ಪ್ರೋಮೊಗಳಿಂದಾಗಿ ಆಗಾಗ ಸುದ್ದಿಯಾಗುತ್ತಿದ್ದ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಿತಿನ್‌ ಕೃಷ್ಣಮೂರ್ತಿ ನಿರ್ದೇಶನದ ಚಿತ್ರದಲ್ಲಿ ರಮ್ಯ, ರಕ್ಷಿತ್‌ ಶೆಟ್ಟಿ, ರಿಷಭ್‌ ಶೆಟ್ಟಿ, ಪವನ್‌ ಕುಮಾರ್‌, ದಿಗಂತ್‌ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜುಲೈ 21ರಂದು ಸಿನಿಮಾ ತೆರೆಗೆ ಬರುತ್ತಿದೆ.

‘ಅಪ್ಪು ಸರ್ ಪೋಸ್ಟರ್ ಲಾಂಚ್ ಮಾಡಿಕೊಟ್ಟಿದ್ದರು. ಅಲ್ಲಿಂದಲೇ ಜರ್ನಿ ಶುರುವಾಗಿದ್ದು. ಈ ಚಿತ್ರ ಮಾಡಲು ಎರಡು ವರ್ಷ ಬೇಕಾಯ್ತು. ಮಳೆ, ಲಾಕ್ ಡೌನ್‌ನಿಂದ ಸ್ವಲ್ಪ ಲೇಟ್ ಆಯ್ತು. ಇಷ್ಟು ದಿನ ಪ್ರೋಮೋ ಬಿಟ್ಟಿದ್ದೇವೆ. ಈಗ ಟ್ರೈಲರ್‌ ಬಂದಿದೆ. ಬಹಳಷ್ಟು ರಂಗಕಲಾವಿದರು ಅಭಿನಯಿಸಿರುವ ಸಿನಿಮಾಗೆ ಇಡೀ ಕನ್ನಡ ಚಿತ್ರರಂಗ ಜೊತೆಯಾಗಿದೆ’ ಎನ್ನುತ್ತಾರೆ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರದ ನಿರ್ದೇಶಕ ನಿತಿನ್‌ ಕೃಷ್ಣಮೂರ್ತಿ. ಪ್ರೋಮೋಗಳಿಂದ ಸುದ್ದಿಯಲ್ಲಿದ್ದ ಅವರ ಸಿನಿಮಾದ ಟ್ರೈಲರ್‌ ಈಗ ಬಿಡುಗಡೆಯಾಗಿದೆ. ಟ್ರೈಲರ್‌ನಲ್ಲೇ ಹಾಸ್ಟೆಲ್‌ನ ಕತೆ, ತುಂಟಾಟಗಳ ಝಲಕ್‌ ತೋರಿಸಿದ್ದಾರೆ ನಿತಿನ್‌. ಚಿತ್ರವನ್ನು ನಟ – ನಿರ್ದೇಶಕ ರಕ್ಷಿತ್‌ ಶೆಟ್ಟಿ ಅವರು ತಮ್ಮ ‘ಪರಂವಃ’ ಬ್ಯಾನರ್‌ನಡಿ ಬಿಡುಗಡೆ ಮಾಡುತ್ತಿದ್ದಾರೆ. ಅವರೂ ಸೇರಿದಂತೆ ಸ್ಯಾಂಡಲ್‌ವುಡ್‌ನ ರಮ್ಯ, ರಿಷಭ್‌ ಶೆಟ್ಟಿ, ಪವನ್‌ ಕುಮಾರ್‌, ದಿಗಂತ್‌ ಚಿತ್ರದ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕಿರಿಕ್‌ ಮಾಡುವ ವಾರ್ಡನ್‌ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್‌ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಟ್ರೈಲರ್‌ ಲಾಂಚ್‌ ಇವೆಂಟ್‌ನಲ್ಲಿ ಪಾಲ್ಗೊಂಡಿದ್ದ ರಿಷಭ್‌ ಶೆಟ್ಟಿ, ‘ಅರವಿಂದ್, ಪ್ರಜ್ವಲ್ ಇವರೆಲ್ಲರನ್ನೂ ಲೂಸಿಯಾ ಸಿನಿಮಾ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ಟೆಕ್ನಿಷಿಯನ್ಸ್. ಇದೊಂದು ಅದ್ಭುತ ತಂಡ. ಬೆಳೆಯುತ್ತಾ ಬೆಳೆಯುತ್ತಾ ಸಿನಿಮಾ ದೊಡ್ಡ ಸ್ಕೆಲ್ ಆಯ್ತು. 500 ಜನ ಕಲಾವಿದರನ್ನು ಕಂಪ್ಲೀಟ್ ನೈಟ್ ಸೀಕ್ವೆನ್ಸ್‌ನಲ್ಲಿ ಶೂಟ್ ಮಾಡುವುದು ತುಂಬಾ ಚಾಲೆಂಜಿಂಗ್. ಚಿತ್ರವನ್ನು ಜನರು ಖಂಡಿತ ಎಂಜಾಯ್‌ ಮಾಡುತ್ತಾರೆ’ ಎಂದರು. ‘ಒಬ್ಬ ಪ್ರೇಕ್ಷಕನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ನೋಡಿದಾಗ ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಂಡೆ. ಏಳೆಂಟು ವರ್ಷ ನಾವು ಹಾಸ್ಟೆಲ್‌ನಲ್ಲಿ ಇದ್ದೆವು. ಅದನ್ನು ನೋಡಿದ ತಕ್ಷಣ ನಾವು ಹೀಗೆ ಇದ್ವಲ್ಲಾ ಅನಿಸಿತು. ನಾನು ಫಸ್ಟ್ ಡೇ ಫಸ್ಟ್ ಶೋ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡುತ್ತೇನೆ’ ಎನ್ನುವುದು ಅತಿಥಿಯಾಗಿ ಪಾಲ್ಗೊಂಡಿದ್ದ ಧ್ರುವ ಸರ್ಜಾ ಮಾತು.

ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿರುವ ನಟ ರಕ್ಷಿತ್‌ ಶೆಟ್ಟಿ, ‘ನಾನು ಈ ಪ್ರೋಗ್ರಾಂಗೆ ಗೆಸ್ಟ್ ಆಗಿ ಬಂದಿಲ್ಲ. ಯಾಕೆಂದರೆ ನಾನು ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ. ಅಪ್ಪು ಸರ್ ಏನೇ ಶುರು ಮಾಡಿದರೂ ಅದ್ಭುತ ರಿಸ್ಟಲ್ ಕೊಡುತ್ತದೆ ಎಂಬ ನಂಬಿಕೆ. ಪರವಃ ಸ್ಟುಡಿಯೋಸ್ ಕಚೇರಿಯನ್ನು ಅವರೇ ಉದ್ಘಾಟಿಸಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಫಸ್ಟ್ ಪೋಸ್ಟರ್ ಅವರೇ ಲಾಂಚ್ ಮಾಡಿದ್ದರು. ಈ ಸಿನಿಮಾವನ್ನು ಎರಡು ಬಾರಿ ನೋಡಿದ್ದೇನೆ. 2 ಸಲ ನೋಡುವಾಗಲೂ ಅಷ್ಟೇ ಎಂಜಾಯ್ ಮಾಡಿದ್ದೇನೆ’ ಎನ್ನುತ್ತಾರೆ. ವರುಣ್‌ ಗೌಡ, ಪ್ರಜ್ವಲ್ ಬಿಪಿ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜೊತೆಗೆ ಸೇರಿ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಿರ್ಮಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕಿದೆ. ಜುಲೈ 21ರಂದು ಸಿನಿಮಾ ತೆರೆಕಾಣಲಿದೆ.

Previous articleಅಡುಗೆ ಘಮವಿದ್ದರೂ, ಸೊರಗಿದ ಚಿತ್ರಕಥೆಯಿಂದಾಗಿ ಸಪ್ಪೆ ಎನಿಸಿದ ‘ತರ್ಲಾ’
Next article‘ಸುಂದರಂ ಮಾಸ್ಟರ್’ ಟೀಸರ್‌ | ರವಿತೇಜ ನಿರ್ಮಾಣದ ತೆಲುಗು ಸಿನಿಮಾ ಜುಲೈ 28ಕ್ಕೆ

LEAVE A REPLY

Connect with

Please enter your comment!
Please enter your name here