ಹೊಂಬಾಳೆ ಫಿಲಂಸ್‌ ನಿರ್ಮಾಣದ ‘ಧೂಮಂ’ ಮಲಯಾಳಂ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಪವನ್‌ ಕುಮಾರ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಥ್ರಿಲ್ಲರ್‌ ಚಿತ್ರವಿದು. ಫಹಾದ್‌ ಫಾಸಿಲ್‌ ಹೀರೋ. ಜೂನ್‌ 23ರಂದು ಸಿನಿಮಾ ತೆರೆಕಾಣಲಿದೆ.

‘ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರ ಸುತ್ತುತ್ತದೆ. ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕತೆ’ – ಇದು ‘ಧೂಮಂ’ ಮಲಯಾಳಂ ಸಿನಿಮಾದ ಸ್ಟೋರಿ ಸಿನಾಪ್ಸಿಸ್‌. ‘ಲೂಸಿಯಾ’, ‘U-TURN’ ಸಿನಿಮಾ ಖ್ಯಾತಿಯ ಪವನ್‌ ಕುಮಾರ್‌ ನಿರ್ದೇಶನದ ಚಿತ್ರವಿದು. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್‌ನಲ್ಲಿ ತಯಾರಾಗಿರುವ ಸಿನಿಮಾ ಜೂನ್‌ 23ರಂದು ತೆರೆಕಾಣಲಿದೆ. ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಮೂಲ ಮಲಯಾಳಂ ಭಾಷೆಯ ಜೊತೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲೂ ಟ್ರೈಲರ್‌ ಬಂದಿದೆ.

‘ಧೂಮಂ’ ಟ್ರೈಲರ್‌ ಜನರ ನಿರೀಕ್ಷೆಯನ್ನು ಸರಿಗಟ್ಟುವಂತಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಕನ್ನಡ ಡಬ್ಬಿಂಗ್‌ ಅವತರಣಿಕೆಯ ಟ್ರೈಲರ್‌ ಅಷ್ಟು ಇಂಪ್ರೆಸೀವ್‌ ಆಗಿಲ್ಲ. ಕನ್ನಡ ಟ್ರೈಲರ್‌ ವೀಕ್ಷಿಸಿದವರು, ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಈ ಚಿತ್ರವನ್ನು ಕನ್ನಡದಲ್ಲೂ ಚಿತ್ರಿಸಬೇಕಿತ್ತು ಎನ್ನುತ್ತಿದ್ದಾರೆ. ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪವನ್ ಕುಮಾರ್, ‘ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ. ಸಾಕಷ್ಟು ಬಾರಿ ಚಿತ್ರಕಥೆಯನ್ನು ತಿದ್ದಿದ್ದೇನೆ. ಒಂದು ದಶಕದ ನನ್ನ ಕನಸು ನನಸಾಗಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎನ್ನುತ್ತಾರೆ. ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೂನ್‌ 23ರಂದು ಕೇರಳ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

Previous article‘ಸಿನಿಮಾ ಟೈಟಲ್‌ ರಿಜಿಸ್ಟ್ರೇಷನ್‌ ಗೊಂದಲಕ್ಕೆ ಮುಕ್ತಿ ಸಿಗಲಿ’ – ಪಿ ಎಚ್‌ ವಿಶ್ವನಾಥ್‌
Next articleಪ್ರವಾಹವನ್ನು ಎದುರಿಸಿದ ಕೇರಳದ ಜನಸಾಮಾನ್ಯರ ಕತೆ – 2018

LEAVE A REPLY

Connect with

Please enter your comment!
Please enter your name here