ಕಲರ್ಸ್‌ ಕನ್ನಡ ವಾಹಿನಿಯಲ್ಲಿ ‘ವಧು’ ಮತ್ತು ‘ಯಜಮಾನ’ ಎರಡು ನೂತನ ಧಾರಾವಾಹಿಗಳು ಆರಂಭವಾಗಿವೆ. ಸಂಬಂಧಗಳನ್ನು ಪರೀಕ್ಷೆಗೊಳಪಡಿಸುವ ‘ವಧು’ ಧಾರಾವಾಹಿಯು ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟವನ್ನು ಹೇಳುತ್ತದೆ. ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟ ‘ಯಜಮಾನ’ ಸೀರಿಯಲ್‌ ವಸ್ತು.

ಸಂಬಂಧಗಳನ್ನು ಪ್ರೀತಿಸುವ, ಗೌರವಿಸುವ ‘ವಧು’ ಅವಿವಾಹಿತೆ. ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಅವಳನ್ನು ತನ್ನ ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ ಅಂದ್ರೂ ತಪ್ಪಾಗಲ್ಲ. ಗಂಡ ಹೆಂಡ್ತಿ ನಡುವೆ ಬಿರುಕು ಮೂಡಿ ಡಿವೋರ್ಸ್ ಕೇಳಿ ಬಂದ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ ಅವ್ರನ್ನ ಒಂದು ಮಾಡುವುದರಲ್ಲೇ ಅವಳಿಗೆ ಆಸಕ್ತಿ. ಹೀಗಿರುವಾಗ ಒಂದು ಮಹತ್ವದ ಕೇಸು ಎಲ್ಲವನ್ನೂ ತಲೆಕೆಳಗು ಮಾಡುತ್ತದೆ. ಸಕ್ಸಸ್‌ಫುಲ್ ಬ್ಯುಸ್ನೆಸ್‌ಮ್ಯಾನ್‌ ಸಾರ್ಥಕ್ ದಾಂಪತ್ಯದಲ್ಲಿ ಬಿರುಕುಂಟಾಗಿ, ಪತ್ನಿ ಪ್ರಿಯಾಂಕಾ ಡಿವೋರ್ಸ್ ಕೇಸ್ ಫೈಲ್ ಮಾಡಿದಾಗ ವಧು ಹತ್ತಿರ ಸಹಾಯ ಕೋರಿ ಬರುತ್ತಾನೆ. ಈ ವೇಳೆ ಕತೆ ಕುತೂಹಲಕರ ತಿರುವು ಪಡೆಯುತ್ತದೆ.

‘ಸಂಬಂಧಗಳನ್ನು ಪರೀಕ್ಷೆಗೊಳಪಡಿಸುವ ‘ವಧು’ ಧಾರಾವಾಹಿಯು ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟವನ್ನು ಹೇಳುತ್ತದೆ. ಪ್ರೀತಿ, ಮೋಸ ಮತ್ತು ನಂಬಿಕೆಗಳು ನಮ್ಮನ್ನು ಹೇಗೆಲ್ಲಾ ಘಾಸಿಗೊಳಿಸಬಹುದೆಂಬುದನ್ನು ಬಿಡಿಸಿಡುತ್ತದೆ. ತನ್ನ ಭಾವನೆಗಳ ಜೊತೆಗೆ ಗುದ್ದಾಡುತ್ತಲೇ ತನಗೆ ಸಿಕ್ಕಿರುವ ಈ ಹೊಸ ಕೇಸನ್ನು ವಧು ಸರಿಯಾಗಿ ನಿಭಾಯಿಸುತ್ತಾಳಾ? ಪ್ರೀತಿ ಮತ್ತು ಬದ್ಧತೆಗಳ ಬಗೆಗಿನ ಅವಳ ನಿಲುವುಗಳನ್ನು ಈ ಕೇಸ್ ಬದಲಾಯಿಸುತ್ತಾ ಅನ್ನುವುದೇ ಕತೆಯನ್ನು ಮುನ್ನೆಡೆಸುವ ಎಳೆ’ ಎನ್ನುತ್ತಾರೆ ಧಾರಾವಾಹಿ ನಿರ್ದೇಶಕ ಸುಭಾಷ್‌ ಅರ್ವ.

ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್, ರೇಖಾ ಸಾಗರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರ್ಥಕ್ ಪಾತ್ರದಲ್ಲಿ ‘ಲಕ್ಷಣ’ ಧಾರಾವಾಹಿ ಖ್ಯಾತಿಯ ಅಭಿಷೇಕ್‌ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ ಮತ್ತು ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸಲಿದ್ದಾರೆ. ಧಾರಾವಾಹಿ ರಾತ್ರಿ 9.30ಕ್ಕೆ ಮೂಡಿಬರುತ್ತಿದೆ.

ಯಜಮಾನ | ಚೂರೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈಕೆ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ಬಗೆಯುವ ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಅನೇಕ ಅನೂಹ್ಯ ತಿರುವುಗಳು ಬಂದು ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ. ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನೂ ಹುಟ್ಟಿಸುತ್ತದೆ.

‘ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟ ಕತೆಯನ್ನು ಬೆಳೆಸುತ್ತಾ ಹೋಗುವ ತಂತು. ರಘು ಮತ್ತು ಝಾನ್ಸಿ ಎಂದಾದರೂ ಬದುಕು ತಮಗೆ ಒಡ್ಡುವ ಸವಾಲುಗಳನ್ನು ಗೆಲ್ಲುತ್ತಾರಾ? ಅಥವಾ ಅವರ ವ್ಯಕ್ತಿತ್ವದಲ್ಲಿರುವ ಭಿನ್ನತೆಯೇ ಅವರನ್ನು ದೂರಾಗಿಸುತ್ತದೆಯಾ? ಎನ್ನುವುದೇ ಕಥಾಹಂದರ’ ಎನ್ನುತ್ತಾರೆ ಧಾರಾವಾಹಿಯ ಪ್ರಧಾನ ನಿರ್ದೇಶಕ ರಾಮ್‌ಜಿ. ಹೊಸ ಮುಖಗಳಾದ ಹರ್ಷ ಬಿ ಎಸ್ ಮತ್ತು ಮಧುಶ್ರೀ ಭೈರಪ್ಪ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ಇತರೆ ಪ್ರಮುಖ ಪಾತ್ರಧಾರಿಗಳು. ಪ್ರತಿ ದಿನ ರಾತ್ರಿ 10ಕ್ಕೆ ಧಾರಾವಾಹಿ ಮೂಡಿಬರುತ್ತಿದೆ.

LEAVE A REPLY

Connect with

Please enter your comment!
Please enter your name here