ರವಿ ಬಸ್ರೂರು ಸಂಗೀತ ಸಂಯೋಜನೆಯ ಚೊಚ್ಚಲ ಹಿಂದಿ ಸಿನಿಮಾ ‘ಅಂತಿಮ್‌’ ಮುಂದಿನ ವಾರ ತೆರೆಕಾಣುತ್ತಿದೆ. ಸಲ್ಮಾನ್ ಖಾನ್ ಅಭಿನಯದ ಈ ಸಿನಿಮಾ ಮೂಲಕ ಅವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಅವರೊಂದಿಗಿನ ಮಾತುಕತೆ ಇಲ್ಲಿದೆ.

ಪ್ರಶಾಂತ್ ನೀಲ್‌ ನಿರ್ದೇಶನದ ‘ಕೆಜಿಎಫ್‌’ ಸಿನಿಮಾ ರವಿ ಬಸ್ರೂರು ಅವರ ಪ್ರತಿಭೆಯನ್ನು ಸಿನಿಮಾ ಜಗತ್ತಿಗೆ ಪರಿಪೂರ್ಣವಾಗಿ ಪರಿಚಯಿಸಿತು. ಜಾಗತಿಕ ಸಿನಿಪ್ರೇಕ್ಷಕರನ್ನು ತಲುಪಿದ ಸಿನಿಮಾದ ಯಶಸ್ಸಿನಲ್ಲಿ ರವಿ ಬಸ್ರೂರು ಅವರ ಸಂಗೀತದ ಕೊಡುಗೆ ದೊಡ್ಡದು. ಪ್ರತಿಭಾವಂತ ತಂತ್ರಜ್ಞರು ಜೊತೆಗೂಡಿ ಇಂಥದ್ದೊಂದು ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಬೆರಗು ಮೂಡಿಸಿದ್ದರು. ‘ಕೆಜಿಎಫ್‌’ ಚಿತ್ರದ ದೊಡ್ಡ ಯಶಸ್ಸು ರವಿ ಬಸ್ರೂರು ಅವರನ್ನು ಬಾಲಿವುಡ್‌ಗೂ ಕರೆದೊಯ್ದಿತು. ಮುಂದಿನ ವಾರ ಅವರ ಸಂಗೀತ ಸಂಯೋಜನೆಯ ಚೊಚ್ಚಲ ಹಿಂದಿ ಸಿನಿಮಾ ‘ಅಂತಿಮ್‌’ ತೆರೆಕಾಣುತ್ತಿದೆ.

ಬಾಲಿವುಡ್‌ ಸಿನಿಮಾಗೆ ಅವರು ಬಸ್ರೂರಿನ ತಮ್ಮ ಸ್ಟುಡಿಯೋದಲ್ಲೇ ಸಂಗೀತ ಸಂಯೋಜಿಸಿದ್ದಾರೆ. ಚಿತ್ರತಂಡದ ಪ್ರಮುಖರು ಸ್ಟುಡಿಯೋಗೆ ಬಂದಿದ್ದರಂತೆ. “ಸಿನಿಮಾ ಕತೆ ಏನು ಬೇಡುತ್ತದೆಯೋ ಅದಕ್ಕೆ ನ್ಯಾಯ ಸಲ್ಲಿಸಲು ಯತ್ನಿಸಿದ್ದೇನೆ. ಸಂಗೀತಕ್ಕೆ ಭಾಷೆಯ ಬಾರಿಯರ್ ಇರೋಲ್ಲ. ಚಿಕ್ಕಂದಿನಿಂದಲೂ ಹಿಂದಿ, ತೆಲುಗು ಸೇರಿದಂತೆ ಇತರೆ ಭಾಷೆಗಳ ಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಸಿನಿಮಾದ ಭಾಷೆ ಬೇರೆಯಾದರೂ ಭಾವನೆ ಒಂದೇ. ಹಾಗಾಗಿ ಸಂಗೀತ ಸಂಯೋಜನೆಯಲ್ಲಿ ಯಾವುದೇ ರೀತಿಯ ತೊಡಕು ಉಂಟಾಗಿಲ್ಲ” ಎನ್ನುತ್ತಾರವರು.

ನಿನ್ನೆ ಅವರ ಸಂಗೀತ ಸಂಯೋಜನೆಯ ‘ಮದಗಜ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಮಹೇಶ್ ಕುಮಾರ್ ನಿರ್ದೇಶನದ ಚಿತ್ರದ ಹೀರೋ ಶ್ರೀಮುರಳಿ. ಈ ಬಗ್ಗೆ ಮಾತನಾಡುವ ರವಿ ಅವರು, “ಇದು ಖುಷಿ ಕೊಟ್ಟ ಪ್ರಾಜೆಕ್ಟ್‌. ಸಿನಿಮಾ ನೀಟ್ ಆಗಿ ಬಂದಿದೆ. ಟ್ರೈಲರ್‌ನಲ್ಲಿ ಮೇಕಿಂಗ್‌ನಲ್ಲಿನ ದೃಶ್ಯವೈಭವ ಕಾಣಿಸುತ್ತದೆ” ಎನ್ನುತ್ತಾರೆ. ಹಲವರು ಅವರ ಹಿಂದಿನ ಸಿನಿಮಾದ ಸಂಗೀತಕ್ಕೂ ಈಗಿನ ಸಂಯೋಜನೆಗೂ ಹೋಲಿಸುವುದಿದೆ. ಈ ಬಗ್ಗೆ ರವಿ ಬಸ್ರೂರು ಬೇಸರ ವ್ಯಕ್ತಪಡಿಸುತ್ತಾರೆ. “ಸಿನಿಮಾದ ಬಜೆಟ್‌, ಕಥಾವಸ್ತು, ಅನುಭವ… ಹೀಗೆ ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸುವಾಗ ಹಲವು ಅಂಶಗಳು ಗಣನೆಗೆ ಬರುತ್ತವೆ. ನನ್ನ ಪ್ರಕಾರ ಯಾವುದೇ ಚಿತ್ರಕ್ಕೂ ಮತ್ತಾವುದೇ ಚಿತ್ರವನ್ನು ಕಂಪೇರ್ ಮಾಡಬಾರದು. ಅಷ್ಟೇ ಅಲ್ಲ, ಯಾರಿಗೂ ಯಾರನ್ನೂ ಕಂಪೇರ್ ಮಾಡಕೂಡದು. ನಮ್ಮ ಕೆಲಸ ನಾವು ಮಾಡುತ್ತಾ ಹೋಗಬೇಕು ಅಷ್ಟೆ. ಆಗ ಹೊಸತನ್ನು ಮಾಡಲು ಸಾಧ್ಯವಾಗುತ್ತದೆ” ಎನ್ನುತ್ತಾರೆ.

ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸುವಾಗ ಅವರ ಸಿದ್ಧತೆ ಹೇಗಿರುತ್ತದೆ? “ಕಥಾವಸ್ತು, ಕಾಲಘಟ್ಟ… ಇನ್ನಿತರೆ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ದೇವರಿಗೆ ಸಂಗೀತ ಸಂಯೋಜಿಸುತ್ತಿದ್ದೇನೆ ಎಂದು ಭಾವಿಸಿ ಕೆಲಸ ಮಾಡುತ್ತೇನೆ. ನಮ್ಮ ತೋಟದಲ್ಲಿ ಬೆಳೆದ ಹೂವನ್ನು ದೇವರ ಮುಡಿಗೆ, ಪಾದಕ್ಕೆ ಅರ್ಪಿಸುವಂತೆ ಸಂಗೀತ ಮಾಡುತ್ತೇನೆ. ಚಿಕ್ಕ ಸಿನಿಮಾ, ದೊಡ್ಡ ಸಿನಿಮಾ ಅನ್ನೋ ಬೇಧ – ಭಾವ ಮಾಡೋದಿಲ್ಲ” ಎನ್ನುವ ಅವರು ‘ಅಂತಿಮ್‌’ ಸಿನಿಮಾದ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದಾರೆ. ಅವರ ಸಂಗೀತ ಸಂಯೋಜನೆಯ ‘ಮದಗಜ’ ಇನ್ನೆರೆಡು ವಾರಗಳಲ್ಲಿ ತೆರೆಕಾಣಲಿದೆ. ಬಹುಭಾಷೆಗಳಲ್ಲಿ ತೆರೆಕಾಣಲಿರುವ ‘ಕೆಜಿಎಫ್‌ 2’ ಮತ್ತು ‘ಮಡ್ಡಿ’ ಅವರ ಮಹತ್ವಾಕಾಂಕ್ಷೆಯ ಸಿನಿಮಾಗಳು. ಇದಲ್ಲದೆ ಅವರ ಸಂಗೀತ ಸಂಯೋಜನೆಯ ಎರಡು ಮಲಯಾಳಂ ಸಿನಿಮಾಗಳು ಕೂಡ ತೆರೆಗೆ ಸಿದ್ಧವಾಗುತ್ತಿವೆ.

LEAVE A REPLY

Connect with

Please enter your comment!
Please enter your name here