ಈ ವರ್ಷ ಅತಿ ಹೆಚ್ಚು ಸುದ್ದಿಯಾದ ಚಿತ್ರಗಳಲ್ಲೊಂದು ‘ಕಾಶ್ಮೀರ್ ಫೈಲ್ಸ್’. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ನಟಿಸಿದ್ದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಇದೀಗ ಸಿನಿಮಾ ಓಟಿಟಿಗೆ ಬರಲಿದೆ.
ಸಂಚಲನ ಸೃಷ್ಟಿಸಿದ್ದ ‘ಕಾಶ್ಮೀರ್ ಫೈಲ್ಸ್’ ಸಿನಿಮಾ ZEE5 ಓಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯ, ನಿರಾಶ್ರಿತರ ಕುರಿತು ತಯಾರಿಸಿದ್ದ ಈ ಹಿಂದಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಸಿನಿಮಾದ ವಸ್ತು, ನಿರೂಪಣೆಯಿಂದಾಗಿ ಚಿತ್ರಕ್ಕೆ ರಾಜಕೀಯ ಬಣ್ಣವೂ ಹತ್ತಿದ್ದು ಹೌದು. ದೇಶದ ಪ್ರಧಾನಿ ಮೋದಿಯವರೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜಕೀಯ ಮುಖಂಡರು ಈ ಚಿತ್ರವನ್ನು ವೀಕ್ಷಿಸಿ ಪ್ರೊಮೋಟ್ ಮಾಡಿದ್ದರು. ಈ ವರ್ಷದಲ್ಲಿ ಹೆಚ್ಚು ಸುದ್ದಿಯಾಗಿದ್ದ ‘ಕಾಶ್ಮೀರ್ ಫೈಲ್ಸ್’ ಮೇ 13ರಿಂದ ZEE5ನಲ್ಲಿ ಸ್ಟ್ರೀಮ್ ಆಗಲಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದರು. 1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಸಿನಿಮಾವನ್ನು ಕಟ್ಟಿಕೊಡಲಾಗಿತ್ತು. ಹೀಗಾಗಿ ಈ ಸಿನಿಮಾ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿತ್ತು. ಆದರೆ ZEE5ನಲ್ಲಿ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ಒಟಿಟಿಯಲ್ಲಿ ಮೇ 13 ರಿಂದ ಸ್ಟ್ರೀಮ್ ಆಗಲಿದೆ.