1990ರ ಆಸುಪಾಸು. ‘ಮನಸಾರ ವಾಲ್ತುಂಗಳೇನ್’ ತಮಿಳು ಸಿನಿಮಾದ ಶೂಟಿಂಗ್ ಸಂದರ್ಭ. ನಾಯಕನಟ ಬಾಬು ಚಿತ್ರದ ಸ್ಟಂಟ್ ಸನ್ನಿವೇಶವನ್ನು ಸ್ವತಃ ತಾವೇ ನಿಭಾಯಿಸುವ ರಿಸ್ಕ್ ತೆಗೆದುಕೊಂಡರು. ಲೆಕ್ಕಾಚಾರ ತಪ್ಪಿ ಆಕಸ್ಮಿಕ ಸಂಭವಿಸಿತು. ಅಲ್ಲಿಂದ 30 ವರ್ಷಗಳ ಕಾಲ ಹಾಸಿಗೆಯಲ್ಲೇ ಕಳೆದ ಅವರು ನಿನ್ನೆ ತಮ್ಮ 60ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನಿರ್ದೇಶಕ ಭಾರತೀರಾಜ ಅವರ ‘ಎನ್ ಉಯಿರ್ ತೋಯನ್’ ತಮಿಳು ಸಿನಿಮಾದ ಮೂಲಕ ಬೆಳಕಿಗೆ ಬಂದ ನಟ ಬಾಬು. ಗ್ರಾಮೀಣ ಕತೆಗಳ ಸಿನಿಮಾಗಳಿಗೆ ಬಾಬು ಅತ್ಯಂತ ಸೂಕ್ತ ಹೀರೋ ಎಂದೇ ಆಗ ತಮಿಳು ಚಿತ್ರರಂಗದವರು ಮಾತನಾಡಿದ್ದರು. ಈ ಸಿನಿಮಾದ ‘ಆಯಿ ರಾಸಾತಿ ಪೂ…’ ಹಾಡು ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಟ್ಟಿತ್ತು. ಮುಂದೆ ವಿಕ್ರಮನ್ ನಿರ್ದೇಶನದ ‘ಪೇರುಂಪುಲಿ’, ಗೋಪಿ ಭೀಮ್‌ಸಿಂಗ್ ನಿರ್ದೇಶನದ ‘ತಾಯಮ್ಮ’ ತಮಿಳು ಸಿನಿಮಾಗಳು ಅವರ ಯಶಸ್ವೀ ಸಿನಿಹಾದಿಗೆ ನೆರವಾಗಿದವು.
ಸಿನಿಮಾರಂಗದಲ್ಲಿ ಯಶಸ್ಸಿನ ಹಾದಿಯಲ್ಲಿನ ಬಾಬು ಬದುಕಿನಲ್ಲಿ ಅನಿರೀಕ್ಷಿತವೊಂದು ಸಂಭವಿಸಿತು. 1990ರ ಆಸುಪಾಸು. ‘ಮನಸಾರ ವಾಲ್ತುಂಗಳೇನ್’ ತಮಿಳು ಸಿನಿಮಾದ ಶೂಟಿಂಗ್ ಸಂದರ್ಭ. ಅವರೇ ಚಿತ್ರದ ಹೀರೋ. ಸ್ಟಂಟ್ ಸನ್ನಿವೇಶವೊಂದನ್ನು ನಿಭಾಯಿಸಬೇಕಿತ್ತು. ಚಿತ್ರದ ನಿರ್ದೇಶಕರು ‘ಸ್ಟಂಟ್ ಡಬಲ್’ ಬಳಕೆ ಮಾಡಲು ಮುಂದಾಗಿದ್ದರು. ಇದಕ್ಕೆ ಒಪ್ಪದ ಬಾಬು ಸ್ವತಃ ತಾವೇ ಸ್ಟಂಟ್ ನಿಭಾಯಿಸುವುದಾಗಿ ಹೇಳಿದರು. ಚಿತ್ರತಂಡದವರು ಬೇಡವೆಂದರೂ ಕೇಳಲಿಲ್ಲ. ಲೆಕ್ಕಾಚಾರ ತಪ್ಪಾಗಿ ಮೇಲಿನಿಂದ ಬಿದ್ದ ಅವರ ಬೆನ್ನಿಗೆ ತೀವ್ರ ಹಾನಿಯಾಯ್ತು. ಆಗ ಹಾಸಿಗೆ ಹಿಡಿದ ಅವರು ಮತ್ತೆ ಮೇಲೇಳಲೇ ಇಲ್ಲ. ಮೂವತ್ತು ವರ್ಷ ಹಾಸಿಗೆಯಲ್ಲೇ ಕಳೆದ ಅವರು ನಿನ್ನೆ (ಸೆಪ್ಟೆಂಬರ್ 19) ಇಹಲೋಕ ತ್ಯಜಿಸಿದರು. ಚಿತ್ರರಂಗದಲ್ಲಿ ಮಿಂಚಬೇಕಾಗಿದ್ದ ಪ್ರತಿಭಾವಂತ ನಟನ ಬದುಕನ್ನು ಈ ಆಕಸ್ಮಿಕ ಕತ್ತಲಾಗಿಸಿತು.
ನಿರ್ದೇಶಕ ಭಾರತೀರಾಜ ಅವರು ಬೆಳ್ಳಿತೆರೆಗೆ ಪರಿಚಯಿಸಿದ ಹಲವಾರು ನಟ – ನಟಿಯರು ಹಾಗೂ ತಂತ್ರಜ್ಞರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ನಟ ಬಾಬು ಅವರ ಮೇಲೂ ಚಿತ್ರರಂಗದಲ್ಲಿ ಇದೇ ಭರವಸೆ ಇತ್ತು. ಆದರೆ ದುರದೃಷ್ಟಾವತಾಶ್ ಬಾಬು ಸಿನಿಮಾ ಕನಸುಗಳು ನಶಿಸಿದವು. ಇತ್ತೀಚೆಗೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಕೊನೆಯುಸಿರೆಳೆದರು. ತಮ್ಮ ಸಿನಿಮಾದ ಹೀರೋನನ್ನು ಸ್ಮರಿಸಿರುವ ನಿರ್ದೇಶಕ ಭಾರತೀರಾಜ, ‘ತಮಿಳು ಸಿನಿಮಾರಂಗದಲ್ಲಿ ಅವರು ದೊಡ್ಡ ಸ್ಟಾರ್ ಆಗಬೇಕಿತ್ತು. ಸಿನಿಮಾ ಸೆಟ್‌ನಲ್ಲಿ ಆದ ದುರಂತದಿಂದಾಗಿ ದಶಕಗಳ ಕಾಲ ಅವರು ಹಾಸಿಗೆಯಲ್ಲೇ ಕಳೆಯಬೇಕಾಯ್ತು’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.