ಬಯೋಪಿಕ್ ಅಂದಾಗ ನಿರೀಕ್ಷೆ ಜಾಸ್ತಿಯೇ ಇತ್ತು, ಆದರೆ ತರ್ಲಾ ನಿರೀಕ್ಷೆ ತಲುಪಿಲ್ಲ. ಹೆಣ್ಣೊಬ್ಬಳು ಸಾಧನೆ ಮಾಡಿದಳು ಎಂದು ಹೇಳುವಷ್ಟಕ್ಕೇ ಚಿತ್ರಕಥೆ ಬರೆದಂತಿದೆ. ತರ್ಲಾ ದಲಾಲ್ ಸಾಧಕಿ ಹೌದು, ಆದರೆ ಯಾಕೆ ಆಕೆ ಭಿನ್ನವಾಗಿದ್ದಳು ಎಂಬುದನ್ನು ಹೈಲೈಟ್ ಮಾಡುವುದಾಗಲೀ, ಹೊಸ ರೀತಿಯಲ್ಲಿ ಕತೆಯನ್ನು ಪ್ರಸ್ತುತಿ ಪಡಿಸುವ ಸಾಹಸಕ್ಕೆ ಸಿನಿಮಾ ತಂಡ ಕೈ ಹಾಕಿಲ್ಲ. ‘ತರ್ಲಾ’ ZEE5ನಲ್ಲಿ ಸ್ಟ್ರೀಮ್ ಆಗುತ್ತಿದೆ.
ತರ್ಲಾ ದಲಾಲ್ ಯಾರಿಗೆ ತಾನೇ ಗೊತ್ತಿಲ್ಲ, ಅಡುಗೆ ಇಷ್ಟ ಪಡುವವರಿಗೆ ಆಕೆಯ ಹೆಸರು ಕೇಳಿದ ಕೂಡಲೇ ಹೇರ್ ಕಟ್ ಮಾಡಿದ ಸ್ವಲ್ಪ ಕುಳ್ಳಗಿನ ಸಾಫ್ಟ್ ಮಾತುಗಳ ಪಾಕ ಪ್ರವೀಣೆಯ ರೂಪ ಕಣ್ಣಮುಂದೆ ಬರುತ್ತದೆ. ಅವರ ಅಡುಗೆ ಪುಸ್ತಕಗಳು ಅತೀ ಹೆಚ್ಚು ಮಾರಾಟವಾಗಿದ್ದು, ಟಿವಿಯಲ್ಲಿ ಅವರ ಅಡುಗೆ ಶೋ ಭಾರೀ ಜನಪ್ರಿಯವಾಗಿತ್ತು. ಕಡಿಮೆ ಸಮಯದಲ್ಲಿ ಮಾಡುವ ಜಟ್ ಪಟ್ ಅಡುಗೆಗಳು, ಸಸ್ಯಾಹಾರದಲ್ಲೇ ಹಲವಾರು ಪ್ರಯೋಗಗಳನ್ನು ಮಾಡಿದ ಭಾರತದ ಮೊದಲ ಸೆಲೆಬ್ರಿಟಿ ಶೆಫ್ ಆಕೆ. ಈ ಸಾಧಕಿಯ ಕತೆ ಹೇಳುವ ಚಿತ್ರವೇ ‘ತರ್ಲಾ’. ಈಗ ಝೀ 5ನಲ್ಲಿ ಸ್ಟ್ರೀಮ್ ಆಗುತ್ತಿದೆ. ಪಿಯೂಷ್ ಗುಪ್ತಾ ನಿರ್ದೇಶನದ ಈ ಚಲನಚಿತ್ರವು ತರ್ಲಾ ದಲಾಲ್ ಅವರ ಜೀವನದ ಕತೆಯನ್ನು ಥೇಟ್ ಬಾಲಿವುಡ್ ರೀತಿಯಲ್ಲಿ ತೆರೆ ಮುಂದೆ ತಂದಿದೆ.
ತರ್ಲಾ (ಹುಮಾ ಖುರೇಷಿ), ಸಾಮಾನ್ಯ ಗೃಹಿಣಿ ಮತ್ತು ಮೂರು ಮಕ್ಕಳ ತಾಯಿ. ಆಕೆ ತನ್ನ ಅಡುಗೆಮನೆಯಲ್ಲಿ ತನ್ನ ವಿವಿಧ ಅಡುಗೆ ಮಾಡಿ ಬಡಿಸುವುದರಲ್ಲೇ ತೃಪ್ತಳು. ನನಗೆ ಏನಾದರೂ ಮಾಡಬೇಕು ಆದರೆ ಏನು ಎಂಬುದು ಗೊತ್ತಿಲ್ಲ ಎಂದು ಹೇಳುತ್ತಿದ್ದ ಹೆಣ್ಣು ಮಗಳು ಆಕೆ. ನಿನಗೆ ಏನು ಬೇಕೋ ಅದು ಮಾಡು, ನಾನು ಜತೆಗಿರ್ತೀನಿ ಎಂದು ಹೇಳುವ ಪತಿ ನಳಿನ್ (ಶರೀಬ್ ಹಶ್ಮಿ). ಆಕೆಯನ್ನು ಅರ್ಥ ಮಾಡಿಕೊಂಡು ಆಕೆಗೆ ಸಾಥ್ ನೀಡುತ್ತಿರುತ್ತಾನೆ. ಮಕ್ಕಳು, ಅಡುಗೆ ಮನೆ ಇದಿಷ್ಟೇ ಜಾಗದಲ್ಲಿ ನಾನು ಉಳಿದುಬಿಟ್ಟೆ ಎಂದು ಅವಳಿಗೆ ಆಗಾಗ್ಗೆ ಅನಿಸುತ್ತಿದೆ. ಅಡುಗೆ ಮನೆಯ ಕಿಟಕಿಯಿಂದ ಹೊರಗೆ ಇಣುಕಿದರೆ ರದ್ದಿ ಅಂಗಡಿ. ರದ್ದಿ ಅಂಗಡಿಯವ ಹೇಗೆ ವರ್ಷ ಕಳೆದಂತೆ ಬೆಳೆಯುತ್ತಾ ಬಂದ, ತಾನು ನಿಂತಲ್ಲೇ ಇದ್ದೇನೆ ಎಂಬುದನ್ನು ಆಕೆ ಸೂಚ್ಯವಾಗಿ ಹೇಳುತ್ತಾಳೆ.
ತನ್ನ ನೆರೆಹೊರೆಯ ಗೆಳತಿಯ ಮಗಳಿಗೆ ಅಡುಗೆ ಕಲಿಸಿದ್ದು ಆಕೆಯ ಬದುಕಿನಲ್ಲಿ ಹೊಸ ತಿರುವು ತರುತ್ತದೆ. ತರ್ಲಾಳಿಂದ ಅಡುಗೆ ಕಲಿಯುವುದಕ್ಕಾಗಿ ಯುವತಿಯರು ಸಾಲು ಗಟ್ಟಿಬರುತ್ತಾರೆ. ಮನೆಯಲ್ಲೇ ಕುಕಿಂಗ್ ಕ್ಲಾಸ್ ಶುರುವಾಗುತ್ತದೆ. ತರ್ಲಾಳಿಂದ ಅಡುಗೆ ಕಲಿತ ಹೆಣ್ಣುಮಕ್ಕಳ ಬದುಕು ಬದಲಾಗುತ್ತದೆ. ಕೆಲವರಿಗೆ ಮದುವೆ ಸೆಟ್ ಆಗಲು ಅಡುಗೆ ಸಹಾಯವಾದರೆ, ಇನ್ನು ಕೆಲವರಿಗೆ ಕುಟುಂಬದವರ ಪ್ರೀತಿ ಗಳಿಸಲು ಸಹಾಯವಾಗುತ್ತದೆ. ಮನೆಯಲ್ಲಿ ಈ ರೀತಿ ಅಡುಗೆ ತರಬೇತಿ ನೀಡಿಲು ಅಪಾರ್ಟ್‌ಮೆಂಟ್‌ನವರು ಅನುಮತಿಸುವುದಿಲ್ಲ. ಹಾಗಾದರೆ ಜನರಿಗೆ ಅಡುಗೆಯನ್ನು ಹೇಗೆ ಹೇಳಿಕೊಡುವುದು? ಆ ಹೊತ್ತಿಗೆ ಹುಟ್ಟಿಕೊಂಡ ಐಡಿಯಾವೇ ಪಾಕ ಪುಸ್ತಕ ಪ್ರಕಟಣೆ. ಅಂಥಾ ಪುಸ್ತಕವನ್ನು ಪ್ರಕಟಿಸಿದರೆ ಯಾರು ಓದುತ್ತಾರೆ ಎಂದು ಪ್ರಕಾಶಕರು ಹಿಂದೇಟು ಹಾಕುತ್ತಾರೆ. ಯಾರೂ ಪ್ರಕಟಿಸಲು ಒಪ್ಪದೇ ಇದ್ದಾಗ ಗಂಡನೇ ಪ್ರಕಾಶಕನಾಗುತ್ತಾನೆ. ಆದರೆ ಪುಸ್ತಕ ಜನರನ್ನು ತಲುಪುವುದಿಲ್ಲ.
ಪುಸ್ತಕ ಬರೆಯುತ್ತೇನೆ ಎಂದು ಹೊರಟು ಆ ಐಡಿಯಾ ಫ್ಲಾಪ್ ಆಯ್ತು ಬೇಸರಗೊಂಡ ತರ್ಲಾ, ರದ್ದಿ ಅಂಗಡಿಗೆ ಪುಸ್ತಕವನ್ನು ಮಾರುತ್ತಾಳೆ. ಹೀಗೆ ಮಾರಿದ ನಂತರ ಪುಸ್ತಕ ಜನರಿಗೆ ಯಾಕೆ ತಲುಪಿಲ್ಲ ಎಂದರೆ ನಾವು ತಲುಪಿಸಿಲ್ಲ ಎಂಬ ಜ್ಞಾನೋದಯ ಆಗಿಬಿಡುತ್ತದೆ. ರದ್ದಿಯಂಗಡಿಯವನೇ ತರ್ಲಾ ಪುಸ್ತಕದ ಡಿಸ್ಟ್ರಿಬ್ಯೂಟರ್ ಆಗಿಬಿಡುತ್ತಾನೆ. ಆನಂತರ ಆಕೆಯ ಪಾಕ ಪುಸ್ತಕಗಳು ಮನೆಮನೆಗೆ ತಲುಪಿ, ಆಕೆಗೊಂದು ಐಡೆಂಟಿಟಿ ಸಿಕ್ಕಿಬಿಡುತ್ತದೆ.
ತರ್ಲಾ ಸಸ್ಯಾಹಾರಿ ಅಡುಗೆಯಲ್ಲೇ ಪ್ರವೀಣೆ. ಮಾಂಸಾಹಾರ ಸೇವನೆ ಬಿಡಿ, ಮಾಂಸಹಾರವೆಂದರೆ ಮಾರುದ್ದ ದೂರ ನಿಲ್ಲುವಾಕೆ. ಆಕೆಯ ಗಂಡ ಕಚೇರಿಯಲ್ಲಿ ಮಾಂಸ ತಿನ್ನುವುದನ್ನು ನೋಡಿ ಆಕೆಗೆ ವಾಕರಿಕೆಯೇ ಬಂದು ಬಿಡುತ್ತದೆ. ಅಷ್ಟಕ್ಕೆ ನಿಲ್ಲುವುದಿಲ್ಲ, ಮನೆಗೆ ಬಂದು ಮಾಂಸದಡುಗೆಯಂತೇ ತರಕಾರಿ ಬಳಸಿ ಯಾವ ರೀತಿ ಮಾಡಬಹುದು ಎಂಬ ಪ್ರಯೋಗ ಮಾಡುತ್ತಾಳೆ, ಅದು ಯಶಸ್ವಿಯಾಗುತ್ತದೆ.
ಈ ಸಿನಿಮಾದ ಹೆಚ್ಚಿನ ದೃಶ್ಯ ಆಹಾರ ತಯಾರಿಸುವ ಬಗ್ಗೆಯೇ ಇದೆ. ಅಲ್ಲಿಯವರೆಗೆ ಖುಷಿಖುಷಿಯಾಗಿದ್ದ ಬದುಕು ಬದಲಾಗುವುದು ತರ್ಲಾನ ಗಂಡ ನಳಿನ್ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿದಾಗ. ಕೆಲಸ ಕಳೆದುಕೊಂಡ ಪತಿ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಾನೆ. ತರ್ಲಾಗೆ ಟಿವಿಯಲ್ಲಿ ಅಡುಗೆ ಕಾರ್ಯಕ್ರಮದ ಆಫರ್ ಸಿಕ್ಕಿಬಿಡುತ್ತದೆ. ಹಾಗೊಂದು ಕಾರ್ಯಕ್ರಮ ಟಿವಿಯಲ್ಲಿ ಅದೇ ಮೊದಲು. ತರ್ಲಾ ಅಡುಗೆಯೆಂಬುದು ಬರೀ ಮನೆಗೆಲಸವಲ್ಲ, ಅದೊಂದು ಕಲೆ ಎಂಬುದನ್ನು ಸಾಬೀತು ಪಡಿಸಿ ಮುನ್ನುಗ್ಗುತ್ತಿರುವಾಗ ಕುಟುಂಬದಲ್ಲಿನ ಸಮತೋಲನ ತಪ್ಪಿಹೋಗುತ್ತದೆ. ಆಕೆ ಖ್ಯಾತಿ ಪಡೆಯುತ್ತಿದ್ದಂತೆ ತನ್ನ ಕುಟುಂಬವನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬಂತೆ ಬಿಂಬಿಸಲಾಗುತ್ತದೆ.
ಸಿನಿಮಾ, ತರ್ಲಾ ಅವರ ಮದುವೆ ಮತ್ತು ನಳಿನ್ ಅವರ ಪಾತ್ರದ ಮೇಲೆ ಕೇಂದ್ರೀಕೃತವಾಗಿದೆ. ಈ ದಾಂಪತ್ಯದಲ್ಲಿ ಹಲವಾರು ನಗು, ಮುದ್ದಾದ ಕ್ಷಣಗಳು ಇವೆ. ಗಂಡ ಎಂದರೆ ಹೀಗಿರಬೇಕು ಎಂಬ ರೂಪದಲ್ಲಿ ನಳಿನ್ ಕಾಣುತ್ತಾರೆ. ಕ್ವಾಲಿಟಿ ಚೆಕರ್ ಆಗಿದ್ದ ನಳಿನ್, ಪ್ರತಿಯೊಂದಕ್ಕೂ ರೇಟಿಂಗ್ ಕೊಡುತ್ತಾನೆ. ಯಾವುದೇ ಅಸಹನೆಯನ್ನು ತೋರಿಸದೆ, ಆಕೆಯ ಕನಸು ನನಸಾಗಲು ಜತೆಯಾಗುವ ಗಂಡ ನಳಿನ್ ತಮ್ಮ ಸಹಜ ಅಭಿನಯದಿಂದ ಮನಸ್ಸು ಗೆಲ್ಲುತ್ತಾರೆ.
ತರ್ಲಾ ಪಾತ್ರದಲ್ಲಿ ಹುಮಾ ಖುರೇಷಿ ಕೆಲವೆಡೆ ಮಿಂಚಿದರೂ ಕೆಲವೆಡೆ ಭಾವಗಳನ್ನು ಬದಲಿಸುವಲ್ಲಿ ಸೋಲುತ್ತಾರೆ. ಅಡುಗೆಯ ವಿಷಯದಲ್ಲಿಯೂ ಹೊಸ ಪ್ರಯೋಗಗಳನ್ನು ಚೆಂದವಾಗಿ ತೋರಿಸುವ ಯಾವುದೇ ಪ್ರಯತ್ನ ಕಾಣುವುದಿಲ್ಲ. ಪಾಕವಿಧಾನಗಳ ವಿಷಯಕ್ಕೆ ಬಂದಾಗ, ಬಟಾಟಾ (ಆಲೂಗಡ್ಡೆ) ಮುಸಲ್ಲಮ್ ರಿಪೀಟ್ ಆಗುತ್ತದೆ, ಇತರ ಭಕ್ಷ್ಯಗಳ ಬಗ್ಗೆ ಆಕೆ ಮಾಡಿದ ಪ್ರಯೋಗಗಳನ್ನು ಎಲ್ಲಿಯೂ ಹೈಲೈಟ್ ಮಾಡುವುದಿಲ್ಲ. ಸಿನಿಮಾದುದ್ದಕ್ಕೂ ತರ್ಲಾ ಸಸ್ಯಾಹಾರವನ್ನು ಪ್ರತಿಪಾದಿಸುತ್ತಿರುವಂತೆ ಭಾಸವಾಗುತ್ತದೆ. ನಳಿನ್, ನಾನ್ ವೆಜ್ ಸವಿಯುತ್ತಿರುವಾಗ ತರ್ಲಾ ಅಸಹ್ಯದಿಂದ ಛೀ ಅನ್ನುವುದು, ರೆಸ್ಟೋರೆಂಟ್‌ನಲ್ಲಿ ಆಕೆಯ ಪಕ್ಕದ ಟೇಬಲ್‌ನಲ್ಲಿ ಕುಳಿತ ವ್ಯಕ್ತಿ ಲೆಗ್ ಪೀಸ್ ತಿನ್ನುವುದನ್ನು ನೋಡಿ ಆಕೆ ಕುಳಿತ ಸೀಟ್ ಬದಲಿಸುವುದು ಇದಕ್ಕೆ ಉದಾಹರಣೆ.
ಬಯೋಪಿಕ್ ಅಂದಾಗ ನಿರೀಕ್ಷೆ ಜಾಸ್ತಿಯೇ ಇತ್ತು, ಆದರೆ ತರ್ಲಾ ನಿರೀಕ್ಷೆ ತಲುಪಿಲ್ಲ. ಹೆಣ್ಣೊಬ್ಬಳು ಸಾಧನೆ ಮಾಡಿದಳು ಎಂದು ಹೇಳುವಷ್ಟಕ್ಕೇ ಚಿತ್ರಕಥೆ ಬರೆದಂತಿದೆ. ತರ್ಲಾ ದಲಾಲ್ ಸಾಧಕಿ ಹೌದು, ಆದರೆ ಯಾಕೆ ಆಕೆ ಭಿನ್ನವಾಗಿದ್ದಳು ಎಂಬುದನ್ನು ಹೈಲೈಟ್ ಮಾಡುವುದಾಗಲೀ, ಹೊಸ ರೀತಿಯಲ್ಲಿ ಕತೆಯನ್ನು ಪ್ರಸ್ತುತಿ ಪಡಿಸುವ ಸಾಹಸಕ್ಕೆ ಸಿನಿಮಾ ತಂಡ ಕೈ ಹಾಕಿಲ್ಲ. ಗಟ್ಟಿ ಕತೆ ಇಲ್ಲ ಅಂತ ಅನಿಸಿದರೂ ಒಮ್ಮೆ ನೋಡಲಡ್ಡಿಯಿಲ್ಲ.