ದೇವನ್‌ ನಿರ್ದೇಶನದಲ್ಲಿ ತಯಾರಾಗಿರುವ Dog movie ‘ವಾಲಟ್ಟಿ: ಟೇಲ್‌ ಆಫ್‌ ಟೈಲ್ಸ್‌’ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹನ್ನೊಂದು ತಳಿಗಳ ನಾಯಿಗಳು ಹಾಗೂ ಹುಂಜ ಪ್ರಮುಖ ಪಾತ್ರಧಾರಿಗಳು. ಜುಲೈ 14ರಂದು ಸಿನಿಮಾ ತೆರೆಕಾಣಲಿದೆ. ಕನ್ನಡದ KRG ಸ್ಟುಡಿಯೋಸ್‌ ಕೇರಳ ಹೊರತುಪಡಿಸಿ ವಿಶ್ವದಾದ್ಯಂತ ಸಿನಿಮಾದದ ಥಿಯೇಟ್ರಿಕಲ್‌ ಹಕ್ಕುಗಳನ್ನು ಪಡೆದುಕೊಂಡಿದೆ.

ಸಿನಿಮಾ ಕತೆ ಮತ್ತು ನಿರೂಪಣೆಯಲ್ಲಿ ಹೊಸತನದಿಂದ ಗಮನಸೆಳೆಯುವ ಮಲಯಾಳಂ ಚಿತ್ರರಂಗದಿಂದ ಮತ್ತೊಂದು ವಿಭಿನ್ನ ಸಿನಿಮಾ ತಯಾರಾಗಿದೆ. ವಿವಿಧ ತಳಿಯ ನಾಯಿಗಳನ್ನು ಬಳಕೆ ಮಾಡಿರುವ ‘Valatty: Tale of Tails’ ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಟ್ರೈಲರ್‌ ಬಿಡುಗಡೆಯಾಗಿದೆ. ಫ್ರೈಡೇ ಫಿಲಂ ಹೌಸ್‌ ಬ್ಯಾನರ್‌ನಡಿ ವಿಜಯ್‌ ಬಾಬು ನಿರ್ಮಿಸಿರುವ ಚಿತ್ರವನ್ನು ದೇವನ್‌ ನಿರ್ದೇಶಿಸಿದ್ದಾರೆ. ‘ಇದೊಂದು ಮನಮಿಡಿಯುವ ಪ್ರಾಣಿ ಚಿತ್ರ. ಶ್ವಾನ ಪ್ರಿಯರಿಗೆ ಉತ್ತಮ ಮನೋರಂಜನೆ ನೀಡಲಿದೆ’ ಎನ್ನುತ್ತಾರೆ ನಿರ್ದೇಶಕರು. ಟ್ರೈಲರ್‌ ಎರಡು ನಾಯಿಗಳ ನಡುವಿನ ಪ್ರೇಮಕಥೆಯನ್ನು ಪ್ರಸ್ತುತಪಡಿಸಿದೆ.

ಈ ವಿಭಿನ್ನ ಪ್ರಯತ್ನದ ಸಿನಿಮಾದಲ್ಲಿ 11 ವಿವಿಧ ತಳಿಯ ನಾಯಿಗಳು ಮತ್ತು ಒಂದು ಹುಂಜವನ್ನು ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ನಟಿಸಿರುವ ನಾಯಿಗಳಿಗೆ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ತರಬೇತಿ ನೀಡಲಾಗಿದೆ. ಜನಪ್ರಿಯ ಮಾಲಿವುಡ್‌ ನಟರಾದ, ಅಜು ವರ್ಗಿಸ್, ಇಂದ್ರನ್‌, ಸನ್ನಿ ವೇಯ್ಸ್‌, ಸೈಜು ಕುರುಪ್‌, ಸೌಬಿನ್‌ ಶಾಹಿರ್‌, ರಂಜಿನಿ ಹರಿದಾಸ್‌ ಮತ್ತು ಮಹಿಮಾ ನಂಬಿಯಾರ್ ಅವರು ನಾಯಿ ಪಾತ್ರಗಳಿಗೆ ಧ್ವನಿಯಾಗಿದ್ದಾರೆ. ಅಯೂಬ್‌ ಖಾನ್‌ ಸಂಕಲನ, ವರುಣ್‌ ಸುನೀಲ್‌ ಸಂಗೀತ, ವಿಷ್ಣು ನಾರಾಯಣ್ ಛಾಯಾಗ್ರಹಣ ಚಿತ್ರಕ್ಕಿದೆ. ‘Valatty: Tale of Tails’ ಜುಲೈ 14ರಂದು ಮೂಲ ಮಲಯಾಳಂ ಸೇರಿದಂತೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Previous articleಆಸ್ಕರ್‌ ಪುರಸ್ಕೃತ ಹಾಲಿವುಡ್‌ ನಟಿ, UK ಮಾಜಿ ಸಂಸದೆ Glenda Jackson ಇನ್ನಿಲ್ಲ
Next article‘ದಿ ಆರ್ಚೀಸ್‌’ ಟ್ರೈಲರ್‌ | ಜೋಯಾ ಅಖ್ತರ್‌ ನಿರ್ದೇಶನದ Netflix ಸಿನಿಮಾ

LEAVE A REPLY

Connect with

Please enter your comment!
Please enter your name here