ಏನು ಹೇಳಬೇಕೋ, ಎಷ್ಟು ಹೇಳಬೇಕೋ, ಹೇಗೆ ಹೇಳಬೇಕೋ ಹಾಗೆ ಹೇಳಿ ಮುಗಿಸಿ ‘ಕ್ರೌನ್’ ಸರಣಿ ಬ್ರಿಟಿಷ್ ರಾಜಕುಟುಂಬದ ವೈಭವ, ವಿಪರ್ಯಾಸ, ಅದೃಷ್ಟ, ದುರಾದೃಷ್ಟ ಮತ್ತು ಭವಿಷ್ಯ ಇಷ್ಟರ ಚಿತ್ರಣಗಳನ್ನೂ ನೀಡುತ್ತಾ ಮನಸ್ಸನ್ನು ಭಾರವಾಗಿಸುತ್ತಲೇ, ಕಣ್ಣಂಚನ್ನು ತೇವ ಮಾಡುತ್ತಾ ಮುಗಿಯುತ್ತದೆ. ‘ಕ್ರೌನ್’ ಸರಣಿ Netflixನಲ್ಲಿ ಲಭ್ಯವಿದೆ.
ರಾಜಕುಮಾರಿ ಡಯಾನ ಕುರಿತಾದ ಬಹುಚರ್ಚಿತ ಮತ್ತು ಜನಪ್ರಿಯ ಸರಣಿ ‘ಕ್ರೌನ್’ ಸೀಸನ್ 6 ಭಾಗ ಒಂದು ಬಿಡುಗಡೆಯಾಗಿ ಒಂದು ತಿಂಗಳ ಬೆನ್ನಲ್ಲೇ ಸೀಸನ್ 6 ಭಾಗ ಎರಡು Netflixನಲ್ಲಿ ಬಿಡುಗಡೆಯಾಗಿದೆ ಮತ್ತು ಈ ಸರಣಿಯ ಕೊನೆಯ ಸೀಸನ್ ಇದು. ಮನಸ್ಸಿನಲ್ಲಿ ಒಂದು ತುಂಬಲಾರದ ಖಾಲಿತನವನ್ನು ಉಳಿಸುತ್ತಲೇ ಈ ಸೀಸನ್ 6ರ ಎರಡನೇ ಭಾಗ ಮುಕ್ತಾಯವಾಗುತ್ತದೆ. ಈ ಭಾಗದಲ್ಲಿ ಆರು ಸಂಚಿಕೆಗಳಿವೆ. ಕಳೆದ ತಿಂಗಳು ಬಿಡುಗಡೆಯಾಗಿದ್ದ ಸೀಸನ್ 6, ಭಾಗ ಒಂದರಲ್ಲಿ ರಾಜಕುಮಾರಿ ಡಯಾನ ಅಪಘಾತದಲ್ಲಿ ಮಡಿದದ್ದು ಮತ್ತು ಆಕೆಯ ಅಂತ್ಯಸಂಸ್ಕಾರ ಇವುಗಳನ್ನೆಲ್ಲ ತೋರಿಸಲಾಗಿತ್ತು. ಈ ಭಾಗದಲ್ಲಿ ಈ ಸರಣಿಯ ಕೇಂದ್ರಬಿಂದುವಾದ ರಾಣಿ ಎಲಿಜಬತ್‌ರ ಮರಣದ ಸುತ್ತ ಹೆಣೆಯಲಾಗಿದೆ. ಪ್ರಸಕ್ತ ಕಾಲಘಟ್ಟದ ಅವರ ಮರಣವನ್ನು ತೋರಿಸಲಾಗದಿದ್ದರೂ ನಿರ್ದೇಶಕ ಪೀಟರ್ ಮಾರ್ಗನ್ ರಾಣಿ ಎಲಿಜಬತ್‌ರ ಆಳ್ವಿಕೆ, ಜೀವನ ಮತ್ತು ಅವರ ಮರಣದ ಸನಿಹದ ದಿನಗಳನ್ನು ಸಹಜವಾಗಿ ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸರಣಿಯಲ್ಲಿ ಜನ ಏನನ್ನು ನೋಡಬಯಸುತ್ತಾರೆ ಅನ್ನುವುದಕ್ಕಿಂತಲೂ ನಿರ್ಮಾಣ ತಂಡ ಏನನ್ನು ತೆರೆಯ ಮೇಲೆ ತೋರಿಸಲು ಸಾಧ್ಯವಾಗಿದೆ ಎನ್ನುವುದರ ಮೇಲೆ ಸರಣಿ ವಿನ್ಯಾಸವಾಗಿರುವುದನ್ನು ಗಮನಿಸಬಹುದು. ಸೀಸನ್ 4ರಲ್ಲಿ ಎಮ್ಮ ಕೋರಿನ ವೇಲ್ಸ್‌ನ ಮುಂದಿನ ರಾಜಕುಮಾರಿ ಎಂಬ ಪರಿಚಯ ಆದಾಗಿನಿಂದಲೂ ಈ ಸರಣಿಯ ಕೇಂದ್ರಬಿಂದು ಡಯಾನ ಮಾತ್ರವೇ ಆಗಿರುವುದು ಹೌದು. ಎರಡನೇ ವಿಶ್ವಯುದ್ಧದಿಂದ ಹಿಡಿದು ಇಂದಿನವರೆಗೂ ಪ್ರತಿಯೊಂದು ದಶಕದಲ್ಲಿ ಬ್ರಿಟಿಷ್ ಏಕಚಕ್ರಾಧಿಪತ್ಯದ ನಾಟಕೀಯ ಚಿತ್ರಣವನ್ನು ಈ ಸರಣಿ ಕಟ್ಟಿಕೊಟ್ಟಿದೆ. 25 ವರ್ಷಗಳ ಹಿಂದೆ ನಡೆದ ಆಕೆಯ ದುರಂತದ ಸಾವು ಲಕ್ಷಾಂತರ ಮನಸ್ಸುಗಳಲ್ಲಿ ಉಳಿಸಿ ಹೋದ ಆ ಖಾಲಿತನ ಈ ಸರಣಿಯಲ್ಲೂ ಆಕೆಯ ಮರಣದ ನಂತರದ ಸಂಚಿಕೆಗಳಲ್ಲಿ ಕಂಡುಬರುತ್ತದೆ. ಆಕೆಯ ಸಾವಿನ ನಂತರ ಸರಣಿ ತನ್ನ ದಿಕ್ಕನ್ನೇ, ಆತ್ಮವನ್ನೇ ಕಳೆದುಕೊಂಡಂತೆ ಆಗುತ್ತದೆ. ಇಡೀ ಸರಣಿಯನ್ನು ಆವರಿಸಿದ್ದ ಡಯಾನಳ ಜಾದೂ ಇಲ್ಲದ ಸರಣಿಯ ಎರಡನೇ ಭಾಗದ ಅಂತ್ಯವನ್ನು ಊಹಿಸಲೂ ಅಸಾಧ್ಯವಾಗುತ್ತದೆ. ಮೊದಲನೇ ಭಾಗದ ಡಯಾನಳ ಮರಣವೇ ಸರಣಿಯ ನಿಜವಾದ ಅಂತ್ಯ ಎನಿಸುವಷ್ಟು ಈ ಎರಡನೇ ಭಾಗ ಮಂಕಾಗಿ ಕಾಣುತ್ತದೆ.
‘ಕ್ರೌನ್’ ಸರಣಿ 2010ರ ಕಾಲಘಟ್ಟಕ್ಕೆ ಹೋಗದೇ ಮೇಗನ್ ಮಾರ್ಕೆಲ್ ರಾಜಕುಟುಂಬಕ್ಕೆ ಸೇರ್ಪಡೆಯಾಗುವ ದಿನಗಳನ್ನು ಕುರಿತು ಕಥೆ ಮಾಡುವ ಸಾಹಸಕ್ಕೆ ಮುಂದಾಗಿಲ್ಲ. ಎಷ್ಟು ಬೇಕೋ, ಎಷ್ಟು ಲಭ್ಯವಿದೆಯೋ ಅಷ್ಟೇ ಘಟನೆಗಳನ್ನು ಇಟ್ಟುಕೊಂಡು ಮಾರ್ಗನ್ ಕಥೆಯನ್ನು ಹೆಣೆದಿದ್ದಾರೆ. ಅದು ರಾಜಕುಮಾರ್ ವಿಲಿಯಮ್ ಮತ್ತು ಕೇಟ್ ಮಿಡಲ್ಟನ್ ನಡುವಿನ ಸ್ಕಾಟ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿನ ಒಡನಾಟ ಇರಬಹುದು, ಪಾರ್ಶ್ವವಾಯುವಿನಿಂದ ಉಂಟಾದ ರಾಜಕುಮಾರಿ ಮಾರ್ಗರೆಟ್‌ರ ಸಾವು ಇರಬಹುದು ಅಥವಾ ಹಲವು ವರ್ಷಗಳ ಒಡನಾಟದ ನಂತರ ವಿವಾಹವಾದ ರಾಜಕುಮಾರ ಚಾರ್ಲ್ಸ್ ಮತ್ತು ಕಮೀಲಾರ ವಿವಾಹ ಇರಬಹುದು, ಮಾರ್ಗನ್ ತಮ್ಮ ಮಿತಿಯನ್ನು ಅಷ್ಟಕ್ಕೇ ಹಾಕಿಕೊಂಡು ಕತೆ ಹೆಣೆದಿದ್ದಾರೆ.
ಸೀಸನ್ 6 ಭಾಗ ಒಂದರಲ್ಲಿ ಎಂಟೇ ವಾರಗಳ ಅವಧಿಯಲ್ಲಿ ಡಯಾನರ ಬದುಕು ಮತ್ತು ಮರಣವನ್ನು ಕೇಂದ್ರೀಕರಿಸಿ ಚಿತ್ರಿಸಿದ್ದರೆ ಈ ಭಾಗ ಎರಡರಲ್ಲಿ ಅಂತ್ಯಕ್ರಿಯೆಯ ನಂತರ ವಿಲಿಯಮ್ ಇಟಾನ್‌ಗೆ ವಾಪಸಾಗುವಿಕೆ ಇಂದ ಆರಂಭಿಸಿ, ಇರಾಕ್ ಯುದ್ಧದ ಚಿತ್ರಣ ಮತ್ತು ಚಾರ್ಲ್ಸ್ ವಿವಾಹ ಸೇರಿದಂತೆ ರಾಜಕುಟುಂಬದ ಒಂದು ಇಡೀ ದಶಕದ ಚಿತ್ರಣದೊಂದಿಗೆ ಸರಣಿ ಮುಗಿದುಬಿಡುತ್ತದೆ. ‘ಕ್ರೌನ್’ ಸರಣಿಯ ಒಂದು ಅನನ್ಯ ವಿನ್ಯಾಸ ಹೇಗಿದೆ ಎಂದರೆ ಒಂದು ಸಂದರ್ಭದಲ್ಲಿ ನಾಟಕೀಯ ಸವಾಲೊಂದು ಎದುರಾಗಿಬಿಡುತ್ತದೆ. ಅದೇನೆಂದರೆ ಚಾರ್ಲ್ಸ್ ಮತ್ತು ಡಯಾನ ನಂತರದ ರಾಜಕುಟುಂಬದ ಪೀಳಿಗೆಯಾದ ಹೆನ್ರಿ ಮತ್ತು ವಿಲಿಯಮ್ ಅನ್ನು ಸರಣಿಯ ಮುಂದಿನ ಕಥಾನಾಯಕರಂತೆ ಬಿಂಬಿಸುವ ಸವಾಲು. ಈಗಾಗಲೇ ವೀಕ್ಷಕರ ಮನಸ್ಸಲ್ಲಿ ಅಚ್ಚು ಒತ್ತಿರುವ ಹಾಗೂ ಮುನ್ನಲೆಯಲ್ಲಿರುವ ಡಯಾನ ಮತ್ತು ಚಾರ್ಲ್ಸ್ ಕಥೆಯ ಗುಂಗಿನಿಂದ ಹೊರಬಂದು ಮುಂದಿನ ಪೀಳಿಗೆಯ ಕಥಾನಾಯಕರ ಕಡೆ ಮನಸ್ಸು ವಾಲುವಂತೆ ಮಾಡುವುದು ಕಷ್ಟ. ಹೆನ್ರಿ ಅಥವ ವಿಲಿಯಮ್ ಇಬ್ಬರ ಪಾತ್ರದ ಬೆಳವಣಿಗೆಗೂ ಇಲ್ಲಿ ಹೆಚ್ಚು ಅವಕಾಶವಿಲ್ಲ. ಇರುವುದರಲ್ಲಿ ಡಯಾನಳ ಮರಣದ ನಂತರ ವಿಲಿಯಮ್ ಮತ್ತು ಚಾರ್ಲ್ಸ್ ನಡುವಿನ ಕೆಲ ಭಾವನಾತ್ಮಕ ಘರ್ಷಣೆಯ ಸನ್ನಿವೇಶಗಳು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಆದರೂ ವಿಲಿಯಮ್, ಹ್ಯಾರಿ ಮತ್ತು ಕೇಟ್ ಪಾತ್ರಗಳಿಗೆ ಹೆಚ್ಚು ಅವಕಾಶವಿಲ್ಲ.
ಇವರುಗಳ ಬದಲಾಗಿ ‘ಕ್ರೌನ್’ ಸರಣಿ ರಾಣಿ ಎಲ್ಲಿಜಬೇತ್ ಪಾತ್ರವನ್ನು ಮತ್ತೆ ಮುನ್ನಲೆಗೆ ತರುವುದರ ಮೂಲಕ ಆಕೆಯ ಪಾತ್ರಕ್ಕೆ ಇದುವರೆಗೂ ಸಿಗದೇ ಇದ್ದ ಮಹತ್ವವನ್ನು ಮರಳಿಸಿಕೊಟ್ಟಿದೆ. ಹಿಂದಿನ ರಾಜಪೀಳಿಗೆಯ ಅಂತ್ಯ ಮತ್ತು ಮುಂದಿನ ರಾಜಪೀಳಿಗೆಯ ಆರಂಭವನ್ನು ತೂಗಿಸಿಕೊಂಡು ಹೋಗುವ ಭರದಲ್ಲಿ ಯುವ ಪೀಳಿಗೆಗೆ ಹೆಚ್ಚು ಮಹತ್ವವನ್ನು ಈ ಸರಣಿಯಲ್ಲಿ ಕಲ್ಪಿಸಲಾಗಿಲ್ಲ. ಒಂದಷ್ಟು ಹಳೆಯ ಮಡಿವಂತ ವ್ಯವಸ್ಥೆಯ ಘಟನಾವಳಿಗಳ ಸಶಕ್ತ ನಿರೂಪಣೆಯನ್ನು ಈ ಭಾಗದಲ್ಲಿ ಕಾಣಬಹುದು. ಸಂಪ್ರದಾಯವೇ ನಮ್ಮ ಶಕ್ತಿ ಎಂದು ಹೇಳುತ್ತಲೇ ಹೊಸಗಾಳಿಗೆ ನಮ್ಮತ್ತ ಬರಲು ಅವಕಾಶ ಕಲ್ಪಿಸಬೇಕು ಎನ್ನುವ ಸಂದೇಶಗಳನ್ನು ಸರಣಿ ನೀಡುತ್ತದೆ.
‘ಕ್ರೌನ್’ ಸರಣಿ ಏಕಚಕ್ರಾಧಿಪತ್ಯದ ವಿರುದ್ಧ ಇದ್ದ ದನಿಗಳಿಗೆಲ್ಲ ಒಂದು ವೇದಿಕೆಯನ್ನು ಕೂಡ ಕಲ್ಪಿಸುತ್ತದೆ. ಅದೇನೇ ಆದರೂ ಸರಣಿಯ ಕೊನೆಗೆ ಎಲಿಜಬೆತ್ ದೃಷ್ಟಿಕೋನವನ್ನು ಮುನ್ನಲೆಗೆ ತರುತ್ತಾ ಸರಣಿ ಮುಗಿಯುತ್ತದೆ. ಯಾರೊಪ್ಪಲಿ ಬಿಡಲಿ ಬ್ರಿಟನ್ ರಾಣಿಯ ಮಾತುಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಸರಣಿಯ ಆರಂಭದಿಂದಲೂ ನಾಟಕೀಯತೆಗೆ ಹೆಚ್ಚು ಮಹತ್ವ ಕೊಟ್ಟ ಸರಣಿ ಇದು. ಏನು ಹೇಳಬೇಕೋ, ಎಷ್ಟು ಹೇಳಬೇಕೋ, ಹೇಗೆ ಹೇಳಬೇಕೋ ಹಾಗೆ ಹೇಳಿ ಮುಗಿಸಿ ‘ಕ್ರೌನ್’ ಸರಣಿ ಬ್ರಿಟಿಷ್ ರಾಜಕುಟುಂಬದ ವೈಭವ, ವಿಪರ್ಯಾಸ, ಅದೃಷ್ಟ, ದುರಾದೃಷ್ಟ ಮತ್ತು ಭವಿಷ್ಯ ಇಷ್ಟರ ಚಿತ್ರಣಗಳನ್ನೂ ನೀಡುತ್ತಾ ಮನಸ್ಸನ್ನು ಭಾರವಾಗಿಸುತ್ತಲೇ, ಕಣ್ಣಂಚನ್ನು ತೇವ ಮಾಡುತ್ತಾ ಮುಗಿಯುತ್ತದೆ. ‘ಕ್ರೌನ್’ ಸರಣಿ Netflixನಲ್ಲಿ ಲಭ್ಯವಿದೆ.