ವಿಸ್ತಾರವಾದ ಕತೆಗೆ ಬೇಕಿದ್ದ ಬರವಣಿಗೆ ಕೈಕೊಟ್ಟಿದೆ. ಇದರಿಂದಾಗಿ ಎಲಿವೇಟ್ ಆಗಬೇಕಿದ್ದ ಸನ್ನಿವೇಶಗಳಿಗೆ ತೊಡಕಾಗಿದೆ. ‘ಪ್ರೇಕ್ಷಕರ ತಲೆಗೆ ಹುಳ ಬಿಡುವ’ ಐಡಿಯಾ ಈಗ ವರ್ಕ್ ಆಗುವುದು ಕಷ್ಟ. ಚಿತ್ರದಲ್ಲಿ ಉಪೇಂದ್ರ ಎಲ್ಲವನ್ನೂ ಒಂದೇ ಗುಕ್ಕಿಗೆ ಹೇಳಲು ಹೊರಟು ಚಿತ್ರವನ್ನು ಭಾರವಾಗಿಸಿದ್ದಾರೆ.
25 ವರ್ಷಗಳ ಹಿಂದೆ ನಿರ್ದೇಶಕ ಉಪೇಂದ್ರ ತಮ್ಮ ‘A’ ಸಿನಿಮಾ ಶೀರ್ಷಿಕೆಯೊಂದಿಗೆ ‘ಬುದ್ಧಿವಂತರಿಗೆ ಮಾತ್ರ’ ಎನ್ನುವ ಅಡಿಬರಹ ಹಾಕಿದ್ದರು. ಎರಡೂವರೆ ದಶಕಗಳ ನಂತರ ಸಿನಿಮಾ ನೋಡುವ ಪ್ರೇಕ್ಷಕರು ಹೆಚ್ಚೇ ಬುದ್ಧಿವಂತರಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ‘UI’ ತ್ರಾಸದಾಯಕ ಜರ್ನೀ ಎನಿಸುತ್ತದೆ. ‘UI’ ಚಿತ್ರದ ಕ್ಯಾನ್ವಾಸ್ ಬಹುದೊಡ್ಡದು. ದೇಶ, ಭಾಷೆ ಗಡಿಗಳನ್ನು ಮೀರಿ ಅಸಮಾನತೆ, ಜಾತಿ – ಧರ್ಮ, ಸಿವಿಲ್ ವಾರ್, ಪ್ರಕೃತಿಯ ಅಸಮತೋಲನ ಎಲ್ಲವನ್ನೂ ಹೇಳುವ ಉಮೇದಿನಲ್ಲಿ ಹೊರಟಿದ್ದಾರೆ ಉಪೇಂದ್ರ. ಆದರೆ ಈ ವಿಸ್ತಾರವಾದ ಕತೆಗೆ ಬೇಕಿದ್ದ ಬರವಣಿಗೆ ಕೈಕೊಟ್ಟಿದೆ. ತೆರೆ ಮೇಲೆ ಅವರು ದೊಡ್ಡ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ. ಆದರೆ ಅದಕ್ಕೆ ಬೇಕಾದ ಗಟ್ಟಿಯಾದ ಬರವಣಿಗೆಯ ಕೊರತೆ ಅಲ್ಲಿ ಕಾಣಿಸುತ್ತದೆ. ಇದರಿಂದಾಗಿ ಎಲಿವೇಟ್ ಆಗಬೇಕಿದ್ದ ಸನ್ನಿವೇಶಗಳಿಗೆ ತೊಡಕಾಗುತ್ತದೆ. ಚಿತ್ರಕಥೆಗೆ ಅಡ್ಡಿಯಾಗಿರುವ ಪ್ರಮುಖ ಅಂಶವಿದು. ಮತ್ತೊಂದೆಡೆ ಎಲ್ಲರಿಗೂ ಗೊತ್ತಿರುವ ಸಂಗತಿಗಳನ್ನೇ ಉಪೇಂದ್ರ ‘ಸುತ್ತಿ ಬಳಸಿ’ ಯಾಕೆ ಹೇಳ್ತಿದ್ದಾರೆ ಎಂದು ಪ್ರೇಕ್ಷಕ ಬಳಗ ತಲೆ ಕೆರೆದುಕೊಳ್ಳುವುದೂ ಇದೆ!
ಮಾನವನ ದುರಾಸೆಯಿಂದಾಗಿ ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವ ಅಂಶವೊಂದನ್ನು ಪ್ರಧಾನವಾಗಿ ಉಪೇಂದ್ರ ಪ್ರಸ್ತಾಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಕೃತಿ ಮಾತೆಯನ್ನು ಚಿತ್ರಿಸಿದ್ದಾರೆ. ಇದು ವಾಚ್ಯ ಎನಿಸಿದರೂ, ಪ್ರಯೋಗದ ದೃಷ್ಟಿಯಿಂದ ಚೆನ್ನಾಗಿದೆ. ಈ ಸನ್ನಿವೇಶದ VFX, CG ಸೊಗಸಾಗಿದೆ. ಒಂದೆಡೆ ಪ್ರಕೃತಿ ಮಾತೆಯನ್ನು ಚಿತ್ರಿಸುವ ಉಪೇಂದ್ರ, ಇದಕ್ಕೆ ವೈರುಧ್ಯ ಎನ್ನುವಂತೆ ನಟ ರವಿಶಂಕರ್ ಪಾತ್ರವನ್ನು seduce ಮಾಡಲು ನಾಲ್ವರು ಹೆಣ್ಣುಮಕ್ಕಳನ್ನು ತರುತ್ತಾರೆ. ಮತ್ತದೇ ಗಿಮಿಕ್, ಕ್ಲೀಷೆ! ಇದ್ಯಾವ ಮಾದರಿ? ಕಲ್ಕಿ ಅವತಾರದ ಬಗ್ಗೆ ಭವಿಷ್ಯ ನುಡಿಯುವ ಕಾಲಜ್ಞಾನಿಗೆ (ಅಚ್ಯುತ್ ಕುಮಾರ್ ಈ ಪಾತ್ರ ನಿರ್ವಹಿಸಿದ್ದಾರೆ) ಅವಳಿ ಮಕ್ಕಳ ಸುಳಿವು ಸಿಗುವುದಿಲ್ಲ! ಸಿನಿಮಾ ನೋಡುವ ಪ್ರೇಕ್ಷಕರಿಗೆ ಎಲ್ಲೋ ಲಾಜಿಕ್ ಮಿಸ್ ಹೊಡೀತಿದ್ಯಲ್ಲ ಎನಿಸದಿರದು. ನಗಿಸಲೆಂದೇ ರೂಪಿಸಿರುವ ಸಾಧುಕೋಕಿಲ ಪಾತ್ರ ನಗಿಸುವಲ್ಲಿ ವಿಫಲವಾಗಿದೆ.
ಮಧ್ಯೆ ಮಧ್ಯೆ ಸುಸ್ತು ಹೊಡೆಸುವ ಸಿನಿಮಾ ಕೊನೆಯ ಅರ್ಧ ಗಂಟೆ trackಗೆ ಬರುತ್ತದೆ. Future World ಕಟ್ಟಿಕೊಟ್ಟಿರುವ ಪರಿ ಚೆನ್ನಾಗಿದೆ. ಈ ಸನ್ನಿವೇಶಗಳು ಪರಿಣಾಮಕಾರಿಯಾಗಿ ಮೂಡಿಬಂದಿದ್ದು, ವಿಶೇಷವಾಗಿ ಕಲಾನಿರ್ದೇಶಕರಿಗೆ ಅಭಿನಂದನೆ ಸಲ್ಲಬೇಕು. ಚಿತ್ರದಲ್ಲಿ ಆಕ್ಷನ್ಗೆ ಹೆಚ್ಚು ಸ್ಕೋಪ್ ಇದೆ. ಸಾಹಸ ಸನ್ನಿವೇಶಗಳನ್ನು ಚೆನ್ನಾಗಿ ನಿಭಾಯಿಸಿರುವ ಉಪೇಂದ್ರ ನಟನಾಗಿಯೂ ಸ್ಕೋರ್ ಮಾಡುತ್ತಾರೆ. ಆದರೆ, ಅವರ ಪಾತ್ರದ ಹೊರತಾಗಿ ಮತ್ತಾವ ಪಾತ್ರವೂ ನೆನಪಿನಲ್ಲಿ ಉಳಿಯುವುದಿಲ್ಲ ಎನ್ನುವುದು ಚಿತ್ರದ ಮಿತಿ. ನಾಯಕನ ಜೋಡಿಯಾಗಿ ಒಮ್ಮೆಯೂ ಕಾಣಿಸದ ನಾಯಕಿ ಪಾತ್ರವೇನೋ ಚೆನ್ನಾಗಿದೆ. ಸರಿಯಾದ ರೀತಿಯಲ್ಲಿ establish ಮಾಡಿಲ್ಲವಾದ್ದರಿಂದ ಈ ಪಾತ್ರಕ್ಕೆ justification ಸಿಗುವುದಿಲ್ಲ. ಸಿನಿಮಾದ ಬಿಡುಗಡೆ ಕೊಂಚ ತಡವಾದ್ದರಿಂದ troll song ಹಳತಾಯ್ತೇನೋ? ‘ಪ್ರೇಕ್ಷಕರ ತಲೆಗೆ ಹುಳ ಬಿಡುವ’ ಐಡಿಯಾ ಈಗ ವರ್ಕ್ ಆಗುವುದು ಕಷ್ಟ. ಈ ಚಿತ್ರದಲ್ಲಿ ಉಪೇಂದ್ರ ಎಲ್ಲವನ್ನೂ ಒಂದೇ ಗುಕ್ಕಿಗೆ ಹೇಳಲು ಹೊರಟು ಚಿತ್ರವನ್ನು ಭಾರವಾಗಿಸಿದ್ದಾರೆ ಎನಿಸದೇ ಇರದು.