ಹಿರಿಯ ಪತ್ರಕರ್ತ ಬಿ.ಎಂ.ಬಷೀರ್‌ ಅವರ ಸಣ್ಣಕತೆಯೊಂದನ್ನು ಆಧರಿಸಿ ಮಂಸೋರೆ ‘ದಿ ಕ್ರಿಟಿಕ್‌’ ಕಿರುಚಿತ್ರ ನಿರ್ದೇಶಿಸಿದ್ದಾರೆ. ಛಾಯಾಗ್ರಾಹಕ ಸತ್ಯ ಹೆಗಡೆ ನಿರ್ಮಾಣದ ಕಿರುಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ಚಿತ್ರನಿರ್ದೇಶಕ ಟಿ.ಎಸ್‌.ನಾಗಾಭರಣ ನಟಿಸಿದ್ದಾರೆ.

“ಎರಡೂವರೆ ಗಂಟೆಗಳ ಸಿನಿಮಾಗಳಲ್ಲಿ ಕತೆ ನಿರೂಪಿಸಿರುವ ನನಗೆ ಕಿರುಚಿತ್ರ ಹೊಸ ಮಾದರಿ. ಚಿಕ್ಕ ಅವಧಿಯಲ್ಲಿ ಕತೆಯೊಂದನ್ನು ಪರಿಣಾಮಕಾರಿಯಾಗಿ ಹೇಳುವ ಸವಾಲು ಇಲ್ಲಿಯದ್ದು. ಹೊಸ ಬರಹಗಾರರ ಬಗೆಗಿನ ಪೂರ್ವಾಗ್ರಹಗಳನ್ನು ಪ್ರಶ್ನೆ ಮಾಡುವ ಕತೆ ಈ ಕಿರುಚಿತ್ರದಲ್ಲಿದೆ” ಎನ್ನುತ್ತಾರೆ ನಿರ್ದೇಶಕ ಮಂಸೋರೆ. ಮೂರು ಫೀಚರ್‌ ಸಿನಿಮಾಗಳನ್ನು ನಿರ್ದೇಶಿಸಿರುವ ಅವರಿಗೆ ಇದು ಮೊದಲ ಕಿರುಚಿತ್ರ. ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಆಸಕ್ತಿ, ಒತ್ತಾಸೆಯ ಮೇರೆಗೆ ಹನ್ನೊಂದು ನಿಮಿಷಗಳ ‘ದಿ ಕ್ರಿಟಿಕ್‌’ ಶಾರ್ಟ್‌ಮೂವೀ ಸಿದ್ಧವಾಗಿದೆ. ಹಿರಿಯ ಚಿತ್ರನಿರ್ದೇಶಕ ಟಿ.ಎಸ್‌.ನಾಗಾಭರಣ, ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋ ಖ್ಯಾತಿಯ ಉಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2022ರ ಫೆಬ್ರವರಿಯಲ್ಲಿ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಲಭ್ಯವಾಗಲಿದೆ.

“ಸತ್ಯ ಹೆಗಡೆ ತಮ್ಮ ಬ್ಯಾನರ್‌ಗೆ ಕಿರುಚಿತ್ರ ಮಾಡುವಂತೆ ಹೇಳಿದರು. ಹಿರಿಯ ಪತ್ರಕರ್ತ ಬಿ.ಎಂ.ಬಷೀರ್‌ಅವರು ಬರೆದ ಕತೆಯೊಂದು ಫೇಸ್‌ಬುಕ್‌ನಲ್ಲಿ ಕಣ್ಣಿಗೆ ಬಿತ್ತು. ಈ ಕತೆಯನ್ನು ಕಿರುಚಿತ್ರ ಮಾಡುವುದಾಗಿ ಹೇಳಿದಾಗ ಬಷೀರ್‌ ಸಂತೋಷದಿಂದ ಒಪ್ಪಿದರು. ಪಾಂಡವಪುರ ಬಳಿ ಇರುವ ಅಂಕೇಗೌಡರ ಬೃಹತ್‌ ಲೈಬ್ರರಿಯಲ್ಲಿ ಚಿತ್ರಿಸಿದ್ದೇವೆ” ಎನ್ನುತ್ತಾರೆ ಮಂಸೋರೆ. ‘ಆಕ್ಟ್‌ 1978’ ಚಿತ್ರದ ನಂತರ ಅವರ ನಿರ್ದೇಶನದಲ್ಲಿ ಐತಿಹಾಸಿಕ ‘ರಾಣಿ ಅಬ್ಬಕ್ಕ’ ಸಿನಿಮಾ ಘೋಷಣೆಯಾಗಿತ್ತು. ಕಾರಣಾಂತರಗಳಿಂದ ಈ ಪ್ರಾಜೆಕ್ಟ್‌ ಮುಂದೂಡಲ್ಪಟ್ಟಿದೆ. ಇದಕ್ಕೂ ಮುನ್ನ ಬೇರೊಂದು ಸಿನಿಮಾ ನಿರ್ದೇಶಿಸುವ ಕುರಿತು ಅವರು ಸುಳಿವು ನೀಡುತ್ತಾರೆ. ಮುಂದಿನ ಕೆಲ ದಿನಗಳಲ್ಲಿ ಅವರ ಸಿನಿಮಾ ಕುರಿತಂತೆ ಮಾಹಿತಿ ಲಭ್ಯವಾಗಲಿದೆ.

LEAVE A REPLY

Connect with

Please enter your comment!
Please enter your name here