ಯಾವ ವಿದಾಯಗಳೂ ಸುಲಭವಲ್ಲ. ಆದರೆ ಇದೊಂದು ರಾಷ್ಟ್ರೀಯ ದುಃಖ. ನಮ್ಮೆಲ್ಲರ ಸಂಕಟ. ನೀವಿಲ್ಲದ ಜಗತ್ತಿನಲ್ಲಿ ನಿಮ್ಮ ನೆನಪಿಗಾಗಿ ನಿಮ್ಮ ಹಾಡುಗಳನ್ನುಕೊಟ್ಟು ಹೋಗಿರುವಿರಿ. ನಾವು ಅಳಿದ ಮೇಲೂ ನಿಮ್ಮ ಹಾಡುಗಳು ಉಳಿದೇ ಇರುತ್ತವೆ. ಹೋಗಿ ಬನ್ನಿ ಲತಾ ದೀ, ಮೇಲಿನ ಲೋಕ ಧನ್ಯವಾಯಿತು.
ಈ ಭಾನುವಾರದ ಬೆಳಗು ವಿರಾಮದಲ್ಲಿ ಪ್ರಾರಂಭವಾಗಲಿಲ್ಲ. 2020ರ ಸೆಪ್ಟೆಂಬರ್‌ನಲ್ಲಿ ಇದೇ ಕೋವಿಡ್‌ಗೆ ನಮ್ಮ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡೆವು. ಇಂದು ಫೆಬ್ರವರಿ 6, 2022 ಮುಂಜಾನೆ ನಮ್ಮೆಲ್ಲರ ಕೋಗಿಲೆ ಲತಾ ದೀದಿಯನ್ನು ಕಳೆದುಕೊಂಡೆವು. ಅವರದು ಮುಪ್ಪಿಲ್ಲದ ದನಿ. ಅವರ ಮುಖದಲ್ಲೂ ಸಹ ಸದಾ ಒಂದು ಮುದ್ದಾದ ತುಂಟ ಹುಡುಗಿ ಇರುತ್ತಿದ್ದಳು. ಆಗಾಗ ಅವಳು ಅವರ ಮಾತಿನಲ್ಲಿ, ಕಣ್ಣುಗಳ ಹೊಳಪಿನಲ್ಲಿ, ಅವರು ಹೆಣೆದುಕೊಳ್ಳುತ್ತಿದ್ದ ಮೊಣಕಾಲಿಗಿಂತ ಉದ್ದದ ಎರಡು ಜಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು.
ಬಹಳಷ್ಟು ಸಲ ಬಿಳಿಯ ಸೀರೆಗಳನ್ನೇ ಧರಿಸುತ್ತಿದ್ದ ಲತಾ ದೀದಿಯ ಕಿವಿಗಳಲ್ಲಿ ಅಷ್ಟೇ ಖಾಯಂ ಆಗಿರುತಿದ್ದದ್ದು ಫಳ್ ಎನ್ನುತ್ತಿದ್ದ ವಜ್ರದೋಲೆ. ಹದಿವಯಸ್ಸಿನ ಭಾಗ್ಯಶ್ರೀ ಮೊದಲ ಚಿತ್ರ, ‘ಮೈನೆ ಪಾರ್ ಕಿಯಾ’ ಚಿತ್ರದ ‘ದಿಲ್ ದೀವಾನ ಬಿನ್ ಸಜನಾ ಕೆ ಮಾನೆ ನಾ’ ಹಾಡಿದಾಗ ಲತಾ ಅವರಿಗೆ 60ರ ವಯಸ್ಸು. ಆದರೂ ಅವರ ದನಿಯಲ್ಲಿ ಒಂದಾದರೂ ಸುಕ್ಕು ಕಾಣುವುದಿಲ್ಲ. ‘ಲೇಕಿನ್’ ಚಿತ್ರಕ್ಕಾಗಿ 1990ರಲ್ಲಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಾಗ ಅವರ ವಯಸ್ಸು 61. ತೆರೆಯ ಮೇಲೆ ತಾಯಿ, ಅಕ್ಕ, ತಂಗಿ, ಪ್ರೇಮಿ, ಮಗಳು, ಪತ್ನಿ ಯಾರೇ ಇದ್ದರೂ ಲತಾ ಥೇಟ್ ಅವರೇ ಆಗುತ್ತಿದ್ದರು.
‘ಲತಾ ಹಾಡುವಾಗ ಅವರ ದನಿಯಲ್ಲಿ ಅವರ ಮುಗುಳ್ನಗೆ ಕಾಣುತ್ತಿತ್ತು’ ಎಂದು ಗುಲ್ಜಾರ್ ಹೇಳುತ್ತಾರೆ. ಜಾವೇದ್ ಅಖ್ತರ್ ಬರೆದ ಒಂದು ಹಾಡಿದೆ, ‘ಇಕ್ ಲಡಕೀ ಕೊ ದೇಖಾ ತೊ ಐಸಾ ಲಗಾ’ ಎಂದು. ಅದರ ಕೆಲವು ಸಾಲುಗಳು ಹೀಗಿವೆ, ‘ಹೇಗೆ ಅಂದರೆ ಅರಳಿರುವ ಗುಲಾಬಿಯ ಹಾಗೆ, ಕವಿಯೊಬ್ಬನ ಕನಸಿನ ಹಾಗೆ, ಹೊಳೆಯುವ ಕಿರಣದ ಹಾಗೆ, ವನದ ಜಿಂಕೆಯ ಹಾಗೆ, ಹುಣ್ಣಿಮೆ ರಾತ್ರಿಯ ಹಾಗೆ, ಮೃದುವಾದ ಮಾತಿನ ಹಾಗೆ, ಗುಡಿಯಲ್ಲಿ ಬೆಳಗುವ ಹಣತೆಯ ಹಾಗೆ…’ ಇದೇ ಹಾಡು ಲತಾ ಅವರ ಹಾಡುಗಳಿಗೆ ಅದೆಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತದೆ!
ಲತಾ ದೀ ಅವರ ತಂದೆ ದೀನಾನಾಥ್ ಮಂಗೇಶ್ಕರ್, ತಾಯಿ ಶೇವಂತಿ ಮಂಗೇಶ್ಕರ್. ತಂದೆ ಸಂಗೀತ ಹೇಳಿಕೊಡುತ್ತಿದ್ದರು, ಸ್ವತಃ ಹಾಡುಗಾರರು, ನಾಟಕಗಳನ್ನು ಆಡಿಸುತ್ತಿದ್ದರು. ಅವರ ಮೊದಲ ಮಗಳು ಹೇಮಾ. ಅವರ ಒಂದು ನಾಟಕದ ನಾಯಕಿಯ ಹೆಸರು ಲತಿಕಾ. ಆ ಪ್ರೀತಿಗೆ ಅವರು ಮಗಳ ಹೆಸರನ್ನು ಲತಾ ಎಂದು ಬದಲಾಯಿಸುತ್ತಾರೆ. ಹುಟ್ಟಿದಾಗಿನಿಂದ ಬಹುಶಃ ಮಾತುಗಳಿಗಿಂತ ಹೆಚ್ಚಾಗಿ ಕಿವಿಯ ಮೇಲೆ ಸಂಗೀತದ ಸ್ವರಗಳೇ ಬಿದ್ದಿರಬೇಕು ಈ ಪೋರಿಗೆ. ಶಿಷ್ಯನೊಬ್ಬನಿಗೆ ಸಂಗೀತ ಕಲಿಸುತ್ತಿದ್ದ ತಂದೆ, ಅವನಿಗೆ ರಿಯಾಜ್ ಮಾಡಲು ಸೂಚಿಸಿ ಏನೋ ಕೆಲಸದ ಮೇಲೆ ಎದ್ದುಹೋಗುತ್ತಾರೆ. ಅವನ ಹಾಡು ಕೇಳಿದ ಪುಟ್ಟ ಹುಡುಗಿ ಲತಾ ಬಂದು, ನೀವು ತಪ್ಪು ಹಾಡುತ್ತಿದ್ದೀರಿ, ಅಪ್ಪ ಹೇಳಿಕೊಟ್ಟಿದ್ದು ಹೀಗಲ್ಲ ಎಂದು ತಾನು ಆ ರಾಗವನ್ನು ಹಾಡುತ್ತಾಳೆ. ಆಗ ಲತಾಗೆ 5 ವರ್ಷ ವಯಸ್ಸು! ಆ ರಾಗದ ಹೆಸರು ಪುರಿಯಾ ಧನಶ್ರೀ. ಅಷ್ಟರಲ್ಲಿ ಹಿಂದಿರುಗಿ ಬಂದ ತಂದೆ ಅದನ್ನುಕೇಳಿ ಬೆರಗಾಗುತ್ತಾರೆ.
ಮರುದಿನ ಮುಂಜಾನೆ 6ಕ್ಕೆ ಮಗಳನ್ನೆಬ್ಬಿಸಿ ಸಂಗೀತಕ್ಕೆ ಕೂರಿಸುವ ತಂದೆ, ಮಗಳಿಗೆ ಮೊದಲು ಹೇಳಿಕೊಡುವುದು ಸಾಯಂಕಾಲದ ರಾಗವಾದ ಅದೇ ಪುರಿಯಾ ಧನಶ್ರೀ. ಹೀಗೆ ಸಂಧ್ಯಾರಾಗದಿಂದ ಶುರುವಾದ ಸಂಗೀತಯಾನ ಅದು. ಅವರಿಗೆ 9 ವರ್ಷ ವಯಸ್ಸಾಗಿದ್ದಾಗ ಕೆಲವರು ಆಯೋಜಕರು ಬಂದು ದೀನಾನಾಥ್ ಅವರನ್ನು ಸಭೆಯಲ್ಲಿ ಹಾಡಲಿಕ್ಕೆಂದು ಆಹ್ವಾನಿಸುತ್ತಾರೆ. ನಾನೂ ಹಾಡುತ್ತೇನೆ ಎಂದು ಬಿಳಿ ಫ್ರಾಕ್ ಧರಿಸಿ ಸಿದ್ಧವಾಗುವ ಲತಾ ಆರಿಸಿಕೊಳ್ಳುವುದು ರಾಗ್ ಖಂಬಾವತಿ. ಸಭೆಯಲ್ಲಿ ಮೊದಲು ಹಾಡುವ ಹುಡುಗಿಗೆ ಹೆದರಿಕೆ ಎನ್ನುವುದು ಇನಿತಿಲ್ಲ! ಹಾಡು ಮುಗಿಸಿದ ಬಳಿಕ ಅಪ್ಪನ ಪಕ್ಕವೇ ವೇದಿಕೆಯಲ್ಲಿ ಕೂರುವ ಹುಡುಗಿ ಆಮೇಲೆ ಅಲ್ಲೇ ಅಪ್ಪನ ತೊಡೆಯ ಮೇಲೆ ತಲೆಯಿಟ್ಟು ನಿದ್ದೆ ಮಾಡಿಬಿಡುತ್ತಾಳೆ.
ಈಕೆ ಶಾಲೆಗೆ ಹೋಗಿದ್ದು ಒಂದೇ ಒಂದು ದಿನ. ಅಲ್ಲಿ ಮಕ್ಕಳನ್ನು ಸೇರಿಸಿಕೊಂಡು ಸಂಗೀತ ಹೇಳಿಕೊಡುತ್ತಿದ್ದ ಇವಳನ್ನು ಟೀಚರ್ ಬೈದಾಗ, ಇನ್ನೆಂದೂ ಶಾಲೆಯ ಮೆಟ್ಟಿಲು ತುಳಿಯುವುದಿಲ್ಲ ಎಂದು ಎದ್ದು ಬರುವ ಈ ಪೋರಿ ಆಮೇಲೂ ಹೀಗೆಯೇ ಸಿಟ್ಟು ಬಂದರೆ ನೇರ ಭೀಷ್ಮ ಪ್ರತಿಜ್ಞೆಯೇ! ಆಮೇಲೆ ತಂದೆ ತೀರಿ ಹೋಗುತ್ತಾರೆ. ಅಮ್ಮ, ಮೂವರು ತಂಗಿಯರು, ಒಬ್ಬ ತಮ್ಮ, ಅವರ ಮನೆಯಲ್ಲೇ ಇದ್ದ ಸೋದರ ಸಂಬಂಧಿ ಎಲ್ಲರ ಜವಾಬ್ದಾರಿ ಪುಟ್ಟ ಹುಡುಗಿಯ ಹೆಗಲಿಗೆ. ಹುಡುಗಿ ಹಣ ಸಂಪಾದಿಸಲು ಕೆಲಸ ಮಾಡಲೇಬೇಕಾಗುತ್ತದೆ. 1942ರ ಸುಮಾರಿಗೆ 13ನೆಯ ವಯಸ್ಸಿನಲ್ಲಿ ಮರಾಠಿ ಸಿನಿಮಾವೊಂದಕ್ಕೆ ಹಾಡುತ್ತಾರೆ. ಆದರೆ ಆ ಹಾಡು ಬೆಳಕನ್ನು ಕಾಣುವುದಿಲ್ಲ. ನಂತರ ನಟಿ ನಂದಾ ಅವರ ತಂದೆ ಮಾಸ್ಟರ್ ವಿನಾಯಕ್ ಅವರ ಕಂಪನಿ ಸೇರಿದ ಲತಾ ಮೂರು ತಿಂಗಳ ಕೆಲಸಕ್ಕೆ 300 ರೂ. ಸಂಪಾದಿಸುತ್ತಾರೆ. ಸಂಪಾದನೆಗಾಗಿ ಚಿಕ್ಕಪುಟ್ಟ ಪಾತ್ರಗಳಲ್ಲೂ ಅಭಿನಯಿಸುತ್ತಾರೆ. ಆದರೆ ಅಭಿನಯ ಅವರಿಗೆ ಒಲ್ಲದ ಕೆಲಸ.
ಸ್ಟುಡಿಯೋದಲ್ಲಿ ಅವರ ಹಾಡು ಕೇಳಿದ ಸಂಗೀತ ನಿರ್ದೇಶಕ ಗುಲಾಮ್ ಹೈದರ್ ಅವರನ್ನು ‘ಶಹೀದ್’ ಚಿತ್ರದ ನಿರ್ಮಾಪಕ ಶಶಿಧರ್ ಮುಖರ್ಜಿ ಅವರ ಬಳಿ ಕರೆದೊಯ್ಯುತ್ತಾರೆ. ಲತಾ ದನಿ ಕೇಳಿದ ಅವರು, ‘ದನಿ ತುಂಬಾ ತೆಳು’ ಎಂದು ನಿರಾಕರಿಸುತ್ತಾರೆ. ಆದರೆ ಹೈದರ್ ಸಾಬ್ ಸೋಲನ್ನೊಪ್ಪಿಕೊಳ್ಳುವುದಿಲ್ಲ. ನಿರ್ಮಾಪಕ, ನಿರ್ದೇಶಕರು ಲತಾ ಹಾಡಿಗಾಗಿ ಬೇಡುವ ದಿನ ಬರುತ್ತದೆ ಎಂದು ಭವಿಷ್ಯ ನುಡಿಯುವ ಅವರು ಲತಾ ಬೆನ್ನಿಗೆ ನಿಲ್ಲುತ್ತಾರೆ. ಒಂದು ರೀತಿಯಲ್ಲಿ ಅವರು ನನ್ನ ‘ಗಾಡ್ ಫಾದರ್’ ಎಂದು ಲತಾ ಮುಂದೊಂದು ದಿನ ಸ್ಮರಿಸಿಕೊಳ್ಳುತಾರೆ. ಮೊದಮೊದಲು ಗಾಯಕಿ ನೂರ್ ಜಹಾನ್ ಅವರ ಧ್ವನಿಯನ್ನು ಅನುಸರಿಸುತ್ತಿದ್ದ ಲತಾ ನಿಧಾನವಾಗಿ ತಮ್ಮದೇ ದಾಟಿ ಬೆಳೆಸಿಕೊಳ್ಳುತ್ತಾರೆ. ‘ಮರಾಠಿ ನಾಲಿಗೆಗೆ ಉರ್ದು ಒಗ್ಗುವುದಿಲ್ಲ’ ಎಂದು ಕೀಟಲೆ ಮಾಡಿದ ದಿಲೀಪ್ ಕುಮಾರ್ ಅವರ ಮಾತನ್ನು ಸವಾಲಾಗಿ ತೆಗೆದುಕೊಳ್ಳುವ ಲತಾ ಮೌಲ್ವಿ ಒಬ್ಬರ ಬಳಿ ಉರ್ದು ಕಲಿತು, ಅದೇ ದಿಲೀಪ್ ಕುಮಾರ್ ಅವರಿಂದ ಶಭಾಷ್ ಅನ್ನಿಸಿಕೊಳ್ಳುತ್ತಾರೆ!
1949ರಲ್ಲಿ ‘ಮಹಲ್’ ಚಿತ್ರದ ‘ಆಯೆಗಾ ಆಯೆಗಾ ಆನೆವಾಲಾ’ ಹಾಡು ಅವರ ಹೆಸರನ್ನು ಮುಂಚೂಣಿಯಲ್ಲಿ ನಿಲ್ಲಿಸುತ್ತದೆ. 1956ರಲ್ಲಿ ಅವರು ಹಾಡಿದ ‘ರಸಿಕ್ ಬಲ್ ಮಾ’ ಹಾಡಿಗೆ ಫಿಲಂಫೇರ್ ಪ್ರಶಸ್ತಿ ಸಿಕ್ಕರೂ ಆಗ ಹಾಡುಗಾರರಿಗೆ ಪ್ರಶಸ್ತಿ ಕೊಡುವ ಪರಿಪಾಠ ಇಲ್ಲದ್ದರಿಂದ ಲತಾ ಅವರಿಗೆ ಆ ಪ್ರಶಸ್ತಿ ದಕ್ಕುವುದಿಲ್ಲ. ಅದರ ವಿರುದ್ಧ ಅವರ ಪ್ರತಿಭಟನೆಯ ಕಾರಣಕ್ಕೆ 1958ರಲ್ಲಿ ಹಾಡುಗಾರರಿಗೆ ಸಹ ಪ್ರಶಸ್ತಿ ಕೊಡುವಂತಾಗುತ್ತದೆ. ‘ಮಧುಮತಿ’ ಚಿತ್ರದ ‘ಆಜಾ ರೆ ಪರದೇಸಿ’ ಹಾಡಿಗಾಗಿ ಅದೇ ವರ್ಷ ಅವರಿಗೆ ಆ ಪ್ರಶಸ್ತಿಯೂ ಸಿಕ್ಕುತ್ತದೆ. ಮುಂದೊಂದು ದಿನ ಅವರು ಹೊಸಬರಿಗೆ ಪ್ರಶಸ್ತಿ ಸಿಗಲಿ ಎನ್ನುವ ಕಾರಣಕ್ಕೆ ಫಿಲಂ ಫೇರ್ ಪ್ರಶಸ್ತಿಯನ್ನು ನಿರಾಕರಿಸುವಲ್ಲಿಗೆ ಚಕ್ರ ಒಂದು ಸುತ್ತು ತಿರುಗಿರುತ್ತದೆ. ಅವರ ಹಾಡಿಗೆ ಮೊದಲಸಲ ರಾಷ್ಟ್ರೀಯ ಪ್ರಶಸ್ತಿ ಸಿಕ್ಕುವುದು 1972 ರಲ್ಲಿ, ‘ಪರಿಚಯ್’ ಚಿತ್ರಕ್ಕೆ.
ತಾನು ನಂಬಿದ್ದಕ್ಕೆ ಎಂದೂ ದೃಢವಾಗಿ ನಿಲ್ಲುವ ಲತಾ ಅನೇಕ ಸಲ ಪ್ರವಾಹಕ್ಕೆ ಎದುರಾಗಿ ನಿಂತು ಗೆದ್ದಿದ್ದಾರೆ. ಸಂಗೀತದ ರೆಕಾರ್ಡ್ಗಳು ರಾಶಿ ರಾಶಿ ಬಿಕರಿಯಾಗುತ್ತಿದ್ದಾಗ ಸಂಗೀತ ಕಂಪನಿಗಳಿಂದ ರಾಯಲ್ಟಿ ಸಿಗುತ್ತಿದ್ದುದು ಸಂಗೀತಗಾರರಿಗೆ ಮಾತ್ರ. ಹಾಡುಗಾರರಿಗೂ ರಾಯಲ್ಟಿ ಸಿಗಬೇಕು ಎಂದು ಲತಾ ದನಿ ಎತ್ತುತ್ತಾರೆ. ಆದರೆ ಅದಕ್ಕೆ ವಿರೋಧ ಬರುವುದು ಒಬ್ಬ ಗಾಯಕರಿಂದಲೇ. ಹಾಡುವಾಗ ನಮಗೆ ಸಂಭಾವನೆ ಸಿಕ್ಕಿರುತ್ತದೆ, ಮತ್ತೆ ಆ ಹಾಡಿನ ಮೇಲೆ ನಮ್ಮ ಹಕ್ಕಿಲ್ಲ ಎಂದು ಹೇಳುವುದು ಗಾಯಕ ಮಹಮದ್ ರಫಿ. ಆದರೆ ಲತಾ ಅದಕ್ಕೆ ಬಿಲ್‌ಕುಲ್ ಒಪ್ಪುವುದಿಲ್ಲ. ಸಭೆಯಲ್ಲಿ ಎದ್ದು ನಿಂತ ರಫಿ ‘ನಾನು ಇನ್ನು ಮುಂದೆ ಲತಾ ಜೊತೆ ಹಾಡುವುದಿಲ್ಲ’ ಎನ್ನುವ ವಾಕ್ಯ ಪೂರ್ತಿ ಮಾಡುವುದಕ್ಕೆ ಮೊದಲೇ ಎದ್ದು ನಿಂತ ಲತಾ ‘ಇರಿ ಇರಿ, ನಾನು ಇನ್ನು ಮುಂದೆ ನಿಮ್ಮ ಜೊತೆ ಹಾಡುವುದಿಲ್ಲ’ ಎಂದು ಮಾತು ಮುಗಿಸುತ್ತಾರೆ.
ಇದು ಸುಮಾರು 1962ರ ಸುಮಾರಿಗೆ. ಪುರುಷಾಧಿಪತ್ಯದ ಚಿತ್ರರಂಗದಲ್ಲಿ ಈ ಮಾತುಗಳನ್ನಾಡುವ ಮತ್ತು ಆ ನಿಲುವು ತೆಗೆದುಕೊಳ್ಳುವ ಮೂಲಕ ಅಷ್ಟು ಜನರನ್ನು ಎದುರು ಹಾಕಿಕೊಳ್ಳಬಲ್ಲ ಧೈರ್ಯ ಲತಾ ಅವರಿಗಿರುತ್ತದೆ. ಅವರ ಸಂಗೀತಕ್ಕೆ ಆ ಶಕ್ತಿ ಇರುತ್ತದೆ. ಹೀಗೆ ಸುಮಾರು 4 ವರ್ಷಗಳು ಅವರಿಬ್ಬರೂ ಜೊತೆಯಾಗಿ ಹಾಡುವುದಿಲ್ಲ. ನಂತರ ಜೈಕಿಶನ್ ಅವರ ಸಂಧಾನದ ಕಾರಣಕ್ಕೆ ಅವರಿಬ್ಬರೂ ಮತ್ತೆ ಜೊತೆಯಾಗಿ ಹಾಡತೊಡಗುತ್ತಾರೆ. ಹೀಗೆಯೇ ಮತ್ಯಾವುದೋ ಕಾರಣಕ್ಕೆ ಅವರು ಎಸ್.ಡಿ.ಬರ್ಮನ್ ಅವರೊಂದಿಗೆ ಸಹ ಸುಮಾರು ವರ್ಷ ಕೆಲಸ ಮಾಡುವುದಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂಗೀತಗಾರರು ಎಂದರೆ ಪಂಡಿತ್ ರವಿಶಂಕರ್ ಮಾತ್ರ ಎಂದುಕೊಂಡಿದ್ದ ಪಶ್ಚಿಮದ ಜಗತ್ತಿಗೆ 1960-70ರಲ್ಲಿ ತಮ್ಮ ದನಿಯ ಮೂಲಕ ಭಾರತೀಯ ಚಲನಚಿತ್ರ ಗೀತೆಗಳ ಕಡೆಗೆ ಗಮನ ಸೆಳೆದವರು ಲತಾ ಮಂಗೇಶ್ಕರ್. ಭಾರತೀಯ ಚಿತ್ರರಂಗಕ್ಕೆ ವಿಶಿಷ್ಟವಾದ ಹಾಡುಗಳಿಲ್ಲದಿದ್ದರೆ ನಾವು ಅದೆಷ್ಟು ಕವಿ, ಸಂಗೀತಗಾರರು, ಹಾಡುಗಾರರ ಸಂಗೀತವನ್ನು ಕಳೆದುಕೊಳ್ಳುತ್ತಿದ್ದೆವಲ್ಲ? ನಮ್ಮಿಂದ ಒಂದು ಗಂಧರ್ವ ಲೋಕವೇ ಕಳೆದುಹೋಗುತ್ತಿತ್ತು.
ಗಂಭೀರವಾಗಿ ಘನತೆಯಿಂದ ನಡೆದುಕೊಳ್ಳುವ, ಹಾಡಿನಲ್ಲಿ ಗಂಧರ್ವ ಲೋಕವನ್ನೇ ನೆಲಕ್ಕಿಳಿಸುವ ಈ ಕೋಗಿಲೆಗೆ ಇನ್ನೊಂದು ತಮಾಷೆಯ ಮಗುವಿನ ಮುಖವೂ ಇದೆ. ಕ್ರಿಕೆಟ್ ಎಂದರೆ ಜೀವ ಬಿಡುವ ಲತಾ ದೀದಿಗೆ ಸಚಿನ್ ಎಂದರೆ ಪ್ರಾಣ. ಸಚಿನ್ ಸಹ ಆಕೆಯನ್ನು ಆಯಿ ಎಂದೇ ಕರೆಯುತ್ತಾರೆ. ಲತಾ ಹೆಸರಿನಲ್ಲಿ ಮೊನ್ನೆಮೊನ್ನೆಯವರೆಗೂ ಲಾರ್ಡ್ಸ್ ಮೈದಾನದ ಒಂದು ಗ್ಯಾಲೆರಿಯಲ್ಲಿ ಎಲ್ಲಾ ಆಟಗಳಿಗೂ ಸೀಟುಗಳನ್ನು ಕಾದಿರಿಸಲಾಗುತ್ತಿತ್ತು!
ಅಣ್ಣ ಎಂದು ಕರೆಯುತ್ತಿದ್ದ ಮುಖೇಶ್ ಜೊತೆಯಲ್ಲಿ ಹಾಡಲೆಂದು ವಿದೇಶಕ್ಕೆ ಹೋದಾಗೆಲ್ಲಾ ಲತಾ ತಪ್ಪದೆ ಹೋಗುತ್ತಿದ್ದುದು ಲಾಸ್ ವೆಗಾಸ್‌ಗೆ. ಅಲ್ಲಿನ ಸ್ಲಾಟ್ ಮೆಶೀನ್‌ನಲ್ಲಿ ಜೂಜಾಡುವುದೆಂದರೆ ಲತಾಗೆ ಇನ್ನಿಲ್ಲದ ಖುಷಿ! ಹಾಡಿಗೆ ಧ್ವನಿಯನ್ನು ಕಾಪಿಟ್ಟುಕೊಳ್ಳಬೇಕಾದರೆ ಹೆಚ್ಚಿನ ಖಾರ ತಿನ್ನಬಾರದು, ಕರೆದದ್ದು ಸೇವಿಸಬಾರದು, ಐಸ್ಕ್ರೀಂ ತಿನ್ನಬಾರದು ಎಂದು ಪಟ್ಟಿ ಹೇಳುವವರನ್ನು ನಗುತ್ತಾ ನೋಡುವ ಲತಾಗೆ ಉಪ್ಪಿನಕಾಯಿ, ಐಸ್ಕ್ರೀಂ ಎಂದರೆ ಪ್ರಾಣ. ಜಗತ್ತಿನ ನಿಯಮಗಳು ಅಪೂರ್ವ ಕಲಾವಿದರಿಗೆ ಅನ್ವಯಿಸುವುದಿಲ್ಲ ಎಂದು ಗಿಬ್ರಾನ್ ಹೇಳುತ್ತಾನೆ! ನಾಯಿಗಳೆಂದರೆ ತುಂಬು ಪ್ರೀತಿಯ ಅವರು ಮೊನ್ನೆಮೊನ್ನೆ 2020ರಲ್ಲಿ ತಮ್ಮ ನಾಯಿ ಬಿಟ್ಟೂ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಹಿಂದಿ ಚಿತ್ರಜಗತ್ತಿನಲ್ಲಿ ಏಕಮೇವ ಸಾಮ್ರಾಜ್ಞಿಯಾಗಿ ಮೆರೆದ ಲತಾ ಬದುಕಿನಲ್ಲಿ ಮತ್ತು ಬದುಕನ್ನು ಕುರಿತು ಕೆಲವು ಗಾಸಿಪ್‌ಗಳು ಹರಿದಾಡಿದ್ದಿವೆ. ಅದರಲ್ಲಿ ಪ್ರಮುಖವಾದದ್ದು ಲತಾ ಮತ್ತು ಆಶಾ ತಾಯಿಯ ನಡುವಿನ ಸೋ ಕಾಲ್ಡ್ ಸ್ಪರ್ಧೆ ಮತ್ತು ಚದುರಂಗದಾಟ. ಆದರೆ ಅದರಿಂದ ಲಾಭವಾಗಿದ್ದು ಮಾತ್ರ ಚಿತ್ರರಸಿಕರಿಗೆ. ಇಬ್ಬರು ಅಕ್ಕತಂಗಿಯರೂ ಅದೆಷ್ಟು ಅದ್ಭುತ ಮತ್ತು ಭಿನ್ನತೆಯ ಹಾಡುಗಳನ್ನು ನಮಗಿತ್ತರು! ಸಂಗೀತ ನಿರ್ದೇಶಕ ರಾಮಚಂದ್ರ ಅವರೊಂದಿಗೆ ಲತಾ ದೀ ಅವರ ಹೆಸರು ಕೇಳಿಬರುತ್ತಿತ್ತು. ಆದರೆ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಬಂದಾಗ ರಾಮಚಂದ್ರ ಅವರು ಅಂದ ಒಂದು ಮಾತು ಲತಾ ಅವರನ್ನು ಯಾವ ಪರಿ ಕೆರಳಿಸಿತು ಎಂದರೆ ಅವರು ತಾವು ಅವರ ಹಾಡುಗಳಿಗೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿಬಿಟ್ಟರು.
ಲತಾ ಅವರನ್ನು ಎದಿರು ಹಾಕಿಕೊಂಡು ರಾಮಚಂದ್ರ ಅವರ ಜೊತೆ ಕೆಲಸ ಮಾಡಲು ನಿರ್ಮಾಪಕರು ಸಿದ್ಧರಿರಲಿಲ್ಲ. ನಿಧಾನವಾಗಿ ರಾಮಚಂದ್ರ ತೆರೆಯ ಮರೆಗೆ ಸರಿದರು. ಇತ್ತೀಚೆಗೆ ಲತಾ ಅವರ ಹೆಸರು ತೆಗೆದುಕೊಂಡು ಮಾತನಾಡಿದ್ದು ಭೂಪೆನ್ ಹಜಾರಿಕಾ ಅವರ ಮೊದಲ ಪತ್ನಿ ಪ್ರಿಯಂವದಾ ಪಟೇಲ್ ಹಜಾರಿಕಾ. ತನ್ನ ಗಂಡನೊಂದಿಗೆ ಲತಾಗಿದ್ದ ಆತ್ಮೀಯತೆಯ ಕಾರಣಕ್ಕೆ ನಮ್ಮ ಸಂಸಾರ ಮುರಿಯಿತು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡರು. ಭೂಪೇನ್ ಹಜಾರಿಕಾ ತಮ್ಮ ಆತ್ಮಚರಿತ್ರೆ ‘ಮೋಯಿ ಎಟಿ ಜಜಾಬೋರ್’ (ನಾನೊಬ್ಬ ಅಲೆಮಾರಿ)ಯಲ್ಲಿ ತಮಗೆ ಆತ್ಮೀಯವಾಗಿದ್ದ ಮುಂಬೈನ ಹಾಡುಗಾರ್ತಿಯೊಬ್ಬರ ಬಗ್ಗೆ ಬರೆದಿದ್ದಾರೆಯಾದರೂ ಅವರು ಲತಾ ದೀ ಯನ್ನು ಹೆಸರಿಸುವುದಿಲ್ಲ. ಇನ್ನೊಬ್ಬ ರಾಜಮನೆತನದ ಯುವಕನೊಬ್ಬನೊಂದಿಗೂ ಲತಾ ಹೆಸರು ತಳುಕು ಹಾಕಿಕೊಂಡಿತ್ತು. ರಾಜಮನೆತನಕ್ಕೆ ಸೇರದ ಸಾಮಾನ್ಯ ಹೆಣ್ಣನ್ನು(!) ಮನೆಗೆ ಸೊಸೆಯಾಗಿ ತರುವಂತಿಲ್ಲ ಎನ್ನುವ ಕುಟುಂಬದ ಒತ್ತಡದ ಕಾರಣಕ್ಕೆ ಆ ರಾಜಕುಮಾರ ಕಡೆಯವರೆಗೂ ಅವಿವಾಹಿತರಾಗಿಯೇ ಉಳಿದರು ಎಂದು ಸಹ ಹೇಳಲಾಗುತ್ತದೆ.
1962ರ ಸುಮಾರಿಗೆ ಲತಾ ಮಂಗೇಶ್ಕರ್ ಅವರಿಗೆ ಇನ್ನಿಲ್ಲದ ಅನಾರೋಗ್ಯವಾಗುತ್ತದೆ. ಅವರನ್ನು ನೋಡಲು ಬಂದ ವೈದ್ಯರು ಅವರಿಗೆ ಸ್ಲೋ ಪಾಯಿಸನ್ ಆಗಿರಬಹುದು ಎಂದು ಹೇಳುತ್ತಾರೆ. ಅಂದೇ ಅವರ ಮನೆ ಅಡಿಗೆಯವನು ಕೆಲಸ ಬಿಟ್ಟು ಹೇಳದೆ ಕೇಳದೆ ಓಡಿಹೋಗುತ್ತಾನೆ. ಸುಮಾರು ಮೂರು ತಿಂಗಳುಗಳ ಕಾಲ ಹಾಸಿಗೆ ಹಿಡಿಯುವ ಲತಾ ದೀ ಅವರನ್ನು ಪ್ರತಿ ಸಂಜೆ ಬಂದು ನೋಡಿ, ಸಮಾಧಾನ ಹೇಳುವುದು ಅವರ ಸ್ನೇಹಿತರಾದ ಮಜರೂಹ್ ಸುಲ್ತಾನ್ ಪುರಿ. ಸುಧಾರಿಸಿಕೊಂಡ ಲತಾ ಹಾಡುವ ಮೊದಲು ಹಾಡುವುದು, ‘ಕಹಿ ದೀಪ್ ಜಲೆ ಕಹಿ ದಿಲ್’ ಎನ್ನುವ ಅದ್ಭುತ ಕಾಡುವ ಹಾಡನ್ನು. 1963ರಲ್ಲಿ ಅವರ ಹಾಡಿದ ’ಏ ಮೇರೆ ವತನ್ ಕಿ ಲೋಗೊ…’ ಹಾಡು ಆಗತಾನೆ ಇಂಡೋ ಚೀನ ಯುದ್ಧದ ನೋವಿನಲ್ಲಿದ್ದ ನೆಹರೂ ಅವರ ಕಂಗಳಲ್ಲಿ ಕಂಬನಿ ತುಂಬಿ ಬರುವಂತೆ ಮಾಡುತ್ತದೆ.
2001ರಲ್ಲಿ ಇವರಿಗೆ ‘ಭಾರತ ರತ್ನ’ ಪುರಸ್ಕಾರ ಮಾಡಲಾಗುತ್ತದೆ. 1969ರಲ್ಲಿ ಪದ್ಮಭೂಷಣ, 1999ರಲ್ಲಿ ಪದ್ಮವಿಭೂಷಣ, 1989ರಲ್ಲಿ ದಾದಾ ಸಾಹೇಬ್ ಫಾಲ್ಕೆ ಜೊತೆಯಲ್ಲಿ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇವರ ಹಾಡುಗಳಿಗೆ ಮೂರು ಸಲ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. 2007ರಲ್ಲಿ ಫ್ರಾನ್ಸ್‌ನ ಅತ್ಯುನ್ನತ ಪುರಸ್ಕಾರ Legion of honour ಸಂದಿದೆ. ಜಗತ್ತಿನ ಆರು ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟುಗೌರವಿಸಿವೆ. 1999ರಲ್ಲಿ ಇವರ ಗೌರವಾರ್ಥವಾಗಿ ಇವರದೇ ಹೆಸರಿನ ಸುಗಂಧ ದ್ರವ್ಯ ‘ಲತಾ ಯು ಡಿ ಪರ್ಫೂಮ್’ ಬಂತು. ಭಾರತದ ವಜ್ರದ ಒಡವೆಗಳ ನಿರ್ಮಾಣ ಕಂಪನಿ ಅಡೋರಾಗಾಗಿ ಸ್ವರಾಂಜಲಿ ಸರಣಿಯ ಆಭರಣಗಳನ್ನು ವಿನ್ಯಾಸ ಮಾಡಿದ ಲತಾ ದೀ, ಅದರಿಂದ ಬಂದ ಹಣವನ್ನು 2005ರ ಕಾಶ್ಮೀರ ಭೂಕಂಪ ಪರಿಹಾರ ನಿಧಿಗೆ ಕೊಟ್ಟುಬಿಡುತ್ತಾರೆ.
ಕೆಲವರು ಲತಾ ದೀ ಹಾಡಿರುವ ಹಾಡುಗಳ ಸಂಖ್ಯೆ 30,000 ಎಂದರೆ ಕೆಲವರು 50,000 ಎನ್ನುತ್ತಾರೆ. ಅದೇನೆ ಇರಲಿ ಈ ಹಾಡುಗಾರ್ತಿ, ಸಂಗೀತ ನಿರ್ದೇಶಕಿ, ಚಿತ್ರ ನಿರ್ಮಾಪಕಿಯ ಸಾಧನೆಯನ್ನು ಕೇವಲ ಸಂಖ್ಯೆಗಳಿಂದ ಅಳೆಯುವುದಾದರೂ ಹೇಗೆ? ಹಾಡು ನಿಲ್ಲಿಸಿ ಕೋಗಿಲೆಯೆಂದು ಗಂಧರ್ವ ಲೋಕಕ್ಕೆ ಹಾರಿ ಹೋದಂತೆ ಲತಾ ದೀ ‘ಮೇರಿ ಆವಾಜ್ ಹೀ ಪೆಹಚಾನ್ ಹೈ, ಗರ್ ಯಾದ್ ರಹೆ’ ಎಂದು ಹೊರಟುಬಿಟ್ಟಿದ್ದಾರೆ. ಅವರನ್ನು ಮರೆಯುವುದಾದರೂ ಹೇಗೆ? ‘ಯಾರಾ ಸೀಲಿ ಸೀಲಿ ಬಿರಹಾ ಕಿ ರಾತ್ ಕ ಜಲ್ ನಾ’, ‘ಆಜ್ ಫಿರ್ ಜೀನೆ ಕಿ ತಮನ್ನಾ ಹೈ, ಆಜ್ ಫಿರ್ ಮರ್‌ನೇಕಿ ಇರಾದಾ ಹೈ’, ‘ಯೆಹ್ ಕಹಾ ಆಗಯೇ ಹಮ್ ಯೂಹಿ ಸಾತ್ ಸಾತ್ ಚಲ್ ಕೆ’, ‘ಲಗ್ ಜಾ ಗಲೆ…. ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ನ ಹೋ’, ‘ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ’, ‘ತೇರೆ ಬಿನಾ ಜಿಂದಗಿ ಸೆ ಕೋಯಿ ಶಿಖ್ ವಾ ನಹಿ’, ‘ಅಜೀಬ್ ದಾಸ್ತಾ ಹೈ ಯೆ’, ‘ತುಝ್ ಸೆ ನಾರಾಜ್ ನಹಿ ಜಿಂದಗಿ ಹೈರಾನ್ ಹೂ ಮೆ’, ‘ರಂಗೀಲಾ ರೆ’, ‘ಇಕ್ ಪ್ಯಾರ್ ಕ ನಗ್ಮಾ ಹೈ’… ಇಲ್ಲ ಪಟ್ಟಿ ಮುಗಿಯುತ್ತಲೇ ಇಲ್ಲ.
ಯಾವ ವಿದಾಯಗಳೂ ಸುಲಭವಲ್ಲ. ಆದರೆ ಇದೊಂದು ರಾಷ್ಟ್ರೀಯ ದುಃಖ. ನಮ್ಮೆಲ್ಲರ ಸಂಕಟ. ನೀವಿಲ್ಲದ ಜಗತ್ತಿನಲ್ಲಿ ನಿಮ್ಮ ನೆನಪಿಗಾಗಿ ನಿಮ್ಮ ಹಾಡುಗಳನ್ನುಕೊಟ್ಟು ಹೋಗಿರುವಿರಿ. ನಾವು ಅಳಿದ ಮೇಲೂ ನಿಮ್ಮ ಹಾಡುಗಳು ಉಳಿದೇ ಇರುತ್ತವೆ. ಹೋಗಿ ಬನ್ನಿ ಲತಾ ದೀ, ಮೇಲಿನ ಲೋಕ ಧನ್ಯವಾಯಿತು.