ಫೈನಾನ್ಶಿಯರ್‌ ವಿ.ಎಲ್‌.ಶವರಣಕುಮಾರ್‌ ಅವರು ನಿರ್ಮಾಪಕ ಬೆಲ್ಲಮಕೊಂಡ ಸುರೇಶ ಮತ್ತು ಅವರ ಪುತ್ರ, ನಟ ಬೆಲ್ಲಮಕೊಂಡ ಸಾಯಿ ಶ್ರೀನಿವಾಸ್‌ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಬೆಲ್ಲಮಕೊಂಡ ಸುರೇಶ್‌ ಮತ್ತು ಅವರ ಪುತ್ರ, ನಟ ಬೆಲ್ಲಮಕೊಂಡ ಸಾಯಿ ಶ್ರೀನಿವಾಸ್‌ ವಿರುದ್ಧ ವಂಚನೆ ದೂರು ದಾಖಲಾಗಿದೆ. ಸಿನಿಮಾ ನಿರ್ಮಿಸುವುದಾಗಿ ಫೈನಾನ್ಶಿಯರ್‌ ವಿ.ಎಲ್‌.ಶರವಣಕುಮಾರ್‌ ಅವರಿಂದ ನಿರ್ಮಾಪಕ ಸುರೇಶ್‌ 85 ಲಕ್ಷ ಪಡೆದಿದ್ದರು ಎನ್ನುವುದು ಆರೋಪ. ಈ ಸಿನಿಮಾ ನಿರ್ಮಾಣವಾಗಿಲ್ಲ. “2018ರಲ್ಲಿ ಸಿನಿಮಾ ಮಾಡುವುದಾಗಿ ಅಪ್ಪ – ಮಗ ನನ್ನಿಂದ ಇನ್‌ಸ್ಟಾಲ್‌ಮೆಂಟ್‌ನಲ್ಲಿ ಸುಮಾರು 85 ಲಕ್ಷ ರೂಪಾಯಿ ಹಣ ಪಡೆದಿದ್ದರು. ಗೋಪಿಚಂದ್‌ ಮಾಲಿನೇನಿ ನಿರ್ದೇಶಿಸಬೇಕಿದ್ದ ಈ ಸಿನಿಮಾಗೆ ನಾನು ಸಹನಿರ್ಮಾಪಕ ಎಂದು ಸುರೇಶ್‌ ಭರವಸೆ ನೀಡಿದ್ದರು. ಹಣದ ವಿಚಾರದಲ್ಲಿ ನನಗೆ ಮೋಸವಾಗಿದೆ” ಎಂದಿದ್ದಾರೆ ಶರವಣಕುಮಾರ್‌.

ಹೈದರಾಬಾದ್‌ ಸಿಟಿ ಕೋರ್ಟ್‌ ಆದೇಶದ ಮೇರೆಗೆ CCS (Central Crime Staion) ಪೊಲೀಸರು ಬೆಲ್ಲಮಕೊಂಡ ಸುರೇಶ್‌ ಮತ್ತು ಸಾಯಿ ಶ್ರೀನಿವಾಶ್‌ ವಿರುದ್ಧ ವಂಚನೆ ಕೇಸು ದಾಖಲಿಸಿದ್ದಾರೆ. ದೂರುದಾರರು ಮತ್ತು ಆರೋಪಿಗಳಿಬ್ಬರೂ ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ. ‘ಅಲ್ಲುಡು ಅಡೂರ್ಸ್‌’ ಸಿನಿಮಾ ಖ್ಯಾತಿಯ ಹೀರೋ ಸಾಯಿ ಶ್ರೀನಿವಾಸ್‌ ಸದ್ಯ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಬ್ಲಾಕ್‌ಬಸ್ಟರ್‌ ತೆಲುಗು ಸಿನಿಮಾ ‘ಛತ್ರಪತಿ’ ಹಿಂದಿ ಅವತರಣಿಕೆಯೊಂದಿಗೆ ಅವರು ಹಿಂದಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ನಿರ್ಮಾಪಕ ಬೆಲ್ಲಮಕೊಂಡ ಸುರೇಶ್‌ ಅವರು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. “ನಾನು ವಂಚಿಸಿರುವುದಕ್ಕೆ ಸಾಕ್ಷಿ ಇದ್ದರೆ ಶರವಣ ಅವರು ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ನೀಡಲಿ. ನನ್ನ ಮತ್ತು ಮಗನ ಏಳ್ಗೆಯನ್ನು ಸಹಿಸದೆ ಈ ಆರೋಪ ಮಾಡುತ್ತಿದ್ದಾರೆ. ನನ್ನ ಕುಟುಂಬದ ಮೇಲೆ ಇಂತಹ ಆರೋಪ ಮಾಡಿದರೆ ಸಹಿಸುವುದಿಲ್ಲ. ಶರಣವ ಅವರ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ” ಎಂದಿದ್ದಾರೆ ಸುರೇಶ್‌.

Previous articleವಿಶ್ಯೂಯಲಿ ಸೂಪರು! ಸ್ಕ್ರೀನ್‌ಪ್ಲೇ ಸುಮಾರು!
Next articleಪ್ರಸಿದ್ಧಿ ಎಂಬುದು ಅಪಾಯಕಾರಿ..

LEAVE A REPLY

Connect with

Please enter your comment!
Please enter your name here