ಮೊನ್ನೆ ತೆರೆಕಂಡ ‘ಪೆಂಟಗಾನ್‌’ ಆಂಥಾಲಜಿ ಸಿನಿಮಾದ ಒಂದು ಕತೆಯಲ್ಲಿ ವೈಜನಾಥ ಬಿರಾದಾರ ಅವರು ಪ್ರಮುಖ ಪಾತ್ರಧಾರಿ. ಅವರಲ್ಲಿನ ಸೂಕ್ಷ್ಮ ಕಲಾವಿದನನ್ನು ಚಿತ್ರದ ನಿರ್ದೇಶಕರು ಸೊಗಸಾಗಿ ದುಡಿಸಿಕೊಂಡಿದ್ದಾರೆ. ತಮ್ಮ ನೂತನ ಸಿನಿಮಾ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

‘ಪೆಂಟಗಾನ್‌’ ಸಿನಿಮಾದಲ್ಲಿನ ನಿಮ್ಮ ಪಾತ್ರದ ಚಿತ್ರಣ ಹೇಗಿದೆ?
ನಿರ್ದೇಶಕರಾದ ಗುರು ದೇಶಪಾಂಡೆ ಅವರು ಸಾಮಾನ್ಯವಾಗಿ ಉತ್ತಮ ಕತೆಗಳನ್ನು ಆಯ್ಕೆ ಮಾಡುತ್ತಾರೆ. ಅವರ ‘ಪರಾರಿ’ ಚಿತ್ರದಲ್ಲಿ ಸಹ ನಟಿಸಲು ಅವಕಾಶ ನೀಡಿದ್ದರು. ಚಿತ್ರಕಥೆಗೆ ತಕ್ಕಂತೆ ಪಾತ್ರಧಾರಿಗಳನ್ನು ಆಯ್ಕೆ ಮಾಡುವ ಚಾಣಕ್ಷತನವನ್ನು ನಿರ್ದೇಶಕರು ಹೊಂದಿದ್ದಾರೆ.

ಯುವ ನಿರ್ದೇಶಕರೊಂದಿಗೆ ಕೆಲಸ ಮಾಡುವ ಬಗ್ಗೆ ನಿಮ್ಮ ಅನಿಸಿಕೆ…?
ಹಳಬರ ಜಾಗಕ್ಕೆ ಹೊಸಬರು ಬರಲೇಬೇಕು. ಯಾವುದೋ ಒಂದು ವಿಶೇಷ ಪ್ರತಿಭೆಯಿಂದ ಅವರು ಆ ಸ್ಥಾನಕ್ಕೆ ಬಂದಿರುತ್ತಾರೆ. ಒಂದು ಮರ ಹೋದ ಜಾಗಕ್ಕೆ ಇನ್ನೊಂದು ಹೊಸ ಗಿಡ ಹುಟ್ಟುವುದು ಸಹಜ. ಹೊಸ ವಿಚಾರಧಾರೆಗಳನ್ನು ಹೊತ್ತು ಯುವ ಜನತೆ ಇಂಡಸ್ಟ್ರಿಯಲ್ಲಿ ಸಕ್ಸಸ್ ಪಡೆಯುತ್ತಿದ್ದಾರೆ.

ಸಿನಿಮಾದಲ್ಲಿ ನಟಿಸುವ ಮುನ್ನ ಪಾತ್ರಕ್ಕೆ ನಿಮ್ಮ ಮಾನಸಿಕ ಸಿದ್ಧತೆ ಹೇಗಿರುತ್ತದೆ?
ನೂರಾರು ಸಿನಿಮಾಗಳಲ್ಲಿ ನಟಿಸಿರುವುದರಿಂದ ಕತೆ ಕೇಳುತ್ತಿದ್ದಂತೆ ಮನಸ್ಸು ಪಾತ್ರಕ್ಕೆ ಸಿದ್ಧವಾಗುತ್ತದೆ. ಚಿತ್ರಕಥೆಯಲ್ಲಿ ರೂಪುಗೊಂಡ ಪಾತ್ರಗಳಿಗೆ ಜೀವ ತುಂಬುವವರನ್ನೇ ಸಾಮಾನ್ಯವಾಗಿ ನಿರ್ದೇಶಕರು ಆಯ್ಕೆ ಮಾಡುತ್ತಾರೆ. ಕ್ಯಾಮೆರಾ ಎದುರಿಸುವಾಗ ಇದು ನಮಗೆ ನೆರವಾಗುತ್ತದೆ.

ನೀವು ಅಭಿನಯಿಸಿರುವ ಚಿತ್ರಗಳ ಸಂಖ್ಯೆ ಐನೂರು ದಾಟುತ್ತದೆ. ಈ ದೊಡ್ಡ ಪಟ್ಟಿಯಲ್ಲಿ ನಿಮಗೆ ತುಂಬಾ ಇಷ್ಟವಾದ ಪಾತ್ರಗಳನ್ನು ಹೆಸರಿಸಬಹುದೇ?
ಕಲಾವಿದರಿಗೆ ಸೀಮಿತ ಇಷ್ಟಗಳು ಇರುವುದಿಲ್ಲ. ಅದು ನಮ್ಮ ಕಾಯಕ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ತಮ್ಮ ‘ಕನಸೆಂಬೋ ಕುದುರೆಯನೇರಿ’ ಚಿತ್ರದಲ್ಲಿ ನನಗೆ ಗಂಭೀರ ಪಾತ್ರ ಕೊಟ್ಟಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲೇ ನನ್ನನ್ನು ನೋಡಿದ್ದ ಜನರಿಗೆ ಈ ಪಾತ್ರ ತುಂಬಾ ಇಷ್ಟವಾಯ್ತು. ಈ ಸಿನಿಮಾ ಒಳ್ಳೆಯ ಹೆಸರು, ಪ್ರಶಸ್ತಿಗಳನ್ನು ತಂದುಕೊಟ್ಟಿತು.

ಮೂರೂವರೆ ದಶಕಗಳಿಂದ ಸಿನಿಮಾರಂಗದಲ್ಲಿದ್ದೀರಿ. ಬದಲಾದ ಚಿತ್ರರಂಗದ ದಿನಗಳ ಬಗ್ಗೆ ಏನು ಹೇಳ್ತೀರಿ?
ಜನರೇಶನ್ ಚೇಂಜ್ ಆಗಿದೆ. ಹಳಬರ ಜಾಗಕ್ಕೆ ಹೊಸಬರು ಬರುವುದು ಸಹಜ. ಬರುವ ಮುಂಚೆ ಪೂರ್ವ ತಯಾರಿ ಹೆಚ್ಚಾಗಿರಬೇಕು. ಸಿನಿಮಾ, ರಂಗಭೂಮಿಯಲ್ಲಿ ಬೆಳೆಯಬೇಕಾದ್ರೆ ತಾಳ್ಮೆ, ಪರಿಸ್ಥಿತಿಗೆ ಹೊಂದಾಣಿಕೆ ಮುಖ್ಯ. ಐನೂರು ಅಲ್ಲ, ಸಾವಿರ ಪಾತ್ರಗಳನ್ನು ಮಾಡಿದರೂ ಅಹಂ ಬರಬಾರದು. ಯುವ ಪೀಳಿಗೆಯಂಥಲ್ಲ… ನಟ, ನಿರ್ದೇಶಕ, ನಿರ್ಮಾಪಕ ಯಾರೇ ಆಗಲಿ ತಾಳ್ಮೆ ಇದ್ದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಹೊಂದಿಕೊಂಡು ಹೋಗುವ ಮನೋಭಾವ ಅವಶ್ಯವಾಗಿರಬೇಕು.

ನೀವು ಕಂಡಂತೆ ಕೋವಿಡ್‌ ಸಂಕಷ್ಟಗಳ ನಂತರ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿದೆ?
ಜಗತ್ತು ಹೇಗಿದೆಯೋ ಹಾಗೆ ಹೊಂದಿಕೊಳ್ಳಬೇಕು. ಕೆಲವೊಮ್ಮೆ ರೈತ ಬೀಜ ಬಿತ್ತಿ ಬೆಳೆ ಬೆಳೆದಾಗ ರೈತನ ಕೈಗೇನು ಸಿಗುವುದಿಲ್ಲ. ಹಾಗಂತ ರೈತ ಖಾಲಿ ಕೂರುವುದಿಲ್ಲ. ಮತ್ತೆ ಹೊಲ ಉಳುಮೆ ಮಾಡಿ ಬೆಳೆ ತೆಗೆಯುತ್ತಾನೆ. ಜೀವನದಲ್ಲಿ ಏಳು ಬೀಳುಗಳು ಸಹಜ. ಕಾಲಚಕ್ರ ಉರುಳುತ್ತಿದಂತೆ ಸಮಯ ಬದಲಾಗಲೇಬೇಕು. ಕಷ್ಟ ಬರದೇ ಸುಖ ಸಿಗಲು ಸಾಧ್ಯವಿಲ್ಲ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಒಂದೊತ್ತು ಊಟ ಸಿಕ್ಕರೂ ಸಹ ಅನುಸರಿಸಿಕೊಂಡು ಹೋಗಬೇಕು.

ಪ್ರಸ್ತುತ ಯಾವ ಸಿನಿಮಾಗಳಲ್ಲಿ ಪಾತ್ರ ಮಾಡುತ್ತಿದ್ದೀರಿ?
ಬ್ರಹ್ಮರಾಕ್ಷಸ, ಟಗರುಪಲ್ಯ, ಗುಲ್ಬರ್ಗದ ಉತ್ತರ ಕರ್ನಾಟಕ ಶೈಲಿಯ ಒಂದು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಜೊತೆಗೆ ಯೋಗರಾಜ್ ಭಟ್‌ ಅವರ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

ವೃತ್ತಿರಂಗಭೂಮಿ ನಾಟಕಗಳ ನಂಟು ಈಗಲೂ ಇದೆಯೇ?
ಮೂಲತಃ ರಂಗಭೂಮಿಯವನಾದ್ದರಿಂದ ನಂಟು ಇದ್ದೇ ಇರುತ್ತೆ. ಕಂಪನಿ ನಾಟಕ, ಹಳ್ಳಿ ನಾಟಕ, ಗ್ರೂಪ್ ನಾಟಕ, ಜಾತ್ರೆ ನಾಟಕಗಳಲ್ಲಿ ನಟಿಸುತ್ತಿರುತ್ತೇನೆ. ನನ್ನದೇ ಆದ ‘ಬಿರಾದಾರ ಮಿತ್ರ ಮಂಡಳಿ’ ಸಹ ಇದೆ. ಸಿನಿಮಾ ಕ್ಷೇತ್ರದಲ್ಲಿ ಬಿಡುವು ಸಿಕ್ಕಾಗಲೆಲ್ಲಾ ರಂಗಭೂಮಿಯಲ್ಲಿ ಸಕ್ರಿಯವಾಗಿರುತ್ತೇನೆ.

LEAVE A REPLY

Connect with

Please enter your comment!
Please enter your name here