‘ಕ್ರಾಂತಿ’ ಸಿನಿಮಾ ಪ್ರೊಮೋಷನಲ್‌ ಇವೆಂಟ್‌ನಲ್ಲಿ ಕಿಡಿಗೇಡಿಯೊಬ್ಬ ನಟ ದರ್ಶನ್‌ರತ್ತ ಚಪ್ಪಲಿ ತೂರಿದ ಘಟನೆ ಕುರಿತು ತೀವ್ರ ಖಂಡನೆ ವ್ಯಕ್ತವಾಗುತ್ತಿವೆ. ಇಂದು ನಟ ಸುದೀಪ್‌ ಟ್ವಿಟರ್‌ನಲ್ಲಿ ಸುದೀರ್ಘ ಪತ್ರದ ಮೂಲಕ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊನ್ನೆ ಭಾನುವಾರ ಹೊಸಪೇಟೆಯಲ್ಲಿ ‘ಕ್ರಾಂತಿ’ ಸಿನಿಮಾದ ಪ್ರೊಮೋಷನಲ್‌ ಇವೆಂಟ್‌ ನಡೆದಿತ್ತು. ವೇದಿಕೆಯಲ್ಲಿ ಚಿತ್ರದ ತಾರೆಯರಾದ ದರ್ಶನ್‌ ಮತ್ತು ರಚಿತಾ ರಾಮ್‌ ಇದ್ದರು. ರಚಿತಾ ರಾಮ್‌ ಮಾತನಾಡುತ್ತಿದ್ದ ವೇಳೆ ಕಿಡಿಗೇಡಿಯೊಬ್ಬ ದರ್ಶನ್‌ರತ್ತ ಚಪ್ಪಲಿ ಎಸೆದಿದ್ದ. ಅಗಲಿದ ನಟ ಪುನೀತ್‌ ರಾಜಕುಮಾರ್‌ ಪರ ಘೋಷಣೆ ಅಲ್ಲಿ ಕೇಳಿಬಂದಿದ್ದರಿಂದ ಇದು ಪುನೀತ್‌ ಅಭಿಮಾನಿಯ ಕೃತ್ಯ ಎಂದೇ ಅದು ಬಿಂಬಿತವಾಯ್ತು. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ದರ್ಶನ್‌ ವಿಚಲಿತರಾದರೂ ಸಂದರ್ಭವನ್ನು ನಗುನಗುತ್ತಲೇ ತಿಳಿಗೊಳಿಸಿದರು. ಈ ವೀಡಿಯೋ ಕ್ಲಿಪಿಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ಸಾಕಷ್ಟು ಚರ್ಚೆಗಳಿಗೆ ಆಸ್ಪದವಾಯ್ತು. ಕೂಡಲೇ ನಟ ಶಿವರಾಜಕುಮಾರ್‌ ಘಟನೆಯನ್ನು ಖಂಡಿಸಿ ವೀಡಿಯೋವೊಂದನ್ನು ಮಾಡಿದ್ದರು.

ಇಂದು ಬೆಳಗ್ಗೆ ನಟ ಸುದೀಪ್‌ ಟ್ವಿಟರ್‌ನಲ್ಲಿ ಪ್ರಕರಣವನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪುನೀತ್‌ ಅವರ ಹೆಸರಿನೊಂದಿಗೆ ಅಭಿಮಾನಿ ಈ ಕೃತ್ಯ ಎಸಗಿದ್ದೇ ತಪ್ಪು. ಒಂದೊಮ್ಮೆ ಪುನೀತ್‌ ಈಗ ನಮ್ಮೊಂದಿಗೆ ಇದ್ದಿದ್ದರೆ ತುಂಬಾ ನೊಂದುಕೊಳ್ಳುತ್ತಿದ್ದರು. ಸಿನಿಪ್ರಿಯರು ಕಲಾವಿದರನ್ನು ಗೌರವದಿಂದ ಕಾಣಬೇಕು. ಸಿನಿಮಾ ಪ್ರಚಾರದ ಸಂದರ್ಭದಲ್ಲಿ ದರ್ಶನ್‌ ಅವರೊಂದಿಗೆ ಚಿತ್ರದ ನಾಯಕನಟಿಯೂ ಇದ್ದರು. ಇಂತಹ ಕೃತ್ಯಗಳು ಇತರೆಡೆ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುತ್ತವೆ. ಯಾವುದೇ ಸಂದರ್ಭದಲ್ಲಿ ಇಂತಹ ಪ್ರತಿಕ್ರಿಯೆಗಳು ಕೂಡದು” ಎಂದಿದ್ದಾರೆ ಸುದೀಪ್‌.

ಸುದೀಪ್‌ ಅವರ ಟ್ವೀಟ್‌ ಕುರಿತಂತೆ ಸಿನಿಪ್ರಿಯರಲ್ಲಿ ಅಭಿಮಾನ ಮೂಡಿದೆ. ಹಾಗೆ ನೋಡಿದರೆ ಕೆಲವು ವರ್ಷಗಳಿಂದೀಚೆಗೆ ಸುದೀಪ್‌ ಮತ್ತು ದರ್ಶನ್‌ ಅವರ ಮಧ್ಯೆ ವೈಮನಸ್ಸಿದೆ. ಈ ಹಿನ್ನೆಲೆಯಲ್ಲಿ ದರ್ಶನ್‌ ಪರ ನಿಂತ ಸುದೀಪ್‌ ಟ್ವೀಟ್‌ ಉದ್ಯಮದಲ್ಲಿ ಹಾಗೂ ಅಭಿಮಾನಿ ವಲಯದಲ್ಲಿ ಅಚ್ಚರಿ ಮೂಡಿಸಿದೆ. “ಕನ್ನಡ ಸಿನಿಮಾರಂಗ ಮತ್ತು ಕನ್ನಡ ಭಾಷೆಗೆ ಸಂಬಂಧಿಸಿದಂತೆ ದರ್ಶನ್‌ ಅವರ ಕೊಡುಗೆ ದೊಡ್ಡದಿದೆ. ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು. ಹಾಗೆಂದು ಈ ಘಟನೆಯನ್ನು ನಾನು ಖಂಡಿಸದಿರಲು ಸಾಧ್ಯವೇ ಇಲ್ಲ. ಪ್ರೊಮೋಷನ್‌ ಇವೆಂಟ್‌ನಲ್ಲಿ ನಡೆದ ಘಟನೆ ನನ್ನನ್ನು ಡಿಸ್ಟರ್ಬ್‌ ಮಾಡಿದೆ” ಎಂದು ಬರೆದಿದ್ದಾರೆ ಸುದೀಪ್‌. ಅವರ ಈ ಪತ್ರ ದೊಡ್ಡ ಸಂಖ್ಯೆಯಲ್ಲಿ ರೀ ಟ್ವೀಟ್‌ ಆಗಿದೆ. ದರ್ಶನ್‌ ಅಭಿಮಾನಿಗಳು ತಮ್ಮ ಸೋಷಿಯಲ್‌ ಹ್ಯಾಂಡಲ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here