ಚುನಾವಣಾ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನಲ್ಲೂ ಸಂಚಲನ ಉಂಟಾಗಿದೆ. ನಟ ಸುದೀಪ್‌ ಅವರು ರಾಜಕೀಯ ಪಕ್ಷವೊಂದಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುವ ವಂದತಿ ಹರಡಿತ್ತು. ಈ ಬೆಳವಣಿಯ ನಂತರ ಅವರ ‘ಖಾಸಗಿ ವೀಡಿಯೋ’ ಬಹಿರಂಗಪಡಿಸುವ ಬೆದರಿಕೆ ಬಂದಿದೆ!

ಇಂದು ಬೆಳಗ್ಗೆಯಿಂದ ನಟ ಸುದೀಪ್‌ ಕುರಿತು ಹಲವು ವದಂತಿಗಳು ಹರಡಿವೆ. ಅವರು ಆಡಳಿತ ಪಕ್ಷ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿತ್ತು. ಇದಾಗಿ ಒಂದಷ್ಟು ಸಮಯದ ನಂತರ ಅವರ ಮ್ಯಾನೇಜರ್‌, ಚಿತ್ರನಿರ್ಮಾಪಕ ಜಾಕ್‌ ಮಂಜು ಅವರಿಗೆ ಪತ್ರವೊಂದು ಬಂದಿದೆ. ಸುದೀಪ್‌ ಅವರ ಖಾಸಗಿ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗಪಡಿಸುವುದಾಗ ಅನಾಮಿಕ ವ್ಯಕ್ತಿಯೊಬ್ಬ ಈ ಪತ್ರ ಬರೆದಿದ್ದಾರೆ. ಅವಾಚ್ಯ ಶಬ್ಧಗಳಿಂದ ನಟನನ್ನು ನಿಂದಿಸಲಾಗಿದೆ. ಜಾಕ್‌ ಮಂಜು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪಟ್ಟೇನಹಳ್ಳಿ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಈ ಕೇಸನ್ನು CCBಗೆ (ಸೆಂಟ್ರಲ್‌ ಕ್ರೈಂ ಬ್ರ್ಯಾಂಚ್‌) ವಹಿಸಲು ಆಲೋಚಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ನಟ ಸುದೀಪ್‌, “ನಾನು ಖಂಡಿತ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆದರೆ ಕಷ್ಟಕಾಲದಲ್ಲಿ ನೆರವಾದವರ ಪರ ಪ್ರಚಾರ ನಡೆಸಲಿದ್ದೇನೆ ಅಷ್ಟೆ. ನಾನೊಬ್ಬ ವೃತ್ತಿಪರ ನಟ. ಮೂರು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ರಾಜಕೀಯಕ್ಕೆ ಸಮಯವಿಲ್ಲ. ನನ್ನ ಸ್ನೇಹಿತರಿಗೂ ಎಲೆಕ್ಷನ್‌ ಟಿಕೆಟ್‌ ಕೊಡುವಂತೆ ಶಿಫಾರಸು ಮಾಡುವುದಿಲ್ಲ” ಎಂದಿದ್ದಾರೆ. ಇನ್ನು ಬೆದರಿಕೆ ಪತ್ರದ ಬಗ್ಗೆ ಅವರು ಕಿಡಿಕಾರಿದ್ದಾರೆ. “ಇದು ರಾಜಕೀಯ ಪ್ರೇರಿತ ಬೆದರಿಕೆಯಲ್ಲ. ಸಿನಿಮಾರಂಗದವರೇ ಇದನ್ನು ಮಾಡಿದ್ದಾರೆ. ಅವರು ಯಾರೆನ್ನುವುದೂ ಗೊತ್ತಿದೆ. ಎಲ್ಲಾ ಚಿತ್ರರಂಗಗಳಲ್ಲೂ ಇಂಥವರು ಇದ್ದೇ ಇರುತ್ತಾರೆ. ಇತರರಿಗೂ ಅದು ಪಾಠ ಆಗುವಂತೆ ಕಿಡಿಗೇಡಿಗಳಿಗೆ ಉತ್ತರ ಕೊಡುತ್ತೇನೆ” ಎಂದಿದ್ದಾರೆ ಸುದೀಪ್‌.

ಸುದೀಪ್‌ ಬಿಜೆಪಿ ಸೇರುತ್ತಾರೆ ಎನ್ನುವ ವದಂತಿ ಹರಡುತ್ತಿದ್ದಂತೆ ಬಹುಭಾಷಾ ನಟ ಪ್ರಕಾಶ್‌ ರೈ ಟ್ವೀಟ್‌ ಮಾಡಿದ್ದರು. ಅವರು ತಮ್ಮ ಟ್ವೀಟ್‌ನಲ್ಲಿ, “ಇದು ಸುಳ್ಳು ಸುದ್ದಿ ಎಂದು ನಾನು ಭಾವಿಸುತ್ತೇನೆ. ಸೆನ್ಸಿಬಲ್‌ ನಟರಾದ ಸುದೀಪ್‌ ರಾಜಕಾರಣಿಗಳ ದಾಳಕ್ಕೆ ಬಲಿಯಾಗದಿರಲಿ” ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸುದೀಪ್‌, “ಪ್ರಕಾಶ್‌ ರೈ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಒಬ್ಬ ಸಿನಿಮಾ ನಟರಾಗಿ ಅವರು ನನ್ನ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸಿನಿಮಾಗಳಿಗೆ ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here