಶ’ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಬಯಕೆ. ವಂಶದ ಕುಡಿ, ಮೊಮ್ಮಗ ಸೂರ್ಯವರ್ಧನ ಇಪ್ಪತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದೇ ಸತ್ಯಮೂರ್ತಿ ಚಿಂತೆಗೆ ಕಾರಣವಾಗಿರುತ್ತದೆ. ಆಕಸ್ಮಿಕ ಸಂದರ್ಭದಲ್ಲಿ ಆ ಹುಡುಗ ಸಿಗುತ್ತಾನೆ. ತಾಯಿಯ ಚಿಕಿತ್ಸೆಗೆ ಹಣ ಬೇಕಿರುವುದರಿಂದ ಆತನು ಈ ನಾಟಕಕ್ಕೆ ಒಪ್ಪಿಕೊಳ್ಳುತ್ತಾನೆ. ಅವನೇ ಕಥಾನಾಯಕ ಕರ್ಣ.

ಕರ್ಣನು ಸೂರ್ಯವಂಶಕ್ಕೆ ಕಾಲಿಟ್ಟ ನಂತರ ಎಲ್ಲಾ ಕಡೆಗಳಿಂದಲೂ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅದೇ ಊರಿನ ಕಾಳಿಂಗನ ಆಟಾಟೋಪ ಬಗ್ಗು ಬಡಿಯಲು ಕರ್ಣನಿಂದ ಮಾತ್ರ ಸಾಧ್ಯ ಎಂದು ಊರ ಜನರು ನಂಬಿರುತ್ತಾರೆ. ಇದರ ಮಧ್ಯೆ ನಾಯಕಿ ಸುರಭಿ ಆಗಮನವಾಗುತ್ತದೆ. ಇದರಿಂದ ಕತೆ ಹೊಸ ರೂಪ ಪಡೆದುಕೊಳ್ಳುತ್ತದೆ. ಮುಂದೆ ಕರ್ಣನೇ ಸೂರ್ಯವರ್ಧನ ಎನ್ನುವ ವಿಷಯ ತಿಳಿಯುತ್ತದೆ. ಅದು ಹೇಗೆ, ಯಾರಿಂದ, ಯಾವಾಗ ಎಂಬ ಸನ್ನಿವೇಶಗಳೊಂದಿಗೆ ರೋಚಕ ತಿರುವುಗಳು ಬರುತ್ತದೆ. ನಾಯಕನಾಗಿ ಅನಿರುದ್ಧ ಜಟ್ಕರ್, ನಾಯಕಿಯಾಗಿ ಸುರಭಿ, ತಾತನಾಗಿ ಸುಂದರರಾಜ್, ಖಳನಾಗಿ ವಿಕ್ರಂ ಉದಯಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ರವಿ ಭಟ್, ಸುಂದರಶ್ರೀ, ಲೋಕೇಶ್‌ ಬಸವಟ್ಟಿ, ಪುಷ್ಪಾ ಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಧಾರಾವಾಹಿಯ ಇತರೆ ಕಲಾವಿದರು. ಮಾರ್ಚ್,11 ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8ಕ್ಕೆ ಉದಯ ವಾಹಿನಿಯಲ್ಲಿ ‘ಸೂರ್ಯವಂಶ’ ಮೂಡಿಬರಲಿದೆ.

LEAVE A REPLY

Connect with

Please enter your comment!
Please enter your name here