ಸೆನ್ನಾ ಹೆಗಡೆ ಈ ಸಿನಿಮಾವನ್ನು ಕನ್ನಡದಲ್ಲಿ ಮಾಡಬೇಕು ಅಂದುಕೊಂಡಿದ್ದರಂತೆ. ಕನ್ನಡವಾದರೆ ಯಾವ ಪ್ರದೇಶದ ಕತೆಯಾಗಿಸುತ್ತಿದ್ದರೋ ಗೊತ್ತಿಲ್ಲ. ಆದರೆ ಕನ್ನಡಕ್ಕೆ ಒಂದು ಅತ್ಯುತ್ತಮ ಚಿತ್ರ ಕೈತಪ್ಪಿತು ಅನ್ನಬಹುದು. ‘ತಿಂಞಳಾಯ್ಚ ನಿಶ್ಚಯಂ’ ಮಲಯಾಳಂ ಸಿನಿಮಾ SonyLIVನಲ್ಲಿ ಸ್ಟ್ರೀಮ್ ಆಗುತ್ತಿದೆ.
ನಮ್ಮಲ್ಲಿ ಉತ್ತರ ಕರ್ನಾಟಕದ ಕನ್ನಡ ಹೇಗೆ ಕೊಂಚ ಭಿನ್ನ ಧಾಟಿಯೋ ಹಾಗೆಯೇ ಕೇರಳದಲ್ಲಿ ಕಾಸರಗೋಡು-ಕಾಂಞಂಗಾಡ್ ಮಲಯಾಳದ ಧಾಟಿ ಭಿನ್ನ. ಜತೆಗೆ ಈ ಭಾಗ ಮಲಯಾಳಿಗಳ ಪಾಲಿನ ದೂರದ ಊರು. ಹಾಗಾಗಿ ಅಲ್ಲಿನ ಸಿನಿಮಾಗಳಲ್ಲಿ ಇತ್ತ ಕಡೆಯ ಮಲಯಾಳದ ಬಳಕೆ ತೀರಾ ಕಡಿಮೆ. ಅಂತಹ ಪ್ರಾದೇಶಿಕತೆ ಬಳಕೆಯ ಮೂಲಕ ಚಂದದ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಸೆನ್ನಾ ಹೆಗಡೆ.
‘ತಿಂಞಳಾಯ್ಚ ನಿಶ್ವಯಂ’ (ಸೋಮವಾರ ನಿಶ್ಚಿತಾರ್ಥ) ಕೇರಳ ರಾಜ್ಯ ಸರಕಾರದಿಂದ ಎರಡೆರಡು ಪ್ರಶಸ್ತಿ ಪಡೆದ ಚಿತ್ರ. ಅತ್ಯುತ್ತಮ ಕತೆಗೆ ಕತೆಗಾರ – ನಿರ್ದೇಶಕ ಸೆನ್ನಾ ಹೆಗಡೆ ಪ್ರಶಸ್ತಿ ಪಡೆದಿದ್ದಲ್ಲದೆ ಸಿನಿಮಾ ಕೇರಳ ರಾಜ್ಯ ಸರ್ಕಾರದಿಂದ ಎರಡನೇ ಅತ್ಯುತ್ತಮ ಚಿತ್ರವೆಂಬ ಪಾರಿತೋಷಕವನ್ನೂ ಪಡೆದಿದೆ. ನಿರ್ದೇಶಕ ಸೆನ್ನಾ ಹೆಗಡೆ ಕನ್ನಡಿಗರಿಗೆ ಅಪರಿಚಿತರಲ್ಲ. ಈ ಮೊದಲು ದಿಗಂತ್ ಅಭಿನಯದ ‘ಕಥೆಯೊಂದು ಶುರುವಾಗಿದೆ’ ನಿರ್ದೇಶಿಸಿದ್ದಾರೆ.
ಕನ್ನಡಿಗ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ತಿಂಞಳಾಯ್ಚ ನಿಶ್ಚಯಂ’ ಸಿನಿಮಾ ‘ಮೇಡ್ ಇನ್ ಕಾಂಞಂಗಾಡ್’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಗ್ಲ್ಯಾಮರಿನ ಗ್ರಾಮರನ್ನು ತೊಡೆದು ಹಾಕಿರುವ ಈ ಸಿನಿಮಾ ಒಂದು ನಿಶ್ಚಿತಾರ್ಥದ ಸುತ್ತ ನಡೆಯುವ ಕಥಾ ಪ್ರಸಂಗ. ಸುಜಿ (ಅನಘಾ ನಾರಾಯಣನ್) ಎಂಬ ಹೀರೋಯಿನ್ ಪಾತ್ರವನ್ನು ಆರಂಭದಲ್ಲಿ ನೋಡುವಾಗ ಇವಳೇನಾ ಮದುಮಗಳು (ಹೀರೋಯಿನ್) ಎಂದು ಅನಿಸುವಂತಿದೆ. ಮೊದಲಿಗೆ ಅಷ್ಟೇನೂ ಚಂದದ ಹುಡುಗಿಯಾಗಿ ಕಾರಣದ ಸುಜಿ ಸಿನಿಮಾ ನೋಡುತ್ತಾ ನೋಡುತ್ತ, ಆ ಪಾತ್ರಕ್ಕೆ ನಾವು ಹತ್ತಿರವಾದಂತೆ ಸುಂದರಿಯಾಗುವುದು ಸೆನ್ನಾ ಹೆಗಡೆ ಕತೆಯ ಮ್ಯಾಜಿಕ್.
ಗಲ್ಫ್ ಹುಡುಗನ ಜತೆ ಸುಜಿ ನಿಶ್ಚಿತಾರ್ಥ ತರಾತುರಿಯಲ್ಲಿ ನಿಶ್ಚಯವಾಗಿದೆ. ಆ ಹುಡುಗ ಆಕೆಗೆ ಇಷ್ಟವಾಗುವುದಿಲ್ಲ. ನಮಗೂ ಆತ ಇಷ್ಟವಾಗದಿರುವುದು ನಿರ್ದೇಶನದ ಜಾಣ್ಮೆ. “ದೇವಸ್ಥಾನಕ್ಕೆಲ್ಲ ಹೋಗುವ ಅಭ್ಯಾಸ ಇದೆಯಾ?” ಎಂದು ಹುಡುಗ ಕೇಳಿದಾಗ “ಹಾಂ, ಇದೆ. ಇವತ್ತು ಬೆಳಗ್ಗೆ ಹೋಗ್ಬಂದೆ. ಮುಂದಿನ ವರ್ಷ ಶಬರಿಮಲೆಗೆ ಹೋಗ್ಬೇಕು ಅಂತ ಇದೀನಿ” ಎಂದು ಹುಡುಗಿ ಹೇಳುವಾಗ ಮದುವೆ ತಪ್ಪಿಸಲು ಆಕೆ ನಡೆಸುವ ಪ್ರಯತ್ನ ನಮಗೆ ಅರ್ಥವಾಗುತ್ತದೆ. ಗಲ್ಫ್ ಹುಡುಗನ ಅರಿವಿಗೆ ಅದು ನಿಲುಕುವುದಿಲ್ಲ.
ನಿಶ್ಚಿತಾರ್ಥ ಮಾಡಿಸುವ ತರಾತುರಿಯಲ್ಲಿರುವ ಅಪ್ಪ ಕುವೈತ್ ವಿಜಯನ್‌ಗೆ ಆರ್ಥಿಕ ಮುಗ್ಗಟ್ಟಿದೆ. ಆದಾಗ್ಯೂ ಎರಡೇ ದಿನದಲ್ಲಿ ಸಮಾರಂಭಕ್ಕೆ ಅಣಿಯಾಗುವ ಅವನಿಗೆ ತಾನು ಮನೆಯ ಯಜಮಾನ ಎಂದು ನಿರೂಪಿಸುವ ತವಕ. ಈಗಾಗಲೇ ದೊಡ್ಡವಳು ಒಲಿದು ಬಂದ ಬ್ಯಾಂಕ್ ಉದ್ಯೋಗಿಯ ಸಂಬಂಧ ಧಿಕ್ಕರಿಸಿ ಬಸ್ ನಿರ್ವಾಹಕನ ಮದುವೆಯಾಗಿದ್ದಾಗಿದೆ. ಪೆನ್ ಹಿಡಿದು ಅಂದದ ಹುಡುಗಿಯರ ರೇಖಾಚಿತ್ರಗಳನ್ನು ಚಂದಗೆ ಬಿಡಿಸುವ ಮಗನ ಮೇಲೆ ಒಳ್ಳೆಯ ಅಭಿಪ್ರಾಯ ಇಲ್ಲ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಹೀಗಿರುವಾಗ ಆ ನಿಶ್ಚಿತಾರ್ಥ ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂಬುದೇ ಕತೆ.
ಇಂಥ ಕತೆಗಳು ಮಲಯಾಳದಲ್ಲೂ ಅವೆಷ್ಟೋ ಬಂದಿವೆ. ಹಾಗಿದ್ದೂ “ತಿಂಞಳಾಯ್ಚ ನಿಶ್ಚಯಂ” ಇಷ್ಟವಾಗುವುದು ತೆರೆಯ ಮೇಲೆ ಬರುವ ಅಷ್ಟೂ ಪಾತ್ರಗಳ ಗಟ್ಟಿಯಾದ ಪೋಷಣೆಯ ಕಾರಣಕ್ಕೆ. “ಚಕ್ಕುಲಿ ಚೆನ್ನಾಗಿದೆ, ಮನೆಯಲ್ಲೇ ಮಾಡಿದ್ದಾ?” ಎಂದಾಗ “ಅಲ್ಲ, ಕುಟುಂಬ ಶ್ರೀಯಲ್ಲಿ ನಾವೆಲ್ಲಾ ಒಟ್ಟಾಗಿ ಮಾಡಿದ್ದು” ಎನ್ನುವಲ್ಲಿ ಕೇರಳದಲ್ಲಿ ಗಟ್ಟಿಯಾಗಿರುವ ಮಹಿಳಾ ಸ್ವ-ಸಹಾಯ ಸಂಘಗಳನ್ನು ನಿರ್ದೇಶಕರು ಅನಾಯಾಸವಾಗಿ ತೆರೆಗೆ ತಂದಿದ್ದಾರೆ. ಹಾಗೆಯೇ ನಿಶ್ಚಿತಾರ್ಥದ ಸಿದ್ಧತೆಗೆ ವಿಜಯನ್‌ಗೆ ಸಹಾಯ ಮಾಡುವ ಪಂಚಾಯತ್ ಮೆಂಬರ್ ಕೂಡ ಅಲ್ಲಿನ ಮಣ್ಣಿನ ವಾಸನೆ ಹೊತ್ತು ತರುತ್ತಾನೆ. “ಇಲೆಕ್ಟ್ರಿಸಿಟಿ ಬೋರ್ಡಿನ ಬಿನು ಹತ್ರ ಮಾತಾಡಿದೆ. ಲೈಟ್ ಎಷ್ಟಾದ್ರೂ ಹಾಕಬಹುದಂತೆ. ಸುಮ್ನೆ ಜನರೇಟರ್‌ಗೆ ಕಾಸು ಕೊಡೋದ್ಯಾಕೆ” ಎಂಬ ಆತನ ಸಂಭಾಷಣೆ ಕೇರಳದಲ್ಲಿ ರಾಷ್ಟ್ರೀಯ (ರಾಜಕೀಯ) ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಪಕ್ಕಾ ಉದಾಹರಣೆ.
ಮಲಯಾಳಿಗಳು ಯಾವುದೇ ಊರಿಗೆ ಹೋದರೂ ಭೂತ ಹೊಕ್ಕವರಂತೆ ದುಡಿಯುತ್ತಾರೆ. ದೋಸೆ ಹುಯ್ಯುವುದು, ಸಪ್ಲೈ ಮಾಡುವುದು, ಕೊನೆಗೆ ತಟ್ಟೆಯನ್ನೂ ಎತ್ತಿಟ್ಟು ತೊಳೆಯುವ ಅಷ್ಟೂ ಕೆಲಸಗಳನ್ನು ಒಬ್ಬನೇ ಮಲಯಾಳಿ ನಿರ್ವಹಿಸಬಲ್ಲ. ಹಾಗೆಂದು ತವರೂರಲ್ಲಿ ಅದೇ ಮಲಯಾಳಿಗಳು ಮಹಾ ಸೋಮಾರಿಗಳು. ಪಾತ್ರೆ ಸಾಮಾನು ತರುವ ರಿಕ್ಷಾ ಚಾಲಕ ಅದನ್ನಿಳಿಸಲು ಕೈಜೋಡಿಸದೆ ಇರುವ ದೃಶ್ಯದಲ್ಲಿ ಈ ಅಂಶವನ್ನು ಸ್ವತಃ ಮಲಯಾಳಿಗಳೂ ಬೇಸರ ಮಾಡಿಕೊಳ್ಳದಂತೆ ತೋರಿಸಿರುವುದು ಬುದ್ಧಿವಂತಿಕೆ. ಹಾಗೆಯೇ ಶಾಮಿಯಾನ ಕಟ್ಟಲು ಇರುವ ಬಂಗಾಳಿ ಕೆಲಸಗಾರರೂ ಕೇರಳದ ಕಾರ್ಮಿಕರ ಕೊರತೆ ಮನಸ್ಸಿಗೆ ತರುತ್ತಾರೆ.
ಒಂದೇ ಒಂದು ಪಾತ್ರದ ಹೊರತು ನಗಿಸುವ ಉದ್ದೇಶಕ್ಕೇ ಹೆಣೆದ ಪಾತ್ರಗಳಿಲ್ಲ. ಎಲ್ಲಾ ಪಾತ್ರಗಳೂ ತಾವು ಮಾಡುವ ಗಂಭೀರ ಕೆಲಸಗಳಲ್ಲೇ ನಗೆಯುಕ್ಕಿಸದೆ ಬಿಡುವುದಿಲ್ಲ. ಒಂದೇ ಸನ್ನಿವೇಶದಲ್ಲಿ ಬರುವ ಬಾಣಸಿಗನೂ ಸಣ್ಣಗೆ ನಗಿಸಿ ಮರೆಯಾಗುತ್ತಾನೆ. ಕೊನೆಯ ಒಂದೇ ದೃಶ್ಯದಲ್ಲಿ ಬರುವ ಮನೀಶಾ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ ಮನಸ್ಸಲ್ಲಿ ಉಳಿಯುತ್ತಾಳೆ.
ಕ್ಯಾಮೆರಾ ಕೈಚಳಕ ತೋರಿಸಿದ ಛಾಯಾಗ್ರಾಹಕ ಶ್ರೀರಾಜ್ ರವೀಂದ್ರನ್ ಸೆನ್ನಾ ಹೆಗಡೆ ಜತೆ ಚಿತ್ರಕತೆಯಲ್ಲೂ ಕೈಯಾಡಿಸಿದ್ದಾರೆ. ಚಿತ್ರಕತೆಯಲ್ಲಿ ಅವರ ಪಾಲು ಎಷ್ಟಿದೆಯೋ ಗೊತ್ತಿಲ್ಲ, ಆದರೆ ಛಾಯಾಗ್ರಹಣ ಪ್ರಶಂಸಾರ್ಹ. ಸಿನಿಮಾ ನೋಡುತ್ತಿದ್ದೇವೆ ಎಂಬ ಭಾವವನ್ನೇ ಕ್ಯಾಮೆರಾ ಕಲೆ ಮರೆಮಾಚುತ್ತದೆ. ನಿಶ್ಚಿತಾರ್ಥ ನಡೆಯುವ ಮನೆಯ ಪಕ್ಕದ ಕಾಂಪೌಂಡ್ ಮೇಲೆ ಕೂತು ಅಷ್ಟೂ ಘಟನೆಗಳಿಗೆ ನಾವೂ ಸಾಕ್ಷಿಯಾಗಿದ್ದೇವೆ ಅನಿಸುತ್ತದೆ. ಕತೆ ನಡೆಯುವ ಅದೇ ಮನೆಯ ಆವರಣದಲ್ಲಿ ಬರುವ ಹಾಡಿನ ಸನ್ನಿವೇಶವನ್ನೂ ನೋಡಿಬಿಡೋಣ ಅನಿಸುವುದು ಸಂಗೀತದ ಹೊಸತನ.
ನಿರ್ದೇಶಕರು ಈ ಸಿನಿಮಾವನ್ನು ಕನ್ನಡದಲ್ಲಿ ಮಾಡಬೇಕು ಎಂದು ಮೊದಲು ಅಂದುಕೊಂಡಿದ್ದರಂತೆ. ಕನ್ನಡವಾದರೆ ಯಾವ ಪ್ರದೇಶದ ಕತೆಯಾಗಿಸುತ್ತಿದ್ದರೋ ಗೊತ್ತಿಲ್ಲ. ಅಂತೂ ಕನ್ನಡಕ್ಕೆ ಒಂದು ಅತ್ಯುತ್ತಮ ಚಿತ್ರ ಕೈತಪ್ಪಿತು ಅನ್ನಬಹುದು.
ಚಿತ್ರದ ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ