ಅಲ್ಲು ಅರ್ಜುನ್‌ ಅಭಿನಯದ ಬ್ಲಾಕ್‌ಬಸ್ಟರ್‌ ಸಿನಿಮಾ ‘ಪುಷ್ಪ’ ಜನವರಿ 7ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಥಿಯೇಟರ್‌ಗಳಲ್ಲಿ 300 ಕೋಟಿ ರೂಪಾಯಿ ವಹಿವಾಟು ದಾಖಲಿಸಿ ಪ್ರದರ್ಶನಗೊಳ್ಳುತ್ತಿದೆ ಸಿನಿಮಾ. ಹೀಗಿರುವಾಗ ಚಿತ್ರದ ನಿರ್ಮಾಪಕರು ಏಕಾಏಕಿ ಓಟಿಟಿ ದಿನಾಂಕ ಅನೌನ್ಸ್‌ ಮಾಡಿರುವುದು ಅಚ್ಚರಿ ಮೂಡಿಸಿದೆ.

ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ನಟಿಸಿರುವ ‘ಪುಷ್ಪ’ ಕಳೆದ ವರ್ಷದ ಬ್ಲಾಕ್‌ ಬಸ್ಟರ್‌ ಸಿನಿಮಾ ಎನಿಸಿಕೊಂಡಿತು. ಮೂಲ ತೆಲುಗು ಸೇರಿದಂತೆ ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಂಡ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಚಿತ್ರದ ಒಟ್ಟಾರೆ ವಹಿವಾಟು 300 ಕೋಟಿ ರೂಪಾಯಿ ದಾಟಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಉತ್ತರ ಭಾರತದಲ್ಲಿ ಹಿಂದಿ ಅವತರಣಿಕೆಯೊಂದೇ 65 ಕೋಟಿ ರೂಪಾಯಿ ವಹಿವಾಟು ದಾಖಲಿಸಿದ್ದು, ಇಂದಿಗೂ ಥಿಯೇಟರ್‌ಗಳಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಸಿನಿಮಾ OTT ಯಲ್ಲಿ ಸ್ಟ್ರೀಮ್‌ ಆಗುವ ಸುದ್ದಿ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

“He’ll fight. He’ll run. He’ll jump. But he won’t succumb! Watch #PushpaOnPrime, Jan. 7 In Telugu, Tamil, Malayalam and Kannada” ಎಂದು ಅಮೇಜಾನ್‌ ಪ್ರೈಮ್‌ ಟ್ವೀಟ್‌ ಮಾಡಿದೆ. 2021ರ ಡಿಸೆಂಬರ್‌ 17ರಂದು ಬಿಡುಗಡೆಯಾದ ‘ಪುಷ್ಪ’ ಸಿನಿಮಾ ಉತ್ತಮ ಓಪನಿಂಗ್‌ ಪಡೆದುಕೊಂಡಿತು. ವಿಶ್ಲೇಷಕರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದರೂ ಗಳಿಕೆಯಲ್ಲೇನೂ ಸಿನಿಮಾ ಹಿಂದುಳಿಯಲಿಲ್ಲ. ವಿಶೇಷವಾಗಿ ಉತ್ತರ ಭಾರತದಲ್ಲಿ ‘ಪುಷ್ಪ’ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಿತು. ಈಗ ಓಟಿಟಿ ಮೂಲಕ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ತಮ್ಮ ಸಿನಿಮಾ ವೀಕ್ಷಕರನ್ನು ತಲುಪಲಿದೆ ಎನ್ನುವುದು ಚಿತ್ರತಂಡದ ಆಶಯ. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕನ್ನಡ ನಟ ಧನಂಜಯ, ಫಹಾದ್‌ ಫಾಸಿಲ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here