ಕುತೂಹಲ ಭರಿತ ಕತೆಯನ್ನು ಮನಮುಟ್ಟದಂತೆ ಚಿತ್ರಿಸುವುದು ಹೇಗೆ ಎಂಬುದಕ್ಕೆ ಉದಾಹರಣೆ ‘ದಿ ವಿಸಿಲ್ ಬ್ಲೋವರ್’. ಸೋನಿ ಲಿವ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ವೆಬ್ ಸೀರೀಸ್‌ನ ಸರಣಿ ತಪ್ಪುಗಳ ಸಣ್ಣ ದಾಖಲೀಕರಣ ಈ ಪುಟ್ಟ ಬರಹ.
ಹರ್ಷದ್ ಮೆಹ್ತಾ ಹಗರಣ ಆಧರಿತ ‘ಸ್ಕ್ಯಾಮ್ 1992’ಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕ ನಂತರ ಹಗರಣ ಆಧಾರಿತ ಕತೆ ಇಟ್ಟು ವೆಬ್ ಸೀರೀಸ್ ಮಾಡುವ ಪರಿಪಾಠ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಹಗರಣಗಳು ಸಿನಿಮಾದ ಸೀಮಿತ ಅವಧಿಯಲ್ಲಿ ಹೇಳಬಹುದಾದ ಸಾಧ್ಯತೆಗಿಂತ ಹೆಚ್ಚುವಿಸ್ತಾರ. ಹಾಗಾಗಿ ವೆಬ್ ಸೀರೀಸ್ ಮಾದರಿ ಇಂಥ ಕತೆಗಳಿಗೆ ಹೇಳಿಮಾಡಿಸಿದ್ದು.
ಮಧ್ಯಪ್ರದೇಶದಲ್ಲಿ 2013ರಲ್ಲಿ ವ್ಯಾಪಮ್ ಹಗರಣ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ವೈದ್ಯಕೀಯ ಶಿಕ್ಷಣ ಪ್ರವೇಶ ಮತ್ತು ವಿವಿಧ ಸರಕಾರಿ ಉದ್ಯೋಗ ನೇಮಕಾತಿಗಾಗಿ ವ್ಯವಸ್ಥಿತ ದಾರಿ ಮಾಡಲು ವ್ಯವಸಾಯಿಕ್ ಪರೀಕ್ಷಾ ಮಂಡಲ್ ಎಂಬ ಸ್ವಾಯತ್ತ ಸಂಸ್ಥೆಯನ್ನು ಮಧ್ಯಪ್ರದೇಶ ಸರಕಾರ ಹುಟ್ಟುಹಾಕಿತ್ತು. ಆದರೆ ಅದರಲ್ಲಿ ನಡೆದದ್ದು ವ್ಯವಸ್ಥಿತ ಅಕ್ರಮ ಮಾತ್ರ. ಒಬ್ಬರ ಹೆಸರಲ್ಲಿ ಮತ್ತೊಬ್ಬರು ಪರೀಕ್ಷೆ ಬರೆಯುವುದು, ಸಾಮೂಹಿಕ ನಕಲು ಮತ್ತು ಉತ್ತರ ಪತ್ರಿಕೆಯ ವ್ಯವಸ್ಥಿತ ತಿದ್ದುವಿಕೆ ನಡೆದು ಯೋಗ್ಯತೆ ಇಲ್ಲದಿದ್ದ ಸುಮಾರು ಐದು ಸಾವಿರ ಮಂದಿ ವೈದ್ಯರಾಗಿ ಸಮಾಜಕ್ಕೆ ಬಂದರು.
ಇಂಥ ಒಂದು ಥ್ರಿಲ್ಲಿಂಗ್ ಕತೆ ಹಿಡಿದು ನಿರ್ದೇಶನಕ್ಕಿಳಿದದ್ದು ಕ್ಯಾಮರಾಮ್ಯಾನ್ ಹಾಗೂ ಆ್ಯಡ್ ಫಿಲ್ಮ್ ನಿರ್ದೇಶನದ ಅನುಭವವಿರುವ ಮನೋಜ್ ಪಿಳ್ಳೈ. ಕತೆ ಚಿತ್ರಕತೆ ಮಾಡಿದವರು ‘ಕಾರ್ಪೊರೇಟ್’, ‘ಫ್ಯಾಶನ್’ನಂಥ ಚಿತ್ರಕ್ಕೆ ಲೇಖನಿ ಹಿಡಿದಿದ್ದ ಅಜಯ್ ಮೋಂಗಾ. ‘ದ ವಿಸಿಲ್‌ಬ್ಲೋವರ್’ನಲ್ಲಿ ಈ ಇಬ್ಬರೂ ಅಭೂತಪೂರ್ವವಾಗಿ ಸೋತಿದ್ದಾರೆ.
ಸಂಕೇತ್ (ರಿತ್ವಿಕ್ ಭೌಮಿಕ್) ಅಂತಿಮ ವರ್ಷದ ಬುದ್ಧಿವಂತ ಮೆಡಿಕಲ್ ವಿದ್ಯಾರ್ಥಿ. ಜತೆಗೆ ತಂದೆ ಖಾಸಗಿ ಆಸ್ಪತ್ರೆ-ಕಾಲೇಜಿನ ಮುಖ್ಯಸ್ಥ ಮತ್ತು ಮಾಲೀಕ. ಹಾಗಾಗಿ ಸಂಕೇತ್‌ನದ್ದು ಯಾವುದೇ ಕೊರತೆಗಳಿಲ್ಲದ ಸಹಜ ಜೀವನ. ಆದರೂ ಆತ ಬೇರೊಬ್ಬರ ಹೆಸರಲ್ಲಿ ಮೆಡಿಕಲ್ ಪ್ರವೇಶ ಪರೀಕ್ಷೆ ಬರೆಯುವ ದಂಧೆಗಿಳಿಯುತ್ತಾನೆ. ಹಣಕ್ಕಾಗಿ ಅಲ್ಲ, ಅಂಥದ್ದೊಂದು ಅಕ್ರಮದಲ್ಲಿ ತೊಡಗಿದಾಗ ಸಿಗುವ ಥ್ರಿಲ್‌ಗಾಗಿ. ಹೀಗೆ ಮಾಫಿಯಾದ ಒಳಕ್ಕೆ ಕಾಲಿಟ್ಟವ ಬರಬರುತ್ತಾ ಆ ಮಾಫಿಯಾದ ಒಂದು ಭಾಗವಾಗುತ್ತಾನೆ. ಅದೇ ಮಾಫಿಯಾ ಅವನ ತಂದೆಯನ್ನೇ ಬಲಿ ಪಡೆದಾಗ ದುಷ್ಟ ವ್ಯವಸ್ಥೆಯನ್ನು ಬಯಲಿಗೆಳೆಯಲು ಟೊಂಕ ಕಟ್ಟುತ್ತಾನೆ. ತನ್ನ ಗರ್ಲ್‌ಫ್ರೆಂಡ್ ಹಾಗೂ ತನಿಖಾ ವರದಿಗಾರನ ಜತೆ ಸೇರಿ ಬೃಹತ್ ಹಗರಣವನ್ನು ಬೆಳಕಿಗೆ ತರುವುದು ‘ವಿಸಿಲ್ ಬ್ಲೋವರ್’ನ ಕತೆ.
ಹೀಗೆ ಕೇಳುವಾಗ ಕತೆ ಕುತೂಹಲ ಭರಿತವಾಗಿಯೇ ಇದೆ. ಆದರೆ ಇಂಥ ಕತೆಗಳಲ್ಲಿ ನಾಯಕ ಪಾತ್ರ ಒಂದೋ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವ ಛಲಗಾರನಾಗಿರಬೇಕು. ಅಥವಾ ಹರ್ಷದ್ ಮೆಹ್ತಾನಂತೆ ಅಕ್ರಮವೇ ಮೈವೆತ್ತ ದೈತ್ಯನಾಗಿರಬೇಕು. ಇಲ್ಲಿ ಸಂಕೇತ್ ಇವೆರಡೂ ಅಲ್ಲ. ಮೊದಲು ಪೆದ್ದನಾಗಿದ್ದು ನಂತರ ಗೆದ್ದವನಾಗುವ, ಮೊದಲು ಉತ್ತಮನಾಗಿದ್ದು ಕಡೆಗೆ ಅಧಮನಾಗುವ ಹೀಗೆ ಏನೇ ಆಗುವುದಿದ್ದರೂ ನಾಯಕ ಇಷ್ಟವಾಗಬೇಕಾದರೆ ಮೊದಲಿಗೆ ಅದೊಂದು ತೀಕ್ಷ್ಣ ಪಾತ್ರವಾಗಬೇಕು. ‘ವಿಸಿಲ್ ಬ್ಲೋವರ್’ಗೆ ಇಲ್ಲದಿರುವುದೇ ಅದು.
ವೈದ್ಯ ವಿದ್ಯಾರ್ಥಿಗಳಲ್ಲಿ ಮಾದಕ ಪದಾರ್ಥಕ್ಕೆ ದಾಸರಾದವರಿದ್ದಾರೆ. ಅಧಿಕೃತ ಔಷಧಗಳನ್ನೂ ಮತ್ತಿಗಾಗಿ ದುರುಪಯೋಗಿಸುವ ಪರಿಪಾಠವೂ ಇದೆ. ಇದು ಯಾವೆಲ್ಲಾ ರೀತಿ ನಡೆಯುತ್ತದೆ ಎಂಬುದನ್ನು ತೋರಿಸುತ್ತಾ ಮೊದಲ ಎಪಿಸೋಡು ಕತೆಯ ಸುರುಳಿ ಬಿಚ್ಚುತ್ತದೆ. ಕಥಾ ನಾಯಕ ಸಂಕೇತ್‌ನ ವ್ಯಕ್ತಿತ್ವ ಅನಾವರಣವೂ ಅಲ್ಲಿಯೇ ಆಗುತ್ತದೆ. ಆದರೆ ಮುಂದೆ ಆತ ಪ್ರವೇಶ ಪರೀಕ್ಷಾ ದಂಧೆಗೆ ಕಾಲಿಟ್ಟ ಮೇಲೆ ಮತ್ತಿನ ವಿಚಾರ ಮರೆತೇಹೋಗುತ್ತದೆ. ಅದಕ್ಕೊಂದು ಸ್ಪಷ್ಟವಾದ ರೂಪವನ್ನುಚಿತ್ರಕತೆ ನೀಡಿಲ್ಲ.
ಅಕ್ರಮ ಪ್ರವೇಶ ಪಡೆದು ಬಿಳಿಕೋಟು ಧರಿಸುವವರ ಅಸಮರ್ಥತೆ, ಸಾವಿಗೂ ಮಿಡಿಯದ ವೈದ್ಯಕೀಯ ಮನಸುಗಳು, ಮಾಫಿಯಾದ ಅಂಗಗಳಾಗುವ ವೈದ್ಯಕೀಯ ಸಿಬ್ಬಂದಿಗಳು – ಇವೆಲ್ಲವುಗಳ ಬಗ್ಗೆ ಪ್ರಸ್ತಾಪವಿದೆ. ಆದಾಗ್ಯೂ ಅವ್ಯಾವುವೂ ಮನಸ್ಸಿನಲ್ಲಿ ಉಳಿಯುವಂತೆ ಚಿತ್ರಿತವಾಗಿಲ್ಲ. ಅಕ್ಕ-ತಂಗಿ ಇಬ್ಬರಿಗೂ ಗಾಳ ಹಾಕಿ ಒಲಿಸಿಕೊಳ್ಳುವ ಸಂಕೇತ್‌ನ ಪ್ರೀತಿ ಹಾಗೂ ಮೋಸದ ಇಬ್ಬಗೆ ನೋಡುಗನ ಏಕಾಗ್ರತೆಯನ್ನೂ ಲವ್ ಮತ್ತು ಸ್ಕ್ಯಾಮ್ ನಡುವೆ ಹಂಚಿ ಕೊನೆಗೆ ನಿಸ್ತೇಜವಾಗಿಸುತ್ತದೆ.
ಕುತೂಹಲ ಕೆರಳಿಸಬೇಕಾದ ಹಗರಣದ ರೂಪ ನಿಕ್ಷೇಪ ಸರಿಯಾಗಿ ಬಿಚ್ಚಿಕೊಳ್ಳುವಷ್ಟರಲ್ಲಿ ಆರು ಎಪಿಸೋಡುಗಳು ಉರುಳಿವೆ. ಉರುಳಿದ್ದು
ಎಂಟನೇ ಎಪಿಸೋಡಿಗೆ ಮಗುಚಿದೆ. ಒಂಭತ್ತನೇ ಅಧ್ಯಾಯದಲ್ಲಿ ಪೊಲೀಸರು ಒಬ್ಬರಾದ ಮೇಲೆ ಒಬ್ಬರನ್ನು ಬಂಧಿಸಲು ತೆರಳುವ ದೃಶ್ಯ ಗಣರಾಜ್ಯೋತ್ಸವದ ಪರೇಡ್ ನೋಡಿದ ಅನುಭವ ನೀಡುತ್ತದೆ. ಬಂಧಿಸಿದವರ ಆರೋಪಗಳ ವಿವರ ಪೊಲೀಸರಿಗೆ ವಿಚಾರಣೆ ನಂತರ ತಿಳಿಯಬೇಕು, ನೋಡುಗನಿಗೆ ರಿವೈಂಡ್ ಮಾಡಿಯಷ್ಟೇ ಗೊತ್ತಾಗಬೇಕು. ಅದುವರೆಗೂ ನೋಡಿ ದಣಿದ ಪ್ರೇಕ್ಷಕನ ಮನಸ್ಸಿಗೆ ಯಾರ್ಯಾರ ಪಾತ್ರ ಏನೇನು ಎಂಬುದು ಮರೆತಿರುತ್ತದೆ.
ವ್ಯಾಪಮ್ ಹಗರಣ ಬಹುಕೋಟಿ ರೂಪಾಯಿಗಳದ್ದು. ಹಾಗಾಗಿ ಅದು ಸಾರ್ವಜನಿಕವಾದಾಗ ಒಂದಷ್ಟು ಮಂದಿ ಕಾಣೆಯಾದರು. ಕೆಲವರು ಆತ್ಮಹತ್ಯೆ ಮಾಡಿಕೊಂಡರು. ಹಲವರು ಅನುಮಾನಾಸ್ಪದವಾಗಿ ಸಾವಿಗೀಡಾದರು. ಸೀರೀಸ್‌ನ ಕೊನೆಯಲ್ಲಿ ಈ ಅಂಶಕ್ಕೆ ಒತ್ತು ಕೊಡಲಾಗಿದೆ. ಒಂದಷ್ಟು ಹೆಣ ಬಿದ್ದದ್ದು ಕಣ್ಣಿಗೆ ಕಾಣುತ್ತದೆಯೇ ವಿನಃ ಅವರಿಗೂ ಪ್ರಕರಣಕ್ಕೂ ಸಂಬಂಧವೇನು ಎಂಬುದನ್ನು ನೋಡುಗನ ನಿಲುಕಿಗೆ ಸಿಗದಂತೆ ಕಟ್ಟಿಕೊಡಲಾಗಿದೆ.
ಕೊನೆಯ ಎಪಿಸೋಡಿನಲ್ಲಿ ಸಂಕೇತ್‌ನ ಅಪಹರಣವಾಗುತ್ತದೆ. ಅವನನ್ನು ಎತ್ತಿ ಕೂರಿಸುವ ಕಾರು ಮೊದಲು ಗಾಢಬೂದಿ ಬಣ್ಣದ್ದಿದ್ದರೆ ನಂತರದ ಫ್ರೇಮ್‌ನಲ್ಲಿ ತಿಳಿಬೂದಿಬಣ್ಣಕ್ಕೆ ತಿರುಗಿದೆ. ಈ ಒಂದು ದೃಶ್ಯ ಒಟ್ಟಾರೆಯಾಗಿ ನಿರ್ದೇಶನದ ಗುಣಮಟ್ಟಕ್ಕೆ ರೂಪಕ. ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರು ಮತ್ತು ವೈದ್ಯರು ಶಾಮೀಲಾಗಿ ನಡೆಸಿದ ವ್ಯಾಪಮ್ ಹಗರಣವನ್ನು ಮುಚ್ಚಿಹಾಕಲು ಭಾರಿ ಯತ್ನಗಳು ನಡೆದಿದ್ದವು. ಆ ಪ್ರಯತ್ನಗಳ ಪೈಕಿ ಇಂಥದ್ದೊಂದು ಕಳಪೆ ಗುಣಮಟ್ಟದ ವೆಬ್ ಸರಣಿಯೂ ಒಂದಾಗಿರಬಹುದೇ ಎಂಬ ಅನುಮಾನ ಆಸಕ್ತಿಯಿಂದ ನೋಡಿದ ಪ್ರೇಕ್ಷಕನಿಗೆ ಕೊನೆಯಲ್ಲಿ ಉಳಿಯುವ ಪ್ರಶ್ನೆ.