ಅನಾಮಿಕಾ ಒಬ್ಬ ಪರ್ಫೆಕ್ಟ್ ಅಮ್ಮನಾಗಿ, ಮಕ್ಕಳ ಮನೆಯ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವ ಎಲ್ಲ ದೃಶ್ಯಗಳೂ ಅತ್ಯಂತ ಸಹಜ ಮತ್ತು ಸುಂದರವಾಗಿವೆ. ಮಾಧುರಿ ದೀಕ್ಷಿತ್‌ ಅಭಿನಯದ ‘ಫೇಮ್‌ ಗೇಮ್‌’ ವೆಬ್‌ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಅವಳು ಪ್ರಸಿದ್ಧ ನಟಿ. ಅಮ್ಮ, ಗಂಡ, ಇಬ್ಬರು ಬೆಳೆದ ಮಕ್ಕಳು, ಹಣ, ಕೀರ್ತಿ, ಕಾರು, ಬಂಗಲೆ, ಕುಟುಂಬ ಪ್ರೀತಿ.. ಹೀಗೆ ಹೊರಗಿನಿಂದ ಎಲ್ಲವೂ ಇರುವ ಪರ್ಫೆಕ್ಟ್ ಜೀವನ ಅವಳದು. ಆದರೆ ನಿಜಕ್ಕೂ ಅವಳಿಗೆ ಸಂತೋಷವಿತ್ತಾ? ಸ್ಟಾರ್ ಆಗುವುದಕ್ಕಿಂತಲೂ ಆ ಸ್ಟಾರ್‌ಗಿರಿಯನ್ನು ಸಾಕುವುದೇ ಬಲು ಕಷ್ಟ. ಸೆಲೆಬ್ರಿಟಿಗಳಿಗೆ, ಅದರಲ್ಲೂ ಸಿನಿಮಾದವರಿಗೆ ತಮ್ಮ ಸುತ್ತ ಸುಳಿವವರಲ್ಲಿ ಯಾರು ನಿಜ, ಯಾರ ಪ್ರೀತಿ ಕೃತಕ ಎಂದು ಗೊತ್ತೇ ಆಗುವುದಿಲ್ಲ. ಮತ್ತು ಸುತ್ತ ಸುಳಿವವರ ಕುರಿತು ಅವರಿಗಿರುವ ಪ್ರೀತಿ, ವಿಶ್ವಾಸ, ನಂಬಿಕೆಗಳ ಸುಳ್ಳು ನಿಜಗಳೂ ಗೊತ್ತಾಗುವುದಿಲ್ಲ.

‘ಫೇಮ್‍ ಗೇಮ್’ ವೆಬ್ ಸೀರೀಸಿನ ನಟಿ ಅನಾಮಿಕಾ ಆನಂದ್ ಕೂಡ ಹಾಗೆಯೇ. ಒಳಗೆ ಜ್ವಾಲೆಯೇ ಇದ್ದರೂ ಐಸ್‍ಕ್ರೀಮಿನಷ್ಟು ತಣ್ಣಗೆ ನಗಬಲ್ಲಳು ಅವಳು. ಒಳಗೆಷ್ಟೇ ಕತ್ತಲಿದ್ದರೂ ಅವಳ ಮುಖದಲ್ಲಿ ಸಾವಿರ ವ್ಯಾಟ್ಸಿನ ಬಲ್ಬು! ಅನಾಮಿಕಾ ಆನಂದ್ ಎಂಬ ನಟಿಯ ಬದುಕಿನಲ್ಲಿ ಎಲ್ಲವೂ ಸರಿ ಇದೆ ಎಂಬ ಪರಿಚಯದೊಂದಿಗೆ ಆರಂಭವಾಗುವ ಕತೆ, ಅವಳು ಇದ್ದಕ್ಕಿದ್ದಂತೆ ಕಾಣೆಯಾಗುವುದರೊಂದಿಗೆ ಟೇಕ್ ಆಫ್ ಆಗುತ್ತದೆ. ಅಲ್ಲಿಂದ ಅವಳ ಮನೆಯವರು ಮತ್ತು ಚಿತ್ರೋದ್ಯಮದವರ ಮತ್ತೊಂದು ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಅವಳ ಬದುಕನ್ನು ತಾನು ನಿರ್ಧರಿಸುವ ಅಮ್ಮ, ಅವಳ ದುಡಿಮೆಯಲ್ಲಿ ಬದುಕುವ ಗಂಡ, ಅಮ್ಮನಂತಾ ಸುಂದರಿ ನಾನಲ್ಲ ಅಂತ ಕೊರಗುವ ಸಿನಿಮಾ ಕನಸು ಹೊತ್ತ ಮಗಳು. ವ್ಯವಹಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಗಂಡ. ಇಲ್ಲಿ ಎಲ್ಲವೂ ಬ್ಯುಸಿನೆಸ್, ಪ್ರತಿಯೊಂದಕ್ಕೂ ಬೆಲೆ ಇದೆ. ನಿನಗೂ, ನಿನ್ನ ರಾತ್ರಿಗಳಿಗೂ ಅನ್ನುವ ಸಿನಿಮಾ ಬಂಡವಾಳಗಾರ. ಯಾರೂ ಸರಿ ಇಲ್ಲ ಅನಿಸುವಾಗ ಸಿನಿಮಾ ಮತ್ತೆ ಅವರ ವರ್ತನೆಗಳಿಗೆ ಕಾರಣಗಳನ್ನು ಕೊಡುತ್ತಾ ಅವರನ್ನು ಕಪ್ಪಿನಿಂದ ಗ್ರೇ ಕ್ಯಾರೆಕ್ಟರುಗಳಾಗಿಸುತ್ತದೆ. ಅನಾಮಿಕಾ ಎಲ್ಲರನ್ನೂ ಸಲುಹುವ ತಾಯಿ.

ಹೆಸರಿಗೆ ತಕ್ಕಂತೆ ತಾನು ಯಾರು? ಎಂಬುದು ಅವಳಿಗೇ ಗೊತ್ತಿಲ್ಲ. ತನಗೇನು ಬೇಕೆಂಬುದೂ ಗೊತ್ತಿಲ್ಲ. ಮಕ್ಕಳು ಅವಳ ಜೀವನದ ಅತಿಮುಖ್ಯ ಆದ್ಯತೆ. ಅವಳು ತನ್ನದೆಲ್ಲವನ್ನೂ ಬದಿಗಿಡುವುದು, ತನ್ನ ಯೋಚನೆಯನ್ನೇ ಮರೆಯುವುದು ಅವರಿಗಾಗಿ. ಮಕ್ಕಳೆಂದರೆ ಅವಳಿಗೆ ಪ್ರಾಣ. ಹೀಗೇ ಬದುಕು ನಡೆವಾಗ ಬರುತ್ತಾನೆ ಅವಳ ಹಳೆಯ ಗೆಳೆಯ, ಸಹಕಲಾವಿದ, ಮನೀಷ್ ಖನ್ನಾ. 20 ವರುಷಗಳ ನಂತರ ನಿಖಿಲ್ (ಅನಾಮಿಕಾ ಗಂಡ) ಅವನನ್ನು ಸಿನಿಮಾಗಾಗಿ ಕರೆತರುತ್ತಾನೆ. ಅದು ಸಿನಿಮಾ ವ್ಯಾಪಾರದ ಭಾಗವಾಗಿ. ಅಲ್ಲಿಂದ ಶುರುವಾಗುತ್ತದೆ ಮತ್ತೆ. ಅವಳ ಕಟ್ಟೆಸೆದಿದ್ದ ಕನಸುಗಳು ಕಟ್ಟೆಯೊಡೆಯುತ್ತವೆ. ಹರೆಯದ ಮಕ್ಕಳ ವಯೋಸಹಜ ಹುಚ್ಚಾಟಗಳ ಜೊತೆ ತನ್ನ ಗರಿಬಿಚ್ಚಿದ ಕನಸುಗಳನ್ನೂ ಜೊತೆಜೊತೆಗೇ ಸಂಭಾಳಿಸಲಾರದೇ ಬಸವಳಿಯುತ್ತಾಳೆ. ಆದರೆ ಮೇಲೆ ಮಾತ್ರ ಅವಳದು ಅದೇ ಪರ್ಫೆಕ್ಟ್ ಕುಟುಂಬದ ತೋರಿಕೆಯ ನಗುವಿನ ಬದುಕು.

ಅನಾಮಿಕಾ ಒಬ್ಬ ಪರ್ಫೆಕ್ಟ್ ಅಮ್ಮನಾಗಿ, ಮಕ್ಕಳ ಮನೆಯ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವ ಎಲ್ಲ ದೃಶ್ಯಗಳೂ ಅತ್ಯಂತ ಸಹಜ ಮತ್ತು ಸುಂದರವಾಗಿವೆ. ಮಗಳಿಗೆ, ‘ಪ್ರಸಿದ್ದಿ ಅನ್ನುವುದು ಅಪಾಯ ಮಗಳೇ’ ಅನ್ನುತ್ತಾಳೆ. ಮಗ ಯಾವ್ದೋ ಹುಡುಗಿಯ ಜೊತೆಗಿದ್ದು ಬಂದಾಗ, ‘ಕನಿಷ್ಟ ಅವಳ ಹೆಸರು ಕೇಳುವ ಸೌಜನ್ಯವಿರಬೇಕು ನಿನಗೆ, ಅವಳದೂ ವೃತ್ತಿ. ಅದನ್ನು ಗೌರವಿಸು’ ಅನ್ನುತ್ತಾಳೆ. ಹಿಂಸಿಸಿ, ನಂತರ ನಿನ್ನ ನೆರಳಲ್ಲಿ ಬದುಕ್ತಿದೀನಿ ಅನ್ನುವ ಗಂಡನೆಡೆಗೂ ಅವಳದು ಕರುಣೆಯ ನೋಟ. ಪೇಮ್‍ನ ಹ್ಯಾಂಡಲ್ ಮಾಡಬೇಕು ಅನ್ನುವ ತಾಯಿಯ ಮಾತಿಗೆ ಹೂಗುಟ್ಟುತ್ತಾಳೆ. ಗೇ ಮಗನನ್ನು ಸಂತೈಸುವ ದೃಶ್ಯ ಮಾತ್ರ ಅದ್ಬುತ. ನಮಗೆ ನಾವೇ ಸುಳ್ ಹೇಳ್ಕೊಂಡಾಗ ಜೀವನ ಬಹಳ ಕಷ್ಟವಾಗುತ್ತದೆ ಅನ್ನುತ್ತಾಳೆ. ಎಷ್ಟೊಂದು ನಂಬಿದ ಮೇಕಪ್ ಮ್ಯಾನ್ ಮಾಡಿದ ಮೋಸಕ್ಕೆ ನಲುಗಿಹೋಗುತ್ತಾಳೆ. ಈ ಎಲ್ಲ ಕಡೆಯೂ ಪ್ರಬುದ್ಧಳಾಗಿ ತ್ಯಾಗಮಯಿಯಾಗಿ ಕಾಣುವ ಅನಾಮಿಕ ನಿಜಕ್ಕೂ ಅದೇನಾ? ಇಲ್ಲಿ ನಿರ್ದೇಶಕರು ಗೊಂದಲಗೊಳಿಸುತ್ತಾರೆ.

ಕೊನೆಯ ಎಪಿಸೋಡ್‍ನಲ್ಲಿ ಕಾಣೆಯಾಗುವುದು ಕೂಡ ಅವಳ ಆಟದ ಭಾಗವೇ ಆಗಿತ್ತು ಎಂದು ಹೇಳುವ ಮೂಲಕ ಅವಳ ಕ್ಯಾರೆಕ್ಟರ್ ಸ್ವಲ್ಪ ಕೆಳಗೆ ಬಿದ್ದಂತೆನಿಸುತ್ತದೆ. ಆದರೆ ಹಾಗೆ ಮಾಡಿದ್ದರಿಂದ ಅದು ತೀರಾ ತ್ಯಾಗರಾಣಿಯ ಇಮೇಜ್ ಒಡೆದುಹಾಕಿದೆ. ಯಾರೆಂದರೆ ಯಾರನ್ನೂ ನಂಬದ ಅವಳಿಗೆ ಈ ಆಟ ಅನಿವಾರ್ಯವಾಗಿತ್ತೇನೋ. ಇನ್ನು ನನ್ನ ಬದುಕನ್ನು ನಾನೇ ನಿರ್ಧರಿಸುತ್ತೇನೆ ಅಂತ ಹೊರಟು ಆಡಿದ ಆಟದಲ್ಲಿ ಗೆಲ್ಲುತ್ತಾಳೆ. ಆದರೆ ಅನಾಮಿಕಾ ಕಳೆದುಕೊಂಡದ್ದೇನು? ಪಡೆದುಕೊಂಡದ್ದೇನು? ಅಂತ ನೋಡಿದರೆ ಇದು ನಿಜಕ್ಕೂ ಫೇಮ್ ಗೇಮೇ ಅನಿಸುತ್ತದೆ.

ಬಾಲಿವುಡ್ ಸ್ಟಾರ್ ಕತೆಯಾದರೂ ಇದು ಸಣ್ಣ ದೊಡ್ಡ ಎಲ್ಲ ನಟಿಯರಿಗೂ, ನಟರಿಗೂ ಅನ್ವಯಿಸುವ ಕತೆ. ಕೆಲವು ಸಲ ಸ್ಟಾರ್‌ಗಳದ್ದು ಮಾತ್ರವಲ್ಲ, ಸಾಮಾನ್ಯರ ಬದುಕಿನಲ್ಲಿ ಕೂಡ ಅನೇಕ ಹೆಣ್ಮಕ್ಕಳ ಬದುಕು ಹೀಗೇ ಇರುತ್ತದೆ. ಅವರೂ ಹೊರಗೆ ನಗುತ್ತಾ, ಒಳಗೆ ನೋವುಣ್ಣುತ್ತಾ, ತಮ್ಮ ಕನಸುಗಳನ್ನು ಮಕ್ಕಳಿಗಾಗಿ ಕೊಂದುಕೊಳ್ಳುತ್ತಾ ಬದುಕುತ್ತಿರುತ್ತಾರೆ. ಪ್ರಕರಣ ಬೇಧಿಸಲು ಬಂದ ಪೋಲಿಸ್ ಅಧಿಕಾರಿ ತ್ರಿವೇದಿ, ದೃಶ್ಯಗಳಲ್ಲಿ ಕೆಲಸಕ್ಕಿಂತ ಮಾತಿನ ಆರ್ಭಟವೇ ಹೆಚ್ಚಾಗಿದೆ. ಸ್ಕ್ರಿಪ್ಟ್ ಬರೆಯುವುದನ್ನು ಕಲಿಯಲು ಇಂತಹ ಸೀರೀಸ್‍ಗಳನ್ನು ನೋಡಬೇಕು. ಕತೆಯನ್ನು ಹಿಂದಕ್ಕೂ ಮುಂದಕ್ಕೂ ಚಲಿಸುವಂತೆ ಮಾಡುತ್ತಾ ಹೇಳುವ ನರೇಶನ್ ಮೆಚ್ಚುವಂತಿದೆ. ‘ಫೇಮ್ ಗೇಮ್’ ಕುರಿತ ಮಾಧುರಿಯ ಸಂದರ್ಶನ ನೋಡಿದೆ. ಅದರಲ್ಲಿ ಅನಾಮಿಕಳೇ ಕಂಡಳು. ಆ ನಗುವಿನೊಳಗೆ ಎಷ್ಟು ನೋವುಗಳೋ..

LEAVE A REPLY

Connect with

Please enter your comment!
Please enter your name here