ನಿರ್ದೇಶಕ ಚಂದ್ರು ಇಲ್ಲಿ ಮೇಕಿಂಗನ್ನೇ ಹೆಚ್ಚು ನೆಚ್ಚಿಕೊಂಡಿದ್ದು, ಕತೆಯ ಸಮರ್ಪಕ ಹೆಣಿಗೆಯಿಲ್ಲದೆ ಸಿನಿಮಾ ಸೊರಗಿದೆ. ಮೇಕಿಂಗ್‌ ಕೂಡ ವ್ಯಾಕರಣಬದ್ಧವಾಗಿಲ್ಲ ಅನ್ನೋದು ನಿರ್ದೇಶಕರ ವೈಫಲ್ಯ. ಉಪೇಂದ್ರ ಅವರು ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದಕ್ಕೆ ಶ್ರಮಿಸಿದ್ದಾರೆ. ಅದಾಗ್ಯೂ ಇಂತಹ ಪಾತ್ರಕ್ಕೆ ಬೇಕಾದ ಸ್ಟೈಲ್‌, SWAG ಅವರಲ್ಲಿ ಕಾಣಿಸುವುದಿಲ್ಲ ಎನ್ನುವುದು ಮಿತಿ.

PAN ಇಂಡಿಯಾ ಸಿನಿಮಾ ಎನ್ನುವುದು ಇತ್ತೀಚಿನ ಹೊಸ ವ್ಯಾಖ್ಯಾನ. ಈ ಮಾದರಿಗೆ ಸಿನಿಮಾದ ಸಬ್ಜೆಕ್ಟ್‌ ಯೂನಿವರ್ಸಲ್‌ ಆಗಿರಬೇಕು ಎನ್ನುವುದೊಂದು ಮಾನದಂಡ. ಆಗ ಸುಲಭವಾಗಿ ಕೈಗೆಟುಕುವ ಕ್ರೈಂ – ಥ್ರಿಲ್ಲರ್‌ ಜಾನರ್‌ ಕತೆಗಳೇ ಹೆಚ್ಚಾಗಿ ವಸ್ತುವಾಗುತ್ತವೆ. ಕತೆಗಿಂತ ಮುಖ್ಯವಾಗಿ ಸಿನಿಮಾದ ಮೇಕಿಂಗ್‌ನತ್ತ ಇಲ್ಲಿ ಹೆಚ್ಚು ಗಮನಹರಿಯುತ್ತದೆ. ಅದ್ಧೂರಿತನ, ಸ್ಟೈಲಿಶ್‌ ನಿರೂಪಣೆ, ವಿಶಿಷ್ಟ ಮೇಕಿಂಗ್‌ನಿಂದ ಭಾಷೆಯ ತೊಡಕುಗಳನ್ನು ಮರೆಮಾಚುವ ತಂತ್ರವದು. ಇಂತಹ ವಿಶೇಷಣಗಳೊಂದಿಗೆ ಇತ್ತೀಚೆಗೆ ಸದ್ದುಮಾಡುತ್ತಿದ್ದ ‘ಕಬ್ಜ’ ತೆರೆಗೆ ಬಂದಿದೆ. ನಿರ್ದೇಶಕ ಚಂದ್ರು ಇಲ್ಲಿ ಮೇಕಿಂಗನ್ನೇ ಹೆಚ್ಚು ನೆಚ್ಚಿಕೊಂಡಿದ್ದು, ಕತೆಯ ಸಮರ್ಪಕ ಹೆಣಿಗೆಯಿಲ್ಲದೆ ಸಿನಿಮಾ ಸೊರಗಿದೆ. ಮೇಕಿಂಗ್‌ ಕೂಡ ವ್ಯಾಕರಣಬದ್ಧವಾಗಿಲ್ಲ ಅನ್ನೋದು ನಿರ್ದೇಶಕರ ವೈಫಲ್ಯ.

‘KGF’ ಸರಣಿ ಸಿನಿಮಾಗಳಂತೆ ಮತ್ತೊಂದು ಸಿನಿಮಾ ಯಾಕೆ ಆಗಬಾರದು? ‘ಕಬ್ಜ’ ಶುರುವಾದಾಗಿನಿಂದಲೂ ಇಂತಹ ಮಾತುಗಳ ಈ ಚಿತ್ರತಂಡದ ವಲಯದಲ್ಲೇ ಕೇಳಿಬರುತ್ತಿದ್ದವು. ‘KGF’ಗೆ ಕೆಲಸ ಮಾಡಿದ್ದ ತಂತ್ರಜ್ಞರು ಇಲ್ಲಿಯೂ ದುಡಿದಿದ್ದಾರೆ. ಛಾಯಾಗ್ರಾಹಣ ಬೇರೆಯವರ ಹೆಗಲಿಗೆ ಬಿದ್ದಿದ್ದರೂ ಇಲ್ಲಿನ ಕತ್ತಲೆ – ಬೆಳಕಿನ ಸಂಯೋಜನೆ ‘KGF’ ನೆನಪಿಸುತ್ತದೆ. ಸಿನಿಮಾದ ಬಹುಪಾಲು ಸನ್ನಿವೇಶಗಳಲ್ಲಿ ತೆರೆಯ ತುಂಬಾ ಜನ ಕಾಣಿಸುತ್ತಾರೆ. ಸ್ಕ್ರೀನ್‌ ತುಂಬಾ ಕಲಾವಿದರಿದ್ದರೆ ಅದೇ ಅದ್ಧೂರಿತನವೇ? ನಿರ್ದೇಶಕ ಚಂದ್ರು ಅವರು ಈ ಹಿಂದೆ ಇಂಥದ್ದೊಂದು ಆಕ್ಷನ್‌ – ಡ್ರಾಮಾ ಸಿನಿಮಾ ಮಾಡಿದವರಲ್ಲ. ಅವರು ಎಡವಿದ್ದೆಲ್ಲಿ?

ಸ್ವಾತಂತ್ರ್ಯಪೂರ್ವದಿಂದ ಸಿನಿಮಾದ ಕತೆ ಶುರುವಾಗುತ್ತದೆ. ಸ್ವಾತಂತ್ರ್ಯಹೋರಾಟಗಾರ ತಂದೆ, ಈ ಹಿನ್ನೆಲೆಯಲ್ಲಿ ಬೆಳೆದ ಇಬ್ಬರು ಪುತ್ರರನ್ನು ನಿರ್ದೇಶಕರು ಪರಿಚಯಿಸುತ್ತಾರೆ. ಅಮರಾವತಿಯ ಅಧಿಕಾರಕ್ಕಾಗಿ ಆ ಪ್ರಾಂತ್ಯವನ್ನು ಆಳುತ್ತಿದ್ದ ರಾಜಮನೆತನ ಹಾಗೂ ಮಾಫಿಯಾ ಡಾನ್‌ಗಳ ಮಧ್ಯೆಯ ತಿಕ್ಕಾಟದಲ್ಲಿ ಖಳಪಾತ್ರಗಳು ಪರಿಚಯವಾಗುತ್ತವೆ. ಚಿತ್ರದ ಶೀರ್ಷಿಕೆಗೆ ಹೊಂದುವಂತಹ ಭೂಮಿಕೆ ಸಿದ್ಧಪಡಿಸಿಕೊಂಡು ನಿರ್ದೇಶಕರು ಫೀಲ್ಡಿಗೆ ಇಳಿಯುತ್ತಾರೆ. ಚಿತ್ರದ ಮೊದಲಾರ್ಧದಲ್ಲಿ ತಕ್ಕಮಟ್ಟಿಗೆ ನಿರೂಪಣೆ ಹಿಡಿದಿಟ್ಟುಕೊಂಡರೂ ಮಧ್ಯಂತರದ ನಂತರ ಹಳಿ ತಪ್ಪುತ್ತದೆ.

ಪೊಲೀಸ್‌ ಅಧಿಕಾರಿ ಭಾರ್ಗವ ಭಕ್ಷಿ (ಸುದೀಪ್‌), ಸಿನಿಮಾದ ಹೀರೋ ಅರ್ಕೇಶ್ವರನ ಕತೆ ಹೇಳುವುದರೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಎಪ್ಪತ್ತರ ದಶಕದಿಂದ ಈ ಹೊತ್ತಿನ ಭಾರ್ಗವ ಭಕ್ಷಿಯ ಎರಡು ಗೆಟಪ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ಇಂತಹ ಡೀಟೇಲಿಂಗ್‌ ನಿರ್ದೇಶಕರ ಕಣ್ತಪ್ಪಿನಿಂದ ಆಗಿರಲಂತೂ ಸಾಧ್ಯವಿಲ್ಲ. ಆಗಿದ್ದೇನು ಎನ್ನುವುದಕ್ಕೆ ನಿರ್ದೇಶಕರೇ ಸಮಜಾಯಿಸಿ ಕೊಡಬೇಕು. ಸ್ವಾತಂತ್ರ್ಯ ಪೂರ್ವದ ಕತೆಯನ್ನು ಅವರು ಗ್ರಾಫಿಕ್ಸ್‌ ಇಮೇಜ್‌ಗಳೊಂದಿಗೆ ಹೇಳಿದ್ದು, ಅಲ್ಲಿ ತಪ್ಪುಗಳ ಸುಳಿಗೆ ಸಿಲುಕುವುದರಿಂದ ಅವರು ಪಾರಾಗಿದ್ದಾರೆ.

ಇನ್ನು ಚಿತ್ರದ ಹೀರೋ ಆಗಿ ಉಪೇಂದ್ರರಿಗೆ ಇದು ನಿಜಕ್ಕೂ ವಿಶಿಷ್ಟ ಪಾತ್ರ. ಅಪರೂಪದ ಪಾತ್ರದಲ್ಲಿ ಅವರು ಸಂಪೂರ್ಣವಾಗಿ ತೊಡಗಿಕೊಳ್ಳುವುದಕ್ಕೆ ಶ್ರಮಿಸಿದ್ದಾರೆ. ಅದಾಗ್ಯೂ ಇಂತಹ ಪಾತ್ರಕ್ಕೆ ಬೇಕಾದ ಸ್ಟೈಲ್‌, SWAG ಅವರಲ್ಲಿ ಕಾಣಿಸುವುದಿಲ್ಲ ಎನ್ನುವುದು ಮಿತಿ. ರಾಜಮನೆತನದ ಸುಂದರಿಯಾಗಿ ನಟಿ ಶ್ರಿಯಾ ಶರಣ್‌ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆ. ಅವರು ನರ್ತಿಸಿರುವ ‘ನಮಾಮಿ’ ಹಾಡಿನ ಕೊರಿಯೋಗ್ರಫಿ ಮುದ ನೀಡುತ್ತದೆ. ಹಿನ್ನೆಲೆ ಸಂಗೀತದಲ್ಲೇ ಅಬ್ಬರವೇ ಹೆಚ್ಚು. ಅಲ್ಲಲ್ಲಿ ಸೈಲೆನ್ಸ್‌ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಶಿವರಾಜಕುಮಾರ್‌ ಪಾತ್ರದ ಇಂಟ್ರಡಕ್ಷನ್‌ನೊಂದಿಗೆ ಸಿನಿಮಾದ ಕ್ಲೈಮ್ಯಾಕ್ಸ್‌ ಅನ್ನೂ ಜೋಡಿಸಿದ್ದಾರೆ ನಿರ್ದೇಶಕರು. ‘ಕಬ್ಜ್‌’ ಪಾರ್ಟ್‌ 2 ಸೆಟ್ಟೇರುವ ಸೂಚನೆಯೊಂದಿಗೆ ಸಿನಿಮಾ ಮುಕ್ತಾಯವಾಗುತ್ತದೆ.

LEAVE A REPLY

Connect with

Please enter your comment!
Please enter your name here