ಮನುಷ್ಯರು ಕ್ರೂರ ಪ್ರಾಣಿಗಳು ಎಂದು ಹೇಳುವ ಮತ್ಸ್ಯಕನ್ಯೆಯರ ಲೋಕ, ಅವರು ನಮಗೆ ಕೇಡು ಬಗೆಯುತ್ತಾರೆ ಎನ್ನುವ ಮನುಷ್ಯನ ಲೋಕ. ಇದೆರಡ ಮಧ್ಯೆ ಏರಿಯಲ್ – ಎರಿಕ್ ಪ್ರಣಯ ಕತೆ. ಹಲವು ಕುತೂಹಲ, ಫ್ಯಾಂಟಸಿ, ಮನರಂಜನೆ ಹಾಗೂ ಕಣ್ಣಿಗೆ ಮುದ ನೀಡುವ ದೃಶ್ಯಗಳು ಖುಷಿ ಕೊಡುತ್ತವೆ. ‘ದಿ ಲಿಟಲ್ ಮೆರ್ಮೈಡ್’ ಸಿನಿಮಾ DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ದಿ ಲಿಟಲ್ ಮೆರ್ಮೈಡ್‌ನ ಮೋಡಿ ಮಾಡುವ ನೀರೊಳಗಿನ ಪ್ರಪಂಚದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ‘ದಿ ಲಿಟಲ್ ಮೆರ್ಮೈಡ್’ ತುಂಬ ಚಂದದ ಅನುಭವ ನೀಡುತ್ತದೆ. ಇಲ್ಲಿರುವುದು ಕೆಂಪು ಕೂದಲಿನ ಪುಟ್ಟ ಮತ್ಸ್ಯಕನ್ಯೆ ಇಲ್ಲ ಅದರ ಬದಲು ಅಗಲ ಕಣ್ಣಿನ ಏರಿಯಲ್ ಹಾಲೆ ಬೈಲಿ. ತಮ್ಮ ಮಧುರ ಕಂಠದಿಂದ ನಮ್ಮನ್ನು ಆಕರ್ಷಿಸುತ್ತಾಳೆ. ಆಕೆಯ ಕಣ್ಣುಗಳಲ್ಲಿ ಹೊಸದನ್ನು ನೋಡುವ ಹಂಬಲ, ಹುಡುಕುವ ಆಸೆ ಎದ್ದು ಕಾಣುತ್ತದೆ. ಎಲ್ಲರಂತೆ ಅಲ್ಲ ಅವಳು, ಬಂಡಾಯ ಸ್ವಭಾವದವಳು. ಬೇಡ ಅಂದರೆ, ಯಾಕೆ? ಎಂಬ ಪ್ರಶ್ನೆಯೊಂದಿಗೆ ಅವಳು ಸಾಗರದ ಅಡಿಯಲ್ಲಿ ಈಜಾಡುತ್ತಾಳೆ. ಸಾಗರದ ಆಳ ಆಯ್ತು, ಆದರೆ ಭೂಮಿಯ ಮೇಲಿರುವ ಮನುಷ್ಯನ ಜಗತ್ತು ಹೇಗಿರುತ್ತದೆ ಎಂಬುದು ಅವಳಲ್ಲಿ ಕುತೂಹಲವನ್ನು ಹುಟ್ಟಿಸುತ್ತದೆ.

ಮಾನವರು ನಮ್ಮ ಶತ್ರುಗಳು, ಅವರೇ ನಿನ್ನ ಅಮ್ಮನನ್ನು ಕೊಂದಿದ್ದು. ಅವರನ್ನು ನಂಬಬೇಡ ಎಂದು ಅಪ್ಪ ಹೇಳಿದರೂ ಆಕೆಗೆ ಭೂಮಿಯ ಮೇಲೆ ಇರುವ ಮನುಷ್ಯರ ಬದುಕು ಎಷ್ಟು ಸುಂದರ ಎಂದೆನಿಸಿರುತ್ತದೆ. ಸಾಗರದಲ್ಲಿ ಏನಿದೆ ಎಂಬ ಅವಳ ಪ್ರಶ್ನೆಗೆ ಆಕೆಯ ಗೆಳೆಯರು ತೋರಿಸುವ ಸಾಗರದಾಳದ ಜೀವ ಜಾಲಗಳ ಸೌಂದರ್ಯವನ್ನು ನೋಡಿಯೇ ಆಸ್ವಾದಿಸಬೇಕು. ಆದಾಗ್ಯೂ ಏರಿಯಲ್‌ಗೆ ಭೂಮಿ ಮೇಲೆ ಹೋಗಬೇಕು ಎಂಬ ಆಸೆ ಬಿಟ್ಟು ಹೋಗುವುದಿಲ್ಲ.

ರಾಬ್ ಮಾರ್ಷಲ್ ನಿರ್ದೇಶನದ ಈ ಸಿನಿಮಾದಲ್ಲಿ ಕಿಂಗ್ ಟ್ರಿಟಾನ್ (ಜೇವಿಯರ್ ಬಾರ್ಡೆಮ್), ಪ್ರಿನ್ಸ್ ಎರಿಕ್ (ಜೋನಾ ಹೌರ್-ಕಿಂಗ್), ಏರಿಯಲ್ ( ಹಾಲೆಬೈಲಿ) ಮತ್ತು ಅವಳ ಮೂವರು ಸ್ನೇಹಿತರು – ಸೆಬಾಸ್ಟಿಯನ್ ದಿ ಕ್ರ್ಯಾಬ್, ಫ್ಲೌಂಡರ್ ದಿ ಫಿಶ್ ಮತ್ತು ಸ್ಕಟಲ್ ದಿ ಸೀಬರ್ಡ್ ತೆರೆ ಮೇಲೆ ನಮ್ಮನ್ನು ಸ್ವಲ್ಪ ಹೊತ್ತು ಹಿಡಿದು ನಿಲ್ಲಿಸುವ ಪಾತ್ರಗಳು. ಇವರು ಹಾಸ್ಯದ ಮೂಲಕ ನಗು ತರಿಸುತ್ತಾರೆ. ಖಳನಾಯಕಿಯಾಗಿ ಉರ್ಸುಲಾ ಅದ್ಭುತವಾಗಿ ನಟಿಸಿದ್ದಾರೆ.

ಮಾನವ ಪ್ರಪಂಚದ ಬಗ್ಗೆ ಏರಿಯಲ್‌ಗೆ ಕುತೂಹಲ, ಪ್ರಿನ್ಸ್ ಎರಿಕ್‌ನ ಮೇಲೆ ಅವಳ ಪ್ರೀತಿಯೇ ಕಥಾವಸ್ತು. ಹೇಗಾದರೂ ಮಾಡಿ ಭೂಮಿ ಮೇಲೆ ಬದುಕಬೇಕು ಎಂಬುದು ಆಕೆಯ ಅದಮ್ಯ ಆಸೆ. ಹಾಗೊಂದು ದಿನ ಆಕೆ ಎರಿಕ್‌ನ ಹಡಗಿನೊಳಗೆ ಹತ್ತಿ ಕುಳಿತಿರುತ್ತಾಳೆ. ಅಲ್ಲಿರುವ ಮನುಷ್ಯರನ್ನು ನೋಡುತ್ತಾ ಇದ್ದಂತೆ ಅದೊಂದು ಅಪಘಾತ ಸಂಭವಿಸಿ ಬಿಡುತ್ತದೆ. ಹಡಗು ನಡು ಸಮುದ್ರದಲ್ಲಿ ಬೆಂಕಿಗೀಡಾಗುತ್ತದೆ. ಎಲ್ಲರೂ ಸುರಕ್ಷಿತವಾಗಿ ಪುಟ್ಟ ದೋಣಿಗಳತ್ತ ಜಿಗಿದಾಗ ಎರಿಕ್ ಸಿಕ್ಕಿ ಹಾಕಿಕೊಳ್ಳುತ್ತಾನೆ. ಏರಿಯಲ್ ಆತನನ್ನು ರಕ್ಷಿಸಿ ದಡ ಸೇರಿಸುತ್ತಾಳೆ. ಯಾರೋ ನನ್ನನ್ನು ರಕ್ಷಿಸಿದ್ದಾರೆ, ಆಕೆ ಮತ್ಸ್ಯಕನ್ಯೆ ಅಂತಾನೆ ಎರಿಕ್. ರಾಜಕುಮಾರನಿಗೆ ತನ್ನ ಜೀವ ಉಳಿಸಿದ ಮತ್ಸ್ಯಕನ್ಯೆಯ ಮೇಲೆ ಪ್ರೀತಿ ಹುಟ್ಟುತ್ತದೆ. ಆಕೆ ಯಾರು, ಎತ್ತ ಎಂಬುದು ಏನೂ ಗೊತ್ತಿಲ್ಲ.ಆದರೆ ಆತನ ಮನಸ್ಸನ್ನು ಕದ್ದ ಹುಡುಗಿ ಅವಳು.

ಇತ್ತ ಏರಿಯಲ್ ಹೇಗಾದರೂ ಮಾಡಿ ಭೂಮಿಗೆ ಹೋಗಬೇಕು ಎಂದು ನಿರ್ಧರಿಸಿರುತ್ತಾಳೆ. ಅವಳ ಅಪ್ಪ, ಸಹೋದರಿಯರು ಬೇಡ ಅಂದ್ರೂ ಆಕೆಯದ್ದು ಒಂದೇ ಹಟ. ಹಾಗೆ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದ ಆಕೆಯ ಆಂಟಿ, ಸಮುದ್ರ ಮಾಟಗಾತಿ ಉರ್ಸುಲಾಳೊಂದಿಗೆ ಆಕೆ ಒಂದು ಒಪ್ಪಂದಕ್ಕೆ ಬರುತ್ತಾಳೆ. ಆಕೆಯ ಮಧುರವಾದ ದನಿ ಕಸಿದುಕೊಂಡ ಉರ್ಸುಲಾ, ಏರಿಯಲ್‌ಗೆ ಮನುಷ್ಯರಂತೆ ಕಾಲುಗಳನ್ನು ನೀಡುತ್ತಾಳೆ. ಏರಿಯಲ್ ಮನುಷ್ಯಳಾಗಿ ತನ್ನ ಸಮಯವನ್ನು ಹೆಚ್ಚು ಬಳಸಿಕೊಳ್ಳಲು ಮೂರು ದಿನಗಳನ್ನು ಹೊಂದಿರುತ್ತಾಳೆ. ಆದರೆ ಸೂರ್ಯಾಸ್ತದ ಮೊದಲು ಅವಳು ರಾಜಕುಮಾರನನ್ನು ಚುಂಬಿಸಬೇಕು, ಇಲ್ಲದಿದ್ದರೆ, ಅವಳು ತನ್ನ ಜೀವನದುದ್ದಕ್ಕೂ ಉರ್ಸುಲಾಳ ಗುಲಾಮಳಾಗಿ ಇರಬೇಕು ಎಂಬುದು ಷರತ್ತು. ಅದಕ್ಕೆ ಒಪ್ಪಿ ಏರಿಯಲ್ ಭೂಮಿ ಮೇಲೆ ಬರುತ್ತಾಳೆ.
ಆಮೇಲೆ ಅಲ್ಲಿ ನಡೆಯುವ ಸಂಗತಿಗಳು ಪ್ರೇಕ್ಷಕರನ್ನು ಹಿಡಿದು ನಿಲ್ಲಿಸುತ್ತವೆ. ರಾಜಕುಮಾರ ತಾನು ನೋಡದೇ ಇರುವ ಮತ್ಸ್ಯಕನ್ಯೆಗಾಗಿ ಪರಿತಪಿಸುವಾಗ, ಆಕೆ ನಾನೇ ಎಂದು ಹೇಳಲು ಆಗದೆ ಒದ್ದಾಡುವ ಏರಿಯಲ್. ಅವರ ಪ್ರೀತಿ ಏನಾಗುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಬೇಕು.

ಮಾರ್ಷಲ್ ತನ್ನದೇ ಆದ ಆವೃತ್ತಿಯನ್ನು ನಿರೂಪಿಸುವಲ್ಲಿ ಕೆಲವು ಸ್ವಾತಂತ್ರ್ಯಗಳನ್ನು ತೆಗೆದುಕೊಳ್ಳುತ್ತಾನೆ. ಇದು ವೈವಿಧ್ಯಮಯ ಪಾತ್ರಗಳೊಂದಿಗೆ ಬರುತ್ತದೆ. ಏಳು ಸಮುದ್ರಗಳನ್ನು ಪ್ರತಿನಿಧಿಸುವ ಸೀ ಕಿಂಗ್‌ನ ಹೆಣ್ಣುಮಕ್ಕಳು ವಿವಿಧ ಜನಾಂಗಕ್ಕೆ ಸೇರಿದವರು. ಇಲ್ಲಿ ನಿಜವಾಗಿಯೂ ಎದ್ದು ಕಾಣುವ ಯಾರಾದರೂ ಇದ್ದರೆ ಅದು ಉರ್ಸುಲಾ ಆಗಿ ಮೆಲಿಸಾ ಮೆಕಾರ್ಥಿ. ನಟಿ ತನ್ನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅವಳು ಸಂಚು ಮಾಡುವವಳು, ಮೋಸಗಾರಳು. ಆದರೆ ಅವಳು ಪರದೆಯ ಮೇಲೆ ಬಂದಾಗ ಅಲ್ಲೊಂದು ಮಿಂಚಿನ ಸಂಚಾರವಾಗುತ್ತದೆ.

ಕೆಲವೆಡೆ ನಿರೂಪಣೆಯು ನಿಧಾನವೆನಿಸಿದಾಗ ನೀರೊಳಗಿನ ಪ್ರಪಂಚ ಬೆರಗು ಹುಟ್ಟಿಸುತ್ತದೆ. ಅಂಡರ್ ದಿ ಸೀ ಹಾಡಿನ ಚಿತ್ರೀಕರಣ ಅದ್ಬುತವಾಗಿ ಮೂಡಿ ಬಂದಿದೆ. ಹಾಡುಗಳನ್ನು ಸ್ಕಿಪ್ ಮಾಡುವಂತಿಲ್ಲ. ಮನುಷ್ಯರು ಕ್ರೂರ ಪ್ರಾಣಿಗಳು ಎಂದು ಹೇಳುವ ಮತ್ಸ್ಯಕನ್ಯೆಯರ ಲೋಕ, ಅವರು ನಮಗೆ ಕೇಡು ಬಗೆಯುತ್ತಾರೆ ಎನ್ನುವ ಮನುಷ್ಯನ ಲೋಕ. ಇದೆರಡ ಮಧ್ಯೆ ಏರಿಯಲ್ – ಎರಿಕ್ ಪ್ರಣಯ ಕತೆ. ಹಲವು ಕುತೂಹಲ, ಫ್ಯಾಂಟಸಿ, ಮನರಂಜನೆ ಹಾಗೂ ಕಣ್ಣಿಗೆ ಮುದ ನೀಡುವ ದೃಶ್ಯಗಳಿರುವ ‘ದಿ ಲಿಟಲ್ ಮೆರ್ಮೈಡ್’ ನೋಡುಗರಿಗೆ ಖುಷಿ ಕೊಡುತ್ತದೆ. ಸಿನಿಮಾ ಅಂದ ಮೇಲೆ ಇಷ್ಟು ಸಾಕಲ್ಲವೇ?

LEAVE A REPLY

Connect with

Please enter your comment!
Please enter your name here